ನವದೆಹಲಿ: ಜಗತ್ತಿನ ಅತೀದೊಡ್ಡ ಶಸ್ತ್ರಾಸ್ತ್ರ ಆಮದುದಾರ ರಾಷ್ಟ್ರವಾಗಿ ಈಗ ಭಾರತ ಉಳಿದಿಲ್ಲ. ಬರೋಬ್ಬರಿ 10 ವರ್ಷಗಳ ಬಳಿಕ ಭಾರತ ಈ ಹಣೆಪಟ್ಟಿಯನ್ನು ಕಳಚಿಕೊಂಡಿದೆ. 2014-18ರ ನಡುವೆ ಸೌದಿ ಅರೇಬಿಯಾ ಅತೀದೊಡ್ಡ ಶಸ್ತ್ರಾಸ್ತ್ರ ಆಮದುದಾರ ರಾಷ್ಟ್ರವಾಗಿ ಹೊರಹೊಮ್ಮಿದೆ. ಸ್ಟಾಕ್ಹೋಮ್ ಮೂಲದ ಥಿಂಕ್ ಟ್ಯಾಂಕ್ 5 ವರ್ಷಗಳ ಅವಧಿಯ ಶಸ್ತ್ರಾಸ್ತ್ರ ಖರೀದಿಗಳ ಅಧ್ಯಯನ ಮಾಡಿ ವರದಿಯನ್ನು ಪ್ರಕಟಿಸಿದೆ.
ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಪ್ರಕಟಗೊಳಿಸಿದ ಅಂಕಿಅಂಶಗಳ ಪ್ರಕಾರ, 2014-18ರ ಅವಧಿಯಲ್ಲಿ ಜಾಗತಿಕ ಶಸ್ತ್ರಾಸ್ತ್ರ ಆಮದಿನಲ್ಲಿ ಸೌದಿ ಅರೇಬಿಯಾದ ಪಾಲು ಶೇ.12 ಆಗಿದೆ. ಭಾರತ ಎರಡನೇಯ ಸ್ಥಾನದಲ್ಲಿದ್ದು, ಇದರ ಪಾಲು ಶೇ. 9.5 ಆಗಿದೆ. ಚೀನಾ ಜಗತ್ತಿನ 6ನೇ ಅತೀದೊಡ್ಡ ಶಸ್ತ್ರಾಸ್ತ್ರ ಖರೀದಿದಾರ ರಾಷ್ಟ್ರವಾಗಿದೆ.
2009-13 ಮತ್ತು 2014-18 ರ ನಡುವೆ ಭಾರತದ ಶಸ್ತ್ರಾಸ್ತ್ರ ಆಮದು ಶೇ. 24 ರಷ್ಟು ಕುಂಠಿತವಾಗಿದೆ ಎಂದು ವರದಿ ತಿಳಿಸಿದೆ. ರಷ್ಯಾ ಮತ್ತು ಫ್ರೆಂಟ್ ಒರಿಜನಲ್ ಇಕ್ವಿಪ್ಮೆಂಟ್ ಮ್ಯಾನುಫ್ಯಾಕ್ಚರ್ಗಳಡಿ ಉತ್ಪಾದನೆ ಮಾಡಲಾಗುತ್ತಿರುವ ಫೈಟರ್ ಜೆಟ್ಗಳ ಮತ್ತು ಸಬ್ಮರೀನ್ಗಳ ಡೆಲಿವರಿಯಲ್ಲಿ ವಿಳಂಬವೂ ಇದಕ್ಕೆ ಕಾರಣ ಎನ್ನಲಾಗಿದೆ.
ಆದರೆ ಪ್ರಮುಖವಾಗಿ ಭಾರತ ಮೇಕ್ ಇನ್ ಇಂಡಿಯಾ ಯೋಜನೆಯಡಿ, ಸ್ಥಳಿಯವಾಗಿ ಶಸ್ತ್ರಾಸ್ತ್ರಗಳನ್ನು ಉತ್ಪಾದನೆ ಮಾಡಲು ಹೆಚ್ಚು ಉತ್ಸುಕತೆಯನ್ನು ತೋರಿಸುತ್ತಿದೆ. ಈಗಾಗಲೇ ಹಲವಾರು ಒಪ್ಪಂದಗಳನ್ನು ಮಾಡಿಕೊಂಡು, ದೇಶೀಯ ರಕ್ಷಣಾ ಉತ್ಪಾದನೆಯತ್ತ ಹೆಜ್ಜೆ ಇಟ್ಟಿದೆ. ಇದು ಕೂಡ ಭಾರತವನ್ನು ಅತೀದೊಡ್ಡ ಶಸ್ತ್ರಾಸ್ತ್ರ ಆಮದುದಾರ ಪಟ್ಟಿಯಿಂದ ಹೊರಗಿಡುವಲ್ಲಿ ಸಹಕಾರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.