ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕೇಸರಿ ನಿಲುವಂಗಿಯನ್ನು ನೋಡುವಾಗ ನಿಸ್ಸಂದೇಹವಾಗಿ ಅವರೊಬ್ಬ ಸನ್ಯಾಸಿ ಎಂಬುದು ನಮ್ಮ ಅರಿವಿಗೆ ಬರುತ್ತದೆಯೇ ಹೊರತು, ಅವರು ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರ ಎಂಬುದು ಮರೆತು ಹೋಗುತ್ತದೆ. ಮಾಧ್ಯಮಗಳು ಅವರ ಬಗ್ಗೆ ಇಲ್ಲಸಲ್ಲದ ರೀತಿಯಲ್ಲಿ ವರದಿಗಳನ್ನು ಮಾಡುವುದನ್ನು ನೋಡಿ, ನಾವು ಅವರೊಬ್ಬ ರಾಜಕೀಯಕ್ಕಾಗಿ ಗೋವನ್ನು ಬಳಸುತ್ತಿರುವವರು ಎಂಬ ಅಭಿಪ್ರಾಯಕ್ಕೂ ಬರಬಹುದು. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ರಾಜ್ಯವನ್ನು ಮುನ್ನಡೆಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೈಯಿಂದ ಆಯ್ಕೆಯಾದ ಈ ಕಾವಿಧಾರಿ ವ್ಯಕ್ತಿಯ ಅಭಿಮಾನಿಯಾದವರಿಗೆ ಅವರೊಬ್ಬ ಸಾಂಸ್ಕೃತಿಕ ವಿಷಯಗಳತ್ತ ಹೆಚ್ಚಿನ ಚಿಂತನೆ ನಡೆಸುವವರು ಎಂಬ ಆಲೋಚನೆ ಬರಬಹುದು.
ಈ ಮೇಲಿನ ಎಲ್ಲಾ ಅನಿಸಿಕೆಗಳೂ ತಪ್ಪು. ಆದಿತ್ಯನಾಥ್ ಅವರು ಭೂಮಿಯ ಮೇಲಿನ ಅತಿ ದೊಡ್ಡ (24 ಕೋಟಿ ಕ್ಕಿಂತಲೂ ಹೆಚ್ಚು) ಮಾನವ ಸಮಾವೇಶ ಪ್ರಯಾಗ್ ರಾಜ್ ಕುಂಭಮೇಳವನ್ನು ಅತ್ಯಂತ ವ್ಯವಸ್ಥಿತವಾಗಿ ಸಂಘಟಿಸಿದ್ದಾರೆ, ಅವರ ಈ ಕಾರ್ಯವನ್ನು ನೋಡಿದರೆ ತಮ್ಮ ರಾಜ್ಯವನ್ನು ಸಂಪೂರ್ಣವಾಗಿ ಕೆಟ್ಟ ಆಡಳಿತ, ಭ್ರಷ್ಟಾಚಾರ ಮತ್ತು ಹಾಸ್ಯಾಸ್ಪದ ಕಾನೂನಿನಿಂದ ಹೊರತರುವತ್ತ ಅವರ ಗಮನ ಸಂಪೂರ್ಣ ಕೇಂದ್ರೀಕೃತವಾಗಿದೆ ಎಂಬುದು ನಮ್ಮ ಗಮನಕ್ಕೆ ಬರುತ್ತದೆ. ಒಂದು ವೇಳೆ ಯುಪಿ ಒಂದು ರಾಷ್ಟ್ರವಾಗಿದ್ದರೆ, ಇದು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಐದನೇ ರಾಷ್ಟ್ರವಾಗುತ್ತಿತ್ತು ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು.
2017 ರಲ್ಲಿ ಅಧಿಕಾರ ವಹಿಸಿಕೊಂಡ ಸಮಯದಿಂದ, ಆದಿತ್ಯನಾಥ್ ಬಿಗಿಯಾದ ಕೇಂದ್ರ ಬೆಂಬಲ ಮತ್ತು ಸಹಕಾರದ ಆಧಾರದ ಮೇಲೆ ದೃಢವಾದ ನೀತಿಗಳನ್ನು ರೂಪಿಸಿದ್ದಾರೆ. ಇದು ಬಲವಾದ ಮೂಲಸೌಕರ್ಯದ ಸ್ತಂಭಗಳ ಮೇಲೆ ರೂಪಿತಗೊಂಡಿದೆ, ಬಿಜ್ಲಿ-ಪಾನಿ-ಸಡಕ್ನಿಂದ ಹಿಡಿದು ಆರೋಗ್ಯ ಸೇವೆ, ಕಾನೂನು ಮತ್ತು ಸುವ್ಯವಸ್ಥೆ ಪುನಃಸ್ಥಾಪನೆ, ಸ್ತ್ರೀ ಸಬಲೀಕರಣ ಮತ್ತು ಪ್ರವಾಸೋದ್ಯಮದ ಮೂಲಕ ಸಾಮಾಜಿಕ-ಸಾಂಸ್ಕೃತಿಕ ನವ ಚೇತನ ಪಡೆಯುವತ್ತ ಅವರು ಕಾರ್ಯೋನ್ಮುಖಗೊಂಡಿದ್ದಾರೆ. ಅವನ ತೀವ್ರ ಗಮನವು ತೊಡೆದು ಹಾಕುವಿಕೆ, ಕಾರ್ಯಗತಗೊಳಿಸುವಿಕೆ ಮತ್ತು ಪ್ರಕ್ರಿಯೆಗಳನ್ನು ಸುಗಮಗೊಳಿಸುತ್ತ ನೆಟ್ಟಿದೆ. ಇದರಿಂದ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆದಾರರು ಯುಪಿಯತ್ತ ಧಾವಿಸುವಂತೆ ಮಾಡುತ್ತಿದ್ದಾರೆ.
ಮೂಲಸೌಕರ್ಯದಲ್ಲಿ ಬೃಹತ್ ಹೂಡಿಕೆ
ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಪಶ್ಚಿಮ ಯುಪಿಯಲ್ಲಿ ಸುಮಾರು 11,595 ಕೋಟಿ ರೂಪಾಯಿ ವೆಚ್ಚದ ಹೆದ್ದಾರಿ ಯೋಜನೆಗಳಿಗೆ ಅಡಿಪಾಯ ಹಾಕಿದ್ದಾರೆ. ಅಲ್ಲದೇ 1,500 ಕೋಟಿ ರೂಪಾಯಿ ವೆಚ್ಚದ 50 ಕಿಮೀ ಉದ್ದದ 4 ಲೇನ್ಗಳ ರೋಡ್ನ್ನು ಮೀರತ್ನಲ್ಲಿ ಉದ್ಘಾಟಿಸಿದ್ದಾರೆ. ಹೆದ್ದಾರಿ 24ರ ಹಾಪರ್ ಬೈಪಾಸ್ ನಿಂದ ಮೊರಾದಾಬಾಸ್ಗೆ ಆರು ಲೇನ್ಗಳ ರಸ್ತೆಯನ್ನು 2,140 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ, ಮೀರತ್ -ಸೋನಿಪತ್-ಬಾಗ್ಪಾತ್ ರಸ್ತೆ ಮತ್ತು ಮೀರತ್- ನಜಬಾಬಾದ್ ರಸ್ತೆಯನ್ನು 1,022 ಕೋಟಿ ರೂಪಾಯಿ ವೆಚ್ಚದಲ್ಲಿ ವಿಸ್ತರಣೆ ಮಾಡಲಾಗುತ್ತಿದೆ. ಜನರ ದೀರ್ಘಾವಧಿಯ ಬೇಡಿಕೆಯನ್ನು ಪೂರೈಸಿದ ಗಡ್ಕರಿ, ಕಾಳಿ ನದಿಯ ಶುಚಿಗಾಗಿ ರೂ.214 ಕೋಟಿಯ ಮೂರು ಚರಂಡಿ ಸಂಸ್ಕರಣ ಘಟಕಗಳನ್ನು ಮಂಜೂರು ಮಾಡಿದರು.
ಉತ್ತರಪ್ರದೇಶವನ್ನು ಉತ್ಪಾದನಾ ಕೇಂದ್ರವಾಗಿಸುವ ಪ್ರಯತ್ನ ನಡೆಸಲಾಗುತ್ತಿದೆ. ದೇಶದ ಉಳಿದ ಭಾಗಗಳೊಂದಿಗೆ ಉತ್ತರ ಪ್ರದೇಶದ ಸಂಪರ್ಕವನ್ನು ಹೆಚ್ಚಿಸಲು ಕೇಂದ್ರ ಹೆಚ್ಚಿನ ಹೂಡಿಕೆಯನ್ನು ಇಲ್ಲಿ ಮಾಡಿದೆ. ಪ್ರಧಾನ ಮಂತ್ರಿಯವರ ನೆಚ್ಚಿನ ಯೋಜನೆಗಳ ಪೈಕಿ, ಎರಡು ರಾಷ್ಟ್ರೀಯ ಹೆದ್ದಾರಿಗಳಾದ – ವಾರಣಾಸಿ ರಿಂಗ್ ರೋಡ್ ಫೇಸ್ -1 ಮತ್ತು ಎನ್ಎಚ್-56 ನಲ್ಲಿ ನಾಲ್ಕು ಲೇನ್ ಮತ್ತು ಗಂಗಾ ನದಿಗೆ ಒಳನಾಡು ಜಲಮಾರ್ಗ ಟರ್ಮಿನಲ್ಗಳು ಕೂಡ ಸೇರಿವೆ (ಸ್ವಾತಂತ್ರ್ಯಾನಂತರದ ಭಾರತದ ಮೊದಲ-ಒಳನಾಡು ಜಲಮಾರ್ಗದ ಕಂಟೇನರ್ನ್ನು ಇಲ್ಲಿ ಇತ್ತೀಚಿಗೆ ಪೆಪ್ಸಿಕೋ ರವಾನಿಸಿತು).
ಯುಪಿ ಹೂಡಿಕೆದಾರರ ಸಮಿತ್ ಸಂದರ್ಭದಲ್ಲಿ, ಸುಮಾರು 4.28 ಲಕ್ಷ ಕೋಟಿ ರೂ. ಮೌಲ್ಯದ 1,೦45 ಒಪ್ಪಂದ ಪತ್ರಗಳಿಗೆ (ಎಂಒಯುಗಳು) 1,000 ಕ್ಕೂ ಹೆಚ್ಚು ಖಾಸಗಿ ಮತ್ತು ಸಾರ್ವಜನಿಕ ವಲಯದ ಕಂಪನಿಗಳೊಂದಿಗೆ ಸಹಿ ಮಾಡಲಾಗಿತ್ತು. ಮಾರ್ಚ್ 2019 ರ ಹೊತ್ತಿಗೆ, ಅಂದರೆ ಸುಮಾರು ಒಂದು ವರ್ಷದನಂತರ 1.25 ಲಕ್ಷ ಕೋಟಿ ರೂ.ಗಳ ಯೋಜನೆ ಉದ್ಘಾಟಿಸಲಾಗುವುದು ಎಂದು ಹೇಳಲಾಗುತ್ತಿದೆ.
2018 ರ ಜುಲೈನಲ್ಲಿ ಪ್ರಧಾನಮಂತ್ರಿ 60,000 ಕೋಟಿ ರೂ. ಮೌಲ್ಯದ 80 ಯೋಜನೆಗಳನ್ನು ಪ್ರಾರಂಭಿಸಿದರು, ಇಂದಿನವರೆಗೆ ಅವರು ಸುಮಾರು 65 ಸಾವಿರ ಕೋಟಿ ರೂಪಾಯಿಗಳ ಯೋಜನೆಗಳಿಗೆ ಅಡಿಪಾಯ ಹಾಕಿದ್ದಾರೆ. ದೇಶದ ಮೊದಲ ಟ್ರಿಲಿಯನ್ ಡಾಲರ್ ಆರ್ಥಿಕತೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಲು ಮಹಾರಾಷ್ಟ್ರದೊಂದಿಗೆ ಪೈಪೋಟಿ ನಡೆಸುವಂತೆ ಪ್ರಧಾನಮಂತ್ರಿ ಯುಪಿಗೆ ಕರೆ ನೀಡಿದ್ದಾರೆ ಮತ್ತು ಆದಿತ್ಯನಾಥ್ ತಮ್ಮನ್ನು ವೈಯಕ್ತಿಕವಾಗಿ ಈ ಕೆಲಸಕ್ಕೆ ಸಮರ್ಪಿಸಿಕೊಂಡಿದ್ದಾರೆ.
ಉತ್ತರಪ್ರದೇಶದ ಕೈಗಾರಿಕ ರತ್ನ ಎಂದು ಕರೆಯಲ್ಪಡುವ ಖಾನ್ಪುರ ಇದರ ಪ್ರಮುಖ ಫಲಾನುಭವಿಯಾಗಿದ್ದು, ತನ್ನ ಹಿಂದಿನ ವೈಭವವನ್ನು ಅದು ಪುನಃಸ್ಥಾಪನೆ ಮಾಡುವತ್ತ ಹೆಜ್ಜೆ ಇಟ್ಟಿದೆ. ಆಗ್ರಾ, ಮೀರತ್, ವಾರಣಾಸಿ, ಗೋರಖ್ಪುರ್, ಪ್ರಯಾಗ್ರಾಜ್ ಮತ್ತು ಝಾನ್ಸಿಗಳಿಗೂ ಮೆಟ್ರೋ ರೈಲ್ ಪ್ರಾಜೆಕ್ಟ್ ಉಡುಗೊರೆಯಾಗಿ ಸಿಗುತ್ತಿದೆ. ಈ ಎಲ್ಲ ಯೋಜನೆಗಳು ಅನುಷ್ಠಾನದ ಮೂಲಕ ಮತ್ತು ಮುಖ್ಯಮಂತ್ರಿಯಿಂದ ಸಮಯಕ್ಕೆ ಸರಿಯಾಗಿ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ ಕಾರಣದಿಂದಾಗಿ ಕಾರ್ಯಗತಗೊಂಡಿವೆ.
ಮೂಲ ಸೌಕರ್ಯಗಳ ಮೇಲೆ ಹೂಡಿಕೆ ಹೆಚ್ಚಾಗುತ್ತಿರುವ ಪರಿಣಾಮವಾಗಿ ಝಾನ್ಸಿಯಲ್ಲಿ ಬುಂದೇಲ್ಖಂಡ್ಗ ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್ಗೆ ಶಂಕುಸ್ಥಾಪನೆಯಾಗಿದೆ, ಇದಕ್ಕೆ 40,000 ಕೋಟಿ ರೂ.ಗಳಷ್ಟು ವೆಚ್ಚವಾಗಲಿದೆ. ರಾಜ್ಯದ ಹಿಂದುಳಿದ ಮತ್ತು ಬರಪೀಡಿತ ಪ್ರದೇಶವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಬದ್ಧತೆಯನ್ನು ಪ್ರದರ್ಶಿಸುತ್ತಿವೆ.
ಇದರ ಭಾಗವಾಗಿ, ರಾಜ್ಯ ಸಾರ್ವಜನಿಕ ವರ್ಗದ ಇಲಾಖೆಯು (ಪಿಡಬ್ಲ್ಯೂಡಿ) ತುಂಬಾ ಹಿಂದೆ ಉಳಿದಿಲ್ಲ. ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಪಿಡಬ್ಲ್ಯೂಡಿ ಸಚಿವರಾಗಿದ್ದಾರೆ. ಅವರು 18,486 ಕಿ.ಮೀ.ಗಳಷ್ಟು ಉದ್ದದ 11,927 ರಸ್ತೆಗಳಿಗೆ ಅಡಿಪಾಯ ಹಾಕಿದ್ದಾರೆ. ಇದರ ಅಂದಾಜು ವೆಚ್ಚ 2,262 ಕೋಟಿ ರೂ.
ಪುಲ್ವಾಮಾದಲ್ಲಿ ಹುತಾತ್ಮರಾದ ಯುಪಿಯ 15 ಯೋಧರ ಹೆಸರಿನಲ್ಲಿ ಲಿಂಕ್ ರಸ್ತೆಗಳನ್ನು ನಿರ್ಮಾಣ ಮಾಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ. ಮೌರ್ಯ ಅವರು 4,600 ಗ್ರಾಮಗಳನ್ನು ಮುಖ್ಯ ರಸ್ತೆಗಳೊಂದಿಗೆ ಸಂಪರ್ಕಿಸವನ್ನು ಮಾಡುತ್ತಿದ್ದಾರೆ. 250 ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ಎಲ್ಲಾ ಗ್ರಾಮಗಳನ್ನು ಸಂಪರ್ಕಿಸುವ ಉದ್ದೇಶದಿಂದ ಈ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಸಡಕ್ ನಿರ್ಮಾಣವಾಗುತ್ತದೆ, ಬಿಜ್ಲಿ-ಪಾನಿಯ ಗತಿ ಏನು?
ಸಮಗ್ರ ವಿದ್ಯುತ್ ಮಾರ್ಗಸೂಚಿಯಿಲ್ಲದ ರಾಜ್ಯ ಅರ್ಥಹೀನವಾಗುತ್ತದೆ. 2017 ರ ಹಣಕಾಸು ವರ್ಷದಲ್ಲಿ ಯುಪಿಯಲ್ಲಿ ಮನೆಮನೆ ವಿದ್ಯುತ್ ಬಳಕೆಯು ಶೇಕಡಾ 41 ರಷ್ಟಿದ್ದು, ಕೃಷಿ 18% ರಷ್ಟಿದೆ. 2017 ರಲ್ಲಿ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯವು 22.66 ಗಿಗಾವ್ಯಾಟ್ (ಜಿಡಬ್ಲ್ಯೂ) ಆಗಿತ್ತು. ಆದಿತ್ಯನಾಥ್ ನೇತೃತ್ವದ ಸರ್ಕಾರವು ಎರಡು ವರ್ಷಗಳಲ್ಲಿ ವಿದ್ಯುತ್ ಸಂಗ್ರಹಣಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಿದೆ ಮತ್ತು ಸಾಮರ್ಥ್ಯವನ್ನು ಎರಡು ವರ್ಷಗಳಲ್ಲಿ 28.9 ಜಿಡಬ್ಲ್ಯೂ ಹೆಚ್ಚಿಸಿದೆ, ಇದು 27 ಪ್ರತಿಶತ ಬೆಳವಣಿಗೆಯಾಗಿದೆ.
ಕೇಂದ್ರ ನೀತಿಯ ಪ್ರಕಾರ, ಆದಿತ್ಯನಾಥ್ ಸರ್ಕಾರವು 2021 ರ ಹೊತ್ತಿಗೆ ಸೌರಯೇತರ ಸಾಮರ್ಥ್ಯವನ್ನು (ಜೈವಿಕ ದ್ರವ್ಯರಾಶಿ ಸೇರಿದಂತೆ) 5,000 ಮೆಗಾ ವ್ಯಾಟ್ಗೆ ಹೆಚ್ಚಿಸಲು ನಿರ್ಧರಿಸಿದೆ ಮತ್ತು ಒಟ್ಟು ಸೌರ ಸಾಮರ್ಥ್ಯವನ್ನು 4,029 ಮೆವ್ಯಾಗೆ ಹೆಚ್ಚಿಸಲು ಬದ್ಧವಾಗಿದೆ. ಆದಿತ್ಯನಾಥ್ ಸರ್ಕಾರವು ಸೌರ ಉದ್ಯಾನವನಗಳಿಗೆ ಮತ್ತು ಜೈವಿಕ ಶಕ್ತಿಯ ಹೂಡಿಕೆಗೆ ಉತ್ತೇಜನ ನೀಡಲು ಸಹ ಬದ್ಧವಾಗಿದೆ.
ಈಗ ಇಲ್ಲಿನ ಎಲ್ಲಾ ಜಿಲ್ಲೆಯ ಪ್ರಧಾನ ಕಛೇರಿಗಳಿಗೆ 20 ಗಂಟೆಗಳ ವಿದ್ಯುತ್ ಪೂರೈಕೆಯಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ 16-18 ಗಂಟೆಗಳ ವಿದ್ಯುತ್ ಪೂರೈಕೆ ಇದೆ. ಇದು ಕೃಷಿ ಇಳುವರಿಯ ಮೇಲೆ ನೇರವಾಗಿ ಪ್ರಭಾವ ಬೀರಿದೆ. ಯುಪಿ ಸರ್ಕಾರ ಸುಮಾರು 53 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಈ ವರ್ಷ ರೈತರಿಂದ ನೇರವಾಗಿ ಖರೀದಿಸಿತು. ಕಬ್ಬು ಬೆಳೆಗಾರರಿಗೆ ರೂ 44,000 ಕೋಟಿ ಪಾವತಿಸುವುದು ದೇಶದಲ್ಲೇ ಕಬ್ಬಿನ ರೈತರಿಗೆ ಅತ್ಯಧಿಕ ಪಾವತಿಯಾಗಿದೆ. ಅಮುಲ್ ಮತ್ತು ಬನಸ್ ಮಾರ್ಗದರ್ಶನದಲ್ಲಿ ಹದಿನಾಲ್ಕು ಹೊಸದಾದ ಡೈರಿಗಳು 3 ಲಕ್ಷ ಲೀಟರ್ ಕನಿಷ್ಠ ಸಾಮರ್ಥ್ಯದೊಂದಿಗೆ ನಿರ್ಮಿಸಲಾಗುತ್ತಿದೆ.
ಆದಿತ್ಯನಾಥ್ ಅವರು 2 ಲಕ್ಷ ಹೆಕ್ಟೇರ್ ಭೂಮಿಯನ್ನು ನೀರಾವರಿ ಅಡಿಯಲ್ಲಿ ತಂದು 2019 ಅಂತ್ಯದ ಹೊತ್ತಿಗೆ 20 ಲಕ್ಷ ಹೆಕ್ಟೇರ್ಗಳನ್ನು ನೀರಾವರಿ ಭೂಮಿಗಳಾಗಿ ಪರಿವರ್ತನೆ ಮಾಡಲು ಉದ್ದೇಶಿಸಿದ್ದಾರೆ. ಉತ್ತರಪ್ರದೇಶದಾದ್ಯಂತ ಕುಡಿಯುವ ನೀರಿನ ಲಭ್ಯತೆ ಅತ್ಯಂತ ಆಶ್ಚರ್ಯಕರವಾದ ಮತ್ತು ಆಕರ್ಷಕವಾಗಿ ಬೆಳೆವಣಿಗೆಯಾಗಿದೆ.
ಆರೋಗ್ಯ ಸೇವೆ ಸ್ಥಿತಿಗತಿ
ಆರೋಗ್ಯ ಸೇವೆಯ ವಿಚಾರದಲ್ಲಿ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಅವರ ಸರ್ಕಾರ ಏನನ್ನೂ ಮಾಡಿರಲಿಲ್ಲ. ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಯುಪಿ ಅತ್ಯಂತ ಕೆಳಗಿದೆ. ಈ ನಿಟ್ಟಿನಲ್ಲಿ ಯೋಗಿ ಸರ್ಕಾರವು ತನ್ನ ರಾಜ್ಯದ 120 ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರಗಳನ್ನು ತೆರೆದಿದೆ. 53 ಜಿಲ್ಲೆಗಳಲ್ಲಿ ರಾಷ್ಟ್ರೀಯ ಸಂಚಾರಿ ಮೆಡಿಕಲ್ ಯುನಿಟ್ಗಳನ್ನು ಆರಂಭಿಸಿದೆ. ಇದರಲ್ಲಿ ವೈದ್ಯರು, ಲ್ಯಾಬ್ ಟೆಕ್ನಿಶಿಯಲ್, ಪ್ಯಾರಾ ಮೆಡಿಕ್ ಎಲ್ಲರೂ ಇದ್ದಾರೆ. ವೈದ್ಯಕೀಯ ಕಾಲೇಜುಗಳಲ್ಲಿ 30 ಸಾವಿರ ಸೀಟುಗಳನ್ನು ಹೆಚ್ಚಳ ಮಾಡಲಾಗಿದೆ. ಹಂಪುರದಲ್ಲಿ ಹೊಸ ಆಯುರ್ವೇದಿಕ ಕಾಲೇಜು ಸ್ಥಾಪನೆಗೊಳ್ಳಲಿದೆ. ಭ್ರೂಣ ಹತ್ಯೆಯ ವಿರುದ್ಧ ಕ್ರಮವನ್ನು ಕಠಿಣಗೊಳಿಸಲಾಗಿದೆ.
ಆರೋಗ್ಯಕ್ಕೆ ಅತ್ಯಂತ ಮುಖ್ಯವಾದ ಸ್ವಚ್ಛ ಭಾರತ ಅಭಿಯಾನವನ್ನು ಯುಪಿಯಲ್ಲಿ ಅತ್ಯಂತ ಸಮರ್ಪಕವಾಗಿ ಜಾರಿಗೊಳಿಸಲಾಗಿದೆ. 2.5 ಕೋಟಿ ಶೌಚಾಲಯಗಳು ಇಲ್ಲಿ ನಿರ್ಮಾಣ ಮಾಡಲಾಗಿದೆ.
ಕಾನೂನು ಮತ್ತು ಸುವ್ಯವಸ್ಥೆ
ಯೋಗಿ ಆದಿತ್ಯನಾಥ ಸರ್ಕಾರ ಬಂದ ಬಳಿಕ ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಾಕಷ್ಟು ಸುಧಾರಣೆಗೊಂಡಿದೆ. ಅಪರಾಧಿಗಳ ವಿರುದ್ಧ ಕ್ರಮ ಜರುಗಿಸಲು ಅವರು ಪೊಲೀಸರಿಗೆ ಸ್ವಾತಂತ್ರ್ಯ ನೀಡಿದ್ದಾರೆ. ಒಂದು ಸಮೀಕ್ಷೆಯಲ್ಲಿ ಶೇ.70ರಷ್ಟು ಜನರು ಕಾನೂನು ಸುವ್ಯವಸ್ಥೆ ಯೋಗಿ ಬಮದ ಬಳಿಕ ಸುಧಾರಣೆ ಕಂಡಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹಲವಾರು ಎನ್ಕೌಂಟರ್ಗಳನ್ನು ನಡೆಸಲಾಗಿದ್ದು, ಹಲವಾರು ಅಪರಾಧಿಗಳು ನೆಲಕ್ಕುರುಳಿಸಲಾಗಿದೆ. ಕ್ರಿಮಿನಲ್ಸ್ಗಳು ಜಾಮೀನು ಪಡೆದು ಹೊರಕ್ಕೆ ಬರಲು ಹೆದರುವ ಸ್ಥಿತಿಯಲ್ಲಿದ್ದಾರೆ.
21ನೇ ಶತಮಾನದಲ್ಲಿ ಒಂದು ರಾಜ್ಯವನ್ನು ಸನ್ಯಾಸಿಯೊಬ್ಬರು ಅತ್ಯಂತ ಯಶಸ್ವಿಯಾಗಿಯೇ ಮುನ್ನಡೆಸುತ್ತಿದ್ದಾರೆ. ಆದಿತ್ಯನಾಥ ಅವರು ಹೇಳುವಂತೆ, ’ಧರ್ಮ ಜನರಿಗೆ ಅವರ ಕರ್ತವ್ಯ, ನೈತಿಕತೆ ಮತ್ತು ಸಿದ್ಧಾಂತಗಳ ಬಗ್ಗೆ ತಿಳಿಸುತ್ತದೆ. ಧರ್ಮ ಮತ್ತು ಪ್ರಜಾಪ್ರಭುತ್ವದ ಉದ್ದೇಶಗಳಲ್ಲಿ ನನಗೆ ಯಾವುದೇ ಭಿನ್ನತೆಗಳು ಕಂಡಿಲ್ಲ. ಅವುಗಳು ಸಮಾನ ತತ್ವಗಳನು ಬೋಧಿಸುತ್ತವೆ. ಧರ್ಮವನ್ನು ಸೇವೆಯೊಂದಿಗೆ ಮಿಲಿತಗೊಳಿಸಬೇಕು, ನನಗೆ ನನ್ನ ಕರ್ತವ್ಯವೇ ಆಧ್ಯಾತ್ಮವಾಗಿದೆ’.
ಯೋಗಿ ಆದಿತ್ಯನಾಥ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಮಾ. 26 ಕ್ಕೆ ಎರಡು ವರ್ಷಗಳು ಪೂರ್ಣಗೊಳ್ಳುತ್ತಿವೆ. ಈ ಎರಡು ವರ್ಷದಲ್ಲಿ ಅವರು ಅಭಿವೃದ್ಧಿಯ ಮೂಲಕ ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಇನ್ನು 3 ವರ್ಷದೊಳಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿರುವ ಇವರು ಅವಿರತ ಶ್ರಮ ಮತ್ತು ಪ್ರಯತ್ನದ ಮೂಲಕ ಯುಪಿಗೆ ಹೊಸ ಆಯಾಮವನ್ನು ನೀಡಲಿದ್ದಾರೆ.
source: swarajya
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.