ಘಾಜಿಯಾಬಾದ್: ಪಾಕಿಸ್ಥಾನದ ಬಾಲಾಕೋಟ್ ಮೇಲೆ ಭಾರತೀಯ ವಾಯುಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಉಂಟಾದ ಸಾವು, ನಷ್ಟಗಳ ಬಗ್ಗೆ ಸಾಕ್ಷ್ಯ ಕೇಳುವವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಹರಿಹಾಯ್ದಿದ್ದು, ಇಂತಹ ಜನರು ಪಾಕಿಸ್ಥಾನವನ್ನು ಓಲೈಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
‘ದಾಳಿ ನಡೆಸಿಲ್ಲದಿದ್ದರೆ ಟ್ವಿಟ್ ಮಾಡಲು ಪಾಕಿಸ್ಥಾನವೇನು ಮೂರ್ಖನೇ. 130 ಕೋಟಿ ಭಾರತೀಯರು ನನ್ನ ಸಾಕ್ಷಿ. ಪಾಕಿಸ್ಥಾನವನ್ನು ಓಲೈಸುವುದನ್ನು ನಿಲ್ಲಿಸಿ’ ಎಂದು ಶುಕ್ರವಾರ ಘಾಜಿಯಾಬಾದ್ನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮೋದಿ ಹೇಳಿದ್ದಾರೆ.
2008ರ ಮುಂಬಯಿ ದಾಳಿಯ ಬಳಿಕ ಅಂದಿನ ಯುಪಿಎ ಸರ್ಕಾರ ಏನನ್ನೂ ಮಾಡಿರಲಿಲ್ಲ, ಉಗ್ರರನ್ನು ಹತ್ತಿಕ್ಕುವ ಕಾರ್ಯ ನಡೆಸಿರಲಿಲ್ಲ, ಪಾಕಿಸ್ಥಾನಕ್ಕೆ ಎಚ್ಚರಿಕೆ ರವಾನಿಸುವ ಕಾರ್ಯವನ್ನೂ ನಡೆಸಿರಲಿಲ್ಲ. ಅದಕ್ಕಾಗಿಯೇ ಜನರು ನಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದರು.
‘ಪುಲ್ವಾಮದಲ್ಲಿ 40 ಯೋಧರು ಸತ್ತಾಗ ನಾವು ಮೌನವಾಗಿ ಕೂರಬೇಕಿತ್ತೆ. ಒಂದು ವೇಳೆ ಮೌನವಾಗಿದ್ದರೆ, ಹಿಂದಿನ ಸರ್ಕಾರದ ಹಾದಿಯನ್ನೇ ನಾನು ಹಿಡಿದಿದ್ದರೆ ಜನರು ನನ್ನನು ಯಾಕೆ ಚುನಾಯಿಸುತ್ತಿದ್ದರು?’ ಎಂದಿದ್ದಾರೆ.
ಪುಲ್ವಾಮದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರ ಆತ್ಮಾಹುತಿ ದಾಳಿಯನ್ನು ನಡೆದ ಬಳಿಕ ದೇಶದಲ್ಲಿ ಆಕ್ರೋಶಗಳು ಭುಗಿಲೆದ್ದಿದ್ದವು. ಘಟನೆ ನಡೆದ 14 ದಿನಗಳ ತರುವಾಯ ಭಾರತೀಯ ವಾಯುಸೇನೆ ಜೈಶೇ ಉಗ್ರರ ಪ್ರಮುಖ ನೆಲೆಯ ಮೇಲೆ 1000 ಕೆಜಿ ಬಾಂಬ್ನ್ನು ಹಾಕಿ ಸ್ಫೋಟಗೊಳಿಸಿತ್ತು. ಇದರಲ್ಲಿ ಅಪಾರ ಪ್ರಮಾಣದ ಉಗ್ರರು ಸತ್ತಿದ್ದಾರೆ ಎನ್ನಲಾಗಿದೆ, ಆದರೆ ಅಧಿಕೃತವಾಗಿ ಸತ್ತವರ ಸಂಖ್ಯೆಯನ್ನು ಇನ್ನೂ ಪ್ರಕಟಿಸಲಾಗಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.