ಪಾಕಿಸ್ಥಾನೀ ಬೆಂಬಲಿತ ಉಗ್ರರಿಂದ ನಡೆಸಲ್ಪಟ್ಟ ಪುಲ್ವಾಮಾ ದಾಳಿಯನ್ನು ಖಂಡಿಸಿ ಭಯೋತ್ಪಾದನೆಯ ವಿರುದ್ಧದ ನಮ್ಮ ಸಮರಕ್ಕೆ ದಕ್ಷಿಣ ಕೊರಿಯಾ ಸಂಪೂರ್ಣ ಬೆಂಬಲ ಘೋಷಿಸಿದ ಹೊತ್ತಿನಲ್ಲೇ ದಕ್ಷಿಣ ಕೊರಿಯಾ ದೇಶದ ಬದ್ಧ ವೈರಿ ರಾಷ್ಟ್ರವಾದ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆದೇಶದಂತೆ ಉತ್ತರ ಕೋರಿಯಾದ ವಿದೇಶಾಂಗ ಸಚಿವಾಲಯ, “ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ 40ಕ್ಕೂ ಹೆಚ್ಚು ಯೋಧರನ್ನು ಬಲಿ ತೆಗೆದುಕೊಂಡ ಉಗ್ರರ ಕೃತ್ಯವನ್ನು ಅತ್ಯುಗ್ರವಾಗಿ ಖಂಡಿಸುತ್ತೇವೆ. ಅಷ್ಟೇ ಅಲ್ಲ ಪುಲ್ವಾಮ ದುರಂತದ ಬಗ್ಗೆ ನಾವು ಅತೀವ ಕಾಳಜಿ ವ್ಯಕ್ತಪಡಿಸುತ್ತೇವೆ. ಭಯೋತ್ಪಾದನೆಯ ಎಲ್ಲ ಸ್ವರೂಪಗಳು ಮತ್ತು ಎಲ್ಲ ಉದ್ದೇಶಗಳನ್ನೂ ವಿರೋಧಿಸುವುದು ಕೊರಿಯಾ ಗಣ ರಾಜ್ಯದ ನಿಲುವಾಗಿದೆ” ಎನ್ನುವ ಅಧಿಕೃತ ಹೇಳಿಕೆಯೊಂದಿಗೆ ಭಾರತದ ಬೆಂಬಲಕ್ಕೆ ನಿಂತಿದ್ದು ಇಡೀ ವಿಶ್ವದ ಅಚ್ಚರಿಗೆ ಕಾರಣವಾಗಿತ್ತು.
ಬದ್ಧ ವೈರಿಗಳಾಗಿರುವ ಎರಡು ಸಹೋದರ ರಾಷ್ಟ್ರಗಳು ಭಾರತದ ವಿಚಾರದಲ್ಲಿ ಮಾತ್ರ ಏಕತೆಯನ್ನು ಪ್ರದರ್ಶಿಸಲು ಕಾರಣವಾದ ಹಿನ್ನೆಲೆಯೇನು ಎಂದು ಕೆದಕಿದರೆ ಪ್ರಸ್ತುತ ಜಾಗತಿಕ ವಿದ್ಯಮಾನಗಳ ಕಾರಣದ ಜೊತೆಗೆ ಭಾರತ ಮತ್ತು ಕೊರಿಯಾ ದೇಶಗಳ ನಡುವಿನ ಒಂದು ಅದ್ಭುತ ಇತಿಹಾಸ ಕೂಡಾ ತೆರೆದುಕೊಳ್ಳುತ್ತದೆ.
ಕೊರಿಯನ್ ಕಥೆಗಳ ಪ್ರಕಾರ ಪೂರ್ವ ಕೊರಿಯಾ ಪ್ರದೇಶಕ್ಕೆ ಮೊದಲ ಚಕ್ರವರ್ತಿಯಾದ ಕಿಮ್-ಸುರೋ ಎನ್ನುವ ರಾಜನಿಗೆ ತಕ್ಕ ವಧುವನ್ನು ಅರಸುತ್ತಿರುವಾಗ ಅವರ ಕುಲ ದೇವನಾಗಿದ್ದ ಸಾಂಜಿ ಅಯೋಧ್ಯೆಯ ಸುರಿರತ್ನ ಎಂಬ ಯುವತಿಯ ತಂದೆ ತಾಯಿಗಳ ಕನಸ್ಸಿನಲ್ಲಿ ಬಂದು ನಿಮ್ಮ ಮಗಳನ್ನು ಇಂದಿನ ಕೊರಿಯಾ ದೇಶಕ್ಕೆ ಕಳಿಸುವಂತೆ ಹೇಳುತ್ತಾನೆ.
ಸುರಿರತ್ನಳ ತಂದೆ ತಾಯಿಯರು ಕನಸಿನಲ್ಲಿ ದೇವರು ನೀಡಿದ ಆಜ್ಞೆಯಂತೆ ಆಕೆಯನ್ನು ಒಂದು ಹಡಗಿನಲ್ಲಿ ಇಂದಿನ ಕೊರಿಯಾ ದೇಶಕ್ಕೆ ಕಳುಹಿಸಿಕೊಡುತ್ತಾರೆ. ಅಲ್ಲಿ ಆಕೆ ರಾಜನಾದ ಕಿಮ್-ಸುರೋನನ್ನು ಮದುವೆಯಾಗಿ ಮಹಾರಾಣಿಯಾಗುತ್ತಾಳೆ. ವಿವಾಹದ ನಂತರ ಆಕೆ ಹಿಯಾ ಹ್ವಾಂಗ್ ಓಕ್ ಎನ್ನುವ ಹೆಸರಿನಿಂದ ಕರೆಸಿಕೊಳ್ಳುತ್ತಾಳೆ. ಕೊರಿಯಾ ಕಥೆಗಳ ಪ್ರಕಾರ ಈಕೆ ಆ ದೇಶದ ಮೊದಲ ಮಹಾರಾಣಿ ಎಂದೇ ಇಂದಿಗೂ ಅಲ್ಲಿನ ಜನ ನಂಬುತ್ತಾರೆ.
ಕೆಲವು ಸಂಶೋಧನೆಗಳ ಪ್ರಕಾರ ಆಕೆಯು ಭಾರತದೇಶದಲ್ಲಿ ಅಯುತ ಎಂಬ ವಂಶಕ್ಕೆ ಸೇರಿದವಳು ಎಂದೂ, ಆಯತ ಎಂದರೆ ರಾಮಜನ್ಮ ಭೂಮಿಯಾದ ಅಯೋಧ್ಯೆ ಎಂದೂ ಹೇಳಲಾಗುತ್ತಿದೆ.
ಆಗಿನಿಂದಲೂ ಕೊರಿಯನ್ನರು ಅಯೋಧ್ಯೆಯನ್ನು ತಮ್ಮ ತವರೂರು ಎಂದೇ ಭಾವಿಸುತ್ತಿದ್ದಾರೆ. ಹಾಗಾಗಿಯೇ ಪ್ರತಿ ವರ್ಷವೂ ಕೊರಿಯನ್ನರು ಅಯೋಧ್ಯೆಗೆ ತಂಡೋಪತಂಡವಾಗಿ ದರ್ಶನ ಮಾಡಲು ಭೇಟಿ ನೀಡುತ್ತಾರೆ. ಅಲ್ಲಿಗೆ ಭೇಟಿ ನೀಡುವ ಕೊರಿಯನ್ನರ ಪ್ರಕಾರ ಅಯೋಧ್ಯೆ ಅವರ ತಾಯಿ ಮನೆಯಾಗಿದ್ದು, ಅಯೋಧ್ಯೆ ಅವರ ಪವಿತ್ರವಾದ ಪುಣ್ಯಕ್ಷೇತ್ರವಾಗಿದೆ ಎಂದೇ ಭಾವಿಸುತ್ತಾರೆ. ತಮ್ಮ ಜೀವನದಲ್ಲಿ ಒಮ್ಮೆಯಾದರೂ ಅಯೋಧ್ಯೆಗೆ ಭೇಟಿ ನೀಡಲೇಬೇಕು ಎನ್ನುವುದು ಅವರ ನಂಬಿಕೆಯಾಗಿದೆ.
ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಕೊರಿಯಾ ಅಧ್ಯಕ್ಷರ ಭಾರತ ಭೇಟಿಯ ಸಂದರ್ಭದಲ್ಲಿ ಸೀತಾ ಉತ್ಸವಕ್ಕೆ ದಕ್ಷಿಣ ಕೊರಿಯಾದ ರಾಣಿಯವರನ್ನೇ ಆಹ್ವಾನಿಸಿ ಅವರಿಂದ ಪೂಜೆ ಮಾಡಿಸಲಾಯಿತು. ಭಾರತ ಮತ್ತು ಕೊರಿಯಾ ದೇಶಗಳು ಜಂಟಿಯಾಗಿ ಉತ್ತರ ಪ್ರದೇಶದ ಅಯೋಧ್ಯಾ ನಗರದಲ್ಲಿ ರಾಣಿ ಸುರಿರತ್ನಳ ಸ್ಮಾರಕ ಅಭಿವೃದ್ಧಿಪಡಿಸುವ ಒಪ್ಪಂದವೊಂದಕ್ಕೆ ಸಹಿ ಹಾಕಲಾಯಿತು. ಈ ಜಂಟಿ ಯೋಜನೆಯನ್ವಯ ಎರಡೂ ದೇಶಗಳೂ ತಲಾ ಶೇ.50 ರಷ್ಟು ಯೋಜನಾ ವೆಚ್ಚವನ್ನು ಭರಿಸಲಿವೆ. ಅಂದಾಜಿನ ಪ್ರಕಾರ ಒಟ್ಟು ಯೋಜನಾ ವೆಚ್ಚವು 300 ರಿಂದ 400 ಕೋಟಿ ಆಗಲಿದೆ. 2015 ರ ಮೋದಿಯವರ ಕೊರಿಯಾ ಭೇಟಿಯ ವೇಳೆಯಲ್ಲೇ ಈ ಯೋಜನೆಯ ರೂಪು-ರೇಷೆ ಸಿದ್ಧವಾಗಿದ್ದು, ಆಗ ಉಭಯ ದೇಶಗಳೂ ಪ್ರಾರಂಭಿಕ 50 ಕೋಟಿಗಳನ್ನು ಮೀಸಲಿರಿಸುವ ತೀರ್ಮಾನಕ್ಕೆ ಬಂದಿದ್ದವು. ಕೇವಲ ಭಾರತದಲ್ಲಷ್ಟೇ ಅಲ್ಲದೆ ಜಾಗತಿಕ ಭೂಪಟದಲ್ಲಿ ಶ್ರೀರಾಮ ಜನ್ಮಭೂಮಿಯಾದ ಅಯೋಧ್ಯೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಈ ಒಪ್ಪಂದವು ಅತ್ಯಂತ ಮಹತ್ವಪೂರ್ಣದ್ದಾಗಿದೆ.
ಹೀಗೆ ಈ ದೇಶದ ಶ್ರೀಮಂತ ಇತಿಹಾಸ, ಪುರಾಣ, ಸಂಸ್ಕೃತಿಗಳನ್ನೇ ಮುಂದಿಟ್ಟುಕೊಂಡು ದೇಶ ದೇಶಗಳ ಜೊತೆ ಸೌಹಾರ್ದ ಸಂಬಂಧಗಳನ್ನು ಬೆಸೆಯುವ ಕೆಲಸ ಈ ಹಿಂದೆ ಅಧಿಕಾರದಲ್ಲಿದ್ದ ಯಾರಿಂದಾದರೂ ನಿರೀಕ್ಷಿಸಲು ಸಾಧ್ಯವಿತ್ತೇ?
ನಮ್ಮ ದೇಶದ ಸೈನಿಕರ ಮೇಲೆ ಪಾಕಿಸ್ಥಾನೀ ಬೆಂಬಲಿತ ಉಗ್ರರಿಂದ ದಾಳಿ ನಡೆದ ಕೂಡಲೇ ಕೊರಿಯಾ ದೇಶಗಳು ನಾ ಮುಂದು ತಾ ಮುಂದು ಎಂದು ನಮ್ಮ ಬೆಂಬಲಕ್ಕೆ ಧಾವಿಸಿ ಬರಲು ಕಾರಣವಾದ ಇನ್ನೊಂದು ಮಹತ್ವಪೂರ್ಣ ಅಂಶವೇನು ಎನ್ನುವುದೀಗ ನಿಮಗೂ ತಿಳಿಯಿತಲ್ಲವೇ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.