ಪುಲ್ವಾಮ ದಾಳಿಯ ಬಳಿಕ ಜಾಗತಿಕ ಸಂಘಟನೆಗಳು ಮತ್ತು ಜಗತ್ತಿನ ಸುಮಾರು 70 ದೇಶಗಳು ಪಾಕಿಸ್ಥಾನವನ್ನು ಮೂಲೆ ಗುಂಪು ಮಾಡಿದವು. ಪಾಕಿಸ್ಥಾನ ಹಾಕಿಕೊಂಡಿದ್ದ ಮುಖವಾಡ ಕೊನೆಗೂ ಇಲ್ಲಿ ಕಳಚಿ ಬಿತ್ತು ಮತ್ತು ಜಗತ್ತಿಗೆ ಪಾಕಿಸ್ಥಾನದ ಭಯೋತ್ಪಾದನಾ ಸಂಪರ್ಕದ ಬಗ್ಗೆ ಅರಿವಾಯಿತು. ಎಂದಿನಂತೆ, ಪಾಕಿಸ್ಥಾನ ಸುಳ್ಳು ಹೇಳಿ ತನಗೂ ಭಯೋತ್ಪಾದನೆಗೂ ಸಂಬಂಧವಿಲ್ಲ ಎಂಬುದನ್ನು ನಂಬಿಸಲು ಮುಂದಾಯಿತು. ಆದರೆ ಅದಕ್ಕೂ ಮುನ್ನ ಭಾರತ ವೈಮಾನಿಕ ದಾಳಿಯನ್ನು ನಡೆಸಿತು, ಆ ರಾಷ್ಟ್ರದಲ್ಲಿದ್ದ ಉಗ್ರರ ಶಿಬಿರವನ್ನು ನಾಶಪಡಿಸಿತು. ಪಾಕಿಸ್ಥಾನ ತನ್ನ ನಾಟಕೀಯ ತನಿಖೆ ನಡೆಸುವುದಕ್ಕೂ ಮುನ್ನ ಭಾರತ ಕಠಿಣ ಕ್ರಮವನ್ನೇ ತೆಗೆದುಕೊಂಡಿತು. ಫ್ರಾನ್ಸ್, ಯುಎಸ್ಎ, ಆಸ್ಟ್ರೇಲಿಯಾಗಳು ಭಾರತದ ನ್ಯಾಯಸಮ್ಮತ ಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದವು. ಆದರೆ ಪಾಕಿಸ್ಥಾನಕ್ಕೆ ಈ ಸನ್ನಿವೇಶದಿಂದ ತೀವ್ರ ಮುಖಭಂಗವಾಯಿತು, ತನ್ನ ಉಗ್ರರ ನಾಶವನ್ನು ಅದಕ್ಕೆ ಅರಗಿಸಿಕೊಳ್ಳಲಾಗಿಲ್ಲ. ಹೀಗಾಗಿ ಭಾರತದ ವಿರುದ್ಧ ಮಿಲಿಟರಿ ಕ್ರಮ ಜರುಗಿಸುವ ದುಸ್ಸಾಹಸಕ್ಕೆ ಅದು ಅಣಿಯಾಯಿತು. ಆರ್ಥಿಕತೆ ಸಂಪೂರ್ಣ ನಾಶವಾಗಿದ್ದರೂ ಆ ದೇಶ ಬಲಿಷ್ಠ ಆರ್ಥಿಕತೆಯ ದೇಶದ ವಿರುದ್ಧ ಯುದ್ಧ ಮಾಡುವ ಯೋಚನೆ ಮಾಡಿ ಕೈಸುಟ್ಟುಕೊಂಡಿತು.
ದುರಾದೃಷ್ಟವೆಂದರೆ, ಆ ನೆರೆಯ ದೇಶ ಅಂದು ಕೊಂಡಂತೆ ಏನೂ ನಡೆಯಲಿಲ್ಲ. ನೌಶೇರ ಸೆಕ್ಟರ್ನ ಬ್ರಿಗೇಡ್ ಕೇಂದ್ರ ಕಛೇರಿಯ ಮೇಲೆ ದಾಳಿ ನಡೆಸುವ ಯೋಚನೆಯನ್ನು ಅವರು ಮಾಡಿದ್ದರು, ವಾಯುಸೇನೆ ಅವರನ್ನು ದಿಟ್ಟವಾಗಿ ಹಿಮ್ಮೆಟ್ಟಿಸಿತ್ತು. ಆದರೆ ವಿಂಗ್ ಕಮಾಂಡರ್ ಅಭಿನಂದನ್ ಅವರು ಶತ್ರುಗಳ ಸ್ಥಳಕ್ಕೆ ಬೀಳುವ ಮೂಲಕ ಭಾರತಕ್ಕೆ ತುಸು ಹಿಂಜರಿಕೆಯ ಸನ್ನಿವೇಶ ಸೃಷ್ಟಿಯಾಯಿತು. ಆ ದೇಶ ಅವರನ್ನು ಯುದ್ಧ ಕೈದಿಯಾಗಿ ಬಂಧಿಸಿತು.
ತಮ್ಮನ್ನು ತಾವು ಸ್ವಯಂ ರಕ್ಷಣೆ ಮಾಡಿಕೊಳ್ಳಲಿರುವ ಏಕೈಕ ಮಾರ್ಗ ಅಭಿನಂದನ್ ಅವರ ಬಿಡುಗಡೆ ಎಂದು ಅರಿತುಕೊಂಡ ಬಳಿಕ ಅವರನ್ನು ಆ ದೇಶ ಬಿಡುಗಡೆಗೊಳಿಸಿತು. ಆದರೆ ನಾವು ಶಾಂತಿಗಾಗಿ, ಮಾತುಕತೆಗಾಗಿ ಅವರನ್ನು ಬಿಟ್ಟಿದ್ದೇವೆ ಎಂಬಂತೆ ಫೋಸ್ ನೀಡಿತು. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ನರೇಂದ್ರ ಮೋದಿಯವರನ್ನು ಮಾತುಕತೆಗೆ ಒಪ್ಪಿಸಲು, ಅಭಿನಂದನ್ ಬಿಡುಗಡೆ ಬಗ್ಗೆ ಚರ್ಚಿಸಲು ಮೂರು ಬಾರಿ ಪ್ರಯತ್ನಿಸಿ ವಿಫಲರಾಗಿದ್ದಾರೆ. ಆದರೆ ಅಭಿನಂದನ್ ಅವರನ್ನು ಬಿಡುಗಡೆ ಮಾಡದೆ ಪಾಕಿಸ್ಥಾನಕ್ಕೆ ಬೇರೆ ಆಯ್ಕೆಗಳಿಲ್ಲ ಎಂಬುದನ್ನು ಅರಿತಿದ್ದ ಮೋದಿ ಯಾವುದೇ ಮಾತುಕತೆಗೆ ಮುಂದಾಗದೆ ಸುಮ್ಮನಾಗಿದ್ದರು. ಭಾರತದ ವಿರುದ್ಧ ಭಯೋತ್ಪಾದಕರನ್ನು ಬಿಟ್ಟು ಪರೋಕ್ಷ ಯುದ್ಧ ಮಾಡುವ ದೇಶದೊಂದಿಗೆ ಶಾಂತಿ ಮಾತುಕತೆ ನಡೆಸದಿರುವ ಅಚಲ ನಿರ್ಧಾರವನ್ನು ಅವರು ತೆಗೆದುಕೊಂಡಿದ್ದರು.
ಜಂಟಿ ಅಧಿವೇಶನದಲ್ಲಿ ಪಾಕಿಸ್ಥಾನ ಪಿಎಂ ಇಮ್ರಾನ್ ಖಾನ್ ಅವರು ಅಭಿನಂದನ್ ಅವರ ಬಿಡುಗಡೆಯನ್ನು ಘೋಷಣೆ ಮಾಡಿದರು. ಶಾಂತಿಯ ದ್ಯೋತಕವಾಗಿ ಬಿಡುಗಡೆ ಮಾಡುತ್ತಿದ್ದೇವೆ ಎಂದರು. ಪಾಕಿಸ್ಥಾನಕ್ಕೆ ಶಾಂತಿ ಬೇಕಿದೆ ಮತ್ತು ಪ್ರಾದೇಶಿಕ ಸ್ಥಿರತೆ ಬೇಕಿದೆ, ಇದು ಜನರನ್ನು ಬಡತನದಿಂದ ಹೊರತರಲು, ಹೂಡಿಕೆಯನ್ನು ಆಕರ್ಷಿಸಲು ಅವಶ್ಯಕ ಎಂದಿದ್ದರು. ಶಾಂತಿಗಾಗಿ ಮೋದಿಯನ್ನು ಸಂಪರ್ಕಿಸುವ ಪ್ರಯತ್ನವನ್ನು ನಡೆಸಿದ್ದೇನೆ ಎಂಬುದನ್ನೂ ಬಹಿರಂಗಪಡಿಸಿದ್ದರು. ಆದರೆ ಇದು ಅವರ ನಾಟಕವಾಗಿತ್ತು. ಅಂತಾರಾಷ್ಟ್ರೀಯ ಸಮುದಾಯದ ಮುಂದೆ ನಾವು ಶಾಂತಿದೂತರು ಎನಿಸಿಕೊಳ್ಳಲು ಮಾಡಿದ ನಾಟಕವಾಗಿತ್ತು. ಅಭಿನಂದನ್ ಅವರನ್ನು ಬಿಡುಗಡೆ ಮಾಡದೆ ಅವರಿಗೆ ಬೇರೆ ಆಯ್ಕೆಯೇ ಇರಲಿಲ್ಲ. ಜಿನೆವಾ ಒಪ್ಪಂದವನ್ನು ಪಾಲಿಸುವುದು ಅವರಿಗೆ ಅನಿವಾರ್ಯವಾಗಿತ್ತು. ಜಿನೆವಾ ಕನ್ವೆನ್ಷನ್ನ ಸರಣಿ ಒಪ್ಪಂದ ಮತ್ತು ಶಿಷ್ಟಾಚಾರಗಳು ಯುದ್ಧದಲ್ಲಿ ಮಾನವೀಯತೆಯ ಪಾಲನೆಯ ಅಂತಾರಾಷ್ಟ್ರೀಯ ಕಾನೂನನ್ನು ಪ್ರತಿಪಾದಿಸುತ್ತದೆ. ಕನ್ವೆನ್ಷನ್ ಪ್ರಕಾರ, ಯುದ್ಧ ಕೈದಿಗಳನ್ನು ಗೌರವದಿಂದ ನೋಡಿಕೊಳ್ಳಬೇಕು, ಒಪ್ಪಂದದ ಅನ್ವಯ ರೂಪಿಸಲಾದ ಜವಾಬ್ದಾರಿಗಳಿಂದ ರಾಷ್ಟ್ರಗಳು ನುಣುಚಿಕೊಳ್ಳುವಂತಿಲ್ಲ. ಮೂರನೇ ಜಿನೆವಾ ಕನ್ವೆನ್ಷನ್ನ 118ನೇ ಕಲಂ ಪ್ರಕಾರ, ಉಭಯ ದೇಶಗಳ ನಡುವೆ ಸಕ್ರಿಯ ಶತ್ರುತ್ವ ಇಲ್ಲದ ಪಕ್ಷದಲ್ಲಿ ಯುದ್ಧ ಕೈದಿಗಳನ್ನು 10 ದಿನಗಳಿಗಿಂದ ಹೆಚ್ಚು ಕಾಲ ಇಟ್ಟುಕೊಳ್ಳುವಂತಿಲ್ಲ. ಹೀಗಾಗಿ ಪಾಕಿಸ್ಥಾನಕ್ಕೆ ವಿಂಗ್ ಕಮಾಂಡರ್ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡುವುದು ಅನಿವಾರ್ಯವಾಯಿತು.
ಮೂರನೇ ಜಿನೆವಾ ಕನ್ವೆನ್ಷನ್ನ ಕಲಂ 118ರ ಪ್ರಕಾರ – ಯುದ್ಧದ ಕೈದಿಗಳನ್ನು ಬಿಡುಗಡೆ ಮಾಡಬೇಕು ಮತ್ತು ಸಕ್ರಿಯ ಸಂಘರ್ಷ ನಿಂತ ಬಳಿಕ ವಿಳಂಬವಿಲ್ಲದೆ ಯುದ್ಧ ಕೈದಿಗಳು ವಾಪಾಸ್ಸಾಗಬೇಕು. ಒಂದು ವೇಳೆ ಇದಕ್ಕೆ ಆ ದೇಶ ಒಪ್ಪಿಲ್ಲ ಎಂದಾದರೆ ಅದು ಯುದ್ಧ ಮಾಡಲು ಸಜ್ಜಾಗಿದೆ ಎಂದು ಅರ್ಥವಾಗುತ್ತದೆ. ಅಭಿನಂದನ್ ವಿಷಯದಲ್ಲೂ ಯುದ್ಧಕ್ಕೆ ಹೆದರಿ ಪಾಕಿಸ್ಥಾನ ಅವರನ್ನು ಬಿಡುಗಡೆ ಮಾಡಿದೆಯೇ ಹೊರತು ಯಾವುದೇ ಶಾಂತಿ ಸ್ಥಾಪನೆಗಾಗಿ ಅಲ್ಲ. ವಿವಿಧ ದೇಶಗಳಿಗೆ ಹೋಗಿ ಹಣಕ್ಕಾಗಿ ಭಿಕ್ಷೆ ಬೇಡುತ್ತಿರುವ ಪಾಕಿಸ್ಥಾನಕ್ಕೆ ಯುದ್ಧವನ್ನು ಮಾಡುವ ಸಾಮರ್ಥ್ಯವಿಲ್ಲ.
ಇನ್ನೊಂದೆಡೆ ಪುಲ್ವಾಮ ದಾಳಿಯನ್ನು ಅಂತಾರಾಷ್ಟ್ರೀಯ ಸಮುದಾಯಗಳು ಖಂಡಿಸಿದವು, ಭಾರತ ನಡೆಸಿದ ವೈಮಾನಿಕ ದಾಳಿಯನ್ನು ಶ್ಲಾಘಿಸಿದವು ಮತ್ತು ಮರುದಿನ ಪಾಕಿಸ್ಥಾನ ನಡೆಸಿದ ಮಿಲಿಟರಿ ಕ್ರಮವನ್ನು ಖಂಡಿಸಿದವು. ಇದು ಪಾಕಿಸ್ಥಾನದ ಮೇಲೆ ಹೆಚ್ಚಿನ ಒತ್ತಡ ಬೀಳುವಂತೆ ಮಾಡಿತು. ಇದಕ್ಕಾಗಿಯೇ ಅದು ಶಾಂತಿ ಮಂತ್ರವನ್ನು ಪಠಿಸಲು ಆರಂಭಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.