34 ವರ್ಷದ ಲೋಮಸ್ ದುಂಗೆಲ್, ಸಿಕ್ಕಿಂ ಮಖಾ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ವಿಜ್ಞಾನ ಮತ್ತು ಗಣಿತ ಶಿಕ್ಷಕ. ಒರ್ವ ಶಿಕ್ಷಕನಾಗಿ ಅವರು ತಮ್ಮದೇ ಆದ ರೀತಿಯಲ್ಲಿ ದೇಶಕ್ಕೆ ಕೊಡುಗೆ ನೀಡುತ್ತಿದ್ದಾರೆ. ಮಾಲಿನ್ಯದ ವಿರುದ್ಧ ’ಹರಿಯೋ ಮಖಾ-ಸಿಕ್ಕಿಂ’ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಹರಿಯೋ ಎಂದರೆ ಹಸಿರು ಎಂದರ್ಥ. 2015ರಿಂದ ಈ ಕಾರ್ಯಕ್ರಮದ ಮೂಲಕ ಅವರು ವಿದ್ಯಾರ್ಥಿಗಳ ಸಹಾಯ ಪಡೆದುಕೊಂಡು ತ್ಯಾಜ್ಯಗಳನ್ನು ರಿಸೈಕಲ್ ಮಾಡಿ ಮರು ಬಳಕೆ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಮಾತ್ರವಲ್ಲ, ಈ ಕಾರ್ಯದಿಂದ ಹಣವನ್ನು ಸಂಪಾದಿಸಿ, ಆ ಹಣವನ್ನು ಐದು ಸ್ಥಳಿಯ ಮಕ್ಕಳ ಶಿಕ್ಷಣಕ್ಕೆ ವ್ಯಯಿಸುತ್ತಿದ್ದಾರೆ.
ಮಖಾದಿಂದ 15 ಕಿಮೀ ದೂರವಿರುವ ಗ್ರಾಮದಲ್ಲಿ ಜನಿಸಿದ ಲೋಮಸ್ ಅವರು ಅಲ್ಲಿ ಎಂದೂ ಕಸದ ರಾಶಿಗಳನ್ನು ನೋಡಿರಲಿಲ್ಲ. ಸ್ವಚ್ಛ ಸುಂದರವಾದ ಪರಿಸರದಲ್ಲೇ ಅವರು ಬೆಳೆದು ಬಂದಿದ್ದರು. ಆದರೆ ಶಿಕ್ಷಕರಾಗಿ ನಗರಕ್ಕೆ ತೆರಳಿದ ಅವರಿಗೆ ಅಲ್ಲಿ ರಾಶಿ ರಾಶಿಯಾಗಿ ಕಾಣುತ್ತಿದ್ದ ಕಸಗಳನ್ನು ಕಂಡು ತೀವ್ರ ಮರುಕವಾಗುತ್ತಿತ್ತು. ಮಾಲಿನ್ಯ ಮತ್ತು ಮಾಲಿನ್ಯ ರಹಿತ ಪರಿಸರದ ನಡುವಣ ವ್ಯತ್ಯಾಸ ಎಷ್ಟು ಅಜಗಜಾಂತರ ಎಂಬುದನ್ನು ಅವರು ಅರಿತುಕೊಂಡಿದ್ದರು. 2013ರಿಂದ ತ್ಯಾಜ್ಯಗಳ ರಿಸೈಕ್ಲಿಂಗ್ ಮಾಡುವ ಐಡಿಯಾವನ್ನು ಅವರು ಅನುಷ್ಠಾನಕ್ಕೆ ತರಲು ಮುಂದಾದರು. ತನ್ನ ನೆರೆಹೊರೆಯವರಿಂದ ತ್ಯಾಜ್ಯಗಳನ್ನು ಸಂಗ್ರಹಿಸಿದರು, ಬಳಿಕ ಅದನ್ನು ಹಸಿ ತ್ಯಾಜ್ಯ ಮತ್ತು ಒಣ ತ್ಯಾಜ್ಯವಾಗಿ ವಿಂಗಡಿಸಿದರು. ಒಣ ತ್ಯಾಜವನ್ನು ರಿಸೈಕ್ಲಿಂಗ್ ಘಟಕಗಳಿಗೆ ನೀಡಿದರು. ಆದರೆ ಈ ಐಡಿಯಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಹೀಗಾಗಿ ಬೇರೆ ಐಡಿಯಾವನ್ನು ಅವರು ಹುಡುಕಬೇಕಾಯಿತು.
ಮಖಾದಲ್ಲಿ ತ್ಯಾಜ್ಯವನ್ನು ಸಂಗ್ರಹಿಸಲು ಔಪಚಾರಿಕ ವ್ಯವಸ್ಥೆ ಇಲ್ಲ ಎಂಬುದು ಅವರ ಗಮನಕ್ಕೆ ಬಂತು. ಇದರಿಂದಾಗಿ ಪ್ರವಾಸಿಗರು ಸೇರಿದಂತೆ ಅನೇಕರು ತಿಂಡಿಯ ಪಾಕೆಟ್ ಸೇರಿದಂತೆ ಇತ್ಯಾದಿಗಳನ್ನು ಎಲ್ಲೆಂದರಲ್ಲಿ ಬಿಸಾಗುತ್ತಿದ್ದರು. ಈ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಚಿಂದಿ ಆಯುವವರು ಕೆಲವೊಮ್ಮೆ ಸುಟ್ಟು ಬಿಡುತ್ತಿದ್ದರು. ಇದರಿಂದ ರಾಸಾಯನಿಕಗಳು ಉತ್ಪತ್ತಿಯಾಗುತ್ತಿದ್ದವು. 2015ರಿಂದ ಐಡಿಯಾವೊಂದನ್ನು ಹೊರ ತಂದ ಲೊಮೋಸ್ ಅವರು, ಇಂತಹ ಪ್ಯಾಕೆಟ್ಗಳನ್ನು ಸಂಗ್ರಹಿಸಿ, ಅವುಗಳನ್ನು ಶುದ್ಧೀಕರಿಸಿ, ಸೆಲ್ಲೋ ಟೇಪ್ಗಳನ್ನು ಬಳಸಿ ಒಟ್ಟುಗೂಡಿಸಿ ಬುಕ್ ಕವರ್ ಮಾಡಿದರು. ಈ ಐಡಿಯಾವನ್ನು ವಿದ್ಯಾರ್ಥಿಗಳಿಗೆ ಮತ್ತು ತಮ್ಮ ಶಾಲಾ ಮಂಡಳಿಗಳಿಗೂ ನೀಡಿದರು. ಅವರ ಅನುಮೋದನೆಯನ್ನು ಪಡೆದು ಶಾಲಾ ಮಕ್ಕಳಿಗೆ ಇಂತಹ ತ್ಯಾಜ್ಯ ಪ್ಯಾಕೆಟ್ಗಳನ್ನು ಶಾಲೆಗೆ ತರುವಂತೆ ಸೂಚಿಸಿದರು. ಮಕ್ಕಳನ್ನು ಬಳಸಿ ಅವುಗಳನ್ನು ಉನ್ನತ ಗುಣಮಟ್ಟದ ಸೆಲ್ಲೋ ಟೇಪ್ ಮೂಲಕ ಒಟ್ಟುಗೂಡಿಸಿ ಬುಕ್ ಕವರ್ಗಳನ್ನು ಮಾಡಿದರು. ಈ ಐಡಿಯಾ ಶಾಲಾ ಮಕ್ಕಳ ನಡುವೆ ಭಾರೀ ಯಶಸ್ಸು ಕಂಡಿತು.
ಇದುವರೆಗೆ ಇವರ ಶಾಲೆಯ ಮಕ್ಕಳು 50 ಸಾವಿರ ಪ್ಯಾಕೆಟ್ಗಳನ್ನು ಬಳಸಿ 3 ಸಾವಿರ ಪುಸ್ತಕಗಳಿಗೆ ಬುಕ್ ಕವರ್ ಮಾಡಿದ್ದಾರೆ. ಗ್ರಾಮದ ಇತರ ಶಾಲೆಯ ಮಕ್ಕಳಿಗೂ ಇದನ್ನು ಮಾರಾಟ ಮಾಡಲಾಗುತ್ತಿದೆ. ಮಾರಾಟದಿಂದ ಬಂದ ಹಣವನ್ನು ಬಡ ವಿದ್ಯಾರ್ಥಿಗಳ ಶಿಕ್ಷಣದ ಖರ್ಚಿಗೆ ವಿನಿಯೋಗಿಸಲಾಗುತ್ತಿದೆ. ಶಾಲೆಯ ಎಲ್ಲಾ ಮಕ್ಕಳಿಗೂ ಈ ಬುಕ್ ಕವರ್ ಸಾಕಷ್ಟಾಗುತ್ತದೆ.
ಲೋಮಸ್ ಅವರ ಮತ್ತೊಂದು ಕಾರ್ಯವೆಂದರೆ, ಮಕ್ಕಳನ್ನು ಅಝೈನ್ಮೆಂಟ್ಗಾಗಿ ಬಳಸುತ್ತಿದ್ದ A4 ಶೀಟ್ ಕಾಗದದಿಂದ ತ್ಯಾಜ್ಯ ಹೊರ ಬೀಳದಂತೆ ನೋಡಿಕೊಂಡಿದ್ದು. ಇವರು ಸ್ಥಳಿಯ ಶಾಲೆಗಳಿಗೆ ತೆರಳಿ ಅಲ್ಲಿನ ಹಳೆ ವಿದ್ಯಾರ್ಥಿಗಳ ಅಝೈನ್ಮೆಂಟ್ ಪುಸ್ತಕಗಳನ್ನು ಸಂಗ್ರಹ ಮಾಡಿ, ಆ ಪುಸ್ತಕಗಳನ್ನು 300 ನೋಟ್ ಬುಕ್ಗಳಾಗಿ ಪರಿವರ್ತನೆಗೊಳಿಸಿದ್ದಾರೆ. ವೇಸ್ಟ್ ಆದ ಪುಸ್ತಕಗಳ ಹಾಳೆಯನ್ನು ರಿಸೈಕಲ್ ಮಾಡಿ ಪುಸ್ತಕವಾಗಿ ಪರಿವರ್ತಿಸಲಾಗಿದೆ. ಇದನ್ನು ಮಕ್ಕಳ ಉಪಯೋಗಕ್ಕೆ ಹಂಚಲಾಗುತ್ತದೆ. ಮಾರಾಟ ಮಾಡಲಾಗುತ್ತದೆ. ಮಾರಿದ ಹಣವನ್ನು ಶಿಕ್ಷಣಕ್ಕಾಗಿಯೇ ವಿನಿಯೋಗಿಸಲಾಗುತ್ತಿದೆ.
ಪ್ರತಿ ಮೂರು ತಿಂಗಳಿಗೊಮ್ಮೆ ಇವರು ಮತ್ತು ಇವರ ವಿದ್ಯಾರ್ಥಿಗಳ ತಂಡ ವಿವಿಧ ಮನೆಗಳಿಗೆ ತೆರಳಿ ಒಣತ್ಯಾಜ್ಯಗಳನ್ನು ಸಂಗ್ರಹ ಮಾಡುತ್ತದೆ. ಪ್ಲಾಸ್ಟಿಕ್, ಟಿನ್, ಗ್ಲಾಸ್ ಇತ್ಯಾದಿಗಳನ್ನು ಸಂಗ್ರಹಿಸಿ ಅದನ್ನು ರಿಸೈಕಲ್ ಮಾಡಿಸುತ್ತಾರೆ ಮತ್ತು ಅದನ್ನು ಮಾರಿ ಹಣ ಗಳಿಸುತ್ತಾರೆ. ಅವರ ಈ ಕಾರ್ಯ ಪರಿಸರವನ್ನು ಸ್ಚವ್ಛವಾಗಿಟ್ಟುಕೊಳ್ಳುತ್ತಿರುವುದು ಮಾತ್ರವಲ್ಲ, ಬಡ ಮಕ್ಕಳ ಓದಿಗೂ ನೆರವು ನೀಡುತ್ತಿದೆ. ಮಾತ್ರವಲ್ಲ, ಆಸ್ಪತ್ರೆ, ಅಂಗಡಿ, ಶಾಲೆಗಳಿಗೆ ತೆರಳಿ ತ್ಯಾಜ್ಯ ನಿರ್ವಹಣೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.