ನಮ್ಮ ಶಾಲೆಗಳಲ್ಲಿ ಅಕ್ಬರ್, ಬಾಬರ್, ಔರಂಗಾಜೇಬ್, ಟಿಪ್ಪು ಸುಲ್ತಾನ್ ಮುಂತಾದವರ ಜನ್ಮ ದಿನ ಯಾವುದೆಂದು ಓದಿ ತಿಳಿದು ಉರು ಹೊಡೆದು ನೆನಪಿಟ್ಟುಕೊಂಡು ಪರೀಕ್ಷೆಯಲ್ಲಿ ಎದುರಾಗುವ ಆ ಪ್ರಶ್ನೆಗೆ ಸರಿಯಾದ ಉತ್ತರ ಬರೆದು ಅಂಕ ಗಳಿಸಿ ತೇರ್ಗಡೆ ಹೊಂದಬೇಕಾದ ಪರಿಸ್ಥಿತಿ ಇರುವಾಗ ಅದೇ ಮಕ್ಕಳಿಗೆ ನಿಮ್ಮ ಜನ್ಮ ದಿನಾಂಕ ಯಾವುದೆಂದು ಕೇಳಿದರೆ “ಶಾಲೆಗೆ ಸೇರುವಾಗ ಕೊಟ್ಟ ಜನ್ಮ ದಿನಾಂಕ ಗೊತ್ತು, ಜಾತಕದ ಪ್ರಕಾರ ನನ್ನ ನಿಜವಾದ ಹುಟ್ಟಿದ ದಿನಾಂಕ ಗೊತ್ತಿಲ್ಲ” ಎಂದು ಉತ್ತರಿಸಬೇಕಾದ ಅನಿವಾರ್ಯತೆ ಇದೆ.
ಏಕೆಂದರೆ ಕಾನೂನನ್ನು ಪಾಲಿಸುವ ಸಲುವಾಗಿ ನಿಜವಾದ ಹುಟ್ಟಿದ ದಿನಾಂಕವನ್ನೇ ಮುಚ್ಚಿಟ್ಟು ಸುಳ್ಳು ಜನ್ಮ ದಿನಾಂಕವನ್ನು ನೀಡಿ ಮಕ್ಕಳನ್ನು ಶಾಲೆಗೆ ಸೇರಿಸುವ ಪರಿಪಾಠ ಹಿಂದಿನಿಂದಲೂ ನಡೆದುಬಂದಿದೆ. ಹಾಗೆ ಶಾಲಾ ದಾಖಲಾತಿಗಾಗಿ ನೀಡಲಾಗುವ ಸುಳ್ಳು ಜನ್ಮ ದಿನಾಂಕವೇ ಮುಂದಿನ ಎಲ್ಲಾ ದಾಖಲೆಗಳಲ್ಲೂ ಬಳಸುವ ಮೂಲಕ ಅವರಿಗೆ ನಿಜವಾದ ಜನ್ಮ ದಿನಾಂಕವೇ ತಿಳಿದಿರದಂತಾಗಿರುತ್ತದೆ.
ಆದರೆ ಭಾರತೀಯ ಆಚರಣೆಗಳ ಒಂದು ಭಾಗವಾದ ಮಗು ಹುಟ್ಟಿದ ಕ್ಷಣದಲ್ಲೇ ರಚಿಸಲ್ಪಡುವ ಜಾತಕ ಇನ್ನು ಮುಂದೆ ಅಧಿಕೃತ ಸರ್ಕಾರೀ ದಾಖಲೆಯಾಗಿ ಬಳಕೆಯಾಗುವ ಕಾಲ ಸನ್ನಿಹಿತವಾಗುತ್ತಿದೆ. ಆ ಮೂಲಕ ತಮ್ಮ ಹುಟ್ಟಿದ ದಿನಾಂಕದ ಬಗ್ಗೆಯೇ ಗೊಂದಲಪಟ್ಟುಕೊಳ್ಳುವ ಒಂದು ತಲೆಮಾರು ನಿಧಾನವಾಗಿ ಕಣ್ಮರೆಯಾಗಲಿದೆ.
ಹೌದು, ಆಸ್ಪತ್ರೆಯಲ್ಲಿ ಜನಿಸಿದ ನವಜಾತ ಶಿಶುಗಳಿಗೆ ಆಸ್ಪತ್ರೆಯಲ್ಲೇ ಜಾತಕ ನೀಡುವ ವ್ಯವಸ್ಥೆ ಜಾರಿಗೆ ತರಲು ಇದೀಗ ರಾಜಸ್ಥಾನ ಸರ್ಕಾರ ಮುಂದಾಗಿದೆ. ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗುವ ಗರ್ಭಿಣಿಗೆ ಮಗು ಜನಿಸಿದ ಬಳಿಕ ಆಕೆಯ ಮಗುವಿನ ಜಾತಕವನ್ನು ನೀಡಲಾಗುತ್ತದೆ. ಅಲ್ಲದೆ ಜಾತಕದ ಪ್ರಕಾರ ಮಗುವಿಗೆ ಯಾವ ಹೆಸರಿಟ್ಟರೆ ಒಳ್ಳೆಯದು ಎನ್ನುವ ಸಲಹೆಯನ್ನು ಕೂಡಾ ನೀಡಲಾಗುವುದು.
ಪೋಷಕರು ಮಗುವಿನ ಜಾತಕವನ್ನು ಪಡೆದುಕೊಳ್ಳಲು ಖಾಸಗಿ ಆಸ್ಪತ್ರೆಗಳಲ್ಲಾದರೆ 101 ರೂ. ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಾದರೆ ಕೇವಲ 51 ರೂ. ಶುಲ್ಕವನ್ನು ಪಾವತಿಸಿದರೆ ಸಾಕು! ಹಾಗೆ ಆಸ್ಪತ್ರೆಯಲ್ಲಿ ಮಕ್ಕಳು ಜನಿಸಿದ ಕೂಡಲೇ ಅಧಿಕೃತವಾಗಿ ಆ ಮಕ್ಕಳ ಜಾತಕ ನೀಡಲು ಜೈಪುರದ ಜಗದ್ಗುರು ರಾಮಚಂದ್ರ ಆಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯವನ್ನು ನೋಡಲ್ ಏಜೆನ್ಸಿಯಾಗಿ ನೇಮಕ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಒಟ್ಟಿನಲ್ಲಿ ಇದೊಂದು ಅತ್ಯಂತ ಸಕಾರಾತ್ಮಕ ಬದಲಾವಣೆಯಾಗಿದ್ದು, ಇದುವರೆಗೂ ಕೇವಲ ಮದುವೆಗೆ ಸಂಗಾತಿಯನ್ನು ಹೊಂದಿಸಲು ಮಾತ್ರ ಹೆಚ್ಚಾಗಿ ಬಳಕೆಯಾಗುತ್ತಿದ್ದ ಜಾತಕ ಇನ್ನು ಮುಂದೆ ಮಗುವನ್ನು ಶಾಲೆಗೆ ಸೇರಿಸಲು,ಸರ್ಕಾರೀ ಉದ್ಯೋಗಕ್ಕೆ ಸೇರಲು ಕೂಡಾ ಅಧಿಕೃತವಾಗಿ ಬಳಕೆ ಆಗುವ ಕಾಲ ದೂರವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.