ಕಳೆದ ತಿಂಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ವಿವಿಧ ಎಕ್ಸ್ಪ್ರೆಸ್ವೇಗಳನ್ನು, ಎಕನಾಮಿಕ್ ಕಾರಿಡಾರ್ಗಳನ್ನು, ಇಂಟರ್-ಕಾರಿಡಾರ್ಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದೊಂದಿದೆ ವಿಸ್ತೃತ ವರದಿಯನ್ನು ರಚನೆ ಮಾಡುವಂತೆ ಕನ್ಸಲ್ಟೆಂಟ್ಗಳಿಗೆ ಆಹ್ವಾನವನ್ನು ನೀಡಿತ್ತು. ಕೇಂದ್ರ ಸರ್ಕಾರದ ‘ಭಾರತ್ ಪರಿಯೋಜನಾ’ ಯೋಜನೆಯ ಎರಡನೇ ಹಂತದಲ್ಲಿ ಈ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ.
ಈ ಪ್ರಸ್ತಾವಣೆಗಳ ಪೈಕಿ ಚೆನ್ನೈ-ತೂತುಕುಡಿ ಎಕ್ಸ್ಪ್ರೆಸ್ವೇ ವಯಾ ತಿರುಚಿಯೂ ಒಂದು. ಈ ಯೋಜನೆಯ ತಾಂತ್ರಿಕ, ಹಣಕಾಸು ವಿವರಗಳನ್ನು ಇನ್ನಷ್ಟೇ ಸಿದ್ಧಪಡಿಸಬೇಕು. ಆದರೆ ತಮಿಳುನಾಡಿನ ಪಶ್ಚಿಮ ಜಿಲ್ಲೆಗಳಾದ ಕೊಯಂಬತ್ತೂರು, ತಿರುಪುರ ಮತ್ತು ಸಲೇಂಗಳನ್ನು ದಕ್ಷಿಣ ಭಾಗಗಳೊಂದಿಗೆ ಸಂಪರ್ಕಿಸಲು, ಜನರ ಸುಲಲಿತ ಸಂಚಾರಕ್ಕೆ ಅನುವು ಮಾಡಿಕೊಡುವಲ್ಲಿ ಈ ಯೋಜನೆ ಸಾಕಷ್ಟು ಪ್ರಯೋಜನಕಾರಿಯಾಗಿದೆ.
ಪ್ರಸ್ತುತ, ಪಶ್ಚಿಮ ಜಿಲ್ಲೆಗಳ ಜನ ಚೆನ್ನೈ ಅಥವಾ ತಿರುಚಿಯನ್ನು ಸಂಪರ್ಕಿಸಲು ಎರಡು ಆಯ್ಕೆಗಳಿವೆ. ಅದರಲ್ಲಿ ಒಂದು, ಧರ್ಮಪುರಿಗೆ ತೆರಳಿ ಅಲ್ಲಿಂದ ಬೆಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗುವುದು. ಎರಡನೇಯದು, ತಿಂಡಿವನಂಗೆ ತೆರಳಿ, ಅಲ್ಲಿಂದ ಚೆನ್ನೈ-ತಿರುಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವುದು. ತಿರುಚಿಗೆ ಹೋಗುವವರು ಸಾಮಾನ್ಯವಾಗಿ ಇದೇ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಈ ಮಾರ್ಗ ಅತ್ಯಂತ ಜನಸಂದಣಿ, ಸಾರಿಗೆ ದಟ್ಟಣೆಯಿಂದ ಕೂಡಿರುತ್ತದೆ. ಇಲ್ಲಿ ಪ್ರಯಾಣಿಸುವುದೇ ಒಂಥರಾ ದುಃಸ್ಥರವಾಗಿರುತ್ತದೆ. ಮತ್ತೊಂದು ಸಮಸ್ಯೆಯೆಂದರೆ, ಚೆನ್ನೈ-ತಿರುಚಿ ಹೆದ್ದಾರಿ ಹಲವಾರು ಕಗ್ಗಂಟುಗಳನ್ನು ಹೊಂದಿದೆ, ಪದೇ ಪದೇ ಸಿಗುವ ಟ್ರಾಫಿಕ್ ಜಂಕ್ಷನ್ಗಳು ಇಲ್ಲಿನ ಪ್ರಯಾಣವನ್ನು ನಿಧಾನಗೊಳಿಸುತ್ತದೆ.
ಹೆದ್ದಾರಿ ಪ್ರಾಧಿಕಾರವು, ಈ ಹೆದ್ದಾರಿಯಲ್ಲಿ ಫ್ಲೈಓವರ್ಗಳನ್ನು ನಿರ್ಮಾಣ ಮಾಡಿ, ಕೆಲವು ಕಡೆ ರಸ್ತೆಯನ್ನು ಮರುನಿರ್ಮಾಣ ಮಾಡಿ ಕಗ್ಗಂಟುಗಳನ್ನು ನಿರ್ಮೂಲನೆ ಮಾಡುವ ಪ್ರಯತ್ನವನ್ನು ಮಾಡಬಹುದಾಗಿದೆ. ಇದಕ್ಕೆ ಸಾಕಷ್ಟು ಹಣ ತಗಲುಬಹುದು. ಇದರ ಬದಲು ಹೊಸ ಎಕ್ಸ್ಪ್ರೆಸ್ ವೇಯನ್ನೇ ನಿರ್ಮಾಣ ಮಾಡುವುದು ಒಳಿತು ಎಂಬ ನಿರ್ಧಾರಕ್ಕೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಧಾರಕ್ಕೆ ಬಂದಿದೆ.
ಚೆನ್ನೈನಿಂದ ತೂತುಕುಡಿಗೆ ತೆರಳುತ್ತಿರುವವರಿಗೆ ಈ ಎಕ್ಸ್ಪ್ರೆಸ್ವೇ ಸಾಕಷ್ಟು ಪ್ರಯೋಜನವನ್ನು ನೀಡಲಿದೆ. ಈ ಯೋಜನೆ, ಪನ್ರುತಿ, ವೃದ್ಧಾಚಲಂ ಮತ್ತು ಪೆರಂಬಲೂರ್ನ ಜನರಿಗೆ ಮತ್ತು ಕೈಗಾರಿಕೆಗಳಿಗೆ ಉತ್ತಮ ಸಂಪರ್ಕವನ್ನು ಒದಗಿಸಲಿದೆ. ಕೇವಲ ತ್ವರಿತ ಸಾರಿಗೆ ಮಾತ್ರವಲ್ಲ, ಈ ಎಕ್ಸ್ಪ್ರೆಸ್ವೇ ಮೂಲಕ 30 ಕಿಲೋಮೀಟರ್ ಹಾದಿಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.
ಇನ್ನೊಂದೆಡೆ, ತಮಿಳುನಾಡು ಸರ್ಕಾರ ಮತ್ತು ಕೇಂದ್ರ ಜಂಟಿಯಾಗಿ ತಮಿಳುನಾಡಿನಲ್ಲಿ ಡಿಫೆನ್ಸ್ ಕಾರಿಡಾರ್ನ್ನು ಸ್ಥಾಪನೆ ಮಾಡಲು ಯೋಜಿಸಿದೆ, ಮಧುರೈ-ತೂತುಕುಡಿ ಇಂಡಸ್ಟ್ರಿಯಲ್ ಕಾರಿಡಾರ್ಗೂ ಯೋಜನೆ ರೂಪಿಸಲಾಗುತ್ತಿದೆ. ಇಂತಹ ಎಕ್ಸ್ಪ್ರೆಸ್ ವೇಗಳಿಂದ ಕೊಯಂಬತ್ತೂರು, ಸಲೇಂ, ಇರೋಡ್, ತ್ರಿಪುರಾಗಳ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಕಷ್ಟು ಪ್ರಯೋಜನವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.