ಕಳೆದ ತಿಂಗಳು, ಅಮೆರಿಕಾ ಭಾರತದ 26 ಸಿಗಡಿ ರಫ್ತು ರವಾನೆ ಶಿಪ್ಗಳಿಗೆ ಪ್ರವೇಶ ನಿರಾಕರಿಸಿದೆ. ನಿಷೇಧಿತ ಪ್ರತಿ ಜೀವಕಗಳ ಕುರುಹುಗಳು ಸಿಗಡಿಗಳಲ್ಲಿ ಪತ್ತೆಯಾಗಿದೆ ಎಂದು ಹೇಳಿ ಇವುಗಳನ್ನು ಸ್ವೀಕರಿಸಲು ಆ ದೇಶ ನಿರಾಕರಿಸಿದೆ. ಇದು 2018ರಿಂದ ಅಮೆರಿಕಾ ನಿರಾಕರಿಸಿದ ಒಟ್ಟು ಆಮದುಗಳ ಪೈಕಿ ಶೇ.50ರಷ್ಟು ಎಂಬುದು ಗಮನಿಸಬೇಕಾದ ಸಂಗತಿ.
ಅಮೆರಿಕಾ ಪರಿಚಯಿಸಿರುವ, ‘ಸಮುದ್ರ ಆಹಾರ ಆಮದು ಮೇಲ್ವಿಚಾರಣಾ ಕಾರ್ಯಕ್ರಮ’ಕ್ಕೆ ಅನುಗುಣವಾಗಿ ಈ ನಿರಾಕರಣೆಗಳನ್ನು ಮಾಡಲಾಗುತ್ತಿದೆ. 2018ರ ಜನವರಿ 1ರಿಂದ ಈ ಕಾರ್ಯಕ್ರಮವನ್ನು ಅಮೆರಿಕಾ ಅನುಷ್ಠಾನಕ್ಕೆ ತಂದಿದೆ, ಆದರೆ ಆಗ ಸಿಗಡಿಗಳಿಗೆ ಇದರಿಂದ ವಿನಾಯಿತಿಯನ್ನು ನೀಡಲಾಗಿತ್ತು. ಆದರೆ ಈ ವರ್ಷದ ಜನವರಿಯಿಂದ ಸಿಗಡಿಯನ್ನೂ ಇದಕ್ಕೆ ಒಳಪಡಿಸಲಾಗಿದೆ. ನಿಷೇಧಿತ ಪ್ರತಿಜೀವಕಗಳು ಪತ್ತೆಯಾಗಿದೆ ಎಂಬ ಕಾರಣಕ್ಕೆ ಭಾರತದ 26 ಸಿಗಡಿ ರವಾನೆಗಳನ್ನು ತಿರಸ್ಕರಿಸಲಾಗಿದೆ.
ಅಮೆರಿಕಾವೂ ಭಾರತದಿಂದ ಶೇ.27ರಷ್ಟು ಸಿಗಡಿಗಳನ್ನು ಆಮದು ಮಾಡಿಕೊಳ್ಳುತ್ತದೆ. ಒಟ್ಟು ರಫ್ತುಗಳ ಪೈಕಿ ಘನೀಕರಿಸಿದ ಸಿಗಡಿಗಳ ಪ್ರಮಾಣ ಶೇ.41ರಷ್ಟು ಇರುತ್ತದೆ. 2017-18ರ ಸಾಲಿನಲ್ಲಿ ಶೇ.98.5ರಷ್ಟು ಸಾಗಾಣೆ ಮೌಲ್ಯವನ್ನು ಹೊಂದಲಾಗಿದೆ. ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ಭಾರತದ ಸಮುದ್ರ ಆಹಾರ ರಫ್ತು ಪ್ರಮಾಣ 8 ಬಿಲಿಯನ್ ಡಾಲರ್ಗೆ ತಲುಪುವ ನಿರೀಕ್ಷೆ ಇದೆ. ಹಿಂದಿನ ವರ್ಷ ಒಟ್ಟಾರೆ ರಫ್ತು 7.08 ಬಿಲಿಯನ್ ಡಾಲರ್ ಆಗಿತ್ತು.
ಫೆ.10ರಂದು ತಮಿಳುನಾಡಿನ ತಿರುಪುರ್ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, ಹಂಗಾಮಿ ವಿತ್ತ ಸಚಿವ ಪಿಯೂಶ್ ಗೋಯಲ್ ಅವರು ಮಂಡಿಸಿ ಮಧ್ಯಂತರ ಬಜೆಟ್ನಲ್ಲಿ ಪ್ರತ್ಯೇಕ ಮೀನುಗಾರಿಕಾ ಸಚಿವಾಲಯದ ರಚನೆಯ ಬಗ್ಗೆ ಘೋಷಣೆ ಮಾಡಿದ್ದನ್ನು ಉಲ್ಲೇಖಿಸಿದ್ದರು ಮತ್ತು ನಮ್ಮ ಸರ್ಕಾರ ಸೇವೆಯನ್ನು ಪ್ರತಿ ಮೀನುಗಾರನ ಮನೆ ಬಾಗಿಲಿಗೆ ತಲುಪಿಸಲಿದೆ ಎಂಬ ಭರವಸೆಯನ್ನು ನೀಡಿದ್ದರು.
ಇದುವರೆಗೆ ಮೀನುಗಾರಿಕಾ ವಲಯವು, ಪಶುಸಂಗೋಪಣೆ ಮತ್ತು ಹೈನುಗಾರಿಕೆ ಇಲಾಖೆ ಭಾಗವಾಗಿ ಕೃಷಿ ಸಚಿವಾಲಯದ ಅಧೀನದಲ್ಲಿತ್ತು. ಇದರಿಂದಾಗಿ ಮೀನುಗಾರಿಕಾ ವಲಯವು ಹಲವಾರು ಸಂಕೀರ್ಣ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಈ ವಲಯಕ್ಕೆ ಹೆಚ್ಚಿನ ಗಮನ ನೀಡದೆ ಒಂಥರಾ ಮೂಲೆಗುಂಪಾಗಿತ್ತು.
ಅಮೆರಿಕಾ ನಿಷೇಧಿತ ಪ್ರತಿಜೀವಕಗಳು ಪತ್ತೆಯಾಗಿವೆ ಎಂದು 26 ಸಿಗಡಿ ರವಾನೆಯ ಶಿಪ್ಗಳನ್ನು ನಿರಾಕರಿಸಿದ್ದು ಅಂತಹ ಸಮಸ್ಯೆಗಳಲ್ಲೊಂದು. (ಕಾಯಿಲೆಗಳಿಗೆ ತುತ್ತಾಗಬಾರದು ಎಂದು ಸಿಗಡಿಗಳಿಗೆ ಫಾರ್ಮ್ಗಳಲ್ಲಿ ಪ್ರತಿಜೀವಕಗಳನ್ನು ನೀಡಲಾಗುತ್ತದೆ). ವಿಶ್ವ ವ್ಯಾಪಾರ ಸಂಸ್ಥೆಯನ್ನು ರಚನೆ ಮಾಡಿದ ಬಳಿಕ, ವಿದೇಶಿ ಮಾರುಕಟ್ಟೆಯನ್ನು ಪಡೆಯುವಲ್ಲಿ ಭಾರತೀಯ ಸಮುದ್ರ ಆಹಾರ ರಫ್ತು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ.
ಭಾರತ, ಪಾಕಿಸ್ಥಾನ ಮತ್ತು ಥಾಯ್ಲೆಂಡ್ನ ಮೀನುಗಾರರು ತಮ್ಮ ದೋಣಿಗಳಲ್ಲಿ ಆಮೆಯನ್ನು ಹೊರಗಿಡುವ ಡಿವೈಸ್ ಅಳವಡಿಸಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ 1996ರಲ್ಲಿ ಅಮೆರಿಕಾ ಈ ರಾಷ್ಟ್ರಗಳ ಸಿಗಡಿ ಆಮದುಗಳನ್ನು ನಿರಾಕರಿಸಿತ್ತು. ಸಮುದ್ರದಲ್ಲಿ ಆಮೆಗಳ ಸಂರಕ್ಷಣೆಯ ದೃಷ್ಟಿಯಿಂದ ತಾನು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅದು ಸಮರ್ಥನೆ ನೀಡಿತ್ತು. ಆದರೆ ವಿಶ್ವ ವ್ಯಾಪಾರ ಸಂಸ್ಥೆ ಈ ನಿರ್ಧಾರವನ್ನು ಅಸಮಂಜಸ ಎಂದು ಹೇಳಿತ್ತು.
ಇಂತಹ ಸಂದರ್ಭಗಳಲ್ಲಿ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯದ ಅಗತ್ಯವಿತ್ತು. ಆ ವೇಳೆ ಕೃಷಿ ಸಚಿವಾಲಯ ಇದಕ್ಕಾಗಿ ಪ್ರಸ್ತಾವಣೆಯನ್ನೂ ಸಲ್ಲಿಸಿತ್ತು, ಆದರೆ ಇದನ್ನು ತಿರಸ್ಕರಿಸಲಾಗಿತ್ತು. ಅಲ್ಲಿಂದ, ಪ್ರತ್ಯೇಕ ಮೀನುಗಾರಿಕಾ ಸಚಿವಾಲಯಕ್ಕೆ ಬೇಡಿಕೆಗಳು ಹೆಚ್ಚಾದವು. ಆದರೆ ಈ ಬೇಡಿಕೆ ಈಡೇರಲು ಎರಡು ದಶಕಗಳೇ ಬೇಕಾದವು. ಈಗ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಂತೆ ಮೀನುಗಾರಿಕ ಸಚಿವಾಲಯ ಸೃಷ್ಟಿಯಾಗಿ, ದೇಶದ 1.5 ಕೋಟಿ ಮೀನಾಗಾರರಿಗೆ ಸೇವೆ ಸಲ್ಲಿಸಲಿದೆ.
ಬಿಜೆಪಿಯು ಪ್ರತ್ಯೇಕಾ ಮೀನುಗಾರಿಕ ಸಚಿವಾಲಯದ ಸ್ಥಾಪನೆಯಿಂದ ಸಣ್ಣ ಮತ್ತು ಸಾಂಪ್ರದಾಯಿಕ ಮೀನುಗಾರರಿಗೆ ಪ್ರಯೋಜನವಾಗಲಿದೆ ಎಂದು ಹೇಳುತ್ತಲೇ ಬಂದಿದೆ. ಸಚಿವ ನಿತಿನ್ ಗಡ್ಕರಿಯವರು, ದೇಶದ ಶೇ.60ರಷ್ಟು ಮೀನುಗಾರರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದಿದ್ದರು. ಸಾಂಪ್ರದಾಯಿಕ ಮೀನುಗಾರರು ಹಿಂದಿನಿಂದಲೂ ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಲೇ ಬಂದಿದ್ದಾರೆ.
ಮೀನುಗಾರಿಕಾ ಸಚಿವಾಲಯದ ರಚನೆ ಏಕೆ ಮಹತ್ವದ್ದು?
ಮೀನುಗಾರಿಕೆ ವಲಯವು ಪ್ರಸ್ತುತ ಕೃಷಿ ಸಚಿವಾಲಯದಡಿಯಲ್ಲಿನ ಪಶುಸಂಗೋಪಣೆ ಮತ್ತು ಹೈನುಗಾರಿಕೆ ಇಲಾಖೆಯಡಿಯಲ್ಲಿದೆ. ಮೀನುಗಾರಿಕೆಯ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದವರು ಇದನ್ನು ನೋಡಿಕೊಳ್ಳುತ್ತಿದ್ದಾರೆ. ಈ ಇಲಾಖೆಯ ಅಧಿಕಾರಿಗಳಿಂದ ಮೀನುಗಾರಿಕೆ ಮತ್ತು ಮೀನುಗಾರರಿಗೆ ಸಮರ್ಪಕವಾದ ಗಮನ ಸಿಗುತ್ತಿಲ್ಲ.
ಕೋಲ್ಡ್ ಸ್ಟೋರೇಜ್ ಫೆಸಿಲಿಟಿ, ಲ್ಯಾಂಡಿಂಗ್ ಪಾಯಿಂಟ್ಸ್, ಕೋಲ್ಡ್ ಚೈನ್ಗಳು ಅಗತ್ಯವಾಗಿ ಬೇಕಾಗಿರುವ ವಲಯ. ಇದುವರೆಗೆ, ಇವುಗಳು ಆಳುವವರಿಂದ ಅತೀ ಕಡಿಮೆ ಗಮನವನ್ನು ಪಡೆದುಕೊಂಡಿದೆ.
ಮೀನುಗಳ ಒಣಗಿಸುವಿಕೆ ಮತ್ತು ಸಂರಕ್ಷಣೆಯಲ್ಲಿ ಮಹಿಳೆಯರು ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಇವರು ಹವಮಾನ, ಉದ್ಯೋಗ ಅನಿಶ್ಚಿತತೆಯಂತಹ ಹಲವಾರು ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಮೀನುಗಾರಿಕಾ ವಲಯದ ನಿರ್ಲಕ್ಷ್ಯದಿಂದಾಗಿ ಅವರ ಸಮಸ್ಯೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ.
ಪ್ರತ್ಯೇಕ ಮೀನುಗಾರಿಕ ಸಚಿವಾಲಯದ ಸೃಷ್ಟಿಯಿಂದಾಗಿ, ಮೀನುಗಳ ಸಂರಕ್ಷಣೆ, ಮೀನುಗಾರಿಕಾ ನಿರ್ಬಂಧ, ಮೀನುಗಾರರ ಹಿತಾಸಕ್ತಿಗಳ ಸಂರಕ್ಷಣೆ ಬಗ್ಗೆ ಸಮತೋಲನದ ಕ್ರಮಗಳು ತೆಗೆದುಕೊಳ್ಳಲು ಸಹಾಯಕವಾಗಲಿದೆ.
ಸಂಭಾವ್ಯ ಮಾರುಕಟ್ಟೆ ಅವಕಾಶಗಳು, ಸಮುದ್ರ ಮಾಲಿನ್ಯ, ಮೀನು ಹಿಡಿಯುವಿಕೆ ಇತ್ಯಾದಿಗಳತ್ತವೂ ಹೆಚ್ಚಿನ ಗಮನವನ್ನು ನೀಡಲು ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ ಅತ್ಯಗತ್ಯವಾಗಿದೆ. ಮೀನುಗಾರರಿಗೆ ಬೇಕಾದ ಕಚ್ಚಾವಸ್ತುಗಳ ಪೂರೈಕೆ, ರಫ್ತು ವಸ್ತುಗಳ ಪೂರೈಕೆ ಇದುವರೆಗೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಮೀನುಗಾರರು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೂ ಪ್ರತ್ಯೇಕ ಮೀನುಗಾರಿಕಾ ಸಚಿವಾಲಯದ ರಚನೆಯ ಮೂಲಕ ಪರಿಹಾರ ಒದಗಿಸುವ ಪ್ರಯತ್ನವನ್ನು ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ತೆಗೆದುಕೊಂಡ ನಿರ್ಧಾರ ಅತ್ಯಂತ ಮಹತ್ವದ್ದು ಎನಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.