ತಿರುಪತಿ ತಿಮ್ಮಪ್ಪ ನಮ್ಮ ಕರ್ನಾಟಕದ ರೈತರ ನೆರವಿಗೆ ಮತ್ತೊಮ್ಮೆ ಒದಗಿಬಂದಿದ್ದಾನೆ. ಸುಮಾರು ಮೂರೂವರೆ ವರ್ಷಗಳ ನಂತರ ತಿಮ್ಮಪ್ಪನ ಪ್ರಸಾದವಾದ ಪ್ರಸಿದ್ಧ ತಿರುಪತಿ ಲಡ್ಡು ತಯಾರಿಕೆಗೆ ಮತ್ತೊಮ್ಮೆ ಕರ್ನಾಟಕದ ನಂದಿನಿ ತುಪ್ಪವನ್ನು ಸರಬರಾಜು ಮಾಡುವ ಅವಕಾಶ ಕೆ.ಎಂ.ಎಫ್. ಗೆ ಲಭಿಸಿದೆ. ಮುಂದಿನ ಆರೇ ತಿಂಗಳಲ್ಲಿ ಕರ್ನಾಟಕದ ಹೈನುಗಾರರಿಂದ ಸರಬರಾಜಾಗುವ ಹಾಲಿನಿಂದ ತಯಾರಾಗುವ ಹದಿನಾಲ್ಕು ಲಕ್ಷ ಕೆಜಿ ನಂದಿನಿ ತುಪ್ಪವನ್ನು ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ಕಳಿಸಿಕೊಡಬೇಕಿದೆ.
ಕಳೆದ 2015 ರ ಟೆಂಡರ್ ನಲ್ಲಿ ಖಾಸಗಿ ಕಂಪೆನಿಯೊಂದಕ್ಕಿಂತ ಹೆಚ್ಚಿನ ದರ ನಮೂದಿಸಿದ್ದರಿಂದಾಗಿ ತಿಮ್ಮಪ್ಪನಿಗೆ ತುಪ್ಪ ಸರಬರಾಜು ಮಾಡುವ ಅವಕಾಶ ನಂದಿನಿಯ ಕೈ ತಪ್ಪಿತ್ತು. ಆ ಮೂಲಕ ನೂರು ಕೋಟಿ ರೂ. ಮೌಲ್ಯದ ತುಪ್ಪ ರಾಜ್ಯದಲ್ಲೇ ಉಳಿಯುವಂತಾಯಿತು. ನಂತರದಲ್ಲಿ ಹಾಲು ಉತ್ಪಾದಕರ ಮಹಾಮಂಡಳಿಯ ನಾನಾ ಒಕ್ಕೂಟಗಳು ಹಾಲು ಉತ್ಪಾದಕರಿಂದ ಹಾಲು ಖರೀದಿಸುವ ದರದಲ್ಲಿ ಕಡಿತ ಮಾಡಿದ್ದವು. ರೈತರಿಗೆ ಪೂರೈಸುವ ಪಶು ಆಹಾರ ದರವನ್ನು ಕೂಡಾ ಏರಿಸಲಾಗಿತ್ತು. ಹದಿನಾರು ಸಾವಿರ ಟನ್ಗಳಿಗೂ ಹೆಚ್ಚು ಕೆನೆರಹಿತ ಹಾಲಿನ ಪುಡಿ ಮಾರಾಟವಾಗದೆ ದಾಸ್ತಾನು ಉಳಿದಿತ್ತು. ಆದರೀಗ ಮತ್ತೆ ತಿಮ್ಮಪ್ಪನ ಪ್ರಸಾದಕ್ಕಾಗಿ ಲಕ್ಷಾಂತರ ಕೆಜಿಗಳಷ್ಟು ನಂದಿನಿ ತುಪ್ಪ ಪೂರೈಸುವ ಅವಕಾಶ ದೊರೆಯುವ ಮೂಲಕ ತಿಮ್ಮಪ್ಪನ ಪ್ರಸಾದದಲ್ಲಿ ಕರ್ನಾಟಕ ಕಾಣಿಕೆಯೂ ಇದೆ ಎನ್ನುವ ಸಾರ್ಥಕ ಭಾವ ಮೂಡುವುದರ ಜೊತೆಗೆ ಕರ್ನಾಟಕದ ಹಾಲು ಉತ್ಪಾದಕರಿಗೆ ದೊಡ್ಡ ಚೈತನ್ಯ ಲಭಿಸಿದಂತಾಗಿದೆ.
ಕೇವಲ ತಿರುಪತಿ ತಿಮ್ಮಪ್ಪನ ಪ್ರಸಾದಕ್ಕಷ್ಟೇ ಅಲ್ಲದೆ ಆಂಧ್ರದ ಇತರ ದೇವಸ್ಥಾನಗಳಿಗೆ ಸುಮಾರು ಇಪ್ಪತ್ತು ಸಾವಿರ ಕೆಜಿ, ಬಿಹಾರದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಇಪ್ಪತ್ನಾಲ್ಕು ಸಾವಿರ ಕೆಜಿ, ತಮಿಳು ನಾಡಿನ ದೇವಾಲಯಕ್ಕೆ ಇಪ್ಪತ್ತು ಸಾವಿರ ಕೆಜಿ, ವಿಜಯವಾಡದ ಕನಕ ದುರ್ಗಾ ದೇವಸ್ಥಾನಕ್ಕೆ ಒಂಬತ್ತು ಸಾವಿರ ಕೆಜಿ ನಂದಿನಿ ತುಪ್ಪ ಸರಬರಾಜು ಮಾಡಲಾಗುತ್ತಿರುವ ಬಗ್ಗೆ ವರದಿಗಳಿವೆ. ಉಡುಪಿಯ ಶ್ರೀಕೃಷ್ಣ, ಕೊಲ್ಲೂರಿನ ಮೂಕಾಂಬಿಕೆ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಕರ್ನಾಟಕದ ದೇವಾಲಯಗಳೂ ಪ್ರಸಾದ ತಯಾರಿಕೆಗಾಗಿ ಕರ್ನಾಟಕದ ರೈತರ ಹೆಮ್ಮೆಯ ಉತ್ಪಾದನೆಯಾದ ನಂದಿನಿ ತುಪ್ಪವನ್ನೇ ಬಳಸುತ್ತಿವೆ. ಆ ಮೂಲಕ ಕರ್ನಾಟಕದ ರೈತರ ಮೇಲೆ ಎಲ್ಲಾ ದೇವರ ಆಶೀರ್ವಾದವೂ ಇದೆ.
ಕಲ್ಲು ದೇವರಿಂದ ಏನು ಲಾಭ ಎಂದು ಕೇಳುವವರಿಗೆ ಇದೇ ಉತ್ತರ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.