ಪ್ರಯಾಗ್ರಾಜ್: ಕುಂಭ ಮೇಳ 2019, ವಿಶ್ವದ ಅತೀ ದೊಡ್ಡ ಧಾರ್ಮಿಕ ಸಮಾವೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾತ್ರವಲ್ಲ, ಬೃಹತ್ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಾಗಿ, ಬೃಹತ್ ಸಾರಿಗೆ ಮತ್ತು ಜನಸಂದಣಿ ನಿರ್ವಹಣಾ ಯೋಜನೆಗಾಗಿ ಮತ್ತು ಸಾರ್ವಜನಿಕ ಪ್ರದೇಶದಲ್ಲಿ ಅತೀದೊಡ್ಡ ವರ್ಣರಂಜಿತ ಚಿತ್ರಕಲೆಗಳ ಪ್ರದರ್ಶನಕ್ಕಾಗಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಗೆ ಈ ಕುಂಭ ಮೇಳ ಸೇರ್ಪಡೆಯಾಗುವ ನಿರೀಕ್ಷೆ ಇದೆ.
ಗಿನ್ನಿಸ್ ವರ್ಲ್ಡ್ ರೆಕಾರ್ಡ್, ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಎಂದು 1955 ರಿಂದ 2000 ದ ವರೆಗೆ ಕರೆಯಲ್ಪಡುತ್ತಿತ್ತು. ಮಾನವ ಸಾಧನೆಗಳ ದಾಖಲೆಗಳನ್ನು ಮತ್ತು ನೈಸರ್ಗಿಕ ಪ್ರಪಂಚ ವೈವಿಧ್ಯೆಗಳ ದಾಖಲೆಯನ್ನು ಒಳಗೊಂಡ ಪುಸ್ತಕವನ್ನು ವಾರ್ಷಿಕವಾಗಿ ಬಿಡುಗಡೆಗೊಳಿಸುತ್ತದೆ. ಈ ಪಟ್ಟಿಯಲ್ಲಿ ಭಾರತದ ಕುಂಭಮೇಳ ಮಹತ್ವದ ಸ್ಥಾನವನ್ನು ಪಡೆದುಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಶೀಘ್ರದಲ್ಲೇ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಅಧಿಕಾರಿಗಳನ್ನು ‘ಸಂಗಮ ನಗರ’ ಪ್ರಯಾಗ್ರಾಜ್ಗೆ ಕರೆಸುವ ನಿರ್ಧಾರವನ್ನು ಕುಂಭಮೇಳ ಆಯೋಜಕರು ತೆಗೆದುಕೊಂಡಿದ್ದಾರೆ. 6 ಪವಿತ್ರ ಸ್ನಾನಗಳ ಪೈಕಿ ನಾಲ್ಕು ಸ್ನಾನಗಳನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಲಾಗಿದೆ. ಇದರಲ್ಲಿ ಸುಮಾರು 15 ಕೋಟಿ ಜನರು ಪವಿತ್ರ ಸ್ನಾನವನ್ನು ಮಾಡಿದ್ದಾರೆ. ಇದೂ ಕೂಡ ಗಿನ್ನಿಸ್ ದಾಖಲೆಯ ಪುಟವನ್ನು ಸೇರುವ ನಿರೀಕ್ಷೆ ಇದೆ.
‘ಫೆ.17, 24 ಮತ್ತು ಮಾರ್ಚ್ 2 ರಂದು ಮೂರು ದಿನಗಳ ಕಾಲ ಗಿನ್ನಿಸ್ ಅಧಿಕಾರಿಗಳನ್ನು ಕುಂಭಮೇಳಕ್ಕೆ ಕರೆಸಿಕೊಳ್ಳುತ್ತಿದ್ದೇವೆ. ಇದರಿಂದ ಅವರಿಗೆ ಮೇಳ ಮತ್ತು ಅದನ್ನು ಆಯೋಜಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ತಾಜಾ ಅನುಭವ ಸಿಗುತ್ತದೆ’ ಎಂದು ಪ್ರಯಾಗ್ರಾಜ್ ಮೇಳ ಮಂಡಳಿಯ ಮುಖ್ಯಸ್ಥ ಆಶಿಸ್ ಗೋಯಲ್ ಹೇಳಿದ್ದಾರೆ.
‘ನೈರ್ಮಲ್ಯ ನಿರ್ವಹಣೆ, ಸಾರಿಗೆ ಮತ್ತು ಜನಸಂದಣಿ ನಿರ್ವಹಣಾ ಯೋಜನೆ ಮತ್ತು ‘ಪೇಯಿಂಟ್ ಮೈ ಸಿಟಿ’ ಕಾರ್ಯಕ್ರಮದಡಿ ಮೂಡಿ ಬಂದ ಚಿತ್ರಕಲೆಗಳು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡುವ ನಿರೀಕ್ಷೆ ಇದೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.