ಅನಾರೋಗ್ಯ ಎಂಬುದು ಎಷ್ಟೋ ಕುಟುಂಬಗಳನ್ನು ಬಡತನದ ದವಡೆಗೆ ನೂಕಿದೆ. ಮಾರಕ ಕಾಯಿಲೆಗಳಿಗೆ ಅತೀ ದುಬಾರಿ ಚಿಕಿತ್ಸೆಗಳನ್ನು ನೀಡುವ ಸಲುವಾಗಿ ಮನೆ ಮಠ ಕಳೆದುಕೊಂಡವರೂ ಇದ್ದಾರೆ. ಸರಿಯಾದ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಅದೆಷ್ಟೋ ಬಡವರು ದುರಂತ ಅಂತ್ಯವನ್ನೂ ಕಂಡಿದ್ದಾರೆ. ಕಾಯಿಲೆಯ ಭೀಕರತೆಗೆ ತುತ್ತಾಗುತ್ತಿರುವ ಬಡವರ ಪಾಲಿಗೆ ಪುಣೆ ಡಾಕ್ಟರ್ ಒಬ್ಬರು ಸಂಜೀವಿನಿಯಾಗುತ್ತಿದ್ದಾರೆ. ಇದುವರೆಗೆ ಅವರು 350ಕ್ಕೂ ಅಧಿಕ ಉಚಿತ ಹೃದಯ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿ ಜೀವ ಉಳಿಸಿದ್ದಾರೆ, ರೋಗಿಯ ಮನೆಯ ಬೆಳಕು ಉಳಿಯುವಂತೆ ಮಾಡಿದ್ದಾರೆ.
ಡಾ.ಮನೋಜ್ ದುರೈರಾಜ್ ಅವರ ವೃತ್ತಿ ಜನರನ್ನು ಗುಣಪಡಿಸುವುದು ಮಾತ್ರವಲ್ಲ, ಅವರಿಗೆ ಹೊಸ ಜೀವನವನ್ನು ಕಲ್ಪಿಸುವುದು ಕೂಡ ಆಗಿದೆ. ಹೃದಯ ತಜ್ಞನಾಗಿರುವ ಅವರು, ಬಡವನ ಹೃದಯಾಂತರಾಳವನ್ನು ಅರಿತುಕೊಳ್ಳುವುದರಲ್ಲೂ ನಿಸ್ಸೀಮರು. ತಮ್ಮ ಮರಿಯನ್ ಕಾರ್ಡಿಯಾಕ್ ಸೆಂಟರ್ ಆ್ಯಂಡ್ ರಿಸರ್ಚ್ ಫೌಂಡೇಶನ್ ಮೂಲಕ ಅವರು ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿಯೇ ನೆರವೇರಿಸಿಕೊಡುತ್ತಾರೆ.
‘ನಾನು ಮತ್ತು ನನ್ನ ಫೌಂಡೇಶನ್ ನಡೆಸುತ್ತಿರುವ ಉತ್ತಮ ಕಾರ್ಯಕ್ಕೆ ಪ್ರಕೃತಿಯ ಸಕರಾತ್ಮಕತೆಯೇ ಕಾರಣ. ಹಣದ ತೊಂದರೆ ಅಥವಾ ಇತರ ಸಂಪನ್ಮೂಲ ಕೊರೆತ ಇರುವ ಯಾವ ರೋಗಿಯನ್ನೂ ನಾನು ಚಿಕಿತ್ಸೆ ನೀಡದೆ ವಾಪಾಸ್ ಕಳುಹಿಸಿಲ್ಲ’ ಎಂದು ಡಾ. ಮನೋಜ್ ಹೇಳುತ್ತಾರೆ.
ತಂದೆಯ ಹಾದಿಯಲ್ಲೇ ಮುನ್ನಡೆಯುತ್ತಿದ್ದಾರೆ
ಡಾ. ಮನೋಜ್ ಅವರ ತಂದೆ ಡಾ. ಮ್ಯಾನುವೆಲ್ ದುರೈರಾಜ್, ಅವರೂ 21 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಹೃದಯತಜ್ಞನಾಗಿ ಕಾರ್ಯನಿರ್ವಹಿಸಿದ್ದಾರೆ. ಮಾತ್ರವಲ್ಲ, 3 ರಾಷ್ಟ್ರಪತಿಗಳ-ಎನ್.ಸಂಜೀವ ರೆಡ್ಡಿ, ಆರ್.ವೆಂಕಟರಾಮನ್ ಮತ್ತು ಗಯಾನಿ ಜೈಲ್ ಸಿಂಗ್ ಅವರ ಗೌರವ ವೈದ್ಯನಾಗಿಯೂ ಸೇವೆ ಅಲ್ಲಿಸಿದ್ದರು.
ರೂಬಿ ಹಾಲ್ ಕ್ಲಿನಿಕ್ನಲ್ಲಿ ಅವರು ಕಾರ್ಡಿಯಾಲಜಿ ಡಿಪಾರ್ಟ್ಮೆಂಟ್ನ್ನೂ ರಚನೆ ಮಾಡಿದ್ದಾರೆ. ಆದರೆ ಅವರ ಅತೀ ಮಹತ್ವದ ಸಾಧನೆಯೆಂದರೆ, ಅದು ಮರಿಯನ್ ಕಾರ್ಡಿಕ್ ಸೆಂಟರ್ ಆಂಡ್ ರಿಸರ್ಚ್ ಫೌಂಡೇಶನ್ನ ಸ್ಥಾಪನೆ. 1991ರಲ್ಲಿ ಅದರ ಸ್ಥಾಪನೆಯಾಯಿತು. ಡಾ.ಮನೋಜ್ ಅವರು ದೆಹಲಿ ಏಮ್ಸ್ನಲ್ಲಿ ಶಿಕ್ಷಣ ಪೂರೈಸಿ 2005ರಲ್ಲಿ ಈ ಫೌಂಡೇಶನ್ಗೆ ಸೇರ್ಪಡೆಯಾದರು. ಸಾಮಾಜಿಕ ಪರಿವರ್ತನೆಯ ಹಾದಿಯಲ್ಲಿ ಸಾಗಲು ನನಗೆ ಸ್ಪೂರ್ತಿಯಾದವರು ನನ್ನ ತಂದೆ ಎಂದು ಡಾ.ಮನೋಜ್ ಹೇಳಿಕೊಳ್ಳುತ್ತಾರೆ.
’ನನ್ನ ತಂದೆ ತಮ್ಮ ಹಣ, ಸಮಯ ಮತ್ತು ವೈದ್ಯಕೀಯ ತಜ್ಞತೆಯನ್ನು ಗುಣಮಟ್ಟದ ಆರೋಗ್ಯ ಸೇವೆಯಿಂದ ವಂಚಿತಗೊಂಡ ಜನರಿಗಾಗಿ ಬಳಸಿಕೊಂಡರು. ಅವರ ಕಾರ್ಯ ನನಗೂ ಪ್ರೇರಣೆಯಾಗಿದೆ, ಅವರದ್ದೇ ವೃತ್ತಿಯನ್ನು ಸ್ವೀಕರಿಸಿಕೊಂಡು ಜನರ ಬದುಕಿನಲ್ಲಿ ಪರಿವರ್ತನೆ ತರಲು ಶ್ರಮಿಸುತ್ತಿದ್ದೇನೆ, ತಂದೆಯ ಕನಸಿನಂತೆ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಅಗತ್ಯವಿರುವವರ ಬಳಿ ಕೊಂಡೊಯ್ಯುವ ಕಾರ್ಯ ಮಾಡುತ್ತಿದ್ದೇನೆ’ ಎಂದು ಡಾ. ಮನೋಜ್ ಹೇಳುತ್ತಾರೆ.
ಇಂದು ಅವರ ಕ್ಲಿನಿಕ್ ತನ್ನದೇ ಅನುದಾನವನ್ನು ಮತ್ತು ಇತರ 30 ದಾನಿಗಳ ದೇಣಿಗೆಯನ್ನು ಬಳಸಿಕೊಂಡು 300 ಕ್ಕೂ ಅಧಿಕ ಮಂದಿಗೆ ಉಚಿತವಾಗಿ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ.
ವಿಶೇಷವೆಂದರೆ ಈ ಕ್ಲಿನಿಕ್ನ ದಾನಿಗಳು ದೊಡ್ಡ ದೊಡ್ಡ ಉದ್ಯಮಿಗಳು ಅಥವಾ ಸಂಸ್ಥೆಗಳಲ್ಲ. ವೇತನದಾರ ಸಮುದಾಯ, ನಿವೃತ್ತ ಉದ್ಯೋಗಿಗಳು, ಇನ್ನೂ ಕೆಲವರು ಮಾಜಿ ರೋಗಿಗಳು ತಮ್ಮಿಂದಾದ ಸಹಾಯವನ್ನು ಈ ಕ್ಲಿನಿಕ್ಗೆ ನೀಡುತ್ತಿದ್ದಾರೆ.
ಇದುವರೆಗೆ ಡಾ. ಮನೋಜ್ ಅವರು 350ಕ್ಕೂ ಅಧಿಕ ಉಚಿತ ಹೃದಯ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿದ್ದಾರೆ. ಇದರಲ್ಲಿ ಹೆಚ್ಚಿನವರು ಬಡಕುಟುಂಬದ ಮಕ್ಕಳಾಗಿದ್ದಾರೆ.
’ಎರಡು ವರ್ಷಗಳ ಹಿಂದೆ 12 ವರ್ಷದ ಅಹ್ಮದಾನಗರ್ ಬಾಲಕಿಯೊಬ್ಬಳ ಹೃದಯ ಕಸಿಗಾಗಿ ನಾವು ರೂ.6.5 ಲಕ್ಷ ದೇಣಿಗೆಯನ್ನು ಪಡೆದುಕೊಂಡೆವು. ನಿಜಕ್ಕೂ ಅದೊಂದು ಪವಾಡವೇ ಸರಿ. ಬಹಳಷ್ಟು ಜನ ಮುಂದೆ ಬಂದು ಹಣ ನೀಡಿದರು, ಬಾಲಕಿಯ ಜೀವ ಉಳಿಯಿತು. ಇಂದು ನಮಗೆ ಅಗತ್ಯವಿರುವವರಿಗೆ ರೂ.2.5 ಲಕ್ಷದ ಬೈಪಾಸ್ ಸರ್ಜರಿಯನ್ನು ಉಚಿತವಾಗಿ ಮಾಡಲು ಸಾಧ್ಯವಾಗುತ್ತಿದೆ, ಇದರ ಎಲ್ಲಾ ಶ್ರೇಯಸ್ಸು ದಾನಿಗಳಿಗೆ ಸಿಗಬೇಕು’ ಎಂದು ಡಾ. ಮನೋಜ್ ಹೇಳುತ್ತಾರೆ.
ಇಷ್ಟು ಮಾತ್ರವಲ್ಲದೇ ಡಾ. ಮನೋಜ್ ಅವರು, ಮಹಾರಾಷ್ಟ್ರದ ಹೊರಗಡೆ ಪ್ರಯಾಣಿಸಿಯೂ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡಿ ಬರುತ್ತಾರೆ. ದೂರದಿಂದ ತಮ್ಮ ಬಳಿ ಬಂದು ಚಿಕಿತ್ಸೆ ಪಡೆಯುವುದು ರೋಗಿಗೆ ಕಷ್ಟ ಎಂದು ಅರಿತಾಗ ಅವರು ರೋಗಿಯೇ ಬಳಿಯೇ ತೆರಳಿ ಚಿಕಿತ್ಸೆ ನೀಡುತ್ತಾರೆ. ಇನ್ನು, ಶಸ್ತ್ರಚಿಕಿತ್ಸೆಯಾದ ಬಳಿಕವೂ ರೋಗಿಗಳಿಗೆ ಹೊರರೋಗಿ ವಿಭಾಗದಲ್ಲಿ ಉಚಿತ ಸೇವೆಗಳನ್ನೂ ಇವರು ನೀಡುತ್ತಾರೆ.
ಇದಕ್ಕೊಂದು ಉದಾಹರಣೆಯೆಂದರೆ 14 ವರ್ಷದ ಪ್ರೇರಣಾ, ಜಲ್ಗಾಂವ್ನ ಒಬ್ಬಂಟಿ ತಾಯಿಯ ಮಗಳು. ಎರಡು ವರ್ಷಗಳ ಹಿಂದೆ ಈಕೆಗೆ ಬೈಪಾಸ್ ಸರ್ಜರಿ ನಡೆದಿತ್ತು. ಈಕೆಯನ್ನು ಫೌಂಡೇಶನ್ ದತ್ತು ಸ್ವೀಕರಿಸಿದ್ದು, ತಿಂಗಳಿಗೆ ಈಕೆಗೆ ತಗಲುವ ರೂ.10 ಸಾವಿರದಿಂದ ರೂ.15 ಸಾವಿರದವರೆಗಿನ ವೈದ್ಯಕೀಯ ವೆಚ್ಚವನ್ನೂ ಅದೇ ಭರಿಸುತ್ತದೆ.
ಇಷ್ಟೆಲ್ಲಾ ಮಾಡಿದರೂ, ತನ್ನ ಸೇವೆ ಕೇವಲ ಆರಂಭವಷ್ಟೇ ಇನ್ನೂ ನನಗೆ ಸಾಕಷ್ಟು ಮಾಡುವುದಿದೆ ಎನ್ನುವ ಡಾ. ಮನೋಜ್ ನಮ್ಮ ಸಮಾಜಕ್ಕೆ ಸಿಕ್ಕ ಒಂದು ಅಮೂಲ್ಯ ಆಸ್ತಿ ಎಂದರೆ ತಪ್ಪಾಗಲಾರದು.
source: thebetterindia