ಪಾಲ್ಸ್ ಮತ್ತು ಕಂಪನಿ ಸಂಸ್ಥೆಯಿಂದ ತ.ರಾ.ಸು. ರವರ ಕಾದಂಬರಿಯಾದ “ಚಂದವಳ್ಳಿಯ ತೋಟ” ವನ್ನು 1964 ರಲ್ಲಿ ಟಿ.ವಿ. ಸಿಂಗ್ ಠಾಕೂರ್ ರವರು ನಿರ್ದೇಶನ ಮಾಡುತ್ತಾರೆ. ಬಿ.ದೊರೈರಾಜ್ ರವರ ಛಾಯಾಗ್ರಹಣ, ಟಿ.ಜಿ.ಲಿಂಗಪ್ಪ ರವರ ಸಂಗೀತವಿರುತ್ತದೆ. ಆರ್.ಎನ್.ಜಯಗೋಪಾಲ್ ರವರ ಸಾಹಿತ್ಯವಿದ್ದು, ವಿಶೇಷವೆಂದರೆ ತ.ರಾ.ಸು. ರವರು ಈ ಚಿತ್ರದಲ್ಲಿ “ಓ ನನ್ನ ಬಾಂಧವರೇ” ಮತ್ತು “ನನ್ನ ಮನೆಯೇ ನಂದನ” ಎಂಬ ಎರಡು ಗೀತೆಗಳಿಗೆ ಸಾಹಿತ್ಯ ಬರೆದಿದ್ದಾರೆ. ಪಿ.ಬಿ.ಶ್ರೀನಿವಾಸ್, ಜಾನಕಿ, ಜೇಸುದಾಸ್, ಎಲ್.ಆರ್.ಈಶ್ವರಿ, ಪೀಠಾಪುರಂ ನಾಗೇಶ್ವರರಾವ್ ರವರು ಈ ಗೀತೆಗಳಿಗೆ ದನಿಯಾಗಿದ್ದಾರೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ಉದಯ್ ಕುಮಾರ್, ರಾಜ್ ಕುಮಾರ್, ಜಯಂತಿ, ಆದವಾನಿ ಲಕ್ಷ್ಮಿದೇವಿ, ಜಯಶ್ರೀ, ಶಾಂತಮ್ಮ, ಬಾಲಕೃಷ್ಣ ಹಾಗೂ ಅಶ್ವತ್ಥನಾರಾಯಣ ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಅತ್ತ್ಯುತ್ತಮ ಚಿತ್ರ ಎಂದು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಸಿನಿಮಾವಿದು.
ಕಥೆ:
ತ.ರಾ.ಸು. ರವರ “ಓ ನನ್ನ ಬಾಂಧವರೇ, ಕನ್ನಡ ಕುಲಪುತ್ರರೇ, ಸತ್ಯದ ನುಡಿಯ ಆಲಿಸಿರೋ, ಪಾಲಿಸಿರೋ” ಎಂಬ ಗೀತೆಯೊಂದಿಗೆ ಸಿನಿಮಾ ಆರಂಭವಾಗುತ್ತದೆ. ಒಬ್ಬ ಮುದುಕ, ತನ್ನ ಪಾಳು ಮನೆಯ ಮುಂದೆ ಚಿಂತಾಕ್ರಾಂತನಾಗಿ ಕುಳಿತಿರುತ್ತಾನೆ. ಅಷ್ಟರಲ್ಲಿ ಪಂಚಾಯಿತಿ ಕಟ್ಟೆಯ ಬಳಿ ಯಾರೋ “ಪಾಲು ಕೊಡಿ” ಎಂದುದನ್ನು ಕೇಳಿ ಆತ ಪಂಚಾಯಿತಿ ಕಡೆ ಬರುತ್ತಾನೆ. ಅಣ್ಣತಮ್ಮಂದಿರು ಪಿತ್ರಾರ್ಜಿತ ಆಸ್ತಿಯಲ್ಲಿ ಭಾಗ ಮಾಡಿಕೊಳ್ಳುವ ಸಲುವಾಗಿ ವಾದ-ಪ್ರತಿವಾದ ಮಂಡಿಸುತ್ತಿರುತ್ತಾರೆ. ಆಗ ಆತ ಬುದ್ದಿ ಹೇಳಲು ಬಂದಾಗ, ಅವರು ಆತನಿಗೆ ಅವಮಾನ ಮಾಡುತ್ತಾರೆ. ಪಂಚಾಯಿತಿಯ ಯಜಮಾನ್ರು ಆ ಮುದುಕನ ಕಥೆ ಹೇಳುತ್ತಾರೆ. ಶಿವನಂಜು (ಉದಯ್ ಕುಮಾರ್) ಪುಟ್ಟತಾಯಿ (ಆದವಾನಿ ಲಕ್ಷ್ಮಿದೇವಿ) ಹಾಗೂ ಇಬ್ಬರು ಮಕ್ಕಳ ಪುಟ್ಟ ಸಂಸಾರ. ತಾಲ್ಲೂಕಿನ ಅಮಲ್ದಾರರು ಕುದುರೇ ಏರಿ ಊರಿಗೆ ಬರುತ್ತಾರೆ. ಒಂದು ತೆಂಗಿನ ಮರವಿರದ ಊರು, ಬಿಸಿಲು ಝಳದಿಂದ ಬೆಂದ ಊರಾಗಿತ್ತು ಈ ಚಂದವಳ್ಳಿಯ ತೋಟ. ಅಮಲ್ದಾರರ ಮಾತಿನಿಂದ ಬೇಸತ್ತು, ಹಳ್ಳಿಯಲ್ಲಿ ಒಂದು ತೋಟ ಮಾಡಿಸಬೇಕು ಎಂದು ಶಿವನಂಜು ತೀರ್ಮಾನಿಸುತ್ತಾನೆ. ಜೋಯಿಸರ ಸಲಹೆಯಂತೆ ತನ್ನ ಜಮೀನನ್ನು ದಾನವಾಗಿ ಕೊಟ್ಟು, ತೋಟ ಮಾಡಲು ತೀರ್ಮಾನಿಸಿ, ದಾನವಾಗಿ ಕೊಟ್ಟ ಜಮೀನಿನ ಬದಲಾಗಿ ಪರಸ್ಪರ ಒಪ್ಪಂದದಿಂದ (ಬಾಯಿಮಾತಿನಿಂದ) ತಾನು ಜಮೀನು ಪಡೆದು ಶಿವನಂಜು, ನರಹರಿ ಇಬ್ಬರೂ ಸೇರಿ ತೆಂಗಿನ ಸಸಿಗಳನ್ನು ನೆಟ್ಟು, ತೋಟವನ್ನು ಮಾಡುತ್ತಾರೆ. ತೋಟವೂ ಸದಾ ಹಸಿರಾಗಿರುತ್ತೆ. ಇಡೀ ಊರಿನವರಿಗೆ ಎಳನೀರು ಕೊಡುತ್ತಾನೆ. ಊರಿನವರ ಅನುಕೂಲಕ್ಕಾಗಿಯೇ ತೆಂದಿನ ತೋಟ ಮಾಡಿದ್ದು ಶಿವನಂಜ. ಊರಿನವರ ಅನುಕೂಲಕ್ಕಾಗಿ ಸುಬ್ಬಾಭಟ್ಟನ (ಅಶ್ವತ್ಥನಾರಾಯಣ – ಇದು ಇವರ ಮೊದಲ ಚಿತ್ರ) ಸಂಸಾರಕ್ಕೆ ಸ್ಥಳಾವಕಾಶ ಮಾಡಿಕೊಟ್ಟು, ಪೂಜೆ-ಪುನಸ್ಕಾರಕ್ಕೆ ಅವಕಾಶ ಮಾಡಿಕೊಡುತ್ತಾರೆ. ಸುಬ್ಬಾಭಟ್ಟ ತನ್ನ ಬಡತನವನ್ನೇ ಅಸ್ತ್ರವಾಗಿಸಿಕೊಳ್ಳುತ್ತಾನೆ. ಈಗಿನ ಕಾಲದಲ್ಲೂ ಅಷ್ಟೇ ಕೆಲವರು ಅದೆಷ್ಟೇ ಶ್ರೀಮಂತರಾಗಿದ್ದರೂ, ತಾವು ಬಡವರೆಂದು ಹೇಳಿಕೊಳ್ಳುವ ತವಕ. ಸುಬ್ಬಾಭಟ್ಟನ ಹೆಂಡತಿ ಪುಟ್ಟತಾಯಿ ಹಾಗೂ ಪಾರ್ವತಕ್ಕನ (ಶಾಂತಮ್ಮ) ನಡುವೆ ವೈಷಮ್ಯದ ಬೀಜ ಬಿತ್ತುವ ಪ್ರಯತ್ನ ಮಾಡುತ್ತಾಳೆ.
ಪರಸ್ಪರ ಒಪ್ಪಿಗೆಯಿಂದ (ಬರಿಬಾಯಿಮಾತಿನಿಂದ) ಪಾಲು ಮಾಡಿಕೊಂಡ ಜಮೀನು ಕಾನೂನಾತ್ಮಕವಾಗಿ ಭಾಗವಾಗಿಲ್ಲವೆಂದು, ಅಲ್ಲದೇ ಇದು ತನ್ನ ಪಾಲಿನ ಜಮೀನು ಎಂದು ಕರಿಯಣ್ಣ (ಬಾಲಕೃಷ್ಣ) ಕೋರ್ಟಿನಲ್ಲಿ ಕೇಸು ದಾಖಲಿಸುತ್ತಾನೆ. ಶಿವನಂಜು ಕರಿಯಣ್ಣನ ಜೊತೆ ರಾಜಿ ಮಾಡಿಕೊಂಡು ಅವನ ಪಾಲಿನ ಸ್ವತ್ತನ್ನು ಹಿಂದಿರುಗಿಸುತ್ತಾನೆ. ಮಸಲತ್ತು ನಡೆಸಿ ಕರಿಯಣ್ಣ ಶಿವನಂಜನ ಮನೆ ಸೇರಿಕೊಂಡು, ಶಿವನಂಜನ ಮಗನಾದ ರಾಮಣ್ಣನ ತಲೆ ಕೆಡಿಸಿ, ದುಶ್ಚಟಗಳ ಅಭ್ಯಾಸ ಮಾಡಿಸುತ್ತಾನೆ. ಇದನ್ನು ಗಮನಸಿದ ಶಿವನಂಜನ ಹಿರಿಮಗ ಹನುಮ (ರಾಜ್ ಕುಮಾರ್) ತಂದೆಯ ಬಳಿ ವಿಷಯ ಅರುಹಿದಾಗ ವಯಸ್ಸಿಗೆ ಬಂದ ಮಗನ ಮೇಲೆ ಶಿವನಂಜ ಕೈಮಾಡುತ್ತಾನೆ. ಅವನನ್ನು ಸರಿದಾರಿಗೆ ತರುವ ಸಲುವಾಗಿ ಅವನಿಗೊಂದು ಮದುವೆ ಮಾಡುತ್ತಾರೆ. ಈ ವಿಷಯ ಅದೆಷ್ಟರ ಮಟ್ಟಿಗೆ ಸರಿಯೋ ತಪ್ಪೋ ಕಾಣೆ. ಮದುವೆಯ ನಂತರ ಸರಿಹೋಗಲು ಸಾಧ್ಯ ಅನ್ನುವುದು ಎಷ್ಟರ ಮಟ್ಟಿಗೆ ಸರಿ. ಇಂಥ ನಿರ್ಧಾರಗಳಿಂದ ಅದೆಷ್ಟು ಹೆಣ್ಣುಮಕ್ಕಳು ಮದುವೆ ನಂತರ ಕಣ್ಣೀರು ಹಾಕ್ತಾ ಇದ್ದಾರೋ ಗೊತ್ತಿಲ್ಲ. ಕಂತೆಗೆ ತಕ್ಕ ಬೊಂತೆ ಎಂಬಂತೆ ರಾಮಣ್ಣನಿಗೂ ಬಜಾರಿಯೊಬ್ಬಳು ಹೆಂಡತಿಯಾಗಿ ಬರುತ್ತಾಳೆ. ಸುಬ್ಬಾಭಟ್ಟ ಹಾಗೂ ಕರಿಯಣ್ಣ ಸೇರಿ ರಾಮಣ್ಣ ಹಾಗೂ ಅವನ ಹೆಂಡತಿಯ ತಲೆ ಕೆಡಿಸಿ, ಆಸ್ತಿಯಲ್ಲಿ ಪಾಲು ಕೇಳುವಂತೆ ಮಾಡುತ್ತಾರೆ. ಕೊನೆಗೆ ಆಸ್ತಿಯಲ್ಲಿ ತನ್ನ ಪಾಲು ತೆಗೆದುಕೊಂಡು ರಾಮಣ್ಣ ಮನೆ ಬಿಟ್ಟು ಹೋಗುತ್ತಾನೆ. ಬಹುತೇಕ ಮನೆಗಳಲ್ಲಿ ಮಕ್ಕಳ ಮದುವೆಯ ನಂತರ ಸಾಕಷ್ಟು ಬದಲಾವಣೆಗಳಾಗುತ್ತವೆ. ಕಾರಣ ಸರ್ವರಿಗೂ ತಿಳಿದದ್ದೆ.
ತನ್ನ ತಾಯಿ ಸಾವು ಬದುಕಿನ ನಡುವೆ ಹೋರಾಡುವಾಗಲು ರಾಮಣ್ಣ ಬರುವುದಿಲ್ಲ. ಕೇಡುಗಾಲ ಅಂತಾ ಬಂದಾಗ ರಾಹು, ಕೇತು, ಶನಿ ಒಟ್ಟಿಗೆ ವಕ್ಕರಿಸಿಕೊಂಡಿರ್ತಾರೆ ಅನ್ನೋ ಹಾಗೇ ಈ ಕಿವಿಚುಚ್ಚೋ ಮಂದಿಯ ಮಾತು ಕೇಳುವ ವಿವೇಚನೆ ಕಳೆದುಕೊಂಡ ಜನ ಇರೋವರೆಗೂ ಕುಟುಂಬಗಳಲ್ಲಿ ಇಂಥಾ ಅನಾಹುತಗಳು ತಪ್ಪುವುದಿಲ್ಲ. ಆ ಕೆಟ್ಟಜನರ ಬೋಧನೆಯಿಂದ ಹನುಮಣ್ಣನ ಒಂದು ವರ್ಷಕ್ಕಿಂತಲೂ ಚಿಕ್ಕ ಹಸುಗೂಸಿಗೆ ವಿಷಪ್ರಾಷನ ಮಾಡಿಸುತ್ತಾಳೆ ರಾಮಣ್ಣನ ಹೆಂಡತಿ ಲಕ್ಷ್ಮೀದೇವಿ. ಆ ಸಮಯದಲ್ಲಿ ಹನುಮಣ್ಣನ ಹೆಂಡತಿ ಚೆನ್ನಿ ಪಡುವ ಯಾತನೆ ಅಷ್ಟಿಷ್ಟಲ್ಲ. ತಾಯಿ ಹೃದಯದ ನೋವು ನೊಂದವರಿಗೆ ಗೊತ್ತು. ಹನುಮಣ್ಣ ಮಗನನ್ನು ಕಳೆದುಕೊಂಡ ನೋವಿನಿಂದ ಕೋಪ ಹೆಚ್ಚಾಗಿ ರಾಮಣ್ಣನ ಕೊಲ್ಲುತ್ತಾನೆ ಹಾಗೂ ಲಕ್ಷ್ಮಿದೇವಿಯ ಸಾವಿಗೂ ಕಾರಣಾಗುತ್ತಾನೆ. ಕೊನೆಗೆ ಆತನಿಗೂ ಹಾಗೂ ಆ ಕುತಂತ್ರಿಗಳಿಗೂ ಜೀವಾವಧಿ ಶಿಕ್ಷೆಯಾಗುತ್ತದೆ. ಈ ತೀರ್ಪಿನಿಂದ ನೊಂದು ಚೆನ್ನಿ (ಜಯಂತಿ) ಎದೆಯೊಡೆದುಕೊಂಡು ಪ್ರಾಣ ಬಿಡುತ್ತಾಳೆ. ಶಿವನಂಜು ಎಲ್ಲರನ್ನೂ ಕಳೆದುಕೊಂಡು ಹುಚ್ಚನಂತಾಗಿಬಿಡುತ್ತಾನೆ. ಊರ ಯಜಮಾನರ ಬಳಿ ಪಾಲು ಕೇಳಿಕೊಂಡು ಬಂದವರು ಶಿವನಂಜನ ಕಥೆ ಕೇಳಿ ತಮ್ಮ ತಪ್ಪು ತಿದ್ದಿಕೊಳ್ಳುತ್ತಾರೆ. ಅಲ್ಲಿಗೆ ಸಿನಿಮಾ ಮುಗಿಯುತ್ತದೆ.
ನಯವಾದ ಮಾತುಗಳಿಂದ ಯಾರನ್ನೂ ಬೇಕಾದರೂ ಘಾಸಿಗೊಳಿಸಬಹುದು ಎಂಬುದು ಇಲ್ಲಿ ತಿಳಿದು ಬರುವ ನಗ್ನಸತ್ಯ. ಆಸ್ತಿಪಾಲು ಆಗುವುದರಲ್ಲಿ ಮನಸುಗಳು ಪಡುವ ಯಾತನೆಯೇ, ಒಡೆದ ಮನಸುಗಳ ನಡುವಿನ ಕಥೆಯೇ ಈ “ಚಂದವಳ್ಳಿಯ ತೋಟ”. ಇಂಥಾ ಅದ್ಬುತ ಕತೆ ಬರೆದ ತ.ರಾ.ಸು. ರವರಿಗೆ ಹ್ಯಾಟ್ಸಾಫ್. ಎಲ್ಲರ ಮನೆಯಲ್ಲೂ, ಎಲ್ಲರ ಜೀವನದಲ್ಲಿ ನಡೆಯುವ ಈ ಆಸ್ತಿಪಾಲಿನ ವಿಷಯವಿಟ್ಟುಕೊಂಡು ಮಾಡಿದ ಸಿನಿಮಾಕ್ಕೆ ರಾಷ್ಟ್ರೀಯ ಪ್ರಶಸ್ತಿ ಏಕೆ ಬಂತು ಎಂಬ ಅನುಮಾನ ಸಿನಿಮಾ ನೋಡುವ ಮೊದಲು ಬಂತು. ನೋಡುಗನ ಎದೆಗೆ ತಟ್ಟುವ ಹಾಗೆ ಸಂಭಾಷಣೆ, ಮನಸ್ಸಿಗೆ ನಾಟುವ ಭಾವಭಿನಯದ ಮಾತುಗಳು, ಕಥೆಯ ನಿರೂಪಣೆ, ಪಾತ್ರಗಳ ಅನಾವರಣ ಪ್ರತಿ ವಿಷಯದಲ್ಲೂ ಅದ್ಬುತವೇ. ಈ ಸಿನಿಮಾಕ್ಕೆ ಎಂಥ ಪ್ರಶಸ್ತಿ ಕೊಟ್ಟರೂ ಸಾಲದು ಅಂತಾ ಅನಿಸಿದ್ದಂತೂ ಸತ್ಯ. ರಾಜ್ ಕುಮಾರ್ ರವರು ಈ ಸಿನಿಮಾದಲ್ಲಿ ನಟಿಸಿದ್ದಾರಾದರೂ ಉದಯ್ ಕುಮಾರ್ ರವರೇ ಸಿನಿಮಾ ತುಂಬಾ ಆವರಿಸಿಕೊಂಡಿದ್ದಾರೆ. ಈ ಸಿನಿಮಾದ ಸಂಭಾಷಣೆ ನಿಜಕ್ಕೂ ಅದ್ಬುತ. ಪ್ರತಿಯೊಂದು ಮಾತು ಜೀವನಕ್ಕೆ ಪಾಠವಾಗುವಂತದ್ದು.
ಕೊನೆಯದಾಗಿ ಒಂದು ಮಾತು: ಮನೆಯೊಡೆಯುವುದು ವ್ಯಯುಕ್ತಿಕ ವಿಷಯ. ಅದಷ್ಟು ನೋವು ಕೊಡದಿದ್ದರೂ, ಮನಸುಗಳನ್ನು ಒಡೆಯುವುದು ಪಾಪದ ಕೆಲಸ. ಕೆಡುಕು ಬಯಸುವ ಅಂತಾ ನಯವಂಚಕರು ಅರಿತುಕೊಂಡರಷ್ಟೇ ಸಾಕು.
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ಕುಟುಂಬದಲ್ಲಿ ಇರಬೇಕಾದ ಅನ್ಯೋನ್ಯತೆಯ ಮಹತ್ವ ಕುರಿತು ತಿಳಿಯಲು.
2. ಸ್ವಲ್ಪವೂ ಆಲೋಚಿಸದೇ ಮತ್ತೊಬ್ಬರ ಮಾತು ಕೇಳಿ, ತನ್ನವರ ಹಳಿದರೆ ಉಂಟಾಗುವ ದುಷ್ಪರಿಣಾಮ ಕುರಿತು ತಿಳಿಯಲು.
3. ಜೀವನದಲ್ಲಿ ಪ್ರೀತಿ ಹೇಗೆ ಪಾತ್ರ ನಿರ್ವಹಿಸುತ್ತೆ ಎನ್ನುವುದನ್ನು ತಿಳಿಯಲು ಈ ಸಿನಿಮಾ ನೋಡಲೇಬೇಕು.
4. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.