ನವದೆಹಲಿ: 2017-18ನೇ ಸಾಲಿನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಭಾರತದಲ್ಲಿ ಶೇ.18ರಷ್ಟು ಏರಿಕೆಯಾಗಿದೆ. ‘ವಿದೇಶಿ ಹೊಣೆಗಾರಿಕೆಗಳು ಮತ್ತು ಭಾರತೀಯ ನೇರ ಬಂಡವಾಳ ಕಂಪನಿಗಳ ಆಸ್ತಿ ಗಣತಿ’ಯ ಆರ್ಬಿಐ ವರದಿ ಪ್ರಕಾರ, ಕಳೆದ ವರ್ಷಕ್ಕಿಂತ ಹಣಕಾಸು ವರ್ಷ 2018ರಲ್ಲಿ 28.25 ಲಕ್ಷ ಕೋಟಿ ಎಫ್ಡಿಐ ಏರಿಕೆಯಾಗಿದ್ದು, 4,33,300 ಕೋಟಿ ರೂಪಾಯಿಗಳಿಗೆ ತಲುಪಿದೆ. ಟ್ರೇಡ್ ಕ್ರೆಡಿಟ್ನ ಏರಿಕೆಯಿಂದಾಗಿ ಎಫ್ಡಿಐ ಕಂಪನಿಗಳು ಪ್ರಗತಿಯನ್ನು ಕಂಡಿವೆ ಎಂದು ಆರ್ಬಿಐ ಹೇಳಿದೆ. ಆರ್ಬಿಐ ಗಣತಿಗೆ 23,065 ಕಂಪನಿಗಳು ಪ್ರತಿಕ್ರಿಯೆಯನ್ನು ನೀಡಿದ್ದು, ಇದರ ಪೈಕಿ 20,732 ಕಂಪನಿಗಳು ವಿದೇಶದಿಂದ ಬಂಡವಾಳವನ್ನು ಪಡೆದುಕೊಂಡಿವೆ. ಕಂಪನಿಗಳು ಸ್ವೀಕರಿಸಿದ ವಿದೇಶಿ ಬಂಡವಾಳ ಶೇ.5ರಷ್ಟು ಏರಿಕೆಯಾಗಿದ್ದು 5.28 ಲಕ್ಷ ಕೋಟಿ ರೂಪಾಯಿ ಆಗಿದೆ.
ಗಣತಿಯ ಪ್ರಕಾರ, ಭಾರತದಲ್ಲಿ ವಿದೇಶಿ ನೇರ ಹೂಡಿಕೆಯ ದೊಡ್ಡ ಮೂಲ ಮಾರಿಷಿಯಸ್ ಆಗಿದೆ. ಯುಕೆ, ಯುಎಸ್, ಸಿಂಗಾಪುರ, ಜಪಾನ್ಗಳಿಂದ ಬಂದ ಒಟ್ಟು ಹೂಡಿಕೆಗೆ ಹೋಲಿಸಿದರೆ ಮಾರಿಷಿಯಸ್ನಿಂದ ಬಂದ ಹೂಡಿಕೆ ಶೇ.19.7ರಷ್ಟು ಆಗಿದೆ. ಭಾರತೀಯ ಕಂಪನಿಗಳು ಸಿಂಗಾಪುರದಲ್ಲಿ ಅತೀ ಹೆಚ್ಚು ಹೂಡಿಕೆ ಮಾಡಿವೆ. ಬಳಿಕ ನೆದರ್ಲ್ಯಾಂಡ್, ಮಾರಿಷಿಯಸ್, ಯುಎಸ್ನಲ್ಲಿ ಹೂಡಿಕೆ ಮಾಡಿವೆ. ಉತ್ಪಾದನಾ ವಲಯ ಅತೀಹೆಚ್ಚು ಎಫ್ಡಿಐ ಪಡೆದುಕೊಂಡಿವೆ. ಬಳಿಕ ಮಾಹಿತಿ ಮತ್ತು ಸಂಪರ್ಕ ಸೇವೆಗಳಿಗೆ, ಹಣಕಾಸು ಮತ್ತು ವಿಮಾ ಸೇವೆಗಳಿಗೆ ಹೆಚ್ಚಿನ ಎಫ್ಡಿಐ ಹರಿದು ಬಂದಿದೆ.
ಮೋದಿ ಸರ್ಕಾರ ಉತ್ಪಾದನಾ ವಲಯಕ್ಕೆ ಹೆಚ್ಚಿನ ಒತ್ತು ನೀಡಿದೆ. ಇದಕ್ಕಾಗಿ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ ಎಫ್ಡಿಐ ಪಾಲಿಸಿಯನ್ನು ಸಡಿಲಗೊಳಿಸಲಾಗಿದೆ. 25 ವಲಯಗಳಲ್ಲಿ ಶೇ.100ರಷ್ಟು ಎಪ್ಡಿಐಗೆ ಅವಕಾಶ ಕಲ್ಪಿಸಲಾಗಿದೆ. ಬಾಹ್ಯಾಕಾಶದಲ್ಲಿ ಶೇ.74ರಷ್ಟು, ರಕ್ಷಣೆಯಲ್ಲಿ ಶೇ 49ರಷ್ಟು, ಸುದ್ದಿ ಮಾಧ್ಯಮಗಳಲ್ಲಿ ಶೇ.26ರಷ್ಟು ಎಫ್ಡಿಐಗೆ ಅವಕಾಶ ನೀಡಲಾಗಿದೆ. ಇದರಿಂದಾಗಿ 2015ರಲ್ಲಿ ಜಾಗತಿಕವಾಗಿ ಭಾರತ ಎಫ್ಡಿಐನ ನೆಚ್ಚಿನ ತಾಣವಾಗಿ ಹೊರಹೊಮ್ಮಿತ್ತು, ಯುಎಸ್ಎ ಮತ್ತು ಚೀನಾವನ್ನು ಹಿಂದಿಕ್ಕಿತ್ತು.
ಹೂಡಿಕೆಯ ಒಳಹರಿವಿನಿಂದಾಗಿ ದೇಶದ ಉತ್ಪಾದನಾ ವಲಯ ಸಾಕಷ್ಟು ಪ್ರಗತಿ ಕಂಡಿದೆ, ಇದು ಭಾರತದ ಅಭಿವೃದ್ಧಿಗೆ ಅತ್ಯವಶ್ಯಕವಾಗಿತ್ತು. ಮೊಬೈಲ್ ಉತ್ಪಾದನೆಯ ಹಬ್ ಆಗಿಯೂ ಭಾರತ ಹೊರಹೊಮ್ಮಿದೆ, 2014ರಲ್ಲಿ ಭಾರತದಲ್ಲಿ ಎರಡೇ ಮೊಬೈಲ್ ಉತ್ಪಾದನಾ ಘಟಕಗಳಿದ್ದವು, ಆದರೀಗ 120 ಕಂಪನಿಗಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.