ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿರುವ ದೇಶದ ಜನಸಂಖ್ಯೆಗನುಗುಣವಾಗಿ ಉದ್ಯೋಗ ಸೃಷ್ಟಿಸುವುದು ಒಂದು ಸವಾಲಿನ ಕೆಲಸವೇ ಸರಿ. ಪ್ರತಿಯೊಬ್ಬ ಯುವಕ ಯುವತಿಯರೂ ನೌಕರಿಗೆ ಪ್ರಯತ್ನಿಸುವ ಬದಲಾಗಿ ತಮ್ಮದೇ ಉದ್ಯಮಗಳನ್ನು ಪ್ರಾರಂಭಿಸಲು ಯೋಚಿಸಿದರೆ ಆಗ ಉದ್ಯಮಿಯೆನ್ನುವ ಹೆಮ್ಮೆಯ ಜೊತೆಗೆ ಇನ್ನಷ್ಟು ಜನರಿಗೆ ಉದ್ಯೋಗದಾತರಾಗುವ ಅವಕಾಶ ಕೂಡಾ ಲಭಿಸುತ್ತದೆ. ಜೊತೆಗೆ ಉದ್ಯೋಗ ಸೃಷ್ಟಿಸುವ ಸರ್ಕಾರದ ಕೆಲಸ ಕೂಡಾ ಹಗುರಾಗುತ್ತದೆ ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯನ್ನು(PMEGP) ಜಾರಿಗೊಳಿಸಿದೆ. ಕಳೆದ ವರ್ಷ, ಅಂದರೆ 2017-18ರ ಅವಧಿಯಲ್ಲಿ PMEGP ಯೋಜನೆಯಡಿ 48,398 ಯೋಜನೆಗಳಿಗೆ ಸಾಲ ಸೌಲಭ್ಯ ಒದಗಿಸಲಾಗಿದ್ದು ಸರಿಸುಮಾರು ನಾಲ್ಕು ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಆ ಮೂಲಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಯೋಜನೆಗಳಿಂದ ಕಳೆದ ಒಂದೇ ವರ್ಷದಲ್ಲಿ 1,40,36000 (ಒಂದು ಕೋಟಿ ನಲವತ್ತು ಲಕ್ಷದ ಮೂವತ್ತಾರು ಸಾವಿರ) ಉದ್ಯೋಗಗಳು ಸೃಷ್ಟಿಯಾದಂತಾಗಿದೆ. ಆ ಪೈಕಿ ತಮಿಳು ನಾಡೊಂದರಲ್ಲೇ ಸುಮಾರು ಹತ್ತೊಂಬತ್ತು ಲಕ್ಷದ ಇಪ್ಪತ್ಮೂರು ಸಾವಿರ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ನಮ್ಮ ಕರ್ನಾಟಕದಲ್ಲಿ ಆ ಯೋಜನೆಗಳಡಿ ಉದ್ಯೋಗ ಪಡೆದವರ ಸಂಖ್ಯೆ ಆರು ಲಕ್ಷದ ನಲವತ್ತೇಳು ಸಾವಿರ!
ನಿರುದ್ಯೋಗಿ ಯುವಕ/ ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯು ಗರಿಷ್ಠ ರೂ.25.00 ಲಕ್ಷ ಇರುವ ತಯಾರಿಕಾ ಉದ್ಯಮಗಳಿಗೆ ಮತ್ತು ರೂ.10.00 ಲಕ್ಷ ಇರುವ ಸೇವಾ ಚಟುವಟಿಕೆಗಳಿಗೆ ಸಾಲಗಳನ್ನು ನೀಡುತ್ತದೆ. ಬ್ಯಾಂಕುಗಳು ನೀಡುವ ಆ ಸಾಲದ ಮೊತ್ತದ ಮೇಲೆ ಸಾಮಾನ್ಯ ವರ್ಗದ ಪಟ್ಟಣ ಫಲಾನುಭವಿಗಳಿಗೆ ಶೇ. 15% ರಿಂದ 25% ಮತ್ತು ವಿಶೇಷ ವರ್ಗದ (ಪ.ಜಾತಿ/ ಪ.ಪಂಗಡ/ ಹಿಂದುಳಿದ ವರ್ಗ/ ಅಲ್ಪಸಂಖ್ಯಾತರು/ ಅಂಗವಿಕಲರು/ ಮಾಜಿ ಸೈನಿಕ/ಮಹಿಳೆ), ಗ್ರಾಮೀಣ ಫಲಾನುಭವಿಗಳಿಗೆ ಶೇ. 25% ರಿಂದ 35% ಸಹಾಯಧನ ಸೌಲಭ್ಯ ಇರುತ್ತದೆ. ಉದ್ದಿಮೆಯನ್ನು ಪ್ರಾರಂಭ ಮಾಡುವ ಸಾಮಾನ್ಯ ವರ್ಗದವರು ಯೋಜನಾ ವೆಚ್ಚದ ಶೇ. 10% ಮತ್ತು ವಿಶೇಷ ವರ್ಗದವರಿಗೆ ಶೇ. 5% ರಷ್ಟು ಸ್ವಂತ ಬಂಡವಾಳ ತೊಡಗಿಸಬೇಕಾಗುತ್ತದೆ.
ಹೊಸ ಘಟಕಗಳಿಗೆ ಮಾತ್ರ ಲಭ್ಯವಿರುವ ಈ ಯೋಜನೆಯ ಫಲಾನುಭವಿಗಳಾಗಲು ಬಯಸುವ ಅಭ್ಯರ್ಥಿಗಳು ಯೋಜನಾ ವೆಚ್ಚ ರೂ.10.00 ಲಕ್ಷ ಮೇಲ್ಪಟ್ಟಿದ್ದಲ್ಲಿ ಅವರು ಕನಿಷ್ಠ 8ನೇ ತರಗತಿ ತೇರ್ಗಡೆಯಾಗಿರಬೇಕಿರುತ್ತದೆ. ಅಥವಾ ಗುರುತಿಸಲ್ಪಟ್ಟ ವೃತ್ತಿಪರ ತರಬೇತಿ ಸಂಸ್ಥೆಯಿಂದ ವೃತ್ತಿಪರ ತರಬೇತಿ, ಐಟಿಐ, ಡಿಪ್ಲೋಮಾ ಪದವಿ ಹೊಂದಿರಬೇಕಿರುತ್ತದೆ. ಈ ಯೋಜನೆಗೂ ಖಾದಿ ಮತ್ತು ಗ್ರಾಮೀಣಾಭಿವೃದ್ಧಿ ಮಂಡಳಿಯು ನೋಡಲ್ ಏಜೆನ್ಸಿಯಾಗಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಖಾದಿ ಗ್ರಾಮೋದ್ಯೋಗ ಮಂಡಳಿಯ https://www.kviconline.gov.in/pmegpeportal/pmegphome/index.jsp ವೆಬ್ಸೈಟ್ ಮುಖಾಂತರ ಆನ್ಲೈನ್ನಲ್ಲಿಯೂ ಅರ್ಜಿ ಸಲ್ಲಿಸಬಹುದಾಗಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಮಧ್ಯವರ್ತಿಗಳಿಗೂ ಅವಕಾಶವಿರುವುದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.