ಪ್ರಯಾಣವನ್ನು ಸುಖಕರವನ್ನಾಗಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೇಯು ಹತ್ತು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಭದ್ರತೆ ಮತ್ತು ಸುರಕ್ಷತಾ ಕ್ರಮವನ್ನು ಸುಧಾರಣೆಗೊಳಿಸುತ್ತಿದೆ. ಇಡೀ ನೆಟ್ವರ್ಕ್ನ್ನು ಆಧುನೀಕರಣಗೊಳಿಸಿ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಇಂಧನ ಉಳಿತಾಯ ಕ್ರಮಗಳನ್ನೂ ಅಳವಡಿಸಿಕೊಳ್ಳುತ್ತಿದೆ. ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಭಾರತೀಯ ರೈಲ್ವೇಯು ಪರಿವರ್ತನೆಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಎನ್ಡಿಎ ಸರ್ಕಾರದಡಿ ರೈಲ್ವೇ ಮಾಡಿದ ಸಾಧನೆಗಳ ಪಟ್ಟಿ ಇಲ್ಲಿದೆ.
ವಿದ್ಯುತ್ ಉಳಿತಾಯ-ಪರಿಸರ ಸಂರಕ್ಷಣೆ
ಕಡಿಮೆ ವಿದ್ಯುತ್ ಬಳಸುವುದು ಮತ್ತು ಬೆಳಕನ್ನು ದ್ವಿಗುಣಗೊಳಿಸುವುದು ರೈಲ್ವೇಯ ಧ್ಯೇಯವಾಗಿದೆ. ಇದಕ್ಕಾಗಿ ಅದು ರೈಲು ನಿಲ್ದಾಣ, ರೈಲುಗಳಲ್ಲಿ ಎಲ್ಇಡಿ ಬಲ್ಬ್ಗಳನ್ನು ಅಳವಡಿಸುತ್ತಿದೆ. ವಿದ್ಯುತ್ ಬಿಲ್ ಕಡಿಮೆಗೊಳಿಸಲು ಮತ್ತು ಪರಿಸರ ಸಂರಕ್ಷಣೆಗಾಗಿ ಸೋಲಾರ್ ಪ್ಲಾಂಟ್ಗಳನ್ನು ಅಳವಡಿಸಿದೆ. ಅಷ್ಟೇ ಅಲ್ಲದೇ, ಖಾಲಿ ಇರುವ ರೈಲ್ವೇ ಭೂಮಿಗಳಲ್ಲಿ ಸೋಲಾರ್ ಪ್ಯಾನಲ್ಗಳನ್ನು ಅನುಷ್ಠಾನಗೊಳಿಸಲೂ ಯೋಜನೆ ಹಾಕಲಾಗುತ್ತಿದೆ. ಸೋಲಾರ್ ಪ್ಯಾನಲ್ ಅಳವಡಿಕೆ ಮತ್ತು ಇಂಧನ ಸಂರಕ್ಷಣಾ ವಿಧಾನಗಳ ಮೂಲಕ, ಈಗಾಗಲೇ ಭಾರತೀಯ ರೈಲ್ವೇ 1.25 ಕೋಟಿ ವಿದ್ಯುತ್ ಬಿಲ್ನ್ನು ಉಳಿತಾಯ ಮಾಡಿದೆ. ಸೋಲಾರ್ ಪ್ಲಾಂಟ್ಗಳ ಜೀವಿತಾವಧಿ 20-25 ವರ್ಷ. ಹೀಗಾಗಿ ಭವಿಷ್ಯದಲ್ಲಿ ಇನ್ನಷ್ಟು ವಿದ್ಯುತ್ ಉಳಿತಾಯವಾಗಲಿದೆ. ಪರಿಸರ ಸಂರಕ್ಷಣಾ ಕಾರ್ಯವೂ ನಡೆಯಲಿದೆ.
ಇತ್ತೀಚಿಗಷ್ಟೇ ಭಾರತೀಯ ರೈಲ್ವೇಯನ್ನು ಶೇ.100ರಷ್ಟು ವಿದ್ಯುದೀಕರಣಗೊಳಿಸುವ ಗುರಿಯನ್ನು ಮುಂದಿನ ಐದು ವರ್ಷದಲ್ಲಿ ತಲುಪಲಿದ್ದೇವೆ ಎಂದು ರೈಲ್ವೇ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ. ಈ ಗುರಿ ತಲುಪಲು ಯಶಸ್ವಿಯಾದರೆ, ಭಾರತೀಯ ರೈಲ್ವೇ ಸಂಪೂರ್ಣ ವಿದ್ಯುದೀಕರಣಗೊಂಡಿರುವ ವಿಶ್ವದ ಏಕೈಕ ರೈಲ್ವೇ ನೆಟ್ವರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಸಾಫ್ಟ್ವೇರ್ ಮೂಲಕ ಕಣ್ಗಾವಲು
ಇನ್ನೊಂದೆಡೆ, ಪ್ರಯಾಣಿಕರ ಆರಾಮದಾಯಕತೆ, ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದಲೂ ಹಲವಾರು ಕ್ರಮಗಳನ್ನು ರೈಲ್ವೇ ಕೈಗೊಂಡಿದೆ. ಇಡೀ ರೈಲ್ವೇ ನೆಟ್ವರ್ಕ್ನ್ನು ಮೇಲ್ವಿಚಾರಣೆ ನಡೆಸಲು ಅನುವು ಮಾಡಿಕೊಡುವಂತಹ ಸಾಫ್ಟ್ವೇರ್ವೊಂದನ್ನು ರೈಲ್ವೇ ಸಚಿವಾಲಯ ಅಭಿವೃದ್ಧಿಪಡಿಸಿದೆ. ’ಇದೃಷ್ಟಿ’ ಎಂಬ ಸಾಫ್ಟ್ವೇರ್ನ್ನು ಅಭಿವೃದ್ಧಿಪಡಿಸಲಾಗಿದ್ದು, ಇದು ರೈಲಿನ ಚಲನೆ ಮತ್ತು ಶಬ್ದ ಸೇರಿದಂತೆ ರೈಲಿನ ಒಟ್ಟು ಕಾರ್ಯವನ್ನು ಕಛೇರಿಯಲ್ಲೇ ಕೂತು ಆಲಿಸಬಹುದಾದಂತಹ ಅವಕಾಶವನ್ನು ಕಲ್ಪಿಸಿಕೊಡಲಿದೆ. ಈ ಸಾಫ್ಟ್ವೇರ್ ಮೂಲಕ ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರೂ ರೈಲನ್ನು ಪರಿಶೀಲನೆ ಮಾಡಬಹುದಾಗಿದೆ. ಶೀಘ್ರದಲ್ಲೇ ಈ ತಂತ್ರಜ್ಞಾನ ಜನಸಾಮಾನ್ಯರಿಗೂ ಲಭ್ಯವಾಗಲಿದೆ. ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರುವ ಉದ್ದೇಶದಿಂದ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಸೆಂಟರ್ ರೈಲ್ವೇ ಇನ್ಫಾರ್ಮೆಶನ್ ಸ್ಟಿಸ್ಟಮ್ ಈ ಸಾಫ್ಟ್ವೇರ್ನ್ನು ಅಭಿವೃದ್ಧಿಪಡಿಸಿದೆ. ವೆಬ್ಸೈಟ್ ಮೂಲಕ ರೈಲಿನ ಸಮಯವನ್ನೂ ಸಚಿವಾಲಯ ಮಾಹಿತಿ ಪಡೆಯಬಹುದು. ಅಲ್ಲದೇ, ನೈರ್ಮಲ್ಯ, ಸುರಕ್ಷತೆ ಬಗ್ಗೆಯೂ ಕಣ್ಗಾವಲು ಇಡಬಹುದು.
ಮಾನವ ರಹಿತ ಕ್ರಾಸಿಂಗ್ ನಿರ್ಮೂಲನೆ
ಅಪಘಾತಗಳಿಗೆ ಎಡೆಮಾಡಿಕೊಡುತ್ತಿದ್ದ ಮಾನವರಹಿತ ಲೆವೆಲ್ ಕ್ರಾಸಿಂಗ್ಗಳನ್ನು ತೆಗೆದು ಹಾಕುವ ತನ್ನ ಮಹತ್ವದ ಟಾರ್ಗೆಟ್ನ್ನು ತಲುಪುವಲ್ಲಿ ಭಾರತೀಯ ರೈಲ್ವೇ ಯಶಸ್ವಿಯಾಗಿದೆ. ಒಂದು ವರ್ಷದಲ್ಲಿ 3,478 ಇಂತಹ ಕ್ರಾಸಿಂಗ್ಗಳನ್ನು ತೆಗೆದು ಹಾಕಲಾಗಿದೆ, ಕೆಲವನ್ನು ಮಾನವ ಸಹಿತ ಕ್ರಾಸಿಂಗ್ ಆಗಿ ಪರಿವರ್ತಿಸಲಾಗಿದೆ. ಕೆಲವೇ ರೈಲುಗಳು ಪಾಸ್ ಆಗುವ ಸೆಕ್ಷನ್ನ ಕ್ರಾಸಿಂಗ್ಗಳನ್ನು ತೆಗೆದು ಹಾಕಿದ್ದು, ಅದನ್ನು ಹತ್ತಿರದಲ್ಲಿನ ರೋಡ್ ಅಂಡರ್ ಬ್ರಿಡ್ಜ್ ಅಥವಾ ಸಬ್ವೇ ಅಥವಾ ಮಾನವ ಸಹಿತ ಕ್ರಾಸಿಂಗ್ ಜೊತೆ ವಿಲೀನಗೊಳಿಸಲಾಗಿದೆ. ರೈಲ್ವೇ ನೆಟ್ವರ್ಕ್ನಲ್ಲಿ ಸುರಕ್ಷತೆಯನ್ನು ಕಾಪಾಡುವ ಸಲುವಾಗಿ ಮಾನವ ರಹಿತ ಕ್ರಾಸಿಂಗ್ನ್ನು ತೆಗೆದು ಹಾಕಲಾಗಿದೆ.
ಪಾರದರ್ಶಕಗೊಂಡ ಕೇಟರಿಂಗ್ ವ್ಯವಸ್ಥೆ
ಮಾಫಿಯಾವನ್ನು ತಡೆಗಟ್ಟುವ ಉದ್ದೇಶದೊಂದಿಗೆ ರೈಲ್ವೇ ಪಾರ್ಕಿಂಗ್, ಕೇಟರಿಂಗ್, ಪಾರ್ಸೆಲ್ ಲೀಸಿಂಗ್ ಮುಂತಾದ ವಾರ್ಷಿಕ ರೂ.3600ಕೋಟಿ ಮೌಲ್ಯದ ಕಾಂಟ್ರ್ಯಾಕ್ಟ್ಗಳನ್ನು ಆನ್ಲೈನ್ ಮೂಲಕ ಟೆಂಡರ ಕರೆಯಲು ಭಾರತೀಯ ರೈಲ್ವೇ ನಿರ್ಧರಿಸಿದೆ. ರೈಲ್ವೇ ಆವರಣದಲ್ಲಿ ಎಟಿಎಂ, ಜಾಹೀರಾತು, ಮತ್ತಿತರ ಪ್ರಚಾರ ಸಂಬಂಧಿತ ವಿಷಯಗಳೂ ಆನ್ಲೈನ್ ಮೂಲಕ ಜರುಗಲಿದೆ. ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು, ಯಾವುದೇ ಮಾಫಿಯಾಗಳು ಉದ್ಭವವಾಗುವ ಅವಕಾಶಗಳನ್ನು ತಡೆಯಲು ಭಾರತೀಯ ರೈಲ್ವೇ ಆನ್ಲೈನ್ ಪ್ರಕ್ರಿಯೆಗೆ ಮುಂದಾಗಿದೆ. ಇಂದಿನವರೆಗೂ ಇಂತಹ ಪ್ರಕ್ರಿಯೆಗಳು ಪೇಪರ್ ಆಧಾರಿತ ಸಾಂಪ್ರದಾಯಿಕ ಪದ್ಧತಿಯಲ್ಲೇ ಜರುಗುತ್ತಿದ್ದವು, ಇದು ಸರ್ಕಾರದ ’ಡಿಜಿಟಲ್ ಇಂಡಿಯಾ’ ಯೋಜನೆಗೆ ವಿರುದ್ಧವಾಗಿದೆ. ಹೀಗಾಗಿ ಹಳೆ ಪದ್ಧತಿಗೆ ತಿಲಾಂಜಲಿ ಇಟ್ಟು ಇ-ಟೆಂಡರಿಂಗ್ಗೆ ಮುಂದಾಗಿದೆ.
ರೈಲ್ವೇ ವಲಯದಲ್ಲಿ ಮೋದಿ ಸರ್ಕಾರ ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಿದೆ. ಗುಜರಾತ್ನಲ್ಲಿ ವಿಶ್ವದ ಮೊತ್ತ ಮೊದಲ ರೈಲ್ವೇ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಲಾಗಿದ್ದು, ಇಲ್ಲಿ ನೂರಾರು ವಿದ್ಯಾರ್ಥಿಗಳು ರೈಲ್ವೇ ಬಗ್ಗೆ ತಜ್ಞತೆಯನ್ನು ಪಡೆಯಲಿದ್ದಾರೆ. ಅಷ್ಟೇ ಅಲ್ಲದೇ, ಸಾಮಾಜಿಕ ಜಾಲತಾಣಗಳ ಮೂಲಕ ರೈಲ್ವೇ ಪ್ರಯಾಣಿಕ ಏನೇ ಸಮಸ್ಯೆಗಳನ್ನು ಹೇಳಿಕೊಂಡರೂ ತಕ್ಷಣ ಪರಿಹಾರಗಳನ್ನು ಒದಗಿಸಲಾಗುತ್ತಿದೆ. ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಶಿನ್ಗಳನ್ನು ರೈಲು ನಿಲ್ದಾಣಗಳಲ್ಲಿ ಅಳವಡಿಸುವ ಮೂಲಕ, ಮಹಿಳಾ ಪ್ರಯಾಣಿಕರ ಸುರಕ್ಷತೆ, ನೈರ್ಮಲ್ಯಕ್ಕೆ ಉತ್ತೇಜನಗಳನ್ನು ನೀಡಲಾಗುತ್ತಿದೆ. ಸ್ವಚ್ಛ ಭಾರತ ಯೋಜನೆಯಡಿ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪ್ರತಿ ನಿಲ್ದಾಣದಲ್ಲೂ ಸ್ವಚ್ಛ ಮತ್ತು ಸುಂದರ ಶೌಚಾಲಯಗಳು ತಲೆ ಎತ್ತುವಂತೆ ಮಾಡಲಾಗಿದೆ. ರೈಲು ನಿಲ್ದಾಣಗಳು ಶುಚಿಗೊಳ್ಳುತ್ತಿವೆ. ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿರುವ ಭಾರತೀಯ ರೈಲ್ವೇ ಮುಂದೊಂದು ದಿನ ವಿಮಾನನಿಲ್ದಾಣಗಳ ಮಾದರಿಯಲ್ಲಿ ಕಂಗೊಳಿಸುವುದರಲ್ಲಿ ಯಾವುದೇ ಅನುಮಾನಗಳಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.