ನಮ್ಮ ದೇಶದಲ್ಲಿ ಚುನಾವಣೆ ಸಮೀಪವಿರುವಾಗ ಸಾಕಷ್ಟು ಚುನಾವಣಾ ಪೂರ್ವ ಸಮೀಕ್ಷೆಗಳು ನಡೆದು ಈ ಬಾರಿಯ ಫಲಿತಾಂಶವೇನಾಗಬಹುದು ಎನ್ನುವ ಬಗ್ಗೆ ಮಾಹಿತಿಗಳು ದೊರೆತು ಆ ಬಗೆಗಿನ ಚರ್ಚೆಗಳು ಗರಿಗೆದರುತ್ತವೆ.
ಆದರೆ ಅಂತಹಾ ಸಮೀಕ್ಷೆಗಳ ಫಲಿತಾಂಶ ಹೊರಬಂದ ನಂತರ ಬಹುತೇಕ ಜನರು ಕೇಳುವುದೇನೆಂದರೆ “ನಮ್ಮ ಅಭಿಪ್ರಾಯವನ್ನು ಯಾರೂ ಕೇಳಿಯೇ ಇಲ್ಲ,ಆದರೂ ಈ ಸಮೀಕ್ಷೆಗಳನ್ನು ಹೇಗೆ ಮಾಡಿದರು?” ಎನ್ನುವುದು.
ನಿಮ್ಮ ಪ್ರಶ್ನೆಯೂ ಇದೇ ಆಗಿದ್ದರೆ ಒಮ್ಮೆ ಇದನ್ನು ಓದಿ.
ಸಾಮಾನ್ಯವಾಗಿ ಮಾರುಕಟ್ಟೆ ಸಮೀಕ್ಷೆ ನಡೆಸುವ ಕಂಪನಿಗಳೇ ಈ ಚುನಾವಣಾ ಪೂರ್ವ ಸಮೀಕ್ಷೆಗಳನ್ನೂ ನಡೆಸುತ್ತವೆ. ಆದರೆ ಭಾರತದಲ್ಲಿ ರಾಜಕೀಯವೂ ಒಂದು ಬಹುದೊಡ್ಡ ಮಾರುಕಟ್ಟೆಯಾಗಿ ಗುರುತಿಸಿಕೊಂಡಿರುವುದರಿಂದಾಗಿ ಕೆಲವು ಕಂಪನಿಗಳು ರಾಜಕೀಯ ಸಮೀಕ್ಷೆಗಳನ್ನೇ ತಮ್ಮ ಪೂರ್ಣಾವಧಿ ಯೋಜನೆಗಳನ್ನಾಗಿ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿವೆ.
ಸಾಮಾನ್ಯವಾಗಿ ಒಂದು ಸಮೀಕ್ಷೆ ನಡೆಸಬೇಕಾದರೆ ಮೊದಲು ಪ್ರಶ್ನಾವಳಿಯೊಂದನ್ನು(questionnaire) ಸಿದ್ಧಪಡಿಸಲಾಗುತ್ತದೆ. ಅದರಲ್ಲಿ ಪ್ರಶ್ನೆಗಳು ಈ ಕೆಳಗಿನ ರೀತಿಯದ್ದಾಗಿರುತ್ತವೆ.
ಉದಾಹರಣೆಗೆ;
ನೀವು ಎಷ್ಟು ಬಾರಿ ಮತ ಚಲಾಯಿಸಿದ್ದೀರಿ?
ಕಳೆದ ಚುನಾವಣೆಯಲ್ಲಿ ಮತ ಚಲಾಯಿಸಿದ್ದೀರಾ?
ಮುಂದಿನ ಚುನಾವಣೆಯಲ್ಲಿ ಮತ ಚಲಾಯಿಸುತ್ತೀರಾ?
ಮತ ಚಲಾಯಿಸುವಾಗ ನಿಮ್ಮ ಆದ್ಯತೆ ಯಾವುದು?
(ಪಕ್ಷ/ಅಭ್ಯರ್ಥಿ/ಅಭ್ಯರ್ಥಿಯ ಜಾತಿ/ಸ್ಥಳೀಯಅಥವಾ ಹೊರಗಿನವ/ಮನೆಯ ಹಿರಿಯರು ಯಾರನ್ನು ಸೂಚಿಸುತ್ತಾರೋ ಅವರು…ಇತ್ಯಾದಿ)
ಪ್ರಶ್ನಾವಳಿಯ ಜೊತೆಗೆ ಇಡೀ ದೇಶದಲ್ಲಿ ಎಷ್ಟು ಜನರನ್ನು ಮಾತಾಡಿಸಬೇಕು ಎನ್ನುವ ಗುರಿಯನ್ನೂ ಹಾಕಿಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ಅದನ್ನು ‘ಸ್ಯಾಂಪಲ್ ಸೈಜ್’ ಎಂದು ಕರೆಯಲಾಗುತ್ತದೆ.
ಉದಾಹರಣೆಗೆ;
ದೇಶದಾದ್ಯಂತ ಒಟ್ಟು ಹನ್ನೆರಡು ಸಾವಿರ ಜನರ ಅಭಿಪ್ರಾಯ ಸಂಗ್ರಹಿಸಬೇಕು. ಆ ಹನ್ನೆರಡು ಸಾವಿರದಲ್ಲಿ ಕರ್ನಾಟಕದಲ್ಲಿ ಎರಡು ಸಾವಿರ ಜನರನ್ನು ಸಂಪರ್ಕಿಸಬೇಕು. ಆ ಎರಡು ಸಾವಿರದಲ್ಲಿ ದೊಡ್ಡ ನಗರಗಳಾದ ಬೆಂಗಳೂರಿನಲ್ಲಿ ಮುನ್ನೂರು, ಮಂಗಳೂರಿನಲ್ಲಿ ನೂರಿಪ್ಪತ್ತು, ಹುಬ್ಬಳ್ಳಿಯಲ್ಲಿ ಎಪ್ಪತ್ತು, ಕಲಬುರ್ಗಿಯಲ್ಲಿ ಅರವತ್ತು ಮತದಾರರ ಸಂಪರ್ಕ ಮಾಡಬೇಕು. ಉಳಿದಿರುವುದರಲ್ಲಿ ನಿರ್ದಿಷ್ಟ ಪಟ್ಟಣಗಳ ಇಷ್ಟು ಜನ ಹಾಗೂ ನಿರ್ದಿಷ್ಟ ಹಳ್ಳಿಗಳ ಇಂತಿಷ್ಟು ಜನರನ್ನು ಸಂಪರ್ಕಿಸಬೇಕು ಎಂದು ಮೊದಲೇ ನಿಗದಿ ಮಾಡಲಾಗಿರುತ್ತದೆ.
ಈಗ ಹುಬ್ಬಳ್ಳಿಯಲ್ಲಿ ಅರವತ್ತು ಜನರನ್ನು ಸಂಪರ್ಕಿಸುವ ಬಗ್ಗೆ ಯೋಚಿಸೋಣ.
ಹುಬ್ಬಳ್ಳಿ ನಗರದಲ್ಲಿ ಸಂಪರ್ಕಿಸಬೇಕಾದ ಆ ಅರವತ್ತು ಜನರಲ್ಲಿ ಮತ್ತೆ ಪುರುಷರು ನಲವತ್ತು ಮತ್ತು ಮಹಿಳೆಯರು ಇಪ್ಪತ್ತು ಎನ್ನುವ ರೀತಿ ವಿಂಗಡಿಸಲಾಗುತ್ತದೆ. ಆ ಇಪ್ಪತ್ತು ಮಹಿಳೆಯರಲ್ಲಿ ಮತ್ತೆ ಮೊದಲ ಬಾರಿ ಮತದಾನ ಮಾಡುವ ಮಹಿಳೆಯರು ನಾಲ್ಕು, ಮೂವತ್ತರಿಂದ ನಲವತ್ತೈದು ವರ್ಷದ ಮಹಿಳೆಯರು ಆರು, ನಲವತ್ತೈದು ವರ್ಷ ಮೇಲ್ಪಟ್ಟ ಮಹಿಳೆಯರು ನಾಲ್ಕು, ಏಳನೇ ತರಗತಿಗಿಂತ ಕಡಿಮೆ ಓದಿರುವ ಎರಡು, ಪದವಿ ಪಡೆದ ನಾಲ್ಕು…. ಹೀಗೆ ವಿಂಗಡಿಸಲಾಗುತ್ತದೆ.
ಈ ವಿಂಗಡಣೆ ಇಷ್ಟಕ್ಕೇ ಮುಗಿಯುವುದಿಲ್ಲ. ಹುಬ್ಬಳ್ಳಿಯ ಕೇವಲ ಅರವತ್ತು ಜನರಲ್ಲೇ ಬಡವರು ಇಷ್ಟು, ಮಧ್ಯಮ ವರ್ಗದವರು ಇಷ್ಟು, ಶ್ರೀಮಂತರು ಇಷ್ಟು ಎಂದು ಕೂಡಾ ವಿಂಗಡಿಸಬೇಕಾಗಿರುತ್ತದೆ. ಹಾಗೆಯೇ ಅವರಲ್ಲಿ ಕೂಲಿ ಕಾರ್ಮಿಕರು ಇಷ್ಟು, ಕಾರ್ಖಾನೆ ಮುಂತಾದ ಕಡೆ ಉದ್ಯೋಗಿಗಳಾಗಿರುವವರು ಇಷ್ಟು, ಡಿ ದರ್ಜೆ ನೌಕರರು ಇಷ್ಟು, ಸ್ವಯಂ ಉದ್ಯೋಗಿಗಳು ಇಷ್ಟು, ಸ್ವಂತ ಉದ್ಯಮ ಹೊಂದಿರುವವರು ಇಷ್ಟು, ಅದರಲ್ಲಿ ಇಪ್ಪತ್ತು ಜನರಿಗಿಂತಲೂ ಹೆಚ್ಚು ಜನರನ್ನು ಕೆಲಸಕ್ಕಿಂತುಕೊಂಡಿರುವ ಉದ್ಯಮಿಗಳಿಷ್ಟು ಎಂದು ಕೂಡಾ ವಿಂಗಡಿಸಬೇಕಾಗಿರುತ್ತದೆ.
ಹಾಗಾದರೆ ಬಡವರು, ಮಧ್ಯಮ ವರ್ಗದವರು ಮತ್ತು ಶ್ರೀಮಂತರನ್ನು ಹೇಗೆ ಗುರುತಿಸಲಾಗುತ್ತದೆ?
ಮುಖ್ಯ ಪ್ರಶ್ನಾವಳಿಗೂ ಮೊದಲು ಪ್ರಶ್ನೆ ಕೇಳಲ್ಪಡುವವರನ್ನು ಆಯ್ಕೆ ಮಾಡುವುದಕ್ಕಾಗಿಯೇ ಇನ್ನೊಂದು ಪ್ರಶ್ನೆ ಪತ್ರಿಕೆ ತಯಾರು ಮಾಡಲಾಗಿರುತ್ತದೆ. ಅದರಲ್ಲಿ ವ್ಯಕ್ತಿಯ ಹೆಸರು, ಉದ್ಯೋಗ, ಆದಾಯ, ಕುಟುಂಬ ಸದಸ್ಯರ ಸಂಖ್ಯೆ, ಸ್ವಂತ ಮನೆಯೇ, ಬಾಡಿಗೆ ಮನೆಯೇ, ತಾರಸಿ ಮನೆಯೇ, ಹೆಂಚಿನ ಮನೆಯೇ, ಟೀವಿ ಇದೆಯೇ, ಫ್ರಿಡ್ಜ್ ಇದೆಯೇ, ಮೊಬೈಲ್ ಫೋನ್ ಇದೆಯೇ, ಸ್ಕೂಟರ್ ಇದೆಯೇ, ಕಾರ್ ಇದೆಯೇ….. ಎನ್ನುವ ಪ್ರಶ್ನೆಗಳ ಮೂಲಕ ಅವರ ಸ್ಥಾನಮಾನಗಳನ್ನು ಗುರುತಿಸಿ ಮುಂದಿನ ಪ್ರಶ್ನೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಹತೆಯಿಲ್ಲದವರಿಗೆ ಧನ್ಯವಾದ ತಿಳಿಸಿ ಕೈ ಬಿಡಲಾಗುತ್ತದೆ.
ಹಾಗಾದರೆ ಈ ಚುನಾವಣಾ ಪೂರ್ವ ಸಮೀಕ್ಷೆಗಳು 100% ನಂಬಲರ್ಹ ಎನ್ನಬಹುದೇ?
ಇದನ್ನು ತಿಳಿದುಕೊಳ್ಳುವುದಕ್ಕೂ ಮೊದಲು ಮಾಹಿತಿಗಳನ್ನು ಪಡೆಯುವ ಕಾರ್ಯಕರ್ತರ ಕಾರ್ಯ ವಿಧಾನವನ್ನು ನಾವು ಅರಿತುಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಈ ಚುನಾವಣಾ ಸಮೀಕ್ಷೆಗಳನ್ನು ನಡೆಸುವ ಬಹುತೇಕ ಕಾರ್ಯಕರ್ತರು ಆ ಸಂಸ್ಥೆಯ ಖಾಯಂ ಉದ್ಯೋಗಿಗಳಾಗಿರುವುದಿಲ್ಲ. ತಾತ್ಕಾಲಿಕವಾಗಿ ಒಂದು ಪ್ರಾಜೆಕ್ಟ್ ಬಂದಾಗ ಅದರ ಕೆಲಸ ಮಾಡಿ ಸಂಬಳ ಪಡೆದು ನಂತರ ಬೇರೆ ಕೆಲಸಕ್ಕೆ ಹೋಗುವ ಹುಡುಗರೇ ಈ ಎಲ್ಲಾ ಸಮೀಕ್ಷೆಗಳ ಹಿಂದಿರುವ ಪ್ರಮುಖ ಶಕ್ತಿ. ಸಮೀಕ್ಷೆ ಪ್ರಾರಂಭಕ್ಕೂ ಮೊದಲು ಅವರನ್ನು ಒಂದು ಹೋಟೆಲ್ ಅಥವಾ ಕಚೇರಿಗೆ ಕರೆಸಿ, ಹೆಸರನ್ನು ದಾಖಲಿಸಿಕೊಂಡು ಒಂದೆರಡು ಗಂಟೆ ಆ ಸಮೀಕ್ಷೆಯ ಬಗ್ಗೆ ತರಬೇತಿ ನೀಡಿ ಅವರವರು ತೆರಳಬೇಕಾದ ಸ್ಥಳಗಳಿಗೆ ಕಳಿಸಿಕೊಡಲಾಗುತ್ತದೆ. ಒಂದು ಪ್ರಶ್ನಾವಳಿ ಮುಗಿಸಲು ನಲವತ್ತೈದು ನಿಮಿಷ, ಅರವತ್ತು ನಿಮಿಷ, ಎಪ್ಪತ್ತೈದು ನಿಮಿಷ… ಹೀಗೆ ಸಮಯ ನಿಗದಿಪಡಿಸಲಾಗುತ್ತದೆ. ಒಂದು ಪ್ರಶ್ನಾವಳಿಗೆ ಐವತ್ತು ರೂಪಾಯಿ, ಎಪ್ಪತ್ತು ರೂಪಾಯಿ, ನೂರು ರೂಪಾಯಿ… ಹೀಗೆ ಸಂಬಳ ನಿಗದಿಪಡಿಸಲಾಗುತ್ತದೆ. ಅವರು ನಿಗದಿಪಡಿಸಿದಂತೆ ಒಂದು ಗಂಟೆಯಷ್ಟು ಸಮಯ ತೆಗೆದುಕೊಂಡರೆ ವಿಳಾಸ ಹುಡುಕಾಟ, ಅರ್ಹರ ಆಯ್ಕೆ, ಪ್ರಯಾಣ ಸಮಯ ಎಲ್ಲವೂ ಕಳೆದು ಹೆಚ್ಚೆಂದರೆ ದಿನಕ್ಕೆ ಐದಾರು ಜನರನ್ನಷ್ಟೇ ಸಂಪರ್ಕಿಸಲು ಸಾಧ್ಯ. ಊರು ಬಿಟ್ಟು ಊರಿಗೆ ತೆರಳಿ ಮುನ್ನೂರು-ನಾನೂರು ರೂಪಾಯಿಗೆ ಯಾರಿಂದಲೂ ಆ ಕೆಲಸ ಮಾಡಲಾಗದು. ಅಲ್ಲದೆ ಮೂರ್ನಾಲ್ಕು ದಿನಗಳಲ್ಲಿ ಮುಗಿಸಿ ಬರಬೇಕಾದ ಆ ಕೆಲಸ ಆರೇಳು ದಿನಗಳಾದರೆ ಹೋಟೆಲ್ ಬಾಡಿಗೆಯನ್ನೂ ಆ ಕಾರ್ಯಕರ್ತರೇ ಭರಿಸಬೇಕಾಗುತ್ತದೆ. ಆದ್ದರಿಂದ ಸಮೀಕ್ಷಾ ಕಾರ್ಯಕರ್ತರು ಬೇರೆಯದ್ದೇ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ.
ಮೊದಲೆಲ್ಲಾ ಈ ಸಮೀಕ್ಷೆಗಳಿಗೆ ಪ್ರಶ್ನೆಪತ್ರಿಕೆಗಳಿರುತ್ತಿದ್ದವು. ಆಗ ಅದರಲ್ಲಿ ಪೆನ್ಸಿಲ್ ನಲ್ಲಿ ಹೆಸರು, ವಿಳಾಸ ಹಾಗೂ ಫೋನ್ ನಂಬರ್ ಗಳನ್ನೂ ಬರೆದುಕೊಂಡು “ಯಾರಾದರೂ ಫೋನ್ ಮಾಡಿದರೆ ಹೌದು, ಬಂದಿದ್ರು, ಒಂದು ಗಂಟೆ ಏನೇನೋ ಪ್ರಶ್ನೆ ಕೇಳಿ ತಲೆ ತಿಂದ್ಕೊಂಡು ಹೋದ್ರು ಅಂತ ಹೇಳಿ” ಎಂದು ಮನವಿ ಮಾಡಿಕೊಂಡು ಹೊರಟುಬಿಡುತ್ತಿದ್ದರು. ನಂತರ ಆ ಪ್ರಶ್ನಾವಳಿಗಳನ್ನು ಪಾರ್ಕ್ ನಲ್ಲೋ, ಬಸ್ ಸ್ಟಾಂಡ್ ನಲ್ಲೋ, ರೈಲಿನಲ್ಲೋ ಅಥವಾ ತಮ್ಮ ಮನೆಯಲ್ಲೋ ಕುಳಿತು ತುಂಬಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಪೇಪರ್ ಬದಲು ಟ್ಯಾಬ್ ಹಾಗೂ ಲ್ಯಾಪ್ ಟಾಪ್ ಗಳು ಬಂದಿವೆ. ಸಂದರ್ಶನದ ಸಮಯದಲ್ಲಿ ಲಾಗಿನ್ ಆಗಬೇಕಾಗುತ್ತದೆ. ಸಂದರ್ಶನವನ್ನು ಯಾವ ದಿನಾಂಕದಂದು ಎಷ್ಟು ಗಂಟೆಗೆ ಪ್ರಾರಂಭಿಸಿ ಎಷ್ಟು ಗಂಟೆ ಎಷ್ಟು ನಿಮಿಷಕ್ಕೆ ಮುಗಿಸಲಾಯಿತು ಎನ್ನುವುದೂ ದಾಖಲಾಗುತ್ತದೆ. ಆದರೆ every problem has a solution! ಲ್ಯಾಪ್ ಟಾಪ್ಗಳಲ್ಲಿ ದಿನಾಂಕ ಮತ್ತು ಸಮಯವನ್ನು ಬದಲಾಯಿಸಿ ಸಂದರ್ಶನ ನಡೆಸುವುದಕ್ಕೂ ಸಾಧ್ಯವಿದೆ! ಒಂದೇ ಬಾರಿಗೆ ಎರಡು ಲ್ಯಾಪ್ ಟಾಪ್/ಟ್ಯಾಬ್ ಗಳನ್ನು ಓಪನ್ ಮಾಡಿಟ್ಟುಕೊಂಡು ಬೇರೆ ಬೇರೆ ಲಾಗಿನ್ ಐಡಿ ಗಳೊಂದಿಗೆ ಇಬ್ಬರನ್ನು ಪ್ರಶ್ನೆ ಕೇಳಲಾಗುತ್ತದೆ. ಹೆಸರು, ವಿಳಾಸ, ಮೊಬೈಲ್ ನಂಬರ್ ಟೈಪ್ ಮಾಡಿಕೊಂಡು ಮತ್ತದೇ “ಯಾರಾದರೂ ಫೋನ್ ಮಾಡಿದರೆ ಹೌದು, ಬಂದಿದ್ರು, ಒಂದು ಗಂಟೆ ಏನೇನೋ ಪ್ರಶ್ನೆ ಕೇಳಿ ತಲೆ ತಿಂದ್ಕೊಂಡು ಹೋದ್ರು ಅಂತ ಹೇಳಿ” ಎಂದು ಮನವಿ ಮಾಡಿಕೊಂಡು ಅವರನ್ನು ಕಳಿಸಿ ಮರದ ಕೆಳಗೋ, ಟೀ ಶಾಪ್ ನಲ್ಲೋ, ಲಾಡ್ಜ್ ಒಳಗೋ ಕುಳಿತು ಉಳಿದದ್ದನ್ನು ಟೈಪ್ ಮಾಡಿ ಮುಗಿಸಿ ಸಂದರ್ಶನ ಕ್ಲೋಸ್ ಮಾಡಲಾಗುತ್ತದೆ.
ಹಾಗಾದರೆ ಅವರು ಹಾಕಿಕೊಂಡ ನಿಯಮಾವಳಿಗಳ ಪ್ರಕಾರವೇ ಮತದಾರರನ್ನು ಸಂದರ್ಶಿಸಲಾಗುತ್ತದೆಯೇ?
ನಿಯಮಾವಳಿಗಳನ್ನೇನೋ ಅವರು ಹಾಕಿಕೊಂಡಿರುತ್ತಾರೆ. ಅಂಕಿ ಅಂಶಗಳನ್ನು ಕೊಡುವ ಸಲುವಾಗಿ ಅದು ಅವರಿಗೆ ಅನಿವಾರ್ಯವೂ ಹೌದು. ಆದರೆ ವಾಸ್ತವ ಬೇರೆಯದೇ ಇದೆ. ಸಾಮಾನ್ಯವಾಗಿ ಮಧ್ಯಮ ವರ್ಗದವರು ಹಾಗೂ ಶ್ರೀಮಂತರು ತಮ್ಮ ವೈಯುಕ್ತಿಕ ಮಾಹಿತಿಗಳನ್ನು ಕೊಡುವುದೇ ಇಲ್ಲ. ಎಷ್ಟೋ ಕಡೆ ಸಮೀಕ್ಷಕರನ್ನು ಗೇಟಿನ ಒಳಗೇ ಬಿಟ್ಟುಕೊಳ್ಳುವುದಿಲ್ಲ. ಜೊತೆಗೆ ಉದ್ಯೋಗಿಗಳೂ ಇಂತಹಾ ಸಮೀಕ್ಷೆಗಳಿಗೆ ಅರ್ಧ ಗಂಟೆ/ಒಂದು ಗಂಟೆ ಸಮಯ ವ್ಯರ್ಥ ಮಾಡುವುದಿಲ್ಲ. ಇದೆಲ್ಲವನ್ನೂ ಮನಗಂಡಿರುವ ಸಮೀಕ್ಷಾ ಕಾರ್ಯಕರ್ತರು ಒಂದು ಅರಳೀ ಕಟ್ಟೆ, ಟೀ ಶಾಪ್, ಕಟಿಂಗ್ ಶಾಪ್ ಮುಂತಾದ ಕಡೆ ಹೋಗಿ ನಿಧಾನವಾಗಿ ರಾಜಕೀಯ ಚರ್ಚೆಯನ್ನು ಪ್ರಾರಂಭಿಸುತ್ತಾರೆ. ಒಂದು ಅರ್ಧ ಗಂಟೆಯಾಗುವಷ್ಟರಲ್ಲಿ ಆ ಊರಿನ ರಾಜಕೀಯ ಚಿತ್ರಣ ಅವರ ಕಣ್ಣ ಮುಂದೆ ಬರುತ್ತದೆ. ಅಷ್ಟರಲ್ಲಿ ಅವರೆಲ್ಲರೂ ಸಮೀಕ್ಷಾ ಕಾರ್ಯಕರ್ತನಿಗೆ ಆತ್ಮೀಯರಾಗಿಬಿಟ್ಟಿರುತ್ತಾರೆ. ಆಗ ಆ ಕಾರ್ಯಕರ್ತ ಅವರೆಲ್ಲರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಪಡೆದುಕೊಂಡು “ಯಾರಾದರೂ ಫೋನ್ ಮಾಡಿದರೆ ಹೌದು, ಬಂದಿದ್ರು, ಒಂದು ಗಂಟೆ ಏನೇನೋ ಪ್ರಶ್ನೆ ಕೇಳಿ ತಲೆ ತಿಂದ್ಕೊಂಡು ಹೋದ್ರು ಅಂತ ಹೇಳಿ, ಇನ್ನೂ ಏನಾದರೂ ಕೇಳಿದರೆ ನಾನೀಗ ಬ್ಯುಸಿ ಇದ್ದೀನಿ ಆಮೇಲ್ ಮಾಡಿ ಅನ್ನಿ” ಎಂದು ಮನವಿ ಮಾಡಿಕೊಂಡು ತಾವು ಉಳಿದುಕೊಂಡಿರುವ ಲಾಡ್ಜ್ ಕಡೆಗೆ ಹೊರಟುಬಿಡುತ್ತಾರೆ.
ಇದಿಷ್ಟೂ ಒಂದು ಮುಖವಾದರೆ ಪರೋಕ್ಷವಾಗಿ ರಾಜಕೀಯ ಪಕ್ಷಗಳೇ ತಮ್ಮ ಪರವಾಗಿ ಸಮೀಕ್ಷೆಗಳನ್ನು ಮಾಡಿಸುವ ಕ್ರಮ ಕೂಡಾ ಚಾಲ್ತಿಯಲ್ಲಿದೆ.
ಹಾಗಾದರೆ ಚುನಾವಣಾ ಪೂರ್ವ ಸಮೀಕ್ಷೆಗಳು ಬಹುತೇಕ ಸರಿಯಾಗಿರುವ ಉದಾಹರಣೆಗಳು ಸಾಕಷ್ಟಿವೆಯೆಲ್ಲಾ..?
ಹೌದು. ಸಾಕಷ್ಟಿವೆ. ನಿಜವಾದಾಗ ಮಾತ್ರ ನಮ್ಮ ಭವಿಷ್ಯ ನಿಜವಾಯಿತು ಎಂದು ಅವರು ಹಾಗೂ ಮಾಧ್ಯಮಗಳು ಪದೇ ಪದೇ ತೋರಿಸಿಕೊಳ್ಳುವುದರಿಂದ ನಮಗೆ ಹಾಗನ್ನಿಸುತ್ತದೆ. ಆದರೆ ಸಮೀಕ್ಷಾ ಭವಿಷ್ಯಗಳು ಸುಳ್ಳಾಗಿರುವ ಉದಾಹರಣೆಗಳು ಸರಿಯಾಗಿರುವುದಕ್ಕಿಂತಲೂ ಹೆಚ್ಚಿರುತ್ತವೆ.
ಚುನಾವಣಾ ಪೂರ್ವ ಸಮೀಕ್ಷೆಗಳು ನಿಮ್ಮ ಬಳಿ ಬಂದು ನಿಮ್ಮ ಅಭಿಪ್ರಾಯವನ್ನೇಕೆ ಪಡೆದಿಲ್ಲ ಎನ್ನುವುದು ಬಹುಷಃ ನಿಮಗೀಗ ಕೊಂಚ ಮಟ್ಟಿಗೆ ಅರ್ಥವಾಗಿರಬಹುದಲ್ಲವೇ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.