ಕೊನೆಗೂ ನೆಹರೂ ಕುಟುಂಬದ ಮತ್ತೊಂದು ಕುಡಿ ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಮಾಡಿದೆ. ವಂಶಪಾರಂಪರ್ಯ ರಾಜಕೀಯಕ್ಕೆ ಕಟ್ಟುಬಿದ್ದಿರುವ ಕಾಂಗ್ರೆಸ್ ಪಕ್ಷ, ಪ್ರಿಯಾಂಕ ವಾದ್ರಾ ಆಗಮನವನ್ನು ದೊಡ್ಡ ಸಂಭ್ರಮ ಎಂಬಂತೆ ಆಚರಿಸುತ್ತಿದೆ. ಆಕೆಗೆ ಪಕ್ಷದ ಗತಿಯನ್ನೇ ಬದಲಾಯಿಸುವ ತಾಕತ್ತು ಇದೆ ಎಂಬುದು ಹಲವಾರು ಕಾಂಗ್ರೆಸ್ಸಿಗರ ಅಭಿಪ್ರಾಯವೂ ಹೌದು. ಆದರೆ ಆಕೆ ಎಷ್ಟರ ಮಟ್ಟಿಗೆ ಈ ಅಭಿಪ್ರಾಯವನ್ನು ದೃಢಪಡಿಸುವಲ್ಲಿ ಶಕ್ತಳಾಗುತ್ತಾಳೆ ಎಂಬುದು ಮುಂಬರುವ ದಿನಗಳಲ್ಲಿ ಬಹಿರಂಗವಾಗಲಿದೆ. ಈ ಬಗ್ಗೆ ಈಗ ಏನೇ ಹೇಳಿದರೂ ಅದು ಅಪ್ರಬುದ್ಧ ಎನಿಸಿಕೊಳ್ಳುತ್ತದೆ.
ನೆಹರೂ ಕುಟುಂಬದ ಕುಡಿ ಎಂಬುದು ಬಿಟ್ಟರೆ ಪ್ರಿಯಾಂಕರಿಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಲು ಬೇರೆ ಯಾವುದೇ ಅರ್ಹತೆಗಳಿಲ್ಲ. ಅಮೇಥಿ, ರಾಯ್ಬರೇಲಿಯಲ್ಲಿ ತಮ್ಮ ತಾಯಿ ಮತ್ತು ತಮ್ಮನ ಪರವಾಗಿ ಪ್ರಚಾರ ಮಾಡಿದ್ದು ಬಿಟ್ಟರೆ ಪಕ್ಷದ ಇತರ ಯಾವುದೇ ಚಟುವಟಿಕೆಗಳಲ್ಲಿ ಆಕೆ ತೊಡಗಿಸಿಕೊಂಡಿಲ್ಲ. ಕಾರ್ಯಕರ್ತೆಯಾಗಿ ಪಕ್ಷಕ್ಕೆ ದುಡಿದಿಲ್ಲ. ಕೇವಲ ಇಂದಿರಾ ಗಾಂಧಿಯನ್ನು ಹೋಲುತ್ತಾರೆ ಎಂಬ ಕಾರಣಕ್ಕೆ ಕೆಲ ಕಾಂಗ್ರೆಸ್ಸಿಗರು ಅವರನ್ನು ಪಕ್ಷಕ್ಕೆ ಕರೆ ತರಲು ತುದಿಗಾಲಲ್ಲಿ ನಿಂತಿದ್ದರು. ಕೆಲವರಂತು ಅವರ ಆಗಮನವನ್ನು ದೊಡ್ಡ ದೊಡ್ಡ ಪೋಸ್ಟರ್, ಕಟೌಟ್ಗಳನ್ನು ಹಾಕಿ ಸಂಭ್ರಮಿಸಿದ್ದಾರೆ. ರಾಹುಲ್ ಗಾಂಧಿಯ ರಾಜಕೀಯ ಪ್ರವೇಶದ ವೇಳೆಯೂ ಈ ರೀತಿಯ ಸಂಭ್ರಮಾಚರಣೆ ನಡೆದಿರಲಿಲ್ಲ. ಆದರೆ 35 ವರ್ಷಗಳ ಹಿಂದೆ ಗತಿಸಿ ಹೋಗಿರುವ ಇಂದಿರೆಯ ಹೋಲಿಕೆಗೆ ಭಾರತದ ಇಂದಿನ ಪೀಳಿಗೆ ಮಣೆ ಹಾಕಲಾರದು ಎಂಬುದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳುವುದೇ ?
ಪ್ರಿಯಾಂಕ ಆಗಮನ ಕಾಂಗ್ರೆಸ್ನ ಕುಟುಂಬ ರಾಜಕಾರಣದ ಮುಂದುವರೆದ ಭಾಗವಷ್ಟೇ. ಆ ಪಕ್ಷಕ್ಕೆ ನೆಹರೂ ಕುಟುಂಬವನ್ನು ಬಿಟ್ಟು ಬೇರೆ ಗತಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗುತ್ತಿದೆ. ರಾಹುಲ್ ಗಾಂಧಿಗಿಂತ ಪ್ರಿಯಾಂಕ ಹೆಚ್ಚು ಸಮರ್ಥರು ಎಂಬುದಾಗಿ ಹಿಂದಿನಿಂದಲೂ ಹೇಳುತ್ತಾ ಬರಲಾಗುತ್ತಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿನ ಬಳಿಕ ರಾಹುಲ್ ಬದಲು ಪ್ರಿಯಾಂಕ ಪಕ್ಷವನ್ನು ಮುನ್ನಡೆಸಬೇಕು ಎಂಬ ಕೂಗು ಜೋರಾಗಿಯೇ ಎದ್ದಿತ್ತು. ಆದರೆ ಪುತ್ರ ವ್ಯಾಮೋಹದಿಂದಲೋ ಏನೋ ಸೋನಿಯಾ ಗಾಂಧಿ ಆ ಕೂಗಿಗೆ ಸೊಪ್ಪು ಹಾಕಿರಲಿಲ್ಲ. ಆದರೀಗ ಚುನಾವಣೆ ಸಮೀಪಿಸುತ್ತಿದೆ. ರಾಹುಲ್ ಗಾಂಧಿ ತನ್ನ ಅಪ್ರಬುದ್ಧತೆಯನ್ನು ಹೆಚ್ಚಿನ ಮಟ್ಟದಲ್ಲಿ ಸುಧಾರಣೆ ಮಾಡಿಕೊಂಡಂತೆ ಕಾಣುತ್ತಿಲ್ಲ. ಇತ್ತ ಸೋನಿಯಾ ಗಾಂಧಿ ಆರೋಗ್ಯವೂ ಕೈಕೊಟ್ಟಿದೆ. ಅಮೇಥಿ ಮತ್ತು ರಾಯ್ ಬರೇಲಿಯನ್ನೂ ಉಳಿಸಿಕೊಳ್ಳುವುದು ಅವರಿಗೆ ಕಷ್ಟ ಎಂಬಂತಾಗಿದೆ. ಹೀಗಿರುವಾಗ ಪ್ರಿಯಾಂಕರನ್ನು ಕರೆಸುವುದು ಆ ಪಕ್ಷಕ್ಕೆ ಅನಿವಾರ್ಯವಾಗಿರಬಹುದು.
ಕಾಂಗ್ರೆಸ್ಸಿಗರಂತು ಪ್ರಿಯಾಂಕ ಆಗಮನವನ್ನು ಬಿಜೆಪಿ ಎದುರಿಸಲು ಸಿಕ್ಕಿರುವ ದೊಡ್ಡ ’ಬ್ರಹ್ಮಾಸ್ತ್ರ’ ಎಂದೇ ಭಾವಿಸಿದಂತಿದೆ. ಆದರೆ ತನ್ನ ವಿರುದ್ಧ ಟೀಕಾಪ್ರಹಾರವನ್ನು ಇನ್ನಷ್ಟು ತೀಕ್ಷ್ಣಗೊಳಿಲು ಬಿಜೆಪಿ ಕೈಗೆ ಕಾಂಗ್ರೆಸ್ ಕೊಟ್ಟ ಅತೀದೊಡ್ಡ ಅಸ್ತ್ರವಾಗಿಯೂ ಇದು ಪರಿಣಮಿಸುವ ಸಾಧ್ಯತೆಗಳು ಎದ್ದು ಕಾಣುತ್ತಿವೆ. ಈಗಾಗಲೇ ಕಾಂಗ್ರೆಸ್ನ ಕುಟುಂಬ ರಾಜಕಾರಣದಿಂದ ಬೇಸತ್ತು ಹೋಗಿರುವ ಜನರಿಗೆ ಪ್ರಿಯಾಂಕ ಆಗಮನ ಮತ್ತಷ್ಟು ಬೇಸರವನ್ನು ತರಿಸಿರಬಹುದು. ಪ್ರಿಯಾಂಕ ಮ್ಯಾಜಿಕ್ ಮಾಡುತ್ತಾರೆ ಎಂದು ಭಾವಿಸಿರುವ ಕಾಂಗ್ರೆಸ್ಸಿಗರು ಇದೇ ಕಾರಣದಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕನಸಿನ ಅರಮನೆ ಕಟ್ಟಿಕೊಂಡಿರುವ ಕಾಂಗ್ರೆಸ್ಸಿಗೆ ಪ್ರಿಯಾಂಕ ಆಗಮನ ನನಸಾಗುವುದೋ ಅಥವಾ ಕನಸಾಗಿಯೇ ಉಳಿಯುವುದೋ ಕಾದು ನೋಡಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.