ಎಳೆನೀರಿನಂತಹ ಪ್ರಕೃತಿದತ್ತ, ಆರೋಗ್ಯವರ್ಧಕ ತಂಪು ಪಾನೀಯವನ್ನು ಪ್ಲಾಸ್ಟಿಕ್ನಿಂದ ತಯಾರಿಸಿದ ಸ್ಟ್ರಾದಲ್ಲಿ ಕುಡಿಯುವುದು ಅಷ್ಟು ಸಮಂಜಸವಲ್ಲ. ಹಾಗಾದರೆ ನೇರವಾಗಿ ಬಾಯಿಗೆ ಹಾಕುವುದಕ್ಕೆ ಕಷ್ಟವಾದ ಎಳೆನೀರನ್ನು ಹೇಗೆ ಕುಡಿಯುವುದು? ಇದಕ್ಕೆ ತಮಿಳುನಾಡು ವ್ಯಾಪಾರಿಗಳ ಬಳಿ ವಿನೂತನ ವ್ಯವಸ್ಥೆಯಿದೆ.
ಈಗಾಗಲೇ ತಮಿಳು ನಾಡಿನಾದ್ಯಂತ ಪ್ಲಾಸ್ಟಿಕ್ನ್ನು ನಿಷೇಧಿಸಲಾಗಿದೆ. ಹೀಗಾಗಿ ಸ್ಟ್ರಾಗಳನ್ನು ಬಳಕೆ ಮಾಡುವಂತಿಲ್ಲ. ಇದೇ ಕಾರಣಕ್ಕೆ ಅಲ್ಲಿನ ವ್ಯಾಪಾರಿಗಳು ಪಪ್ಪಾಯ ಎಲೆಯ ಕಾಂಡವನ್ನು ಬಳಕೆ ಮಾಡುತ್ತಿದ್ದಾರೆ. ಈ ಕಾಂಡಗಳು ಪೈಪ್ ರೀತಿಯಲ್ಲಿ ಇದ್ದು, ಸೀಯಾಳವನ್ನು ತುಸು ಅಗಲವಾಗಿ ತೂತು ಮಾಡಿ ಅದರೊಳಗೆ ಇದನ್ನು ಇಳಿಸಿದರೆ ಆರಾಮವಾಗಿ ನೀರನ್ನು ಹೀರಬಹುದಾಗಿದೆ.
ಮರವನ್ಕುಲಂ ಬಸ್ ಸ್ಟ್ಯಾಂಡ್ನಲ್ಲಿ ವ್ಯಾಪಾರಿಯೊಬ್ಬರು ಸೀಯಾಳ ಕುಡಿಯಲು ಗ್ರಾಹಕರಿಗೆ ಪಪ್ಪಾಯ ಕಾಂಡ ನೀಡುವ ದೃಶ್ಯವನ್ನು ತಂಗಮ್ ಪಾಂಡಿಯನ್ ಎಂಬ ಮಧುರೈ ನಿವಾಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವ್ಯಾಪಾರಿಗಳ ಈ ಐಡಿಯಾಗೆ ಎಲ್ಲರೂ ಭೇಷ್ ಅನ್ನುತ್ತಿದ್ದಾರೆ.
ಪಪ್ಪಾಯದ ಎಲೆಯ ಹಿಂದೆ ಇರುವ ಕಾಂಡವನ್ನು ತುಸು ಒಣಗಿಸಿದರೆ, ಅದರಲ್ಲಿ ಹಾಲು ಬರುವುದು ನಿಲ್ಲುತ್ತದೆ ಮತ್ತು ಅದು ಗಟ್ಟಿಯಾಗುತ್ತದೆ. ಸುಲಭದಲ್ಲಿ ಬೆಂಡ್ ಆಗುವುದಿಲ್ಲ. ಪ್ಲಾಸ್ಟಿಕ್ ಸ್ಟ್ರಾಗಿಂತಲೂ ಇದು ಅತ್ಯತ್ತಮ ವಿಧಾನ ಎಂದು ತಂಗಮ್ ಹೇಳುತ್ತಾರೆ. ವ್ಯಾಪಾರಿ ತನ್ನದೇ ತೋಟದಲ್ಲಿ ಬೆಳೆದ ಪಪ್ಪಾಯಿ ಗಿಡದಿಂದ ಮಾಡಿದ ಸ್ಟ್ರಾವನ್ನು ಎಳೆನೀರಿನೊಂದಿಗೆ ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ.
ಪ್ಲಾಸ್ಟಿಕ್ನ ವ್ಯಾಪಕ ಬಳಕೆಯಿಂದಾಗಿ ಜನರು ನೈಸರ್ಗಿಕ ವಿಧಾನಗಳ ಬಗ್ಗೆ ಚಿಂತನೆ ನಡೆಸುವುದನ್ನೇ ಬಿಟ್ಟು ಬಿಟ್ಟಿದ್ದಾರೆ. ಪ್ಲಾಸ್ಟಿಕ್ ವಸ್ತುಗಳಿಗೆ ಪರ್ಯಾಯವಾದ ವಸ್ತುಗಳು ಪ್ರಕೃತಿಯಲ್ಲೇ ಇದೆ. ಆದರೆ ಅದನ್ನು ಹುಡುಕಲು ಒಳಗಣ್ಣು ಬೇಕಾಗಿದೆ. ಉದಾಹರಣೆ ಪ್ಲಾಸ್ಟಿಕ್ ಬಟ್ಟಲಿನ ಬದಲು ಹಾಳೆ ಬಟ್ಟಲು, ಪ್ಲಾಸ್ಟಿಕ್ ಲೋಟ ಬದಲು ಕಾಗದದ ಲೋಟ ಇವೆಲ್ಲವೂ ಮನುಷ್ಯನ ಆರೋಗ್ಯಕ್ಕೆ ಮತ್ತು ಪರಿಸರಕ್ಕೆ ಪ್ರಯೋಜನಕಾರಿಯಾಗಿದೆ.
ತಮಿಳುನಾಡಿನಲ್ಲಿ ಪ್ಲಾಸ್ಟಿಕ್ನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ ಕಾರಣ ಅಲ್ಲಿನ ವ್ಯಾಪಾರಿಗಳು ನೈಸರ್ಗಿಕ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇಡೀ ದೇಶದಲ್ಲೂ ಇದೇ ರೀತಿಯ ಸನ್ನಿವೇಶ ಸೃಷ್ಟಿಯಾದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ.
source: www.thebetterindia.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.