ಹೌದು. ನೂರಿಪ್ಪತ್ತೈದು ಕೋಟಿಗೂ ಹೆಚ್ಚು ಜನಸಂಖ್ಯೆಯ ಈ ದೇಶದ ಮುಂದಿನ ಪ್ರಧಾನಿಯೆಂದೇ ಬಿಂಬಿಸಿಕೊಂಡಿರುವ ಯುವರಾಜ ರಾಹುಲ್ ಗಾಂಧಿಯವರು ತಮ್ಮ ದುಬೈ ಭೇಟಿಯ ವೇಳೆ ಅಲ್ಲಿ ನೆಲೆಸಿರುವ ಭಾರತೀಯರೊಂದಿಗೆ ನಡೆಸಿದ ಸಂವಾದದಲ್ಲಿ ಕೇವಲ ಹದಿನಾಲ್ಕು ವರ್ಷದ ಪುಟ್ಟ ಬಾಲಕಿಯ ಪ್ರಶ್ನೆಗಳನ್ನೆದುರಿಸಲಾಗದೇ ಮೌನಕ್ಕೆ ಶರಣಾಗುವುದರ ಜೊತೆಗೆ ಆ ಮುಜುಗರದಿಂದ ತಪ್ಪಿಸಿಕೊಳ್ಳಲು ಸಂವಾದ ಕಾರ್ಯಕ್ರಮದ ನೇರ ಪ್ರಸಾರವನ್ನೇ ಕೆಲ ಕಾಲ ಸ್ಥಗಿತಗೊಳಿಸಿದ ಘಟನೆಯ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.
ಯಾರಾದರೂ ಪ್ರಶ್ನೆ ಕೇಳುವವರಿದ್ದರೆ ಕೇಳಬಹುದು ಎನ್ನುವ ಸೂಚನೆ ಹೊರಡುತ್ತಿದ್ದಂತೆಯೇ ಹದಿನಾಲ್ಕರ ವಯಸ್ಸಿನ ಪುಟ್ಟ ಬಾಲಕಿಯೊಬ್ಬಳು ಕೈ ಎತ್ತಿದ್ದಳು. ಮಕ್ಕಳಿಗಾದರೆ ಉತ್ತರಿಸುವುದು ಸುಲಭ ಎನ್ನುವ ಕಾರಣಕ್ಕೋ ಏನೋ, ರಾಹುಲ್ ಗಾಂಧಿಯವರು ಆ ಬಾಲಕಿಯ ಕೈಗೆ ಮೈಕ್ ಕೊಡುವಂತೆ ತಮ್ಮವರಿಗೆ ಸೂಚಿಸಿದರು. ತನ್ನ ಕೈಗೆ ಮೈಕ್ ತೆಗೆದುಕೊಂಡ ಆ ಪುಟ್ಟ ಬಾಲಕಿ ಕೇಳಿದ್ದು ಮಾತ್ರ ದೊಡ್ಡ ಪ್ರಶ್ನೆಗಳನ್ನೇ!
“ಭಾರತವು ಜಾತಿವಾದಿಗಳ ರಾಷ್ಟ್ರವಾಗಿದೆ ಎಂದು ಆರೋಪಿಸುವ ನೀವೇ ಚುನಾವಣೆಯ ಸಮಯದಲ್ಲಿ ದೇವಾಲಯಗಳಿಗೆ ಭೇಟಿ ಕೊಡುವುದೇಕೆ?” ಎನ್ನುವುದು ಆ ಬಾಲಕಿಯ ಮೊದಲ ಪ್ರಶ್ನೆಯಾಗಿತ್ತು. ಕ್ಷಣ ಕಾಲ ತಡವರಿಸಿದ ರಾಹುಲ್ ಗಾಂಧಿಯವರು ಸಾವರಿಸಿಕೊಂಡು ತಮ್ಮ ಆ ಕ್ರಮವನ್ನು ಜಾತ್ಯತೀತತೆ ಎಂದು ಸಮರ್ಥಿಸಿಕೊಳ್ಳುತ್ತಿರುವಂತೆಯೇ ಆ ಬಾಲಕಿಯಿಂದ ಮತ್ತೊಂದು ಪ್ರಶ್ನೆ ಬಾಣದಂತೆ ತೂರಿಬಂತು. ಸ್ವಾತಂತ್ರ್ಯಾನಂತರದಲ್ಲಿ ಭಾರತವನ್ನು ಅತೀ ಹೆಚ್ಚು ವರ್ಷಗಳ ಕಾಲ ಆಳಿದ್ದು ನಾವೇ ಎಂದು ಹೇಳಿಕೊಳ್ಳುವ ನಿಮ್ಮ ಕಾಂಗ್ರೆಸ್ ಪಕ್ಷ ಭಾರತದ ಅಭಿವೃದ್ಧಿಯನ್ನೇಕೆ ಕಡೆಗಣಿಸಿದೆ? ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳಲ್ಲಿ ನಿಮ್ಮ ಪಕ್ಷ ಯಾವ ಬದಲಾವಣೆಗಳನ್ನು ತಂದಿದೆ? ಇದುವರೆಗೂ ಸಾಧಿಸಲಾಗದೇ ಇರುವುದನ್ನು ಈಗ ಸಾಧಿಸಲು ಸಾಧ್ಯವೇ? ಎನ್ನುವಂತಹಾ ಪ್ರಶ್ನೆಗಳನ್ನು ಆ ಬಾಲಕಿ ಕೇಳತೊಡಗಿದಳು.
ಬಾಲಕಿಯ ಆ ಪ್ರಶ್ನೆಗಳನ್ನು ಎದುರಿಸಲಾಗದ ರಾಹುಲ್ ಗಾಂಧಿಯವರು ಕಿರುನಗೆಯೊಂದಿಗೆ ಮೌನಕ್ಕೆ ಶರಣಾದರು. ಸೂಕ್ಷ್ಮವನ್ನರಿತ ರಾಹುಲ್ ಗಾಂಧಿಯವರ ತಂಡ ಕೂಡಲೇ ಆ ಕಾರ್ಯಕ್ರಮದ ನೇರ ಪ್ರಸಾರವನ್ನೇ ತಡೆ ಹಿಡಿಯಿತು. ಆ ಮೂಲಕ ಮುಂದಿನ ಪ್ರಧಾನಿ ಎಂದೇ ಬಿಂಬಿಸಲ್ಪಟ್ಟಿರುವ ರಾಹುಲ್ ಗಾಂಧಿಯವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎದುರಾಗಬಹುದಾಗಿದ್ದ ಭಾರೀ ಮುಖಭಂಗವೊಂದು ತಪ್ಪಿದಂತಾಯಿತು ಎನ್ನುವುದು ವಿವಿಧ ಮಾಧ್ಯಮಗಳ ಮಾಹಿತಿ.
ಆದರೆ ಮಾಧ್ಯಮಗಳು ನೀಡಿದ ಈ ಸುದ್ದಿ ಸುಳ್ಳು ಎನ್ನುವ ಮಾಹಿತಿಗಳೂ ಇದೀಗ ಲಭ್ಯವಾಗುತ್ತಿದ್ದು, ಒಂದು ವೇಳೆ ಇದೊಂದು ಸುಳ್ಳು ಸುದ್ದಿಯೇ ಆಗಿದ್ದರೂ ಮಾನ್ಯ ರಾಹುಲ್ ಗಾಂಧಿಯವರ ಕಾಂಗ್ರೆಸ್ ಪಕ್ಷವೇ ಇಂತಹಾ ಸುಳ್ಳು ಸುದ್ದಿಗಳನ್ನು ಹರಡಲು ಪ್ರಮುಖ ಕಾರಣವಾಗಿದೆ ಎನ್ನುವುದನ್ನಂತೂ ನಾವು ಅಲ್ಲಗಳೆಯುವಂತಿಲ್ಲ. ಕಳೆದ ಏಪ್ರಿಲ್ ನಲ್ಲಿ, ಮಾಧ್ಯಮಗಳು ಹರಡುವ ಸುಳ್ಳು ಸುದ್ದಿ ಪರಿಶೀಲಿಸಲು ಹಾಗೂ ಸುಳ್ಳು ಸುದ್ದಿ ಬರೆದಿದ್ದು ಅಥವಾ ಪ್ರಕಟಿಸಿದ್ದು ಸಾಬೀತಾದರೆ ಸೀಮಿತ ಅವಧಿಗೆ ಅಥವಾ ಖಾಯಂ ಆಗಿ ಪತ್ರಕರ್ತರ ಮಾನ್ಯತೆ ರದ್ದುಪಡಿಸುವ ಹೊಸ ನಿಯಮ ತರುವ ಬಗ್ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಆಸ್ಥೆಯ ಮೇರೆಗೆ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿತ್ತು. ಆದರೆ ಆ ಕ್ರಮವನ್ನು ಇತರ ಪಕ್ಷಗಳ ಹಾಗೂ ಕೆಲ ಪತ್ರಕರ್ತರುಗಳ ಜೊತೆ ಸೇರಿ “ಇದೊಂದು ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ” ಎಂದು ಟೀಕಿಸಿದ್ದ ರಾಹುಲ್ ಗಾಂಧಿಯವರ ಕಾಂಗ್ರೆಸ್ ಪಕ್ಷ ಆ ಕ್ರಮವನ್ನು ತೀವ್ರವಾಗಿ ಖಂಡಿಸಿತ್ತು. “ಯಾವ ಸುದ್ದಿ ನಕಲಿ ಎಂದು ನಿರ್ಧರಿಸುವುದು ಕೂಡ ವಿವಾದವಾಗುತ್ತದೆ. ಹೊಸ ನಿಯಮಗಳು ದುರುಪಯೋಗಕ್ಕೆ ಸಾಕಷ್ಟು ಅವಕಾಶ ನೀಡುತ್ತವೆ” ಎಂದು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಟ್ವೀಟ್ ಮೂಲಕ ಪ್ರಶ್ನಿಸಿದ್ದರು. ಸುಳ್ಳು ಸುದ್ದಿ ನಿಯಂತ್ರಿಸುವ ತಮ್ಮ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಿಗೇ ಎಚ್ಚೆತ್ತ ಪ್ರಧಾನಮಂತ್ರಿ ಕಾರ್ಯಾಲಯ ಒಂದೇ ದಿನದಲ್ಲಿ ಆ ಹೊಸ ನಿಯಮವನ್ನು ಹಿಂದಕ್ಕೆ ಪಡೆಯುವಂತೆ ನಿರ್ದೇಶನ ನೀಡಿತು. ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಆ ತಕ್ಷಣವೇ ಹೊಸ ನಿಯಮವನ್ನು ಹಿಂದಕ್ಕೆ ಪಡೆದಿತ್ತು.
ಇದೀಗ ಸುಳ್ಳು ಸುದ್ದಿ ಹರಡುವುದನ್ನು ತಡೆಯಲು ಮುಂದಾಗಿದ್ದ ಕೇಂದ್ರ ಸರ್ಕಾರದ ಕ್ರಮವನ್ನು ತನ್ನ ಅನುಕೂಲಕ್ಕಾಗಿ ವಿರೋಧಿಸಿದ್ದ ಕಾಂಗ್ರೆಸ್ ತಾನೇ ಹೆಣೆದ ಬಲೆಯಲ್ಲಿ ಬಿದ್ದು ಒದ್ದಾಡುವಂತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.