ಶಬರಿಮಲೆ ರಕ್ಷಣೆಗಾಗಿ ನಡೆಯುತ್ತಿರುವ ಚಳುವಳಿಯ ಬಗ್ಗೆ ಬೇಕಾಬಿಟ್ಟಿ ಸುಳ್ಳುಗಳನ್ನು, ವದಂತಿಗಳನ್ನು ಹರಡುವುದನ್ನು ಕೇರಳ ಮುಖ್ಯಮಂತ್ರಿ ಮತ್ತು ಇತರ ಸಿಪಿಎಂ ಸಚಿವರುಗಳು ನಿಲ್ಲಿಸಬೇಕು ಎಂದು ಶಬರಿಮಲೆ ಕರ್ಮ ಸಮಿತಿಯ ಮುಖ್ಯಸ್ಥ ಸ್ವಾಮಿ ಚಿದಾನಂದಪುರಿ ಹೇಳಿದ್ದಾರೆ. ಆಲ್ ಇಂಡಿಯಾ ಶಬರಿಮಲ ಆ್ಯಕ್ಷನ್ ಕೌನ್ಸಿಲ್ ಜ. 8 ರಂದು ಆಯೋಜನೆಗೊಳಿಸಿದ್ದ ಪತ್ರಿಕಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇರಳದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಅನುಷ್ಠಾನಕ್ಕೆ ತರುವ ನೆಪದಲ್ಲಿ ಅಯ್ಯಪ್ಪ ಭಕ್ತರ ಮೇಲೆ ಸರ್ಕಾರಿ ಆಯೋಜಿತ ದೌರ್ಜನ್ಯಗಳನ್ನು ನಡೆಸಲಾಗುತ್ತಿದೆ, ದೇವಾಲಯದ ಪಾವಿತ್ರ್ಯತೆ ಹಾಳು ಮಾಡುವ ಹುನ್ನಾರ ನಡೆಯುತ್ತಿದೆ ಎಂದಿದ್ದಾರೆ.
ಕೇರಳ ಸಿಎಂ ಪಿನರಾಯಿ ವಿಜಯನ್ ಅವರು, ಸತ್ಯವನ್ನು ಮರೆಮಾಚುವ ಮತ್ತು ತಮ್ಮ ಪಕ್ಷದವರನ್ನು ರಕ್ಷಿಸುವ ಸಲುವಾಗಿ ಸುಳ್ಳುಗಳನ್ನು ಹೆಣೆಯುತ್ತಿದ್ದಾರೆ. ಅಯ್ಯಪ್ಪ ಭಕ್ತ ಚಂದ್ರನ್ ಉನ್ನಿತಾನ್ ಅವರ ಮೇಲೆ ಅಮಾನವೀಯವಾಗಿ ಕಲ್ಲೆಸೆದು ಕೊಲೆ ಮಾಡಲಾಯಿತು, ಆದರೆ ಪಿನರಾಯಿ ಅವರು ಮಾಧ್ಯಮಗಳ ಮುಂದೆ ಅವರು ಹೃದಯಾಘಾತದಿಂದ ಸತ್ತಿದ್ದಾರೆ ಎಂದಿದ್ದಾರೆ. ಮರಣೋತ್ತರ ಪರೀಕ್ಷೆಗೂ ಮುನ್ನವೇ ತಮ್ಮ ಹೇಳಿಕೆ ಪತ್ರಿಕೆಗಳಲ್ಲಿ ಮುದ್ರಣವಾಗುವಂತೆ ಮಾಡಿದ್ದಾರೆ ಎಂದು ಸ್ವಾಮೀಜಿ ಆರೋಪಿಸಿದ್ದಾರೆ. ಶ್ರೀಲಂಕಾದ ಯುವತಿ ಶಬರಿಮಲೆ ಪ್ರವೇಶಿಸಿದ್ದಾಳೆ ಎಂದೂ ಸುಳ್ಳು ಹೇಳಿದ್ದಾರೆ. ನೋವಿಗೆ ಅವಮಾನವನ್ನೂ ಬೆರೆಸುವ ಮೂಲಕ ಪಿನರಾಯಿ ಅವರು ಅಯ್ಯಪ್ಪ ಭಕ್ತರು ಮತ್ತೊಂದು ಸುತ್ತಿನ ಹೋರಾಟಕ್ಕೆ ಇಳಿಯುವಂತೆ ಪ್ರೇರೇಪಿಸಿದ್ದಾರೆ. ಅವರದ್ದೇ ಸಂಪುಟದ ಮತ್ತೊಬ್ಬ ಸಚಿವ ಜಿ. ಸುಧಾಕರನ್ ಶಬರಿಮಲೆ ತಂತ್ರಿ ಮತ್ತು ಇತರ ಅರ್ಚಕರ ಬಗ್ಗೆ ಅವಮಾನಕಾರಿಯಾದ ಹೇಳಿಕೆಯನ್ನು ನೀಡಿದ್ದಾರೆ. ಕೇರಳದಲ್ಲಿ ಹಿಂದೂಗಳನ್ನು ಕೆಣಕುವುದರಿಂದ ಸವಾಲೆಸೆಯುವುದರಿಂದ ಪಿನರಾಯಿ ಮತ್ತು ಸಿಪಿಎಂ ನಾಯಕರುಗಳು ದೂರವಿರಬೇಕು ಎಂದು ಸ್ವಾಮಿ ಚಿದಾನಂದ ಪುರಿ ಅವರು ಎಚ್ಚರಿಕೆಯನ್ನು ನೀಡಿದ್ದಾರೆ.
2018 ರ ಸೆಪ್ಟಂಬರ್ 28 ರ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಶಬರಿಮಲೆಗೆ 10-50ರ ನಡುವಣ ವಯಸ್ಸಿನ ಯಾವುದೇ ಮಹಿಳೆಯರು ಪ್ರವೇಶಿಸಲು ಯತ್ನಿಸಿಲ್ಲ. ದೇಗುಲಕ್ಕೆ ಭಕ್ತರಾಗಿ ಹೋದಾಗ ಪ್ರತಿಯೊಬ್ಬರೂ ಕಟ್ಟು-ಕಟ್ಟಲೆಗಳನ್ನು ಪಾಲಿಸಬೇಕು. ಶಬರಿಮಲೆಯಲ್ಲಿ ಅಯ್ಯಪ್ಪನೇ ಕೆಲವೊಂದು ನಿಯಮಗಳನ್ನು ವಿಧಿಸಿದ್ದಾನೆ. ಅದಕ್ಕೆ ಭಕ್ತರು ಬದ್ಧರಾಗಿರಬೇಕು ಎಂದಿದ್ದಾರೆ.
ಶಬರಿಮಲೆ ವಿಷಯದಲ್ಲಿ ಮಾಧ್ಯಮಗಳು ಸತ್ಯವನ್ನು ಅರಿತುಕೊಳ್ಳಬೇಕು. ಶಬರಿಮಲೆ ಹೋರಾಟ ಮಹಿಳೆಯರ ಅಥವಾ ಮಹಿಳಾ ಹಕ್ಕುಗಳ ವಿರುದ್ಧವಲ್ಲ. ದೇಗುಲದ ವಿಭಿನ್ನ ಸಂಪ್ರದಾಯವನ್ನು ರಕ್ಷಿಸುವುದು ಮಾತ್ರ ಚಳುವಳಿಯ ಉದ್ದೇಶ. ಪಯ್ಯನೂರು ಸುಬ್ರಹ್ಮಣ್ಯ ಸ್ವಾಮಿ ದೇಗುಲದ ಉದಾಹರಣೆಯನ್ನು ನೀಡಿದ ಅವರು, ಅಲ್ಲಿ ಸನ್ಯಾಸಿಗಳಿಗೆ ದೇಗುಲ ಪ್ರವೇಶಿಸುವ ಅವಕಾಶವಿಲ್ಲ. ಅದು ಅಲ್ಲಿನ ಪದ್ಧತಿಯಾಗಿದೆ, ಮನ್ನರಸಾಲ ದೇಗುಲದ ಮುಖ್ಯ ಅರ್ಚಕರು ಮಹಿಳೆಯಾಗಿದ್ದಾರೆ. ಚೆಂಗನೂರಿನಲ್ಲಿ ಹಿಂದೂಗಳು ಪಾರ್ವತಿ ದೇವಿಯ ಋತುಸ್ರಾವದ ಹಬ್ಬವನ್ನು ಆಚರಿಸುತ್ತಾರೆ. ಕೇವಲ ಮಹಿಳೆಯರು ಅಟ್ಟುಕಲ್ ಪೊಂಕಲ ಆಚರಿಸುತ್ತಾರೆ. ಈ ವೇಳೆ ಅಲ್ಲಿಗೆ ಪುರುಷರಿಗೆ ಪ್ರವೇಶವಿಲ್ಲ. ಇಂತಹ ಪದ್ಧತಿಯನ್ನು ಪುರುಷರ ಹಕ್ಕುಗಳ ನಿರ್ಬಂಧ ಎಂದು ಪರಿಗಣಿಸುವಂತಿಲ್ಲ. ಇದೇ ರೀತಿಯಲ್ಲೇ ಶಬರಿಮಲೆಯನ್ನು ನೋಡಬೇಕು. ಅನಾದಿ ಕಾಲದಿಂದಲೂ ಹಿಂದೂಗಳು ಇಂತಹ ಪದ್ಧತಿಯನ್ನು ಆಚರಿಸುತ್ತಿದ್ದಾರೆ. ಅವುಗಳನ್ನು ಕೊಲ್ಲುವ ಕಾರ್ಯ ನಡೆಯಬಾರದು ಎಂದಿದ್ದಾರೆ.
’ದೇಶದಲ್ಲಿರುವ ಸಾವಿರಾರು ಮಸೀದಿಗಳಿಗೆ ಪ್ರವೇಶಿಸುವ ಹಕ್ಕು ಮುಸ್ಲಿಂ ಮಹಿಳೆಯರಿಗಿಲ್ಲ. ಆ ನಂಬಿಕೆಯನ್ನು ನಾವು ಪ್ರಶ್ನಿಸುವಂತಿಲ್ಲ. ಆದರೆ ಶಬರಿಮಲೆಯ ಪದ್ಧತಿ ನಿಯಮದ ಬಗ್ಗೆ ಕೂಗಾಡುವವರು ಈ ವಿಷಯದಲ್ಲಿ ಮಹಿಳಾ ಹಕ್ಕುಗಳ ಬಗ್ಗೆ ಮಾತನಾಡುವುದಿಲ್ಲ’ ಎಂದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಆಲ್ ಇಂಡಿಯಾ ಶಬರಿಮಲ ಆ್ಯಕ್ಷನ್ ಕೌನ್ಸಿಲ್ ಅಧ್ಯಕ್ಷ ನ್ಯಾ. ಎನ್ ಕುಮಾರ್ ಅವರು, ಕೇರಳದ ನಾಸ್ತಿಕ ಸರ್ಕಾರ ರಾಜ್ಯದ ಜನರ ಭಾವನೆಗಳನ್ನು ನೋಯಿಸುತ್ತಿದೆ. ಶಬರಿಮಲೆ ವಿಷಯವನ್ನು ಅಸ್ಪೃಶ್ಯತೆ ಮತ್ತು ಸ್ತ್ರೀ ದ್ವೇಷಕ್ಕೆ ಹೋಲಿಸಿ ಚರ್ಚೆಯ ದಿಕ್ಕನ್ನೇ ಬದಲಾಯಿಸುತ್ತಿದೆ. ಶಬರಿಮಲೆ ವಿಷಯ ಸಾಮಾಜಿಕ ವಿಷಯ ಅಲ್ಲ ಎಂದಿದ್ದಾರೆ.
ಪಿನರಾಯಿ ಸರ್ಕಾರ ತೆಗೆದುಕೊಂಡ ವಿವಿಧ ಕ್ರಮಗಳಿಂದಾಗಿ ಕೇರಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಶಬರಿಮಲೆ ವಿವಾದದ ಆರಂಭದಿಂದಲೂ ಮಾರ್ಕ್ಸಿಸ್ಟ್ ಪಕ್ಷ ಮತ್ತು ಸಿಎಂ ವಿಷಯವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಶಬರಿಮಲೆ ಕರ್ಮ ಸಮಿತಿ ಪ್ರಕಟನೆಯಲ್ಲಿ ಹೇಳಿದೆ.
‘ಹಿಂದೂ ಪದ್ಧತಿ, ದೇಗುಲ ಮತ್ತು ಧಾರ್ಮಿಕ ಸಂಸ್ಥೆಗಳನ್ನು ಅಸ್ಥಿರಗೊಳಿಸುವುದು, ಹಿಂದೂಗಳ ನೈತಿಕ ಸ್ಥೈರ್ಯ ಕುಗ್ಗಿಸುವುದು, ಹಿಂದೂಗಳನ್ನು ವಿಭಜಿಸವುದು ಕೇರಳ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ರಾಜಕೀಯ ಬೆಂಬಲವನ್ನು ಪಡೆಯಲು ಅಲ್ಪಸಂಖ್ಯಾತ ಸಮುದಾಯವನ್ನು ಓಲೈಸಿಕೊಳ್ಳುವ ದುರುದ್ದೇಶವೂ ಇದೆ. ಈಗಾಗಲೇ ಮುಸ್ಲಿಂ ಮೂಲಭೂತವಾದಿಗಳ ನೆಲೆಯಾಗಿ ಪರಿವರ್ತನೆಗೊಳ್ಳುತ್ತಿರುವ ಕೇರಳದಲ್ಲಿ ಮೂಲಭೂತವಾದಿಗಳ ಬಗ್ಗೆ ಸರ್ಕಾರ ಮೃದು ಧೋರಣೆ ತೋರಿಸುತ್ತಿದೆ. ಕೇರಳಕ್ಕೆ ಐಎಸ್ ಉಗ್ರರ ಸಂಪರ್ಕ ಇದೆ, ಇಲ್ಲಿಂದಲೇ ಬೃಹತ್ ನೇಮಕಾತಿಯನ್ನು ಅದು ನಡೆಸುತ್ತಿದೆ. ಈ ರಾಜಕೀಯ ಓಲೈಕೆಯನ್ನು ಗಮನಿಸಿದರೆ ಎಡ ಪಕ್ಷ ಹಿಂದೂಗಳ ನೈತಿಕ ಸ್ಥೈರ್ಯ ಕುಗ್ಗಿಸುವ ಕಾರ್ಯ ಮಾಡುತ್ತಿರುವುದು ಸ್ಪಷ್ಟವಾಗಿದೆ ಎಂದಿದೆ.
ಶಬರಿಮಲೆ ಬಗ್ಗೆ ನೀಡಿರುವ ತೀರ್ಪನ್ನು ಜ. 22 ರಂದು ಮರು ಪರಿಶೀಲನೆ ನಡೆಸಲು ಸುಪ್ರೀಂ ಒಪ್ಪಿಕೊಂಡಿದ್ದರೂ ಕೇರಳ ಸರ್ಕಾರ ಮಾತ್ರ ಹಿಂದಿನ ತೀರ್ಪನ್ನು ಪಾಲಿಸಲು ತುದಿಗಾಲಲ್ಲಿ ನಿಂತಿದೆ. ದೇಗುಲಕ್ಕೆ ಪ್ರವೇಶಿಸಲು ಬಯಸುತ್ತಿರುವವರು ಭಕ್ತರೋ ಅಲ್ಲವೋ ಎಂಬುದನ್ನೂ ಯೋಚಿಸದೆ ಒಳಗೆ ಬಿಡುತ್ತಿದೆ. ಪೊಲೀಸರ ಸಹಾಯದಿಂದ ಶಬರಿಮಲೆಗೆ ಪ್ರವೇಶಿಸಲು ಯತ್ನಿಸಿದ ಯುವತಿಯರು ಒಂದಾ ನಾಸ್ತಿಕರು ಅಥವಾ ಉಗ್ರವಾದಿಗಳು ಆಗಿರಬೇಕು ಎಂದಿದೆ.
ಕೇಂದ್ರ ಸರ್ಕಾರ ಶಬರಿಮಲೆ ವಿವಾದ ಬಗ್ಗೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು. ಶಬರಿಮಲೆ ಭಕ್ತರ ಹಕ್ಕುಗಳನ್ನು ಕಾಪಾಡಬೇಕು, ಕೇರಳದ ಪೊಲೀಸ್ ರಾಜ್ಗೆ ಇತಿಶ್ರೀ ಹಾಡಬೇಕು ಎಂದು ಶಬರಿಮಲ ಕರ್ಮ ಸಮಿತಿ ಬೇಡಿಕೆ ಇಟ್ಟಿದೆ. ಕಮ್ಯೂನಿಸ್ಟ್ ಪಕ್ಷ, ಅದರಲ್ಲೂ ಸಿಎಂ ಪಿನರಾಯಿ ಮತ್ತು ಮುಸ್ಲಿಂ ಮೂಲಭೂತವಾದಿಗಳ ನಡುವಣ ಸಂಪರ್ಕದ ಬಗ್ಗೆ ರಾಷ್ಟ್ರೀಯ ತನಿಖಾ ತಂಡದಿಂದ ಸೂಕ್ತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದೆ. ಪಿನರಾಯಿ ಅವರು ತಕ್ಷಣ ರಾಜೀನಾಮೆ ಸಲ್ಲಿಸಿ, ಕಾನೂನು ಸುವ್ಯವಸ್ಥೆ ಹಾಳು ಮಾಡಿದ್ದಕ್ಕೆ ಮತ್ತು ಹಿಂದೂಗಳ ಭಾವನೆ ಕೆರಳಿಸಿದ್ದಕ್ಕೆ ಕ್ಷಮೆಯಾಚನೆ ಮಾಡಬೇಕು ಎಂದಿದೆ.
ಅಲ್ಲದೇ ಕರ್ಮ ಸಮಿತಿ ಆಯೋಜನೆಗೊಳಿಸಿದ್ದ ಹರತಾಳ ದಿನದಂದು ನಡೆದ ಹಿಂಸಾಚಾರಗಳ ಬಗ್ಗೆಯೂ ಸೂಕ್ತ ತನಿಖೆಗಳು ನಡೆಯಬೇಕು ಎಂದು ಸಮಿತಿ ಆಗ್ರಹಿಸಿದೆ. ಸಿಪಿಎಂ ಮತ್ತು ಇಸ್ಲಾಮಿಕ್ ಮೂಲಭೂತವಾದಿಗಳು ಜಂಟಿಯಾಗಿ ಹರತಾಳ ದಿನದಂದು ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿದ್ದಾರೆ, ಗೊಂದಲ ಸೃಷ್ಟಿಸಿದ್ದಾರೆ ಎಂದಿದೆ. ಶಬರಿಮಲೆ ಸಂಪ್ರದಾಯದ ಬಗ್ಗೆ ಸೆಮಿನಾರ್, ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಅದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.