×
Home About Us Advertise With s Contact Us

ಮುಸ್ಲಿಮ್-ದಲಿತ ಏಕತೆಗೆ ಕರೆ: ಅಸಂಭವ ನಿರೀಕ್ಷೆ?

ಇತ್ತೀಚಿನ ದಿನಗಳಲ್ಲಿ ಮುಸ್ಲಿಮ್-ದಲಿತ ಏಕತೆಗೆ ದೊಡ್ಡ ಮಟ್ಟದಲ್ಲಿ ಕರೆಗಳನ್ನು ನೀಡಲಾಗುತ್ತಿದೆ. ಅದು ಕೂಡ, ಅಖಿಲ ಭಾರತ ಮಜ್ಲಿಸ್-ಇ-ಇಥೆಹಾದುಲ್-ಮುಸಲ್ಮೀನ್ ಪಕ್ಷದ ಅಸಾವುದ್ದೀನ್ ಓವೈಸಿಯಂತ ನಾಯಕರಿಂದಲೇ ಇಂತಹ ಕರೆಗಳು ಹೆಚ್ಚು ಕೇಳಿ ಬರುತ್ತಿದೆ. ಹಿಂದೆ ಕೂಡ ಮುಸ್ಲಿಮ್-ದಲಿತ ಎಂಬ ಎರಡು ಸಮುದಾಯಗಳನ್ನು ಒಟ್ಟುಗೂಡಿಸುವ ಪ್ರಯತ್ನವನ್ನು ಮಾಡಲಾಗಿದೆಯೇ, ಮಾಡಿದ್ದರೆ ಅದು ಹೇಗೆ ಕಾರ್ಯಗತಗೊಂಡಿತು ಎಂಬುದನ್ನು ತಿಳಿದುಕೊಳ್ಳುವುದು ಈ ಸಂದರ್ಭದಲ್ಲಿ ಒಳ್ಳೆಯದು.

ಜೋಗೇಂದ್ರ ನಾಥ್ ಮಂಡಲ್

ಪೂರ್ವ ಬಂಗಾಳದ ಅತೀದೊಡ್ಡ ದಲಿತ ನಾಯಕರಾಗಿದ್ದ ಜೋಗೇಂದ್ರ ನಾಥ್ ಮಂಡಲ್ ಅವರಿಗೆ ಏನಾಯಿತು ಎಂಬುದನ್ನು ತಿಳಿದುಕೊಳ್ಳಲು ಯಾರೂ ದೂರ ಸಾಗಬೇಕಾಗಿಲ್ಲ ಅಥವಾ ಆಳಕ್ಕೆ ಇಳಿಯಬೇಕಾಗಿಲ್ಲ.

ಮೇಲ್ಜಾತಿಯ ಹಿಂದೂಗಳ ದಬ್ಬಾಳಿಕೆಯಿಂದ ದಲಿತರನ್ನು ಪಾರುಮಾಡಲು ಪಾಕಿಸ್ಥಾನವನ್ನು ಸೇರುವುದು ಉತ್ತಮ ಎಂದು ಭಾವಿಸಿದ್ದ ಅವರು, ಪೂರ್ವ ಪಾಕಿಸ್ಥಾನದ ರಚನೆಗೆ ಬೆಂಬಲ ನೀಡುವಂತೆ ದಲಿತರನ್ನು ಉತ್ತೇಜಿಸಿದ್ದರು. ಮುಂಬಯಿಯಲ್ಲಿ ಸೋತಿದ್ದ ಅಂಬೇಡ್ಕರ್ ಅವರನ್ನು ಸಂವಿಧಾನ ಸಭೆಯಲ್ಲಿ ಸೇರುವಂತೆ ಮಾಡಿದ್ದು ಮಂಡಲ್, ಇದರಿಂದಲೇ ಅವರ ಪ್ರಭಾವ ಎಷ್ಟಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಬಹುದಾಗಿದೆ.

ಇದಲ್ಲದೆ, ಅಸ್ಸಾಂನ ಆ ಸಿಲ್ಹೇತ್ ಜಿಲ್ಲೆಯಲ್ಲಿ ಪಾಕಿಸ್ತಾನಕ್ಕೆ ಮತ ಹಾಕುವಂತೆ ಮತದಾರರಿಗೆ ಪ್ರಭಾವವವನ್ನು ಇವರು ಬೀರಿದ್ದರು. ಭಾರತದಲ್ಲಿನ ತನ್ನ ಸ್ನೇಹಿತ ಡಾ.ಅಂಬೇಡ್ಕರ್ ಅವರಂತೆ, ಲಿಯಾಖತ್ ಅಲಿ ಖಾನ್ ಅವರ ಸಂಪುಟದಲ್ಲಿ ಪಾಕಿಸ್ತಾನದ ಮೊದಲ ಕಾನೂನು ಸಚಿವ ಆಗಿ ಮಂಡಲ್ ನೇಮಕಗೊಂಡರು.

ಆದರೆ, 1950 ರಲ್ಲಿ, ಮಂಡಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಭಾರತಕ್ಕೆ ವಲಸೆ ಬಂದರು. ತನ್ನ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತಿದೆ ಮತ್ತು ತನ್ನ ಸಮುದಾಯದ ಸಹೋದರರಿಗೆ ಮುಸ್ಲಿಮರು ಕಿರುಕುಳ ನೀಡುತ್ತಿದ್ದಾರೆ ಎಂದು ಅವರಿಗನಿಸಿತ್ತು. ತಾನು ಅಂದುಕೊಂಡಿದ್ದ ಪಾಕಿಸ್ಥಾನ ಎಂಬ “ಶುದ್ಧ ಭೂಮಿ” ಯಲ್ಲಿ ಕರುಣೆಯೆಂಬುದು ಉಳಿದಿಲ್ಲ ಎಂದು ಅವರಿಗಾಗ ಅರಿವಾಗಿತ್ತು.

1950 ರ ಅಕ್ಟೋಬರ್ 8 ರಂದು ಮಂಡಲ್ ಅವರು ಖಾನ್ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ, “ಢಾಕಾ ಮತ್ತು ಪೂರ್ವ ಬಂಗಾಳದ ದಂಗೆಯಲ್ಲಿ ಸಂಭವಿಸಿದ ಸಾವುಗಳು 10,000 ಸಾವಿರ ಎಂದು ಅಂದಾಜಿಸಲಾಗಿದೆ. ಇದರಿಂದ ನಾನು ತೀವ್ರ ದುಃಖತಪ್ತನಾಗಿದ್ದೇನೆ. ಹತ್ತಿರದವರು, ಆತ್ಮೀಯರು ಎಲ್ಲರನ್ನೂ ಕಳೆದುಕೊಂಡಿರುವ ಮಹಿಳೆಯರ ಮತ್ತು ಮಕ್ಕಳ ಆಕ್ರಂದನ ನನ್ನ ಹೃದಯವನ್ನು ಕರಗಿಸಿದೆ. ಇಸ್ಲಾಂ ಹೆಸರಿನಲ್ಲಿ ಪಾಕಿಸ್ಥಾನಕ್ಕೆ ಏನು ಪ್ರವೇಶಿಸುತ್ತಿದೆ ಎಂಬ ಪ್ರಶ್ನೆಯನ್ನು ನಾನು ನನ್ನೊಳಗೆ ಕೇಳಿಕೊಳ್ಳುತ್ತಿದ್ದೇನೆ’ ಎಂದು ಬರೆದಿದ್ದರು.

ಮುಸ್ಲಿಂ ಲೀಗ್‌ನ ’ಡೈರೆಕ್ಟ್ ಆಕ್ಷನ್ ಡೇ’(1946ರ ಆಗಸ್ಟ್ 16, ಅಂದಿನ ಕಲ್ಕತ್ತಾದಲ್ಲಿ)ಯನ್ನು ಸ್ಮರಿಸಿಕೊಂಡು ಮಂಡಲ್ ಪತ್ರದಲ್ಲಿ ಹೀಗೆಂದು ಬರೆದಿದ್ದಾರೆ: “ನಾನು ಫೆಡರೇಷನ್ ಟಿಕೆಟ್‌ನಿಂದ ಮರಳಿದ ಏಕೈಕ ಪರಿಶಿಷ್ಟ ಜಾತಿ ಸದಸ್ಯ. ನನ್ನನ್ನು ಶ್ರೀ (ಎಚ್‌ಎಸ್) ಸುಹ್ರಾವಾರ್ಡ್ಡಿಯ ಕ್ಯಾಬಿನೆಟ್‌ಗೆ ಸೇರ್ಪಡೆಗೊಳಿಸಲಾಗಿತ್ತು. ಆ ವರ್ಷದ ಆಗಸ್ಟ್ 16 ರಂದು ಮುಸ್ಲಿಂ ಲೀಗ್ ’ದಿ ಡೈರೆಕ್ಟ್ ಆಕ್ಷನ್ ಡೇ’ ಅನ್ನು ಕಲ್ಕತ್ತಾದಲ್ಲಿ ಆಚರಿಸಿತು. ನಿಮಗೆ ತಿಳಿದಿರುವಂತೆ ಆ ಆಚರಣೆ ಹತ್ಯಾಕಾಂಡವನ್ನೇ ಸೃಷ್ಟಿಸಿತು. ಲೀಗ್ ಸಚಿವಾಲಯದಿಂದ ನಾನು ರಾಜೀನಾಮೆ ನೀಡಬೇಕು ಎಂದು ಹಿಂದೂಗಳು ಆಗ್ರಹಿಸಿದರು. ಆ ವೇಳೆ ನನ್ನ ಜೀವನ ಅಪಾಯದಲ್ಲಿತ್ತು. ನಾನು ಪ್ರತಿದಿನವೂ ಬೆದರಿಕೆ ಪತ್ರಗಳನ್ನು ಸ್ವೀಕರಿಸುವಂತಾಯಿತು. ಆದರೆ ನಾನು ನನ್ನ ನೀತಿಗೆ ದೃಢವಾಗಿ ಬದ್ಧನಾಗಿದ್ದೆ. ಮೇಲಾಗಿ, ನನ್ನ ಜೀವನ ಅಪಾಯದಲ್ಲಿದ್ದರೂ, ನಮ್ಮ ಪತ್ರಿಕೆ ’ಜಾಗರಣ್’ ಮೂಲಕ ಕಾಂಗ್ರೆಸ್ ಮತ್ತು ಮುಸ್ಲಿಮ್ ಲೀಗ್ ನಡುವಿನ ರಕ್ತಪಾತದ ಹೋರಾಟದಿಂದ ದೂರ ಉಳಿಯುವಂತೆ ಪರಿಶಿಷ್ಟ ಜಾತಿಯ ಜನರಿಗೆ ಮನವಿ ಮಾಡಿದೆ.

ಆದರೆ ವಾಸ್ತವದಲ್ಲಿ, ಮಂಡಲ್, ಮೈತ್ರಿಯನ್ನು ಮುಂದುವರೆಸಲು ತಪ್ಪು ದಾರಿಯಲ್ಲಿ ನಡೆದರು. ತನ್ನ ಪತ್ರದಲ್ಲಿ ಬರೆಯುತ್ತಾ ’1946ರ ಅಕ್ಟೋಬರ್‌ನಲ್ಲಿನ ನೊಖಲಿ ದಂಗೆಯಿಂದ ಕಲ್ಕತ್ತ ನರಮೇಧ ನಡೆಯಿತು. ಪರಿಶಿಷ್ಟ ಜಾತಿಯನ್ನು ಒಳಗೊಂಡಂತೆ ಹಿಂದೂಗಳನ್ನು ಕೊಲ್ಲಲಾಯಿತು, ನೂರಾರು ಮಂದಿಯನ್ನು ಮತಾಂತರ ಮಾಡಲಾಯಿತು. ಹಿಂದೂ ಮಹಿಳೆಯರನ್ನು ಅತ್ಯಾಚಾರ ಮಾಡಲಾಯಿತು, ಅಪಹರಣ ಮಾಡಲಾಯಿತು. ನನ್ನ ಸಮುದಾಯದ ಜನರು ಜೀವ ಹಾನಿ ಮತ್ತು ಆಸ್ತಿ ಹಾನಿಗೆ ತುತ್ತಾದರು’ ಎಂದಿದ್ದರು.

ಆದರೆ, ಸುಹ್ರಾವಾರ್ಡ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವಾದಾಗ, ಮಂಡಲ್ ಸರ್ಕಾರವನ್ನು ರಕ್ಷಿಸಲು ಮುಂದಾದರು. ಈ ಬಗ್ಗೆ ಅವರು ತಮ್ಮ ಪತ್ರದಲ್ಲಿ ಬರೆದಿದ್ದು ಹೀಗೆ “ಆದರೂ ನಾನು ಇನ್ನೂ ಮುಸ್ಲಿಂ ಲೀಗ್‌ನೊಂದಿಗೆ ಸಹಕಾರದ ನೀತಿಯನ್ನು ಮುಂದುವರಿಸಿದೆ. ಕಲ್ಕತ್ತಾದ ಕಗ್ಗೊಲೆಗಳ ತಕ್ಷಣವೇ, ಸುಹ್ರಾವಾರ್ಡ್ ಸಚಿವಾಲಯದ ವಿರುದ್ಧ ಅವಿಶ್ವಾಸ ನಿರ್ಣಯಗೊಂಡಿತ್ತು. ಆದರೆ ನನ್ನ ಪ್ರಯತ್ನದಿಂದಾಗಿ, ನಾಲ್ಕು ಆಂಗ್ಲೊ-ಇಂಡಿಯನ್ ಸದಸ್ಯರು ಮತ್ತು ಅಲ್ಲಿಯವರೆಗೆ ಕಾಂಗ್ರೆಸ್‌ನೊಂದಿಗೆ ಇದ್ದ ನಾಲ್ಕು ಪರಿಶಿಷ್ಟ ಜಾತಿ ಸದಸ್ಯರ ಬೆಂಬಲ ಸಿಗುವಂತಾಯಿತು, ಈ ಮೂಲಕ ಸಚಿವಾಲಯವನ್ನು ರಕ್ಷಿಸಿದೆ. ಇಲ್ಲವಾಗಿದ್ದರೆ ಸಚಿವಾಲಯ ಸೋಲುತ್ತಿತ್ತು’ ಎಂದು ಬರೆಯುತ್ತಾರೆ.

ಪಾಕಿಸ್ಥಾನ ರಚನೆಯಾದ ಬಳಿಕ, ಪರಿಶಿಷ್ಟ ಜಾತಿ ಮತ್ತು ಇತರ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಚುನಾವಣೆ ಆಯೋಜಿಸುವ ಬಗೆಗಿನ ಪ್ರಶ್ನೆಯನ್ನು ಅದರ ನಾಯಕರು ಹೇಗೆ ತಪ್ಪಿಸುತ್ತಿದ್ದರು ಎಂಬ ಬಗ್ಗೆ ಮಂಡಲ್ ಹೀಗೆಂದು ಬರೆಯುತ್ತಾರೆ, ’ಮಹತ್ವಪೂರ್ಣವಾದ ವಿಷಯದ ಬಗ್ಗೆ ಈ ರೀತಿಯಾದ ತಪ್ಪಿಸಿಕೊಳ್ಳುವಿಕೆಯ ತಂತ್ರಗಾರಿಕೆಯನ್ನು ಪಾಕಿಸ್ಥಾನದ ಆಡಳಿತಗಾರರು ಅನುಸರಿಸುತ್ತಿದ್ದ ಹಿಂದಿನ ಉದ್ದೇಶವೇನು ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಲ್ಲ’ ಎಂದಿದ್ದರು.

ಪಾಕಿಸ್ಥಾನದಲ್ಲಿ ದಲಿತರ ಮೇಲಿನ ದೌರ್ಜನ್ಯವನ್ನು ಪತ್ರದಲ್ಲಿ ಬರೆದಿರುವ ಅವರು, ’ಪೂರ್ವ ಪಾಕಿಸ್ಥಾನದ ಪ್ರಶ್ನೆಯನ್ನು ಬದಿಗಿಟ್ಟು, ಪಶ್ಚಿಮ ಪಾಕಿಸ್ಥಾನದತ್ತ ವಿಶೇಷವಾಗಿ ಸಿಂಧ್‌ನತ್ತ ಈಗ ನಾನು ಗಮನ ಹರಿಸುತ್ತೇನೆ. ವಿಭಜನೆಯ ಬಳಿಕ ಪಶ್ಚಿಮ ಪಂಜಾಬ್‌ನಲ್ಲಿ ಸುಮಾರು 1 ಲಕ್ಷ ಪರಿಶಿಷ್ಟ ಜಾತಿ ಜನರಿದ್ದರು. ಅವರಲ್ಲಿ ಅಪಾರ ಪ್ರಮಾಣ ಜನರು ಇಸ್ಲಾಂಗೆ ಮತಾಂತರಗೊಂಡರು. ನಿರಂತರ ಪಿಟಿಷನ್‌ಗಳನ್ನು ಹಾಕಿದ ಪರಿಣಾಮ ಅಪಹರಣಗೊಂಡ ೧೨ ದಲಿತ ಯುವತಿಯರ ಪೈಕಿ ನಾಲ್ವರು ಪತ್ತೆಯಾಗಿದ್ದಾರೆ’

ತನ್ನನ್ನು ಬಳಸಿ ಮತ್ತು ಎಸೆದರು ಎಂಬ ಭಾವದಿಂದಾಗಿ ಮಂಡಲ್ ಖಿನ್ನತೆಗೆ ಒಳಗಾದರು. ಕೊನೆಯದಾಗಿ ಅವರು ಹೀಗೆ ಬರೆಯುತ್ತಾರೆ: “ಕಳೆದ ಸೆಪ್ಟೆಂಬರ್ 8 ರಂದು ನಾನು ನೀಡಿದ್ದ ಒಂದು ಹೇಳಿಕೆಗೆ ಸ್ಪಷ್ಟನೆಯನ್ನು ನೀಡುವಂತೆ ನನಗೆ ಆದೇಶಿಸಲು ನೀವು ನಿಮ್ಮ ಪಾರ್ಲಿಮೆಂಟರಿ ಪಾರ್ಟಿಯ ಪ್ರಧಾನಿ ಮತ್ತು ನಾಯಕನ ಸ್ಥಾನವನ್ನು ಬಳಸಿಕೊಂಡಿದ್ದೀರಿ. ಅಸತ್ಯ ಮತ್ತು ಅರ್ಧ ಸತ್ಯಗಳನ್ನು ಹೊಂದಿರುವ ಹೇಳಿಕೆಯನ್ನು ನಾನು ನೀಡುವುದಿಲ್ಲವೆಂದು ನಿಮಗೆ ತಿಳಿದಿದೆ. ನಾನು ನಿಮ್ಮೊಂದಿಗೆ ಮತ್ತು ನಿಮ್ಮ ನಾಯಕತ್ವದಲ್ಲಿ ಮಂತ್ರಿಯಾಗಿ ಕೆಲಸ ಮಾಡುತ್ತಿರುವವರೆಗೆ ನಿಮ್ಮ ವಿನಂತಿಯನ್ನು ತಿರಸ್ಕರಿಸಲು ಸಾಧ್ಯವಿಲ್ಲ” ಆದಾದ ಬಳಿಕ ಮಂಡಲ್ ಭಾರತಕ್ಕೆ ಮರಳಿದರು ಮತ್ತು 1968 ರಲ್ಲಿ ನಿಗೂಢವಾಗಿ ಸಾವಿಗೀಡಾದರು.

ಮುಸ್ಲಿಮರ ಬಗೆಗೆ ಡಾ.ಅಂಬೇಡ್ಕರ್

ಒಂದು ಕಡೆ ಮಂಡಲ್ ವಿಪರೀತ ಭರವಸೆ ಇಟ್ಟವರಾಗಿ ಗೋಚರಿಸಿದರೆ, ಅವರ ಸ್ನೇಹಿತ ಡಾ.ಅಂಬೇಡ್ಕರ್ ಮುಸ್ಲಿಮರ ಬಗೆಗಿನ ತನ್ನ ನಿಲುವಿನಲ್ಲಿ ದೃಢವಾಗಿದ್ದರು. 1940 ರಲ್ಲಿ ಮುಸ್ಲಿಂ ಲೀಗ್ ವಿಭಜನೆಯ ಬಗ್ಗೆ ನಿರ್ಣಯ ಅಂಗೀಕಾರಗೊಳಿಸಿದ ಬಳಿಕ ವಿಭಜನೆಯ ಬಗ್ಗೆ ಮಾತುಕತೆಯಾದಾಗ ಅವರು ತಮ್ಮ ಬರವಣಿಗೆಯನ್ನು ಸ್ಪಷ್ಟವಾಗಿ ಮುಂದಿಡುತ್ತಾ ಬಂದರು.

ದಲಿತರು ’ದೇವರಿಗಿಂತ ಕಡಿಮೆಯಲ್ಲ’ ಎಂದು ಪರಿಗಣಿಸುವ ಅಂಬೇಡ್ಕರ್ ಮುಸ್ಲಿಮರ ಬಗ್ಗೆ ಹೀಗೆಂದು ಬರೆಯುತ್ತಾರೆ, ’ಹಿಂದೂ ಧರ್ಮ ಜನರನ್ನು ವಿಭಜಿಸಿದರೆ, ಇಸ್ಲಾಂ ಜನರನ್ನು ಒಗ್ಗೂಡಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದು ಅರ್ಧಸತ್ಯ. ಇಸ್ಲಾಂ ಒಗ್ಗೂಡಿಸಿದಂತೆಯೇ ವಿಭಜಿಸುತ್ತದೆ. ಇಸ್ಲಾಂ ಮುಚ್ಚಿದ ನಿಗಮ. ಇಸ್ಲಾಂನಲ್ಲಿನ ಭಾತೃತ್ವ ವಿಶ್ವ ಭಾತೃತ್ವವಲ್ಲ. ಅದು ಕೇವಲ ಮುಸ್ಲಿಮರಿಗಾಗಿ ಮುಸ್ಲಿಮರ ಭಾತೃತ್ವ ಅಷ್ಟೇ. ಭಾರತವನ್ನು ತನ್ನ ತಾಯ್ನಾಡಾಗಿ ಮತ್ತು ಹಿಂದೂಗಳನ್ನು ತನ್ನ ಸಹೋದರರಾಗಿ ಸ್ವೀಕರಿಸಲು ಇಸ್ಲಾಂ ಒರ್ವ ನೈಜ ಮುಸ್ಲಿಮನಿಗೆ ಅವಕಾಶ ಮಾಡಿಕೊಡದು’

ದಲಿತರನ್ನು ತಮ್ಮ ಮುಷ್ಟಿಗೆ ತೆಗೆದುಕೊಳ್ಳಲು ಮುಸ್ಲಿಮರು ನೋಡಿದರೂ, ದಲಿತರು ಮತಾಂತರವಾದ ಬಳಿಕವೂ ಜಾತಿ ರೇಖೆಯಿಂದ ಮುಕ್ತಗೊಳ್ಳಲು ಆಗಿಲ್ಲ ಎಂಬುದು ಕಟು ಸತ್ಯ ಎಂಬುದಾಗಿ ಅಂಬೇಡ್ಕರ್ ಹೇಳಿದ್ದರು.

೧೯೦೯ ರ ಬಂಗಾಳ ಜನಗಣತಿಯ ವರದಿಗಳ ಬಗ್ಗೆ ಉಲ್ಲೇಖಿಸಿರುವ ಡಾ. ಅಂಬೇಡ್ಕರ್ “ಮೊಹಮ್ಮದ್ದಿಯನ್ನರು ಎರಡು ಮುಖ್ಯ ಸಾಮಾಜಿಕ ವಿಭಾಗಗಳಲ್ಲಿ ತಮ್ಮನ್ನು ಗುರುತಿಸಿದ್ದಾರೆ, (1) ಅಶ್ರಫ್ (ಅಥವಾ ಶರಾಫ್) ಮತ್ತು (2) ಅಜ್ಲಾಫ್. ಅಶ್ರಫ್ ಎಂದರೆ ’ಉದಾತ್ತ’ ಮತ್ತು ವಿದೇಶಿಗರ ವಂಶಸ್ಥರು ಮತ್ತು ಉನ್ನತ ಹಿಂದು ಜಾತಿಗಳಿಂದ ಮತಾಂತರವಾದವರು. ಉಳಿದ ಇತರ ಮೊಹಮ್ಮದ್ದಿಯನ್ನರು ಔದ್ಯೋಗಿಕ ಗುಂಪುಗಳು ಮತ್ತು ಕೆಳ ಜಾತಿಗಳಿಂದ ಮತಾಂತರಗೊಂಡವರನ್ನು ಅಜ್ಲಫ್, ’ಹಿಂಸಕರು’ ಎಂಬ ಅವಮಾನಕರ ಪದಗಳಿಂದ ಕರೆಯಲಾಗುತ್ತದೆ. ಅವರನ್ನು ’ಕಮಿನಾ’ ಎಂದೂ ಕರೆಯಲಾಗುತ್ತದೆ. ಕೆಲವು ಸ್ಥಳಗಳಲ್ಲಿ, ’ಅರ್ಝಲ್’ ಅಥವಾ ಎಲ್ಲರಿಗಿಂತ ಕೀಳಿನವರು ಎಂಬ ಮೂರನೇ ವರ್ಗಕ್ಕೂ ಸೇರಿಸಲಾಗುತ್ತದೆ. ಇವರೊಂದಿಗೆ ಇತರ ಮೊಹಮ್ಮದ್ದಿಯರು ಸೇರುವುದಿಲ್ಲ ಮತುಲ್ಲಿವರಿಗೆ ಸಾರ್ವಜನಿಕ ಸಮಾಧಿ ಬಳಸುವುದಕ್ಕೆ ಮತ್ತು ಮಸೀದಿಯೊಳಗೆ ಪ್ರವೇಶಿಸುವುದಕ್ಕೂ ನಿಷೇಧವಿದೆ”

’ಮೊಹಮ್ಮದಿಯರು ಜಾತಿಯನ್ನು ಮತ್ತು ಅಸ್ಪೃಶ್ಯತೆಯನ್ನು ಅನುಸರಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಬಂಗಾಳದ ನೈಜ ಸನ್ನಿವೇಶವೇ ಸಾಕು’ ಎಂದು ಅಂಬೇಡ್ಕರ್ ಬರೆದಿದ್ದಾರೆ.

ಡಾ.ಅಂಬೇಡ್ಕರ್ ಅವರ ಮುಸ್ಲಿಮರ ಬಗೆಗಿನ ನಿಲುವು ಶೈಕ್ಷಣಿಕ ಅಧ್ಯಯನವನ್ನು ಒಳಗೊಂಡಿದ್ದಲ್ಲ. ಅದರ ನಾಯಕರೊಂದಿಗೆ ಚರ್ಚಿಸಿ, ಭಾರತದ ಸ್ವಾತಂತ್ರ್ಯದ ಬಗ್ಗೆ ಮತ್ತು ಅದರ ತಕ್ಷಣದ ಪರಿಣಾಮಗಳ ಚಿಂತನೆಯಿಂದ ಒಳಗೊಂಡದ್ದು.

ಇನ್ನೊಂದೆಡೆ, ಮಂಡಲ್ ಅವರ ಪ್ರಕರಣ ನಮಗೆ ವಾಸ್ತವ ಉದಾಹರಣೆಯಾಗಿದೆ, ಅವರು ತಮ್ಮ ವೈಯಕ್ತಿಕ ರಿಸ್ಕ್‌ನಲ್ಲಿ ಅವರು ಭರವಸೆಯ ವಿರುದ್ಧ ಭರವಸೆ ಇಟ್ಟುಕೊಂಡರು.

ಮಂಡಲ್ ಅವರೇ ತಮ್ಮ ಪತ್ರದಲ್ಲಿ ಬರೆಯುತ್ತಾರೆ, ’ನಾನು ಮುಸ್ಲಿಮ್ ಲೀಗ್‌ನ್ನು ಚೌಕಾಶಿ ಮಾಡುವ ಪಕ್ಷವೆಂದು ಅಂದುಕೊಂಡಿದ್ದೆ. ನನಗೆ ಗೊತ್ತಿತ್ತು, ವಿಭಜನೆಯಿಂದ ಕೋಮು ಸಮಸ್ಯೆಗಳು ಪರಿಹಾರವಾಗುವುದಿಲ್ಲ, ಅದು ಇನ್ನಷ್ಟು ಉಲ್ಬಣಗೊಳ್ಳುತ್ತದೆ ಎಂದು. ಆದರೆ ದಲಿತರು ಮತ್ತು ಮುಸ್ಲಿಮರ ಸಮಾನ ಆರ್ಥಿಕ ಪರಿಸ್ಥಿತಿಗಳು ಹೊಸ ರಾಷ್ಟ್ರದಲ್ಲಿ ದಲಿತರಿಗೆ ಮುಸ್ಲಿಮರೊಂದಿಗೆ ಪರಿಸ್ಥಿತಿಯನ್ನು ಸುಧಾರಿಸಲು ಸಹಕಾರಿಯಾಗುತ್ತದೆ ಎಂದು ನಂಬಿದ್ದೆ. ಆದರೆ ಆದದ್ದೇ ಬೇರೆ. ಮುಸ್ಲಿಮರು ದಲಿತರನ್ನು ಇನ್ನೊಂದು ಇಸ್ಲಾಂನಲ್ಲಿ ನಂಬಿಕೆಯಿಲ್ಲದ ಪಂಗಡವಾಗಿಯಷ್ಟೇ ಪರಿಗಣಿಸಿದರು.

ಇಂದು ತುಳಿತಕ್ಕೊಳಗಾದ ಎರಡು ಸಮುದಾಯಗಳ ಹೆಸರಿನಲ್ಲಿ ಏಕತೆಗೆ ಕರೆ ನೀಡುವುದನ್ನು ಈ ಸನ್ನಿವೇಶಕ್ಕೆ ಹೋಲಿಸಿ ನಂಬಬಹುದೇ?

ಮೂಲ ಲೇಖನ : ಪ್ರಶಾಂತ್ ಪಾಂಡೆ, indiafacts.org

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top