ಆಡಳಿತದ ಚುಕ್ಕಾಣಿ ಹಿಡಿದು ನಾಲ್ಕೂವರೆ ವರ್ಷಗಳನ್ನು ಪೂರೈಸಿರುವ ನರೇಂದ್ರ ಮೋದಿ ಸರ್ಕಾರ ದೇಶದ ಅಭಿವೃದ್ಧಿಗೆ ಮಾಡಿದ ಸಾಧನೆ ‘ಶೂನ್ಯ’ ಎಂದು ಪ್ರತಿಪಕ್ಷಗಳು, ಮೋದಿ ವಿರೋಧಿಗಳು ಆರೋಪಿಸುತ್ತಿದ್ದಾರೆ. ಅವರ ಆರೋಪ ಒಂದರ್ಥದಲ್ಲಿ ನಿಜವೇ ಆಗಿದೆ. ಮೋದಿ ಮಾಡಿದ ಸಾಧನೆಗಳಲ್ಲಿ ‘ಶೂನ್ಯ’ವೇ ಜಾಸ್ತಿ ಇದೆ. ಇಂತಹ ಶೂನ್ಯ ಸಾಧಕನನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಮೊದಲು ನಾವು ಅವರು ಮಾಡಿದ ಶೂನ್ಯ ಸಾಧನೆಗಳು ಏನು ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು.
ಉಗ್ರರ ದಾಳಿ ಶೂನ್ಯ:
ಹೌದು! ಮೋದಿ ಆಡಳಿತದಲ್ಲಿ ಉಗ್ರರ ದಾಳಿಗಳು ಶೂನ್ಯವಾಗಿದೆ. ಕಳೆದ ನಾಲ್ಕೂವರೆ ವರ್ಷದಲ್ಲಿ ದೇಶದ ಯಾವುದೇ ನಗರಗಳಲ್ಲಿ, ಜನನಿಬಿಡ ಸ್ಥಳಗಳಲ್ಲಿ, ಹೋಟೆಲ್, ಮಾಲ್ಗಳಲ್ಲಿ ಉಗ್ರರ ದಾಳಿಗಳು ನಡೆದಿಲ್ಲ. ಯುಪಿಎ ಅವಧಿಯಲ್ಲಿ ಸಾಲು ಸಾಲು ಬಾಂಬ್ ಸ್ಫೋಟಗಳನ್ನು ಕಂಡು ಆಘಾತಕ್ಕೆ ಒಳಗಾಗಿದ್ದ ಜನರಿಗೆ ಮೋದಿ ಆಡಳಿತದಲ್ಲಿ ಸುರಕ್ಷತೆಯ ಭಾವ ದೊರೆತಿದೆ. ಉಗ್ರರ ಸಂಚುಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಲಾಗುತ್ತಿದೆ. ಇತ್ತೀಚಿಗೆ ಉತ್ತರಪ್ರದೇಶ, ದೆಹಲಿಯ ವಿವಿಧೆಡೆ ಉಗ್ರರ ತಾಣಗಳ ಮೇಲೆ ಎನ್ಐಎ ನಡೆಸಿದ ದಾಳಿಯೇ ಇದಕ್ಕೆ ಸಾಕ್ಷಿ. ಉಗ್ರರು ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸುವ ಮುನ್ನವೇ ಹತರಾಗುತ್ತಿದ್ದಾರೆ ಅಥವಾ ಬಂಧಿತರಾಗುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಒಂದೇ ವರ್ಷದಲ್ಲಿ 311 ಉಗ್ರರನ್ನು ಹತ್ಯೆ ಮಾಡಲಾಗಿದೆ. ಇನ್ನು ನಮ್ಮ ಯೋಧರ ನೆಲೆಗಳ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದವರಿಗೆ ತಕ್ಕ ಉತ್ತರವೇ ಸಿಕ್ಕಿದೆ. ಸರ್ಜಿಕಲ್ ಸ್ಟ್ರೈಕ್ನಂತಹ ಧೈರ್ಯಶಾಲಿ ಕಾರ್ಯಾಚರಣೆಯನ್ನು ಕಾಣುವ ಭಾಗ್ಯ ಮೋದಿ ಆಡಳಿತದಲ್ಲಿ ನಮಗೆ ಸಿಕ್ಕಿದೆ. ಇದು ಮೋದಿ ಸರ್ಕಾರದ ಆಡಳಿತ ದಕ್ಷತೆಯನ್ನು ಪ್ರತಿಬಿಂಬಿಸುತ್ತದೆ. ತನ್ನ ಆಡಳಿತದಲ್ಲಿ ಒಂದೇ ಒಂದು ಭಯೋತ್ಪಾದನಾ ದಾಳಿಗಳು ದೇಶದೊಳಗೆ ನಡೆಯದಂತೆ ಮಾಡಿದ್ದು ಮೋದಿಯ ಶೂನ್ಯ ಸಾಧನೆಯಲ್ಲದೇ ಮತ್ತೇನು ಅಲ್ಲವೇ?
ವಿದ್ಯುತ್ ರಹಿತ ಗ್ರಾಮಗಳು ಶೂನ್ಯ
ಇನ್ನು 1 ಸಾವಿರ ದಿನಗಳಲ್ಲಿ ದೇಶದ ಪ್ರತಿ ಹಳ್ಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುತ್ತೇವೆ ಎಂದು 2015ರಲ್ಲಿ ನರೇಂದ್ರ ಮೋದಿ ಘೋಷಿಸಿದ್ದರು. ಆ ಅವಧಿಯಲ್ಲಿ ದೇಶದ 18 ಸಾವಿರ ಗ್ರಾಮಗಳು ಕತ್ತಲಲ್ಲಿ ಇದ್ದವು. ಮೋದಿ ಟಾರ್ಗೆಟ್ನಂತೆ 2018ರ ಮೇ.11ರಂದು ಎಲ್ಲಾ ಗ್ರಾಮಗಳು ವಿದ್ಯುದೀಕರಣಗೊಳ್ಳಬೇಕಿತ್ತು. ಆದರೆ ಈ ದಿನಾಂಕಕ್ಕಿಂತ ಮುನ್ನವೇ ಅಂದರೆ 2018ರ ಎಪ್ರಿಲ್ 28ರಂದು ದೇಶದ ಎಲ್ಲಾ ಗ್ರಾಮಗಳು ವಿದ್ಯುದೀಕರಣಗೊಂಡಿದೆ ಎಂದು ಮೋದಿ ಘೋಷಿಸಿಯೇ ಬಿಟ್ಟರು. ದೇಶದ ಮೂಲೆ ಮೂಲೆಯ ಪ್ರತಿ ಹಳ್ಳಿಯೂ ಆ ದಿನ ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿತ್ತು. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ವಿದ್ಯುತ್ ಕಾಣದೇ ಇದ್ದ ಹಳ್ಳಿಗಳಿಗೆ ಮೋದಿ ಆಡಳಿತದಲ್ಲಿ ವಿದ್ಯುತ್ ಸಿಕ್ಕಿವೆ. ಪ್ರಸ್ತುತ ನಮ್ಮ ದೇಶದಲ್ಲಿ ವಿದ್ಯುತ್ ಇಲ್ಲದ ಒಂದೇ ಒಂದು ಹಳ್ಳಿಯೂ ಇಲ್ಲ. ಅಂದರೆ ವಿದ್ಯುತ್ ರಹಿತ ಗ್ರಾಮಗಳ ಸಂಖ್ಯೆ ಇಂದು ’ಶೂನ್ಯ’ವಾಗಿದೆ. ಇದು ಮೋದಿಯವರ ‘ಶೂನ್ಯ’ ಸಾಧನೆಯಲ್ಲವೇ?
ಮಧ್ಯವರ್ತಿಗಳಿಂದ ಸಬ್ಸಿಡಿ ಹಣದ ಲೂಟಿ ಶೂನ್ಯ
ಹೌದು! ಮೋದಿ ಸರ್ಕಾರ ಬಂದ ಮೇಲೆ ಅಡುಗೆ ಅನಿಲದ ಸಬ್ಸಿಡಿ, ರೈತರಿಗೆ ಸಿಗುವ ಸಬ್ಸಿಡಿಗಳು ನೇರವಾಗಿ ಬ್ಯಾಂಕ್ ಖಾತೆಗೆ ಜಮಾವಣೆಯಾಗುತ್ತಿದೆ. ಹಿಂದೆ ಜನಸಾಮಾನ್ಯರಿಗೆ ಸಿಗಬೇಕಾಗಿದ್ದ ಸಬ್ಸಿಡಿ ದರಗಳು ಅವರಿಗೆ ಬಂದು ತಲುಪುವಷ್ಟರಲ್ಲಿ ಅರ್ಧಕ್ಕಿಳಿಯುತ್ತಿದ್ದವು. ಮಧ್ಯವರ್ತಿಗಳು ಈ ಅರ್ಧ ಹಣವನ್ನು ಗುಳುಂ ಮಾಡುತ್ತಿದ್ದರು. ಆದರೆ ಮೋದಿ ಸರ್ಕಾರ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತಂದಿರುವ ‘ನೇರ ಲಾಭ ವರ್ಗಾವಣೆ’ಯಿಂದ ಲಾಭಾಂಶಗಳು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಬಂದು ಬೀಳುತ್ತಿದೆ. ಹೀಗಾಗಿ ಹಣದ ಸೋರಿಕೆ ನಿಂತಿದೆ. ಲಂಚಗುಳಿತನಕ್ಕೆ ಬ್ರೇಕ್ ಬಿದ್ದಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿದ್ದ ವಿಪರೀತ ನಷ್ಟ ನಿಂತಿದೆ. ನೇರ ಲಾಭಾಂಶ ವರ್ಗಾವಣೆಯಿಂದ ಸುಮಾರು ೮೫ ಕೋಟಿಗಳಿಗಿಂತಲೂ ಅಧಿಕ ಹಣ ಉಳಿತಾಯವಾಗಿದೆ ಎಂದು ಸರ್ಕಾರವೇ ಹೇಳಿಕೊಂಡಿದೆ, ಸಬ್ಸಿಡಿ ಹಣವನ್ನು ಮಧ್ಯವರ್ತಿಗಳು ಲೂಟಿ ಮಾಡುವುದು ಈಗ ಬಹುತೇಕ ಶೂನ್ಯವಾಗಿದೆ. ಇದು ಮೋದಿಯವರ ’ಶೂನ್ಯ’ ಸಾಧನೆಗಳಲ್ಲಿ ಒಂದಾಗಿದೆ.
ಭ್ರಷ್ಟಾಚಾರ ಪ್ರಕರಣಗಳು ಶೂನ್ಯ
ಮೋದಿ ಸರ್ಕಾರದ ನಾಲ್ಕೂವರೆ ವರ್ಷಗಳ ಆಡಳಿತದಲ್ಲಿ ಒಂದೇ ಒಂದು ಭ್ರಷ್ಟಾಚಾರಗಳು ನಡೆದಿಲ್ಲ. ಮೋದಿ ಸಂಪುಟದ ಯಾವೊಬ್ಬ ಸಚಿವನೂ ಭ್ರಷ್ಟಾಚಾರದಲ್ಲಿ ಭಾಗಿಯಾದ ಬಗ್ಗೆ ವರದಿಗಳಾಗಿಲ್ಲ. ಸರ್ಕಾರ ಜನರ ತೆರಿಗೆ ಹಣವನ್ನು ದುರುಪಯೋಗ ಮಾಡಿಕೊಂಡ ಉದಾಹರಣೆಗಳು ಸಿಕ್ಕಿಲ್ಲ. ಯುಪಿಎ ಆಡಳಿತದಲ್ಲಿ 2 ಜಿ ಹಗರಣ, ವಿವಿಐಪಿ ಹೆಲಿಕಾಫ್ಟರ್ ಹಗರಣ, ಕಾಮನ್ವೆಲ್ತ್ ಹಗರಣ ಹೀಗೆ ಸಾಲು ಸಾಲು ಹಗರಣಗಳು ನೋಡಿ ಬೆಂದು ಹೋಗಿದ್ದ ಜನರ ಈಗ ನಿರಾಳರಾಗಿದ್ದಾರೆ. ತಮ್ಮ ಹಣ ಸರಿಯಾದ ರೀತಿಯಲ್ಲೇ ವಿನಿಯೋಗಿಸಲ್ಪಡುತ್ತಿದೆ ಎಂದು ಸಂತೋಷಪಡುತ್ತಿದ್ದಾರೆ. ಯುಪಿಎ ಭ್ರಷ್ಟಗೊಳಿಸಿದ್ದ ಆಡಳಿತ ವ್ಯವಸ್ಥೆಯನ್ನೇ ಸರಿಪಡಿಸಲು ಮೋದಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸಾಕಷ್ಟು ಶ್ರಮಪಟ್ಟಿದ್ದಾರೆ. ತಮ್ಮ ಕಣ್ತಪ್ಪಿ ಯಾವುದೇ ಹಗರಣಗಳು ನಡೆಯದಂತೆ ಜಾಗೃತೆವಹಿಸಿದ್ದಾರೆ. ಒಂದೇ ಒಂದು ಭ್ರಷ್ಟಾಚಾರದ ಆರೋಪ ಬರದಂತೆ ನೋಡಿಕೊಂಡಿದ್ದು ಮೋದಿ ಹೆಗ್ಗಳಿಕೆ. ಭ್ರಷ್ಟಾಚಾರ ಪ್ರಕರಣಗಳನ್ನು ಶೂನ್ಯಕ್ಕಿಳಿಸುವ ಮೂಲಕ ಅವರು ಮಾಡಿದ್ದು ‘ಶೂನ್ಯ’ ಸಾಧನೆಯನ್ನೇ.
ಬಯಲು ಶೌಚ ಗ್ರಾಮಗಳು ಬಹುತೇಕ ಶೂನ್ಯ
‘ಸ್ವಚ್ಛ ಭಾರತ’ ಎಂಬ ಅಭಿಯಾನವನ್ನು ಆರಂಭಿಸಿದ ಮೋದಿ, ಭಾರತದಲ್ಲಿ ಶೌಚಾಲಯ ನಿರ್ಮಾಣದ ಕ್ರಾಂತಿಯನ್ನೇ ಮಾಡಿದ್ದಾರೆ. ಶೌಚಾಲಯ ನಮ್ಮ ಗೌರವದ ಪ್ರತೀಕ ಎಂಬುದನ್ನು ಭಾರತೀಯರಿಗೆ ಮನವರಿಕೆ ಮಾಡಿಕೊಡುವಲ್ಲಿ ಮೋದಿ ಸರ್ಕಾರ ಸಫಲತೆಯನ್ನು ಕಂಡಿದೆ. ಹಿಂದೆಂದು ಕಂಡರಿಯದ ಕ್ಷಿಪ್ರಗತಿಯಲ್ಲಿ ಶೌಚಾಲಯಗಳು ನಿರ್ಮಾಣಗೊಳ್ಳುತ್ತಿವೆ. 5 ವರ್ಷದಲ್ಲಿ 10.0 ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಂದಲಾಗಿದ್ದು, ಇದರಲ್ಲಿ ಈಗಾಗಲೇ 6 ಕೋಟಿ ಶೌಚಾಲಯಗಳು ನಿರ್ಮಾಣವಾಗಿದೆ. ಹಿಂದೆ ಶೌಚಾಲಯವೆಂದರೆ ಏನು ಎಂದು ತಿಳಿಯದ ಗ್ರಾಮಗಳು ಕೂಡ ಈಗ ಶೌಚಾಲಯ ನಿರ್ಮಾಣದಲ್ಲಿ ತೊಡಗಿವೆ. ದೇಶದ ಬಹುತೇಕ ಗ್ರಾಮಗಳು ಬಯಲು ಶೌಚ ಮುಕ್ತವಾಗುತ್ತಾ ಬಂದಿವೆ. ಇದು ಕೂಡ ಮೋದಿಯ ‘ಶೂನ್ಯ’ ಸಾಧನೆಗಳಲ್ಲಿ ಒಂದು.
ಇಷ್ಟೇ ಅಲ್ಲದೇ ಶೂನ್ಯ ಸಾಧನೆಯತ್ತ ಮೋದಿ ಇನ್ನೂ ಹಲವು ಟಾರ್ಗೆಟ್ಗಳನ್ನು ಇಟ್ಟಿದ್ದಾರೆ. ಅದರಲ್ಲಿ ವಸತಿ ರಹಿತ ಭಾರತೀಯರ ಸಂಖ್ಯೆಯನ್ನು ‘ಶೂನ್ಯ’ಕ್ಕೆ ತರುವ ಟಾರ್ಗೆಟ್ ಬಹಳ ಮುಖ್ಯವಾಗಿದೆ. 2021ರ ವೇಳೆಗೆ ಎಲ್ಲರಿಗೂ ವಸತಿ ಸಿಗಬೇಕು ಎಂಬುದು ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯಾಗಿದೆ. ಇಷ್ಟೇ ಅಲ್ಲದೇ, ಅಡುಗೆ ಅನಿಲ ರಹಿತ ಕುಟುಂಬದ ಸಂಖ್ಯೆಯನ್ನು ಶೂನ್ಯಕ್ಕೆ ತರುವುದು, ವಿದ್ಯುತ್ ರಹಿತ ಮನೆಗಳ ಸಂಖ್ಯೆಯನ್ನು ಶೂನ್ಯಕ್ಕೆ ತರುವುದು, ಹೆಣ್ಣು ಭ್ರೂಣ ಹತ್ಯೆಯನ್ನು ಶೂನ್ಯಕ್ಕೆ ತರುವುದು, ಶಿಕ್ಷಣ ರಹಿತ ಹೆಣ್ಣು ಮಕ್ಕಳ ಸಂಖ್ಯೆಯನ್ನು ಶೂನ್ಯಕ್ಕೆ ತರುವುದು, ಉದ್ಯೋಗ ರಹಿತ ಯುವಕರ ಸಂಖ್ಯೆಯನ್ನು ಶೂನ್ಯಕ್ಕೆ ತರುವುದು, ರೈತರ ಆತ್ಮಹತ್ಯೆಯನ್ನು ಶೂನ್ಯಕ್ಕೆ ತರುವುದು, ಬಾಲ್ಯ ವಿವಾಹವನ್ನು ಶೂನ್ಯಕ್ಕೆ ತರುವುದು ಮೋದಿ ಸರ್ಕಾರದ ಗುರಿಯಾಗಿದೆ, ಈ ನಿಟ್ಟಿನಲ್ಲಿ ಅದು ಮಹತ್ವದ ಹೆಜ್ಜೆಯನ್ನು ಇಟ್ಟಿದೆ ಎಂಬುದು ಗಮನಾರ್ಹ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.