ಭಾರತದ ಸ್ವಾತಂತ್ರ್ಯಕ್ಕೆ, ಏಕತೆ, ಸಮಗ್ರತೆಗೆ ಮಹತ್ವದ ಕೊಡುಗೆಗಳನ್ನು ನೀಡಿದ ರಾಷ್ಟ್ರ ನಾಯಕರಿಗೆ ನರೇಂದ್ರ ಮೋದಿ ಸರ್ಕಾರ ಅತ್ಯುನ್ನತ ಗೌರವಗಳನ್ನು ಸಮರ್ಪಿಸುತ್ತಿದೆ. ಮಹಾನ್ ರಾಷ್ಟ್ರ ನಾಯಕರ ಆದರ್ಶ, ಜೀವನಗಳು ಮುಂದಿನ ತಲೆಮಾರಿಗೂ ತಿಳಿಯುವಂತೆ ಮಾಡುತ್ತಿದೆ. ಸರ್ದಾರ್ ಪಟೇಲ್ ಅವರ ಗೌರವಾರ್ಥ್ ವಿಶ್ವದ ಅತೀ ಎತ್ತರದ ಪ್ರತಿಮೆಯನ್ನು ಸ್ಥಾಪನೆ ಮಾಡಿರುವ ಸರ್ಕಾರ, ಇದೀಗ ಮಹಾನ್ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಸ್ಮರಣಾರ್ಥ ಮೂರು ಐಸ್ಲ್ಯಾಂಡ್ಗಳ ಹೆಸರನ್ನು ಮರುನಾಮಕರಣಗೊಳಿಸುತ್ತಿದೆ.
ರಾಸ್ ಐಸ್ಲ್ಯಾಂಡ್ನ್ನು ನೇತಾಜೀ ಸುಭಾಷ್ ಚಂದ್ರ ಬೋಸ್ ಐಸ್ಲ್ಯಾಂಡ್, ನೀಲ್ ಐಸ್ಲ್ಯಾಂಡ್ನ್ನು ಶಹೀದ್ ದ್ವೀಪ್ ಮತ್ತು ಹ್ಯಾವ್ಲಾಕ್ ಐಸ್ಲ್ಯಾಂಡ್ನ್ನು ಸ್ವರಾಜ್ ದ್ವೀಪ್ ಎಂದು ಮರುನಾಮಕರಣಗೊಳಿಸಲಾಗುತ್ತಿದೆ. ಪೋರ್ಟ್ ಬ್ಲೇರ್ನಲ್ಲಿ ನೇತಾಜೀಯವರು ರಾಷ್ಟ್ರಧ್ವಜ ಹಾರಿಸಿ 75 ವರ್ಷಗಳು ಸಂದುತ್ತಿರುವ ಹಿನ್ನಲೆಯಲ್ಲಿ ಈ ಮೂರು ಐಸ್ಲ್ಯಾಂಡ್ಗಳಿಗೆ ಸುಭಾಷ್ ಚಂದ್ರ ಬೋಸ್ ಹೆಸರುಗಳನ್ನು ಇಡಲಾಗುತ್ತಿದೆ.
ಡಿ.30ರಂದು ಪೋರ್ಟ್ಬ್ಲೇರ್ಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆ ಇದೆ. ಮರುನಾಮಕರಣದ ಪ್ರಕ್ರಿಯೆಗಳನ್ನು ಗೃಹ ಸಚಿವಾಲಯ ಈಗಾಗಲೇ ಪೂರ್ಣಗೊಳಿಸಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೇ, ಈ ವೇಳೆ ನೇತಾಜೀ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಗಳೂ ಬಿಡುಗಡೆಗೊಳ್ಳಲಿವೆ.
ಎರಡನೇ ವಿಶ್ವಯುದ್ಧದ ಸಂದರ್ಭ ಜಪಾನಿಯರು ಈ ಐಸ್ಲ್ಯಾಂಡ್ನ್ನು ವಶಪಡಿಸಿಕೊಂಡಿದ್ದರು. ಬೋಸ್ ಜಪಾನಿಯರೊಂದಿಗೆ ಕೈಜೋಡಿಸಿ 1943ರ 30ರಲ್ಲಿ ಪೋಟ್ ಬ್ಲೇರ್ನಲ್ಲಿ ರಾಷ್ಟ್ರಧ್ವಜ ಹಾರಿಸಿದರು. ಈ ಐಸ್ಲ್ಯಾಂಡ್ಗಳು ಬ್ರಿಟಿಷರಿಂದ ಮುಕ್ತಗೊಂಡ ಭಾರತದ ಮೊತ್ತ ಮೊದಲ ಪ್ರದೇಶಗಳು ಎಂದು ಆ ವೇಳೆ ನೇತಾಜೀ ಘೋಷಣೆ ಮಾಡಿದ್ದರು ಮತ್ತು ಅವುಗಳಿಗೆ ಶಹೀದ್, ಸ್ವರಾಜ್ ಎಂದು ಹೆಸರಿಸಿದ್ದರು.
ಕಾಂಗ್ರೆಸ್ ಆಡಳಿತದಲ್ಲಿ ಮೂಲೆಗುಂಪಾಗಿದ್ದ, ಸರ್ದಾರ್ ಪಟೇಲ್, ಬಿಆರ್ ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್ ಮುಂತಾದ ಮಹಾ ನಾಯಕರ ಪರಂಪರೆ ಮತ್ತು ಶೌರ್ಯವನ್ನು ಪುನರ್ ಸ್ಥಾಪಿಸುವ ಕಾರ್ಯವನ್ನು ಮೋದಿ ಸರ್ಕಾರ ಮಾಡುತ್ತಿದೆ. ನೆಹರೂ-ಗಾಂಧಿ ಕುಟುಂಬದ ಪರಂಪರೆ ಹಲವು ಮಹನೀಯರ ಪರಂಪರೆಯನ್ನು ನಿರ್ಲಕ್ಷ್ಯಗೊಳಗಾಗುವಂತೆ ಮಾಡಿತ್ತು. ಆದರೆ ಮೋದಿ ಸರ್ಕಾರ, ಕಳೆದುಹೋದ ಮಹನೀಯರ ಮಹಾನ್ ಕಥೆಗಳನ್ನು ಮತ್ತೆ ನಮ್ಮ ಮುಂದೆ ತರುತ್ತಿದೆ.
ನೇತಾಜೀ ಆಜಾದ್ ಹಿಂದ್ ಸರ್ಕಾರದ ರಚನೆಯನ್ನು ಘೋಷಿಸಿದ 75 ವರ್ಷಗಳ ಸ್ಮರಣಾರ್ಥ ಕೆಂಪುಕೋಟೆಯಲ್ಲಿ ಅಕ್ಟೋಬರ್ ೨೧ರಂದು ಪ್ರಧಾನಿ ಮೋದಿ ಧ್ವಜಾರೋಹಣ ನೆರವೇರಿಸಿದ್ದರು.
ಇತ್ತೀಚಿಗಷ್ಟೇ, ಭಾರತದ ಲೋಹ ಪುರುಷ, ಏಕೀಕರಣಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟಿದ್ದ ಸರ್ದಾರ್ ವಲ್ಲಭಭಾಯ್ ಅವರಿಗೆ ಸಮರ್ಪಿಸಲ್ಪಟ್ಟ ವಿಶ್ವದ ಅತೀ ಎತ್ತರದ ಏಕತಾ ಪ್ರತಿಮೆಯನ್ನು ಮೋದಿ ಲೋಕಾರ್ಪಣೆಗೊಳಿಸಿದ್ದಾರೆ. ನೆಹರೂ ಆಡಳಿತದಲ್ಲಿ ಮೂಲೆಗುಂಪಾಗಿದ್ದ ಸರ್ದಾರ್ ಅವರ ಶ್ರೇಷ್ಠತೆ ಇಂದು ವಿಶ್ವಕ್ಕೆಯೇ ತಿಳಿಯುವಂತೆ ಮೋದಿ ಮಾಡಿದ್ದಾರೆ.
ಇನ್ನೊಂದೆಡೆ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ, ಮುಸ್ಲಿಂ ದಾಳಿಯ ವೇಳೆ ಮರುನಾಮಕರಣಕ್ಕೊಳಗಾಗಿದ್ದ ಹಲವು ನಗರಗಳಿಗೆ, ಮತ್ತೆ ಅದರ ಮೂಲ ಘನತೆಯುತ ಹೆಸರುಗಳನ್ನು ಇಡುತ್ತಿದ್ದಾರೆ. ಅಲಹಾಬಾದ್ನ್ನು ಪ್ರಯಾಗ್ರಾಜ್, ಫೈಜಾಬಾದ್ನ್ನು ಶ್ರೀ ಅಯೋಧ್ಯಾ ಎಂದು ಯೋಗಿ ಸರ್ಕಾರ ಬದಲಾಯಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.