ಪ್ರೀತಿಯ ನಾಸೀರುದ್ದೀನ್ ಸಾಹೇಬರೇ,
ನಿಮ್ಮ ಮಕ್ಕಳ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿ ನೀವು ನೀಡಿರುವ ಹೇಳಿಕೆಯ ವೀಡಿಯೋ ಕೆಲದಿನಗಳಿಂದ ಹರಿದಾಡುತ್ತಿದೆ. ಧರ್ಮಾತೀತರಾಗಿ ಬೆಳೆದ ನನ್ನ ಮಕ್ಕಳ ಮೇಲೆ ಜನರ ಗುಂಪು ಸುತ್ತುವರೆದು ನೀವು ಹಿಂದೂಗಳೋ ಅಥವಾ ಮುಸಲ್ಮಾನರೇ ಎಂದು ಕೇಳಿದರೆ ಅವರು ಏನೆಂದು ಉತ್ತರಿಸುತ್ತಾರೆ ಎಂಬ ಭಯ ನನಗಿದೆ ಎಂಬುದಾಗಿ ಅದರಲ್ಲಿ ನೀವು ಹೇಳಿದ್ದೀರಿ. ನಾಸೀರುದ್ದೀನ್ ಸಾಹೇಬರೇ ಭಾರವಾದ ಹೃದಯದಿಂದ ನಿಮ್ಮ ಮಾತುಗಳನ್ನು ನಾನೂ ಒಪ್ಪಿಕೊಳ್ಳುತ್ತೇನೆ. ನಮ್ಮ ದೇಶ ಮತ್ತು ನೆರೆಯ ದೇಶಗಳಲ್ಲಿನ ದ್ವೇಷದ ಬಗ್ಗೆ ನನಗೂ ಭಯವಾಗುತ್ತಿದೆ.
ಜುಲೈ 1, 2016 ರ ಬಾಂಗ್ಲಾದೇಶ ಭಯೋತ್ಪಾದನಾ ದಾಳಿಯನ್ನು ನಾನಿಲ್ಲಿ ನೆನಪಿಸಿಕೊಳ್ಳಲು ಬಯಸುತ್ತೇನೆ. ಧಾಕಾ ರೆಸ್ಟೋರೆಂಟ್ಗೆ ನುಗ್ಗಿದ ಉಗ್ರರು 29 ಜನರು ಪ್ರಾಣವನ್ನು ತೆಗೆದಿದ್ದರು, ಆ ರಕ್ತಪಾತ, ಆ ವಿನಾಶ ಬಗೆಗಿನ ದೃಶ್ಯವಾಳಿಗಳು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಆ ಘಟನೆಯಲ್ಲಿ ಬದುಕುಳಿದವನ ಮಾತು ಇಂದಿಗೂ ನನ್ನ ಕಿವಿಯಲ್ಲಿ ಗುಂಯ್ಗುಟ್ಟುತ್ತಿದೆ. “ಆತ ನನ್ನ ಹೆಸರೇನು ಎಂದು ಕೇಳಿದ. ನಾನು ಕೇವಲ ಶಿಶಿರ್ ಅಂದಷ್ಟೇ ಹೇಳಿದೆ. ಸರ್ನೇಮ್ ಹೇಳಿದ್ದರೆ ನಾನು ಹಿಂದೂ ಎಂಬುದು ಆತನಿಗೆ ತಿಳಿಯುತ್ತಿತ್ತು” ಎಂಬುದಾಗಿ ಪ್ರಾಣ ಉಳಿಸಿಕೊಂಡಿದ್ದ ಶಿಶಿರ್ ಹೇಳಿದ್ದ.
ತಾನು ಹಿಂದೂ ಎಂಬುದು ಉಗ್ರರಿಗೆ ತಿಳಿಯಬಾರದು ಎಂಬುದು ಆತನ ಬಯಕೆಯಾಗಿತ್ತು. “ಜೀವನವಿಡೀ ಮುಸ್ಲಿಂ ಸ್ನೇಹಿತರನ್ನು ಹೊಂದಿದ್ದ ಕಾರಣ ಸ್ವಲ್ಪ ಸ್ವಲ್ಪ ಸುರಹ್ (ಖುರಾನಿನ ಒಂದು ಅಧ್ಯಾಯ) ನನಗೆ ತಿಳಿದಿತ್ತು. ಆದರೆ ಉಗ್ರನನ್ನು ಇದರಿಂದ ತೃಪ್ತಿಪಡಿಸಲು ಸಾಧ್ಯವೇ ಎಂಬುದು ನನ್ನ ಆತಂಕವಾಗಿತ್ತು” ಎಂದು ಉಗ್ರ ಖುರಾನ್ ಪಠಿಸಲು ಹೇಳಿದ್ದ ಸನ್ನಿವೇಶವನ್ನು ಸಂದರ್ಶನದಲ್ಲಿ ಶಿಶಿರ್ ವಿವರಿಸಿದ್ದ. ತಾನು ಉಪವಾಸದಲ್ಲಿ ಇದ್ದೆ ಎಂಬುದನ್ನು ತೋರಿಸುವ ಸಲುವಾಗಿ ಆತ ಉಗ್ರರೊಂದಿಗೆ ಆಹಾರವನ್ನೂ ಸೇವಿಸಿದ್ದ.
ಇದು ನನ್ನ ದೇಶವಲ್ಲ. ಇವರು ನನ್ನ ದೇಶದ ಮುಸ್ಲಿಮರೂ ಅಲ್ಲ. ಇದು ನನ್ನ ದೇಶದ ಪ್ರತಿಧ್ವನಿಯೂ ಅಲ್ಲ. ಆದರೆ ನಿಮ್ಮಂತಹ ಜಾತ್ಯಾತೀತರು ದೇಶದ ಭದ್ರತೆಗೆ ಮಾರಕವಾಗಿರುವ ಅಕ್ರಮ ನುಸುಳುಕೋರ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾಗಳನ್ನು ಅವರ ನೆಲಕ್ಕೆ ವಾಪಾಸ್ ಕಳುಹಿಸುವ ಸಲುವಾಗಿ ನಡೆಸಲಾಗುತ್ತಿರುವ ನ್ಯಾಷನಲ್ ರಿಜಿಸ್ಟ್ರಿಯನ್ನು ವಿರೋಧಿಸುತ್ತಿರುವುದನ್ನು ನೋಡಿ ನನಗೆ ಆತಂಕವಾಗುತ್ತಿದೆ. ಇಡೀ ರಾತ್ರಿ ಮಲಗಲು ಸಾಧ್ಯವಾಗುತ್ತಿಲ್ಲ. ನನ್ನ ಸುಂದರ, ಸಹಿಷ್ಣು ದೇಶವನ್ನು ಇನ್ನೊಂದು ಬಾಂಗ್ಲಾದೇಶವಾಗಿ ಅಥವಾ ಅತೀ ಕೆಟ್ಟ ಮತ್ತು ಅಲ್ಪಸಂಖ್ಯಾತರನ್ನು ಕೊಲೆ, ಅತ್ಯಾಚಾರ ಮಾಡುವ ಪಾಕಿಸ್ಥಾನವನ್ನಾಗಿ ನಿಮ್ಮಂತಹ ಜಾತ್ಯಾತೀತರು, ಕೇಂದ್ರಿತ ಟೀಕಾಕಾರರು ಪರಿವರ್ತಿಸಿಬಿಟ್ಟರೆ ಏನು ಗತಿ? ಎಂಬ ಬಗ್ಗೆ ಆತಂಕವಾಗುತ್ತಿದೆ.
ನಾಸೀರುದ್ದೀನ್ ಸಾಹೇಬರೇ, ನೀವು ಯಾರದೋ ಬಂಟನಾಗಿರಬಹುದೇ ಎಂಬ ಆತಂಕ ನನಗಿದೆ. ನಿಮ್ಮದೇ ಸಿನಿಮಾ ಸರ್ಫರೋಶ್ನಲ್ಲಿ ಅಮೀರ್ ಖಾನ್ ಹೇಳುವ ಡೈಲಾಗ್ “ತುಮ್ ಜೈಸೆ ಲೋಗ್ ದುಶ್ಮನ್ ಹೋತೆ ಹೇ ಸಾರೀ ಇನ್ಸಾನಿಯತ್ ಕೆ” ನಂತೆ. ನಿಮ್ಮ ಹೇಳಿಕೆ ಹಿಂದೂಗಳ ಪ್ರಯೋಜನಕ್ಕಾಗಿ ಹೇಳಿದ್ದಲ್ಲ ಎಂಬುದನ್ನು ನಾನು ಅರಿಯಬಲ್ಲೆ. ಈ ದೇಶದಲ್ಲಿ ಮುಸ್ಲಿಮರು ಅಪಾಯದಲ್ಲಿದ್ದಾರೆ ಎಂಬುದನ್ನು ನೀವು ನಿರಂತರವಾಗಿ ಹೇಳುತ್ತಾ ಬಂದಿದ್ದೀರಿ. ಆದರೆ ನಿಮ್ಮಂತಹ ಜನರು ಮುಸ್ಲಿಮರನ್ನು ಕ್ಯಾರೆ ಮಾಡಲ್ಲ, ಅವರು ನಿಮ್ಮ ಸ್ವಂತ ಸಹೋದರರಾದರೂ ಕೂಡ. ಅವರು ನೀವು ರಕ್ಷಣೆ ಮಾಡಬಯಸುವ ಅಲ್ಪಸಂಖ್ಯಾತರಾದರೂ ಕೂಡ. ಪಾಕಿಸ್ಥಾನವನ್ನು ಶತ್ರು ಎಂದು ಪರಿಗಣಿಸುವಂತೆ ಭಾರತೀಯರನ್ನು ಬ್ರೈನ್ವಾಶ್ ಮಾಡಲಾಗುತ್ತಿದೆ ಎಂದು ಹಿಂದೊಮ್ಮೆ ನೀವು ಹೇಳಿದ್ದಿರಿ. ನೀವು ಹಾಗೆ ಯಾಕೆ ಹೇಳಿದ್ದೀರಿ ಎಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಎಲ್ಲದಕ್ಕೂ ಮಿಗಿಲಾಗಿ ನೀವು ನಿಮ್ಮ ಅನ್ಯಾಯದ ಮೊಳಕೆಗಳಿಂದಾಗಿ ಪಾಕಿಸ್ಥಾನದಲ್ಲೂ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದೀರಿ. ಪಾಕಿಸ್ಥಾನಿ ಉಗ್ರನ ಗನ್ನಿಂದ ಹೊರಡುವ ಬುಲೆಟ್ ಮಾಡುವುದು ಧರ್ಮದ ಕೊಲೆಯನ್ನಲ್ಲ. ಕಾಫಿರ್ ರಾಷ್ಟ್ರ ಭಾರತದ ಮೇಲಿನ ದ್ವೇಷ ಅವರ ಮುಸ್ಲಿಮ್ ಸಹಧರ್ಮಿಯರ ಮೇಲಿನ ಪ್ರೇಮವನ್ನೂ ಕುಗ್ಗಿಸಿದೆ. ತಾಯ್ನಾಡಿಗಾಗಿ ಹೋರಾಡುವ ಮುಸ್ಲಿಮರನ್ನು ಕೂಡ ಅವರು ಹಿಂದೂ ಕಾಫಿರರಂತೆ ಕಾಣುತ್ತಾರೆ.
ಪಾಕಿಸ್ಥಾನಿ ಪ್ರಾಯೋಜಿತ ಉಗ್ರರು ರೈಫಲ್ಮ್ಯಾನ್ ಔರಂಗಜೇಬ್ನನ್ನು ಕೊಂದಾಗ ನಿಮ್ಮ ಬಾಯಿಂದ ಒಂದೇ ಒಂದು ಶಬ್ದವೂ ಹೊರಡಲಿಲ್ಲ. ಅದಕ್ಕೆ ಹಲವು ಕಾರಣಗಳು ಇರಬಹುದೇನೋ ಎಂದು ಪರಿಶೀಲಿಸಿದೆ. ಬಹುಶಃ ಪಾಕ್ ಉಗ್ರರು ಔರಂಗಜೇಬನನ್ನು ಕೊಂದ ಪ್ರಕರಣ ನಿಮ್ಮ ವಿಶಾಲ ಅಜೆಂಡಾಗೆ ಹೊಂದಿಕೆಯಾಗುವಂತದ್ದಾಗಿರಲಿಲ್ಲವೇನೋ ಅಥವಾ ನೀವು ಸದಾ ಹೊಗಳುವ ಉಗ್ರ ರಾಷ್ಟ್ರ ಪಾಕಿಸ್ಥಾನದ ನಿಲುವನ್ನೇ ನೀವೂ ಹೊಂದಿದ್ದೀರೇನೋ ?
ಕಾರ್ಗಿಲ್ ಯುದ್ಧದ ವೇಳೆ ತನ್ನ ಮೃತ ಯೋಧರ ಶವವನ್ನೂ ಸ್ವೀಕರಿಸಲು ನಿರಾಕರಿಸಿದ ದೇಶದ ಬಗ್ಗೆ ನೀವು ಮಾತನಾಡುತ್ತಿದ್ದೀರಾ. ಮೃತ ಯೋಧರು ಅವರಿಗೆ ಅವಶ್ಯವಲ್ಲದ ಅಸ್ತ್ರವಷ್ಟೇ. ಇವರ ಕುಟುಂಬಗಳ ಬಗ್ಗೆ ಅವರಿಗೆ ಕ್ಯಾರೇ ಇಲ್ಲ. ಮಗನಿಗಾಗಿ ಹಪಹಪಿಸುವ ತಾಯಿ ಅವರಿಗೆ ಪ್ರಮುಖಳೇ ಅಲ್ಲ. ಆದರೆ ನಾವು, ಪಾಕಿಸ್ಥಾನಿ ಉಗ್ರನ ಕೈಯಲ್ಲಿ ಹತನಾದ ಔರಂಗಜೇಬನ ಸಾವಿಗೆ ಪ್ರತಿಕಾರ ತೀರಿಸುವ ಸಲುವಾಗಿ ಗಲ್ಫ್ನಿಂದ ತವರಿಗೆ ಮರಳಿದ 50 ಮಂದಿ ಗ್ರಾಮಸ್ಥರ ದೇಶದವರಾಗಿದ್ದೇವೆ. ಇಡೀ ದೇಶ ಔರಂಗಜೇಬನಿಗಾಗಿ ಕಣ್ಣೀರು ಸುರಿಸಿತು. ವೀರ ಮಗನ ವಿಷಯಕ್ಕೆ ಬಂದಾಗ ಈ ದೇಶಕ್ಕೆ ಧರ್ಮ ಇರುವುದಿಲ್ಲ. ಇಂತಹ ದೇಶವನ್ನು ನೀವು ಅಸಹಿಷ್ಣು ಎಂದು ಕರೆಯುತ್ತೀರಾ?
ನಿಮ್ಮ ಮಾತಿಗೆ ನನ್ನ ಸಹಮತವಿದೆ ನಾಸೀರುದ್ದೀನ್ ಸಾಹೇಬರೇ, ಇಂದಿನ ಭಾರತದಲ್ಲಿ ಜೀವಿಸುವುದಕ್ಕೆ ನನಗೂ ಭಯವಾಗುತ್ತದೆ. ಅನಾಗರಿಕ, ಪರೋಡಿ ದೇಶವನ್ನು ಹೊಗಳುತ್ತಾ ಈ ಸುಂದರ ದೇಶದಲ್ಲಿ ನೀವು ಓಡಾಡುತ್ತೀರಿ ಎಂಬ ಭಯವಿದೆ. ನಿಮ್ಮ ಧ್ವನಿ ಗಟ್ಟಿಯಾಗಬಹುದೇ ಎಂಬ ಬಗ್ಗೆ ಆತಂಕವಿದೆ. ಭಾರತವನ್ನು ಪಾಕಿಸ್ಥಾನವನ್ನಾಗಿ ಪರಿವರ್ತಿಸುವ ಕಾರ್ಯದಲ್ಲಿ ನೀವು ಗೆಲ್ಲುತ್ತೀರಾ ಎಂಬ ಬಗ್ಗೆ ಆತಂಕವಿದೆ.
ಎಲ್ಲಾ ದೇಶದಲ್ಲೂ ಇರುವಂತೆ ಭಾರತದಲ್ಲೂ ಸಮಸ್ಯೆಗಳಿವೆ ನಾಸೀರುದ್ದೀನ್ ಸಾಹೇಬರೇ, ಗೋ ಕಳ್ಳಸಾಗಾಣೆ ಮಾಡುವ, ಈ ಪ್ರಕ್ರಿಯೆಯಲ್ಲಿ ಪೊಲೀಸ್ರನ್ನೇ ಕೊಲ್ಲುವ ಮುಸ್ಲಿಮರಿದ್ದಾರೆ. ಕಾನೂನನ್ನು ಕೈಗೆತ್ತಿಕೊಳ್ಳುವ ಗೋ ಮಾಲೀಕರಿದ್ದಾರೆ. ಈ ಗೋ ಮಾಲೀಕರು ಹಿಂದೂಗಳೂ ಆಗಿರಬಹುದು ಅಥವಾ ಮುಸ್ಲಿಮರೂ ಆಗಿರಬಹುದು. ಗೋವಿನ ಪರವಾದ ನಿಲುವಿನಿಂದಾಗಿ ಹತ್ಯೆಗೀಡಾದ ಸಾಧುಗಳು, ಗೋವನ್ನು ರಕ್ಷಣೆ ಮಾಡಿದ ಮುಸ್ಲಿಮರೂ ನಮ್ಮಲ್ಲಿದ್ದಾರೆ. ಗೋ ಕಳ್ಳಸಾಗಾಣೆದಾರರಿಂದ ಹತರಾದ ಸಲೀಂ ಅಲಿ ಮತ್ತು ಮಿಂಟು ಅಲಿ ಎಂಬ ಗೋ ವ್ಯಾಪಾರಿಗಳ ಬಗ್ಗೆ ಕೇಳಿದ್ದೀರಾ ನಾಸೀರುದ್ದೀನ್ ಸಾಹೇಬರೇ?
ನನಗೆ ಆತಂಕವಾಗುತ್ತಿದೆ, ನಿಮ್ಮಂತಹ ಉದ್ದೇಶಪೂರ್ವಕ ದ್ವೇಷ ಪ್ರಚಾರಕರು ಕೇವಲ ನಿಮ್ಮ ರಾಜಕೀಯ, ದ್ವೇಷದ ಅಜೆಂಡಾಗೆ ಹೊಂದಿಕೆಯಾಗುವ ಆಯಾಮದತ್ತ ಮಾತ್ರ ಗಮನ ಕೇಂದ್ರಿತವಾಗುವಂತೆ ಮಾಡುತ್ತೀರೇನೋ ಎಂಬ ಬಗ್ಗೆ ಭಯವಿದೆ. ನಾಸೀರುದ್ದೀನ್ ಸಾಹೇಬರೇ, ನನಗೆ ಧರ್ಮ ಇಲ್ಲ ಎನ್ನುವ ಮೂಲಕ ನೀವು ಸುಳ್ಳು ಹೇಳುತ್ತಿದ್ದೀರಿ, ನಿಮ್ಮ ಧರ್ಮಾಂಧತೆಯನ್ನು ವಾಕ್ ಚಾತುರ್ಯದಲ್ಲಿ ಅಡಗಿಸಿ ಸುಳ್ಳು ಹೇಳುತ್ತಿದ್ದೀರಿ. ನೀವು ಗೋ ಹಿಂಸೆಯ ಬಗ್ಗೆ ಮಾತನಾಡುತ್ತೀರಿ ಆದರೆ ಗೋ ಕಳ್ಳಸಾಗಾಣೆಯ ಬಗ್ಗೆ ಅಲ್ಲ, ಯಾಕೆಂದರೆ ನೀವು ಧರ್ಮಾಂಧ. ದೇಶದಲ್ಲಿ ಈಗ ದ್ವೇಷ ಹರಡುತ್ತಿದೆ ಎನ್ನುತ್ತೀರಾ, ಆದರೆ 2014ರ ಮೊದಲು ಮತ್ತು ಬಳಿಕ ಪರಿಸ್ಥಿತಿ ಒಂದೇ ರೀತಿ ಇದೆ. ನೀವು ದ್ವೇಷವನ್ನು ಉತ್ತೇಜಿಸುತ್ತೀರಾ, ಯಾಕೆಂದರೆ ದ್ವೇಷ ನಿಮ್ಮ ವ್ಯವಹಾರಕ್ಕೆ ಇಂಧನವಿದ್ದಂತೆ. ಎಲ್ಲರೂ ನ್ಯಾಯೋಚಿತವಾಗಿದ್ದರೆ ಅಥವಾ ರಾಜಕೀಯ ತಾರತಮ್ಯವಿಲ್ಲದೆ ಅನ್ಯಾಯದ ಬಗ್ಗೆ ಮಾತುನಾಡುವವರಾಗಿದ್ದರೆ, ನಿಮ್ಮಂತೆ ಮಾತನಾಡುವವರನ್ನು ಯಾರು ತಾನೆ ಲೆಕ್ಕಿಸುತ್ತಿದ್ದರು?
ಮೋದಿಗೆ ಬೈಯುವುದು ಒಳ್ಳೆಯ ವ್ಯವಹಾರ, ಅಸಹಿಷ್ಣುತೆ ಬಗ್ಗೆ ಮಾತನಾಡುವುದು ಒಳ್ಳೆಯ ವ್ಯವಹಾರ, ಬಹುಸಂಖ್ಯಾತರ ತುಚ್ಛೀಕರಣ ಒಳ್ಳೆಯ ವ್ಯವಹಾರ. ದ್ವೇಷದ ಸಂಭಾವ್ಯತೆ ಇದ್ದಾಗ ನೀವು ತುಟಿ ಬಿಚ್ಚುತ್ತೀರಾ, ಎಲ್ಲಾ ದ್ವೇಷದ ಸಂಭಾವ್ಯತೆಗಳು ನಿಮ್ಮಂತಹ ಪ್ರಚಾರ ಪ್ರಿಯರಿಗೆ ಆದಾಯ ತಂದುಕೊಡುತ್ತದೆ. ನಾಸೀರುದ್ದೀನ್ ಸಾಹೇಬರೆ, ನೀವು ಒಬ್ಬ ಪ್ರಜ್ಞಾವಂತ ನಾಗರಿಕನಲ್ಲ, ನೀವೊಬ್ಬ ಉತ್ತಮ ಉದ್ಯಮಿ ಮತ್ತು ದ್ವೇಷವೊಂದೇ ನಿಮ್ಮ ಕರೆನ್ಸಿ.
ಈ ದೇಶದಲ್ಲಿ ನೆಲೆಸಲು ನನಗೂ ಅತಂಕವಾಗುತ್ತದೆ ನಾಸೀರುದ್ದೀನ್ ಸಾಹೇಬರೇ. ಮಾಧ್ಯಮಗಳು ನಿಮ್ಮಂತ ದ್ವೇಷ ಪ್ರಚಾರಕರಿಗೆ ಆಹಾರ ಒದಗಿಸುತ್ತದೆ ಎಂಬ ಬಗ್ಗೆ ಭಯವಿದೆ. ಇಚ್ಛೆ ಪಟ್ಟಾಗ ಮೈಕ್ ಪಡೆಯುತ್ತೀರಿ ಎಂಬ ಭಯವಿದೆ. ದ್ವೇಷವನ್ನು ಅಚ್ಚುಕಟ್ಟಾಗಿ ಪಸರಿಸುವ ಕೆಲ ಮಾಧ್ಯಮ ನಿಮ್ಮ ಧ್ವನಿಯನ್ನು ಮತ್ತಷ್ಟು ಗಟ್ಟಿಗೊಳಿಸಬಹುದು ಎಂಬ ಭಯವಿದೆ, ನಿಮ್ಮಂತಹವರು ಇರುವ ಭಾರತವನ್ನು ನೋಡಬೇಕಲ್ಲ ಎಂಬ ಬಗ್ಗೆ ಭಯವಿದೆ.
ನಾಸೀರುದ್ದೀನ್ ಸಾಹೇಬರೇ, ನೀವು ಈಗ ಒಬ್ಬ ಸ್ಟಾರ್, ನೀವು ನಿರ್ಭೀತಿಯಿಂದ ಅಸಂಬದ್ಧವಾದ ಹೇಳಿಕೆಯನ್ನು ನೀಡಬಹುದು, ಯಾಕೆಂದರೆ ನಿಮ್ಮನ್ನು ಸ್ಟಾರ್ ಮಾಡಿದ್ದು ಸಹನಶೀಲ ಹಿಂದೂ. ಇತರ ಯಾವುದೇ ದೇಶ ನಿಮ್ಮಂತಹ ಜನರು ರಾಕ್ಷಸೀಕರಣ ಮುಂದುವರೆಸುವುದನ್ನು ಸಹಿಸಿಕೊಳ್ಳೋದಿಲ್ಲ ಮತ್ತು ಇದು ಕೇವಲ ಧರ್ಮಕ್ಕೆ ಸೀಮಿತವಾದುದಲ್ಲ.
ನಿಮ್ಮ ಹೀರೋ ಹೀರಾಲಾಲ್ ಸಿನಿಮಾದ ಫೇಮಸ್ ಡೈಲಾಗ್ನೊಂದಿಗೆ ಈ ಪತ್ರವನ್ನು ಅಂತ್ಯಗೊಳಿಸಲು ಇಚ್ಛಿಸುತ್ತೇನೆ.
‘ಏ ಹೇ ಮೆರಾ ದೋಸ್ತ್, ಖಾತೆ ನಹೀ ಗೋಸ್ಟ್….ನಾಮ್ ಕ ಭಗವಾನ್ ಹೇ, ದಿಲ್ ಕಾ ಇನ್ಸಾನ್ ಹೇ. ಇಸ್ ಹಿ ಕೀ ಮೆಹರ್ಬಾನಿ ಸೆ ಗಧಾ ಪೆಹಲ್ವಾನ್ ಹೇ-ನಾಸೀರುದ್ದೀನ್ ಶಾ-ಹೀರೋ ಹೀರಾಲಾಲ್ ಹೇ.
ನನಗೂ ಆತಂಕವಾಗುತ್ತಿದೆ ನಾಸೀರುದ್ದೀನ್ ಸಾಹೇಬರೇ. ನಿಮ್ಮಂತಹ ಜನರ ಬಗ್ಗೆ ನನಗೆ ಆತಂಕವಾಗುತ್ತಿದೆ ಮತ್ತು ನಿಮ್ಮಂತವರು ನಿರಂತರ ರಾಕ್ಷಸೀಕರಣ ಮಾಡುತ್ತಿದ್ದರೂ ಹಿಂದೂ ಮತ್ತು ಭಾರತೀಯರು ನಿಮ್ಮನ್ನು ಪೀಠದಲ್ಲಿ ಇಡುವಷ್ಟು ಸಹಿಷ್ಣುಗಳಾಗಿದ್ದಾರೆ ಎಂಬ ಬಗ್ಗೆ ನನಗೆ ಆತಂಕವಿದೆ.
ಮೂಲ ಲೇಖನ : ನೂಪರ್ ಜೆ ಶರ್ಮಾ, Editor, OpIndia.com
ಕೃಪೆ: opindia.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.