ಮಂಗಳೂರು : ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಇಂದು ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯ ಸಚಿವರಾದ ಅನಂತ್ ಕುಮಾರ್ ಹೆಗಡೆಯವರು ವಿದ್ಯಾರ್ಥಿಗಳನ್ನು ಮತ್ತು ಉಪನ್ಯಾಸಕರನ್ನು ಉದ್ದೇಶಿಸಿ, “ಸ್ಕಿಲ್ ಇನ್ ಹೈಯರ್ ಎಜ್ಯುಕೇಷನ್” ಕುರಿತು ಮಾತನಾಡಿದರು.
ಭಾರತೀಯ ಪಾರಂಪರಿಕ ಶಿಕ್ಷಣ ಪದ್ಧತಿ, ಇಂದಿನ ಆಧುನಿಕ ಶಿಕ್ಷಣ ಪದ್ಧತಿ ಹಾಗೂ ಭವಿಷ್ಯದ ಶಿಕ್ಷಣ ಪದ್ಧತಿಯು ಯಾವ ರೀತಿ ಪರಿವರ್ತನೆಗೊಳ್ಳಲಿದೆ ಮತ್ತು ಹೇಗೆ ಶಿಕ್ಷಣ ಪದ್ಧತಿಯು ತನ್ನ ಆಯಾಮಗಳನ್ನು ಬದಲಾಯಿಸಲಿದೆ ಇವೇ ಮೊದಲಾದ ವಿಷಯಗಳ ಕುರಿತು ಸುಮಾರು 35 ನಿಮಿಷಗಳ ಕಾಲ ವಿಸ್ತ್ರತ ಮಾಹಿತಿಯನ್ನು ನೀಡಿದರು. ವಿದೇಶಿಗರು ಭಾರತದಲ್ಲಿರುವ ವಿಜ್ಞಾನದ ಹಾಗೂ ಗಣಿತಶಾಸ್ತ್ರದ ಸ್ವತ್ತುಗಳನ್ನ ಯಾವ ರೀತಿ ಬಳಕೆ ಮಾಡಿಕೊಂಡರು, ಮತ್ತು ಹೇಗೆ ನಮ್ಮದೇ ಭಾರತಕ್ಕೆ ಮತ್ತೆ ಬಳುವಳಿಯಾಗಿ ಕೊಟ್ಟರು ಹೀಗೆ ಮುಂತಾದ ವಿಷಯಗಳ ಕುರಿತು ಬೆಳಕು ಚೆಲ್ಲಿದರು.
ಭಾರತದಲ್ಲಿರುವವರು ಬೇರೆ ದೇಶಗಳಿಗೆ ಹೋಗಿ ತಮ್ಮ ಪ್ರತಿಭೆಗಳನ್ನು ಅನಾವರಣ ಮಾಡ್ತಾರೆ ಅದೇ ರೀತಿ ನಮ್ಮ ದೇಶದ ಪ್ರತಿಭೆಗಳನ್ನ ಬೆಳೆಸಿ ಅವರನ್ನೆ ಮುಂದುವರೆಸಿಕೊಂಡು ಹೋಗಬೇಕಾದ್ರೆ ಸ್ಕಿಲ್ ಅಂದರೆ ಕೌಶಲ್ಯಾಭಿವೃದ್ಧಿಯ ಅಗತ್ಯತೆ ಎಷ್ಟಿದೆ ಅನ್ನುವ ಕುರಿತಾದ ಪ್ರತಿಯೊಂದು ಮಾಹಿತಿಗಳನ್ನು ಕೂಡ ಅಲ್ಲಿನ ವಿದ್ಯಾರ್ಥಿಗಳಿಗೆ ಮತ್ತು ನೆರೆದಿದ್ದ ಪ್ರತಿಯೊಬ್ಬರಿಗೂ ತಿಳಿಸಿಕೊಟ್ಟರು.
ಪ್ರಾರಂಭದಲ್ಲಿ ಯಕ್ಷಗಾನದ ಪ್ರದರ್ಶನದ ಮೂಲಕ ಕೇಂದ್ರ ಸಚಿವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಇಂಜಿನಿಯರಿಂಗ್ ವಿದ್ಯಾರ್ಥಿ ಕಾರ್ತಿಕ್ ಬಾಸ್ರಿ ಯವರು ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥನೆ ಮಾಡಿದರು. ಡಾ. ಮಂಗಳಾ ಮತ್ತು ಡಾ. ಅಕ್ಷತಾ ಶೆಟ್ಟಿಯವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಪ್ರೊ ಶ್ರೀನಾಥ್ ರಾವ್ ಅವರು ಸನ್ಮಾನ್ಯ ಕೇಂದ್ರ ಸಚಿವರ ಸಾಧನೆಗಳನ್ನು ಉಲ್ಲೇಖಿಸಿ ಸಭೆಗೆ ಪರಿಚಯಿಸಿದರು. ಶ್ರೀನಿವಾಸ್ ವಿಶ್ವವಿದ್ಯಾಲಯದ ಸನ್ಮಾನ್ಯ ಸಹ ಕುಲಪತಿಗಳಾದ ಡಾ. ಶ್ರೀನಿವಾಸ್ ರಾವ್ ಅವರು ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ವಿಶ್ವವಿದ್ಯಾಲಯದ ಘನತೆವೆತ್ತ ಕುಲಪತಿಗಳಾದ ಶ್ರೀ ಸಿಎ ಎ. ರಾಘವೇಂದ್ರ ರಾವ್ ಅವರು ಅಧ್ಯಕ್ಷೀಯ ಭಾಷಣವನ್ನು ಮಾಡಿದರು. ವಿಶ್ವವಿದ್ಯಾಲಯದ ಸನ್ಮಾನ್ಯ ಉಪಕುಲಪತಿಗಳಾದ ಡಾ. ಪಿ. ಎಸ್. ಐತಾಳ್ ಅವರು ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಸಚಿವರು, ಇಂಜಿನಿಯರಿಂಗ್-ಮೆಡಿಕಲ್-ಡೆಂಟಲ್ ಕಾಲೇಜುಗಳ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.