ಕರ್ತಾರ್ಪುರ ಕಾರಿಡಾರ್ ಮೂಲಕ ಪಾಕಿಸ್ಥಾನ ತನ್ನ ನೈಜ ವಿಕೃತ ಮುಖವನ್ನು ಮರೆಮಾಚುವ ಪ್ರಯತ್ನ ಮಾಡುತ್ತಿದೆ. ತನ್ನ ನೆಲದ ಅಲ್ಪಸಂಖ್ಯಾತರನ್ನು ನಿಕೃಷ್ಟವಾಗಿ ಕಾಣುವ ಆ ದೇಶ ಈ ಯೋಜನೆಯ ಮೂಲಕ ತನ್ನ ದುಷ್ಟತನವನ್ನು ಮರೆಮಾಚಿ ಒಳ್ಳೆಯತನದ ಸೋಗು ಹಾಕಲು ಹೊರಟಿದೆ. ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಕಾರುವುದು ಅದರ ಹುಟ್ಟು ಗುಣ ಎಂಬುದು ಜಗತ್ತಿಗೆಯೇ ತಿಳಿದಿರುವ ಸತ್ಯ. ಹಿಂದೂ, ಸಿಖ್ಖರು ಪಾಕಿಸ್ಥಾನದ ಅನ್ಯ ಧರ್ಮ ದ್ವೇಷದ ಸಂತ್ರಸ್ಥರು. ಹೀಗಿರುವಾಗ ಈ ಯೋಜನೆ ಪಾಕ್ನ ನಿಜ ಚಿತ್ರಣವನ್ನು ಬದಲಾಯಿಸುತ್ತದೆ ಎಂಬುದನ್ನು ನಂಬುವುದು ಕಷ್ಟ.
ಕರ್ತಾರ್ಪುರ್ ಕಾರಿಡಾರ್ 4 ಕಿಮೀ ರಸ್ತೆ ನಿರ್ಮಾಣ ಯೋಜನೆಯಾಗಿದ್ದು, ಪಾಕಿಸ್ಥಾನದ ಕರ್ತಾರ್ಪುರ್ನಲ್ಲಿನ ಗುರುದ್ವಾರ ದರ್ಬಾರ್ ಸಾಹೀಬ್ನ್ನು ಭಾರತದ ಗುರುದಾಸ್ಪುರ ಜಿಲ್ಲೆಯ ದೇರಾ ಬಾಬಾ ನಾನಕ್ಗೆ ಸಂಪರ್ಕಿಸುತ್ತದೆ. ಉಭಯ ದೇಶಗಳ ಜನರು ವೀಸಾ ಇಲ್ಲದೆಯೇ ಇಲ್ಲಿಗೆ ಪ್ರಯಾಣಿಸಬಹುದಾಗಿದೆ. ಇತ್ತೀಚಿಗಷ್ಟೇ ಈ ಯೋಜನೆಗೆ ಶಿಲಾನ್ಯಾಸವನ್ನು ನೆರವೇರಿಸಲಾಗಿದೆ.
ಅಲ್ಪಸಂಖ್ಯಾತರ ಬಗೆಗಿನ ತನ್ನ ಕಠಿಣ ನಿಲುವನ್ನು ಸಡಿಲಿಸಿ ಒಳ್ಳೆಯವನಂತೆ ಫೋಸ್ ಕೊಡುವ ಉದ್ದೇಶದೊಂದಿಗೆ ಪಾಕಿಸ್ಥಾನ ಈ ಯೋಜನೆಯನ್ನು ಆರಂಭಿಸಿದೆ, ಆದರೆ ಕಟ್ಟರ್ ಮೂಲಭೂತವಾದಿ ಇಸ್ಲಾಮಿಕ್ ಜನರನ್ನು ಹೊಂದಿರುವ, ಸದಾ ಹಿಂದೂ ಮತ್ತು ಸಿಖ್ಖರನ್ನು ಅಪರಾಧಿಗಳನ್ನಾಗಿಸಿ ಹಿಂಸಿಸುವ ದೇಶ ನಿಜಕ್ಕೂ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದೇ ಎಂಬುದು ಈಗಿರುವ ನಿಜವಾದ ಪ್ರಶ್ನೆ.
ಪ್ರಸ್ತುತ ಪಾಕಿಸ್ಥಾನದಲ್ಲಿ ಶೇ.1.6ರಷ್ಟು, ಅಂದರೆ 36 ಲಕ್ಷ ಹಿಂದೂಗಳಿದ್ದಾರೆ. ಕಳೆದ 50 ವರ್ಷಗಳಲ್ಲಿ ಶೇ.90ರಷ್ಟು ಹಿಂದೂಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. 2014ರ ಎಕ್ಸ್ಪ್ರೆಸ್ ಟ್ರಿಬ್ಯುನ್ ರಿಪೋರ್ಟ್ ಪ್ರಕಾರ, ಶೇ.90ರಷ್ಟು ಹಿಂದೂಗಳ ಪವಿತ್ರ ಕ್ಷೇತ್ರಗಳನ್ನು ಅಲ್ಲಿ ಧ್ವಂಸ ಮಾಡಲಾಗಿದೆ. ಈ ವರದಿ ಹೇಳುವಂತೆ 1990ರಿಂದ ಅಲ್ಲಿದ್ದ 428 ಹಿಂದೂ ಕ್ಷೇತ್ರಗಳ ಪೈಕಿ 408 ಕ್ಷೇತ್ರಗಳನ್ನು ನಾಶಪಡಿಸಲಾಗಿದೆ. ಅಲ್ಲದೇ, ಈ ಜಾಗದಲ್ಲಿ ಶೌಚಾಲಯ, ಸಮಾಧಿ, ಶಾಲೆ, ರೆಸ್ಟೋರೆಂಟ್, ಸರ್ಕಾರಿ ಕಛೇರಿಗಳನ್ನು ನಿರ್ಮಾಣ ಮಾಡಲಾಗಿದೆ. ಕಲಿಬರಿ ದೇಗುಲದ ಜಾಗದಲ್ಲಿ ಹೋಟೆಲ್ ನಿರ್ಮಾಣವಾಗಿದೆ, ಸಾವಿರ ವರ್ಷ ಹಳೆಯ ವರುಣ ಮಂದಿರವನ್ನು ಶೌಚಾಲಯವಾಗಿ ಪರಿವರ್ತಿಸಲಾಗಿದೆ, ಕೃಷ್ಣ ದೇಗುಲವನ್ನು ಸಮಾಧಿಯನ್ನಾಗಿಸಲಾಗಿದೆ, ಇಸ್ಲಾಮಾಬಾದ್ನಲ್ಲಿನ ರಾಮ್ ಕುಂಡ್ ಮಂದಿರದ ಜಾಗ ಈಗ ಪಿಕ್ನಿಕ್ ಸ್ಪಾಟ್ ಆಗಿ ಪರಿವರ್ತನೆಗೊಂಡಿದೆ.
ಸಿಂಧ್ ಪ್ರಾಂತ್ಯದ ಲ್ಯಾಂಡ್ ಮಾಫಿಯಾ ಹಿಂದೂಗಳ ಜಾಗಗಳನ್ನು ಕಬಳಿಸಿದೆ, ದೂರು ಕೊಟ್ಟರೂ ಅಲ್ಲಿನ ಆಡಳಿತ ಯಾವುದೇ ಕ್ರಮಗಳನ್ನು ಜರುಗಿಸುತ್ತಿಲ್ಲ. ಬಲವಂತವಾಗಿ ಜಾಗಗಳನ್ನು ಮಾರಾಟ ಮಾಡಿರುವ ಹಿಂದೂಗಳು ಬೇರೆ ದೇಶಗಳಿಗೆ ವಲಸೆ ಹೋಗಿದ್ದಾರೆ. ಪಾಕಿಸ್ಥಾನದಿಂದ ಭಾರತಕ್ಕೆ ಬರಲು ಸಿಗುವಷ್ಟು ಸುಲಭದಲ್ಲಿ ವೀಸಾ, ಭಾರತದಿಂದ ಪಾಕಿಸ್ಥಾನಕ್ಕೆ ಹೋಗಲು ಸಿಗುವುದಿಲ್ಲ ಎಂಬುದು ಈ ದೇಶದ ಮತ್ತೊಂದು ವಿಶೇಷ. ಪಾಕ್ನಲ್ಲಿ ಹಿಂದೂ, ಸಿಖ್ಖರನ್ನು ಅತ್ಯಂತ ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡಲಾಗುತ್ತಿದೆ. 2018ರಲ್ಲಿ ಪೇಶಾವರದ ಖೈಬರ್ ಪಕ್ತುಂಕಾವದಲ್ಲಿ ಸಿಖ್ಖರ ಮಾರಣಹೋಮದ ಬಗ್ಗೆ ದೊಡ್ಡ ಸುದ್ದಿಯೇ ಆಗಿತ್ತು. ಅಲ್ಲಿನ ಬಹುತೇಕ ಸಿಖ್ಖರು ಪ್ರಾಣ ಉಳಿಸಿಕೊಳ್ಳಲು ಅಲ್ಲಿಂದ ಓಡಿ ಹೋಗಿದ್ದಾರೆ ಎನ್ನಲಾಗಿದೆ. ಪೇಶಾವರದ 30 ಸಾವಿರ ಸಿಖ್ಖರ ಪೈಕಿ ಶೇ.60ರಷ್ಟು ಮಂದಿ ಮೂಲಭೂತವಾದಿ ಮುಸ್ಲಿಮರಿಗೆ ಬೆದರಿ ಮನೆ ಮಠ ತೊರೆದು ಓಡಿಹೋಗಿದ್ದಾರೆ. ಅವರಿಗೆ ಧಾರ್ಮಿಕ ಸ್ವಾತಂತ್ರ್ಯವಾಗಲಿ, ಸಾಂವಿಧಾನಿಕ ಸ್ವಾತಂತ್ರ್ಯವಾಗಿ ಇಲ್ಲ. ಸುಡೋ ಅಕಾಲಿ, ಕಲೀಸ್ತಾನ್ ಸಂಘಟನೆಗಳೂ ಪಾಕಿಸ್ಥಾನದಲ್ಲಿ ಸಿಖ್ಖರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಚಕಾರವೆತ್ತುವುದಿಲ್ಲ. ಭಾರತಕ್ಕೆ ಆಗಮಿಸುವ ಪಾಕಿಸ್ಥಾನಿ ಹಿಂದೂ ಮತ್ತು ಸಿಖ್ಖರು ಮತ್ತೆ ಆ ದೇಶಕ್ಕೆ ಹೋಗಲು ಬಯಸುವುದೇ ಇಲ್ಲ. ಯಾಕೆಂದರೆ ಅವರಿಗೆ ಅಲ್ಲಿ ಮತ್ತೆ ಹಿಂಸೆ ಅನುಭವಿಸಬೇಕಾಗಬಹುದು ಎಂಬ ಭಯ ಕಾಡುತ್ತದೆ.
1947ರಲ್ಲಿ ಪಾಕಿಸ್ಥಾನದ ರಚನೆಯಾದಾಗ ಅಲ್ಲಿದ್ದ ಹಿಂದೂಗಳ ಪ್ರಮಾಣ ಶೇ.15ರಷ್ಟು, ಈಗ ಅದು ಶೇ 1.6ರಷ್ಟಕ್ಕೆ ಇಳಿಕೆಯಾಗಿದೆ ಎಂದರೆ ಅಲ್ಲಿ ಅಲ್ಪಸಂಖ್ಯಾತ ಧರ್ಮೀಯರ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಸುಲಭವಾಗಿಯೇ ಊಹಿಸಬಹುದು.
ಇಂತಹ ಪರಿಸ್ಥಿತಿಯಲ್ಲಿ, ಕರ್ತಾರ್ಪುರ್ ಕಾರಿಡಾರ್ ಯೋಜನೆಯ ಹಿಂದಿನ ಪಾಕಿಸ್ಥಾನದ ಉದ್ದೇಶದ ಬಗ್ಗೆ ಅನುಮಾನಪಡುವುದು ಸಹಜವೇ ಆಗಿದೆ. ಈ ಯೋಜನೆಯ ಮೂಲಕ ಪಾಕಿಸ್ಥಾನ ತನ್ನ ಧಾರ್ಮಿಕ ಸಹಿಷ್ಣುತೆಯನ್ನು ಸಾಬೀತು ಮಾಡಲು ಹೊರಟರೂ, ಅದರ ಇದುವರೆಗಿನ ಟ್ರ್ಯಾಕ್ ರೆಕಾರ್ಡ್ ಬೇರೆಯದ್ದೇ ಚಿತ್ರಣವನ್ನು ತೋರಿಸುತ್ತಿರುವುದು ಸುಳ್ಳಲ್ಲ. ಅಷ್ಟೇ ಅಲ್ಲದೇ, ಯೋಜನೆ ಶಿಲಾನ್ಯಾಸದ ವೇಳೆ ಪಾಕ್ ಪ್ರಧಾನಿ ಕಾಶ್ಮೀರ ವಿಷಯವನ್ನೂ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಭವಿಷ್ಯದಲ್ಲಿ ಸಂಬಂಧದಲ್ಲಿ ಮಹತ್ವದ ಪರಿವರ್ತನೆಯ ಬಗ್ಗೆ ನಿರೀಕ್ಷೆ ಮಾಡುವುದು ಕಷ್ಟ. ಹಿಂದೂ ಮತ್ತು ಸಿಖ್ಖರ ಬಗೆಗಿನ ತನ್ನ ದ್ವೇಷವನ್ನು ಬಿಡುವ ಮೂಲಕ ತನ್ನ ಸಿದ್ಧಾಂತವನ್ನು ಪಾಕಿಸ್ಥಾನ ಬದಲಾಯಿಸಿಕೊಳ್ಳುವುದೇ ಎಂಬುದನ್ನು ಕಾದು ನೋಡಬೇಕಷ್ಟೆ.
source: www.organiser.org
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.