ರಾಮ ಜನ್ಮ ಭೂಮಿಯಾದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲೇಬೇಕೆನ್ನುವ ಕೂಗು ಮತ್ತೆ ದೇಶದಾದ್ಯಂತ ಕೇಳಿಬರುತ್ತಿದೆ. ಇದೇ ಭಾನುವಾರ ವಿಶ್ವ ಹಿಂದೂ ಪರಿಷತ್ ಏರ್ಪಡಿಸಿದ್ದ ‘ಧರ್ಮಸಭಾ’ ಕಾರ್ಯಕ್ರಮ ದೊಡ್ಡ ಸಂಚಲನವನ್ನೇ ಮೂಡಿಸಿದೆ. ಲಕ್ಷಾಂತರ ರಾಮಭಕ್ತರು, ಸಾಧು–ಸಂತರು, ಮುಖಂಡರು ಸೇರಿದ್ದ ಧರ್ಮಸಭೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಜಾರಿ ಮಾಡಬೇಕೆನ್ನುವ ಅಭಿಪ್ರಾಯಗಳೂ ಕೇಳಿಬಂದಿವೆ.
ಆದರೆ ಇಂದಿಗೂ ಕೆಲ ರಾಜಕೀಯ ಪಕ್ಷಗಳು, ಪ್ರಮುಖ ಮಾಧ್ಯಮಗಳು ರಾಮ ಮಂದಿರ ವಿವಾದವೊಂದು ರಾಜಕೀಯ ಪ್ರೇರಿತ ವಿವಾದವೆಂದೂ, ಆ ವಿವಾದ ಹುಟ್ಟಿದ್ದೇ ಭಾರತೀಯ ಜನತಾ ಪಕ್ಷದಿಂದ ಎಂದೂ ಬಿಂಬಿಸುತ್ತಿವೆ. ಇದರಿಂದಾಗಿ ಬಹುತೇಕ ಅಮಾಯಕ ಭಾರತೀಯ ಪ್ರಜೆಗಳೂ ಭಾರತೀಯ ಜನತಾ ಪಕ್ಷವೇ ಆ ವಿವಾದವನ್ನು ಸೃಷ್ಟಿ ಮಾಡಿದೆ ಎಂದೇ ಭಾವಿಸುವಂತಾಗಿದೆ. ಆದರೆ ನಿಜಕ್ಕೂ ಆ ವಿವಾದ ಪ್ರಾರಂಭವಾದಾಗಾಗಲೀ ಅಥವಾ ಮೊದಲ ಬಾರಿಗೆ ಆ ವಿವಾದ ನ್ಯಾಯಾಲಯದ ಮೆಟ್ಟಿಲು ಹತ್ತಿದಾಗಲಾಗಲೀ ಭಾರತೀಯ ಜನತಾ ಪಕ್ಷ ಅಸ್ತಿತ್ವದಲ್ಲೇ ಇರಲಿಲ್ಲ! ಅಷ್ಟೇ ಅಲ್ಲ, ಆಗ ಭಾರತೀಯ ಸರ್ಕಾರಗಳ ಅಸ್ತಿತ್ವವೂ ಇರಲಿಲ್ಲ!
ಹಾಗಾದರೆ ಆ ವಿವಾದ ಇದುವರೆಗೂ ನಡೆದುಬಂದ ಹಾದಿಯನ್ನೊಮ್ಮೆ ನೋಡಿಬರೋಣ;
1859ರಲ್ಲಿ ಬ್ರಿಟಿಷ್ ಸರ್ಕಾರವು ವಿವಾದಿತ ಸ್ಥಳವನ್ನು ಹಿಂದೂ–ಮುಸ್ಲಿಮರಿಗೆ ಹಂಚಿಕೆ ಮಾಡಿ ಪೂಜೆ ಹಾಗೂ ಪ್ರಾರ್ಥನೆಗೆ ಅವಕಾಶ ಕಲ್ಪಿಸಿತು.
1885ರಲ್ಲಿ ಮಂದಿರ-ಮಸೀದಿ ವಿಚಾರವು ಮೊದಲ ಬಾರಿಗೆ ನ್ಯಾಯಾಲಯದ ಮೆಟ್ಟಿಲೇರಿತು. ಮಹಾಂತ ರಘುವರ್ ದಾಸ್ ಎನ್ನುವವರು ವಿವಾದಿತ ಸ್ಥಳದ ಮಾಲೀಕತ್ವಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.
1949ರ ಡಿಸೆಂಬರ್ನಲ್ಲಿ ಹಿಂದೂಗಳು ವಿವಾದಿತ ರಾಮಜನ್ಮ ಭೂಮಿಯಲ್ಲಿ ಭಗವಾನ್ ಶ್ರೀ ರಾಮನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದರು. ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಿದ್ದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು.
1950ರಲ್ಲಿ ರಾಮನ ವಿಗ್ರಹವನ್ನು ಅಲ್ಲೇ ಉಳಿಸಿಕೊಳ್ಳಲು ಮತ್ತು ಪೂಜೆ ಮುಂದುವರಿಸಲು ಹಿಂದೂಗಳಿಗೆ ಅವಕಾಶ ನೀಡುವಂತೆ ಕೋರಿ ಮಹಾಂತ ರಾಮಚಂದ್ರ ಪರಮಹಂಸ ದಾಸ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಆಗ ಕೂಡಾ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಿದ್ದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು.
1959ರಲ್ಲಿ ನಿರ್ಮೋಹಿ ಅಖಾಡ, ವಿವಾದಿತ ರಾಮಜನ್ಮ ಭೂಮಿಯ ಆ ಸ್ಥಳದ ಮಾಲೀಕತ್ವವನ್ನು ತಮಗೆ ವರ್ಗಾಯಿಸಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತು. ಆಗಲೂ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಿದ್ದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು.
1961ರಲ್ಲಿ ಸುನ್ನಿ ವಕ್ಫ್ ಮಂಡಳಿಯು ವಿವಾದಿತ ಸ್ಥಳದ ಮಾಲೀಕತ್ವ ತಮ್ಮದು ಎಂದು ಪ್ರತಿಪಾದಿಸಿ ನ್ಯಾಯಾಲಯದ ಮೊರೆ ಹೋಯಿತು. ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಿದ್ದು ಕೂಡಾ ಅದೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು.
1986ರಲ್ಲಿ ಫೈಜಾಬಾದ್ ನ್ಯಾಯಾಲಯವು ವಿವಾದಿತ ಜಾಗದಲ್ಲಿ ಪೂಜೆ ಮುಂದುವರಿಸಲು ಹಿಂದೂಗಳಿಗೆ ಅವಕಾಶ ನೀಡಿತು. ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಿದ್ದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಮೊಮ್ಮಗ ಶ್ರೀ ರಾಜೀವ್ ಗಾಂಧಿಯವರು.
1990ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿ ಒಂದು ಶತಮಾನ ಕಳೆದರೂ ಇತ್ಯರ್ಥವಾಗದೇ ವಿವಾದಿತ ಸ್ಥಳವಾಗಿಯೇ ಉಳಿದ ಹಿಂದೂಗಳ ಆರಾಧ್ಯ ದೈವ ಭಗವಾನ್ ಶ್ರೀ ರಾಮಚಂದ್ರನ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಭಾರತೀಯ ಜನತಾ ಪಕ್ಷದ ನಾಯಕ ಶ್ರೀ ಎಲ್.ಕೆ.ಅಡ್ವಾಣಿ ಅವರ ನೇತೃತ್ವದಲ್ಲಿ ‘ರಥಯಾತ್ರೆ’ ಆಯೋಜನೆಗೊಂಡಿತು.
1992ರಲ್ಲಿ ಶತಮಾನಗಳ ವಿಳಂಬ ನೀತಿಯಿಂದ ಬೇಸತ್ತಿದ್ದ ಹಿಂದೂ ಕರ ಸೇವಕರಿಂದ ಬಾಬರಿ ಮಸೀದಿ ಧ್ವಂಸಗೊಂಡಿತು. ಹಾಗೆ ಕರ ಸೇವಕರಿಂದ ಬಾಬರಿ ಮಸೀದಿ ಧ್ವಂಸಗೊಂಡಾಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಿದ್ದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಪಿ.ವಿ.ನರಸಿಂಹ ರಾವ್ ಅವರ ಸರ್ಕಾರ.
2002ರಲ್ಲಿ ಅಲಹಾಬಾದ್ ಹೈಕೋರ್ಟ್ ರಾಮ ಜನ್ಮಭೂಮಿಯ ಮಾಲೀಕತ್ವಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಆರಂಭಿಸಿತು. ಆಗ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದ ಎನ್ ಡಿ ಎ ಸರ್ಕಾರ ಅಧಿಕಾರದಲ್ಲಿತ್ತು.
2005ರಲ್ಲಿ ವಿವಾದಿತ ರಾಮ ಜನ್ಮ ಭೂಮಿ ಸ್ಥಳದಲ್ಲಿ ಐವರು ಭಯೋತ್ಪಾದಕರ ತಂಡ ದಾಳಿ ನಡೆಸಿತು. ಆ ಐವರು ಉಗ್ರರೂ ಯೋಧರ ಗುಂಡಿಗೆ ಬಲಿಯಾದರು. ಆಗ ಕೇಂದ್ರದಲ್ಲಿದ್ದಿದ್ದು ಮನಮೋಹನ್ ಸಿಂಗ್ ಅವರ ನೇತೃತ್ವದ ಸರ್ಕಾರ.
2010ರಲ್ಲಿ ಮಾಲೀಕತ್ವ ಪ್ರಕರಣದ ತೀರ್ಪು ನೀಡಿದ ಅಲಹಾಬಾದ್ ಹೈಕೋರ್ಟ್ ರಾಮಲಲ್ಲಾ, ನಿರ್ಮೋಹಿ ಅಖಾಡ ಮತ್ತು ಸುನ್ನಿ ಮಂಡಳಿಗೆ ನಿವೇಶನವನ್ನು ಸಮಾನವಾಗಿ ಹಂಚಿಕೆ ಮಾಡಿತು.
2010ರ ಅದೇ ವರ್ಷ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಕೆಯಾಯಿತು.
2011ರಲ್ಲಿ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ತಡೆ ನೀಡಿತು.
2018ರ ಅ.29ರಂದು ಅಯೋಧ್ಯೆ ಮೂಲ ವಿವಾದ ಕುರಿತ ಅರ್ಜಿಯ ಪರಿಶೀಲನೆ ನಡೆಸಿದ್ದ ಸುಪ್ರೀಂಕೋರ್ಟ್, ಅಯೋಧ್ಯೆ ವಿವಾದ ತನ್ನ ಆದ್ಯತೆ ವಿಷಯವಲ್ಲ ಎಂದು ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿ ಪ್ರಕರಣದ ವಿಚಾರಣೆಯನ್ನು 2019ಕ್ಕೆ ಮುಂದೂಡಿತು.
ಹೀಗಿರುವಾಗ ಅಯೋದ್ಯೆ ವಿವಾದ ನ್ಯಾಯಾಲಯದ ಮೆಟ್ಟಿಲೇರುವಾಗ ಅಸ್ತಿತ್ವದಲ್ಲೇ ಇಲ್ಲದ ಪಕ್ಷವೊಂದರಿಂದಲೇ ಅಯೋಧ್ಯೆ ವಿವಾದ ಹುಟ್ಟಿಕೊಂಡಿತು ಎನ್ನುವುದು ಬಾಲಿಶತನವಲ್ಲದೆ ಮತ್ತೇನು?
“Justice delayed is justice denied” ಎನ್ನುವ ಮಾತೊಂದಿದೆ. ಅದನ್ನು ಈ ಪ್ರಕರಣಕ್ಕೆ ಖಂಡಿತವಾಗಿಯೂ ಹೋಲಿಸಬಹುದು. ಶತಮಾನಗಳಿಂದಲೂ ನ್ಯಾಯವಂಚಿತರಾಗಿರುವ ದೇಶದ ಬಹು ದೊಡ್ಡ ಸಮುದಾಯವೊಂದರ ಜೊತೆ ನಿಂತು ಶೀಘ್ರವಾಗಿ ನ್ಯಾಯ ಕೊಡಿಸುವ ಹೋರಾಟಕ್ಕೆ ರಾಜಕೀಯ ಪಕ್ಷವೊಂದು ಕೈ ಜೋಡಿಸಿದರೆ ಅದನ್ನು ತಪ್ಪೆಂದೇನೂ ಹೇಳಲಾಗದಲ್ಲವೇ? ಏಕೆಂದರೆ ಜನರಿಂದ, ಜನರಿಗಾಗಿ ಪಕ್ಷಗಳು ಮತ್ತು ಸರ್ಕಾರಗಳೇ ಹೊರತೂ ಪಕ್ಷಗಳಿಂದ ಅಥವಾ ಸರ್ಕಾರಗಳಿಂದ ಜನರಲ್ಲವೇ ಅಲ್ಲ. ಮತ್ತು ಇದೇ ಪ್ರಜಾಪ್ರಭುತ್ವದ ನಿಜವಾದ ಪರಿಕಲ್ಪನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.