“ಕೃಷಿಯಲ್ಲಿ ಉತ್ತಮ ಇಳುವರಿ ಬೇಕೆ ? ಹಾಗಿದ್ದರೆ ಕೃಷಿಭೂಮಿಯಲ್ಲಿ ವೇದ ಮಂತ್ರಗಳನ್ನು ಪಠಿಸಿ” ಎಂದು ಗೋವಾ ಸರ್ಕಾರವು ರಾಜ್ಯದ ರೈತರಿಗೆ ಸಲಹೆ ನೀಡಿದೆ.
ರೈತರು ತಮ್ಮ ಕೃಷಿಭೂಮಿಯಲ್ಲಿ ‘ಬ್ರಹ್ಮಾಂಡ ಕೃಷಿ’ (ಕಾಸ್ಮಿಕ್ ಫಾರ್ಮಿಂಗ್) ಅಳವಡಿಸಿಕೊಳ್ಳುವಂತೆ ಗೋವಾ ಕೃಷಿ ಇಲಾಖೆ ಸಲಹೆ ನೀಡಿದೆ. ರೈತರು ತಮ್ಮ ಭೂಮಿಯಲ್ಲೇ ಕನಿಷ್ಠ 20 ದಿನಗಳ ಕಾಲ ವೇದಮಂತ್ರವನ್ನು ಪಠಿಸಿದರೆ, ಗುಣಮಟ್ಟದ ಬೆಳೆ ಹಾಗೂ ಗರಿಷ್ಠ ಇಳುವರಿ ಪಡೆಯಲು ಸಾಧ್ಯ ಎಂದು ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎನ್ನುವ ಸುದ್ದಿಯ ಬಗ್ಗೆ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಎಂದಿನಂತೆ ವಿಚಾರವಾದಿ ಮನಸ್ಥಿತಿಯ ಗಣ್ಯರು ಇದೊಂದು ಹಾಸ್ಯಾಸ್ಪದ ಸಲಹೆ ಎಂದು ಹೀಯಾಳಿಸಿದ್ದಾರಲ್ಲದೆ ಇದೇ ವಿಚಾರವನ್ನು ವೇದಗಳನ್ನು,ಹಿಂದೂ ನಂಬಿಕೆಗಳನ್ನು,ಸಂಪ್ರದಾಯಗಳನ್ನು ಹಳಿಯಲು ಯಶಸ್ವಿಯಾಗಿ ಬಳಸಿಕೊಳ್ಳುತ್ತಿದ್ದಾರೆ.
ಹಾಗಾದರೆ ನಿಜಕ್ಕೂ ವೇದಮಂತ್ರ ಪಠಿಸಿದರೆ ಉತ್ತಮ ಇಳುವರಿ ಬರುವುದು ನಿಜವೇ?
ಅದನ್ನು ತಿಳಿಯುವುದಕ್ಕೂ ಮೊದಲು ನಾವು ನಮ್ಮ ಹಿಂದೂ ಆಚರಣೆಗಳು,ಸಂಪ್ರದಾಯಗಳು ಮತ್ತು ನಂಬಿಕೆಗಳಿಂದಾಗಿ ಮೇಲ್ನೋಟಕ್ಕೇ ನಮಗೆ ಕಾಣಸಿಗಬಹುದಾದ ಒಂದಷ್ಟು ಪ್ರಯೋಜನಗಳ ಬಗ್ಗೆ ಗಮನ ಹರಿಸೋಣ.
ಒಂದು ಉದಾಹರಣೆಯನ್ನು ಕೊಡುವುದಾದರೆ “ಅಯ್ಯಪ್ಪ ಮಾಲೆ ಧರಿಸಿದರೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ” ಎಂದು ಯಾರಾದರೂ ವಿಚಾರವಾದಿಯೊಬ್ಬರ ಬಳಿ ಹೇಳಿದರೆ ಅವರದನ್ನು ಗೇಲಿ ಮಾಡಬಹುದು. ಆದರೆ ಅಯ್ಯಪ್ಪ ಮಾಲೆ ಧರಿಸಿದ ಅಷ್ಟೂ ದಿನ ಆ ಮಾಲಾಧಾರಿ ದುಶ್ಚಟಗಳಿಂದ ದೂರವಿರಲೇಬೇಕೆನ್ನುವ ನಿಯಮವಿದೆ. ಹಾಗೆ ನಿಯಮಗಳಿಗೆ ಬದ್ಧವಾಗಿ ಆ ಮಾಲಾಧಾರಿ ಅಷ್ಟು ದಿನ ಎಲ್ಲ ದುಶ್ಚಟಗಳಿಂದ ದೂರವಿದ್ದರೆ ಅವರ ಕುಟುಂಬದಲ್ಲಿ ಸ್ವಲ್ಪವಾದರೂ ಶಾಂತಿ ನೆಲೆಸದೆ ಇದ್ದೀತೆ? ಆ ಮಾಲಾಧಾರಿಯು ತಮ್ಮ ವ್ರತದ ನಂತರವೂ ಅದರ ಪ್ರಭಾವದಿಂದಾಗಿ ಅಂತಹಾ ಸನ್ನಡತೆಯನ್ನು ಮುಂದುವರಿಸಿದರೆ ಅವರ ಕುಟುಂಬಕ್ಕೆ ಮತ್ತಷ್ಟು ಸುಖ,ಶಾಂತಿಯ ಬದುಕು ದೊರೆತಂತಾಗುವುದಿಲ್ಲವೇ?
ಈಗ ಹೇಳಿ. “ಅಯ್ಯಪ್ಪ ಮಾಲೆ ಧರಿಸಿದರೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ” ಎಂದರೆ ವೈಚಾರಿಕವಾಗಿ ಅದನ್ನು ಸುಳ್ಳೆನ್ನಬೇಕೋ ಅಥವಾ ಸತ್ಯವೆಂದು ಒಪ್ಪಿಕೊಳ್ಳಬೇಕೋ?
ಇನ್ನೊಂದು ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ “ಏಕಾದಶಿಯಂದು ಉಪವಾಸ ಮಾಡಿದರೆ ಆರೋಗ್ಯವಂತರಾಗುತ್ತೀರಿ” ಎಂದು ಯಾರಾದರೂ ವಿಚಾರವಾದಿಯೊಬ್ಬರ ಬಳಿ ಹೇಳಿದರೆ ಅವರದನ್ನು ಶುದ್ಧ ಮೌಢ್ಯ ಎನ್ನದೆ ಇನ್ನೇನು ಹೇಳಿಯಾರು? ಆದರೆ ಮನುಷ್ಯ ಕನಿಷ್ಠ ತಿಂಗಳಿಗೆರಡು ಬಾರಿಯಾದರೂ ಉಪವಾಸ ಮಾಡಿದರೆ ಸಾಕಷ್ಟು ಅನಾರೋಗ್ಯ ಸಮಸ್ಯೆಗಳು ಬಾರದಂತೆ ತಡೆಯಬಹುದು. ನಮಗೆ ಬರುವ ಹಲವಾರು ಖಾಯಿಲೆಗಳ ಮೂಲ ಅಜೀರ್ಣ ಸಮಸ್ಯೆ. ಹಾಗಿರುವಾಗ ಉಪವಾಸದ ಮೂಲಕ ಅಜೀರ್ಣ ಸಮಸ್ಯೆಯಿಂದ ಮುಕ್ತಿ ಪಡೆದರೆ ಸಾಕಷ್ಟು ಖಾಯಿಲೆಗಳಿಂದ ಮುಕ್ತಿ ಪಡೆದಂತೆಯೇ ಸರಿ. ಹಾಗೆ ನಿರ್ದಿಷ್ಟ ದಿನವೊಂದನ್ನು(ಏಕಾದಶಿ) ಆಯ್ಕೆ ಮಾಡಿಕೊಂಡು, ಅಂದು ಉಪವಾಸ ಮಾಡುವ ಮೂಲಕ ಹಲವಾರು ಖಾಯಿಲೆಗಳಿಂದ ಮುಕ್ತಿ ಪಡೆಯಬಹುದಾದರೆ “ಏಕಾದಶಿಯಂದು ಉಪವಾಸ ಮಾಡಿದರೆ ಆರೋಗ್ಯವಂತರಾಗುತ್ತೀರಿ” ಎನ್ನುವ ಮಾತನ್ನು ಸಾರಾಸಗಟಾಗಿ ಅವೈಚಾರಿಕವೆಂದು ಹೇಗೆ ತಳ್ಳಿ ಹಾಕಲು ಸಾಧ್ಯ?
ವಾಸ್ತವವಾಗಿ ಭಾರತೀಯ ವಿಚಾರವಾದ ಯಾವತ್ತೂ ಭಾರತೀಯ ಆಚರಣೆ ಮತ್ತು ಸಂಪ್ರದಾಯಗಳ ಹಿಂದಿನ ವೈಚಾರಿಕ ಕಾರಣಗಳ ಬಗ್ಗೆ ತಿಳಿಯುವ ಪ್ರಯತ್ನವನ್ನೇ ಮಾಡಿಲ್ಲ. ಅಷ್ಟೇ ಅಲ್ಲದೆ ಹಾಗೊಂದು ವೇಳೆ ಅವುಗಳ ಹಿಂದಿನ ವೈಚಾರಿಕತೆಯನ್ನು ತಿಳಿಯುವ ಪ್ರಯತ್ನ ಮಾಡಿದರೆ ಅದು ವಿಚಾರವಾದಕ್ಕೆ ಮಾಡುವ ಅವಮಾನ ಎಂದೇ ಅದು ಭಾವಿಸಿದೆ!
ಈಗ “ಕೃಷಿಭೂಮಿಯಲ್ಲಿ ವೇದ ಮಂತ್ರಗಳನ್ನು ಪಠಿಸಿ” ಎನ್ನುವ ಗೋವಾ ಕೃಷಿ ಇಲಾಖೆಯ ಸಲಹೆಯನ್ನೇ ತೆಗೆದುಕೊಳ್ಳೋಣ. ಆ ಸಲಹೆಯನ್ನು ವಿರೋಧಿಸುತ್ತಿರುವವರು,ವಿಡಂಬಿಸುತ್ತಿರುವವರು ಹೇಳುತ್ತಿರುವಂತೆ ಗೋವಾ ಸರ್ಕಾರ ಕೇವಲ ಅಷ್ಟನ್ನು ಮಾತ್ರ ಹೇಳಿಲ್ಲ. ಆ ಸಲಹೆಯ ಜೊತೆ ಜೊತೆಗೇ ಒಂದಷ್ಟು ನಿಯಮಗಳನ್ನು ಕೂಡಾ ಹೇಳಿದೆ. ಆ ನಿಯಮಗಳ ಪ್ರಕಾರ ಈ ಪದ್ಧತಿ ಅಳವಡಿಸಿಕೊಳ್ಳುವವರು ತಮ್ಮ ಭೂಮಿಗೆ ರಾಸಾಯನಿಕಗಳನ್ನು ಸುರಿಯುವಂತಿಲ್ಲ. ಹಾಗೆಯೇ ಕ್ರಿಮಿನಾಶಕಗಳನ್ನೂ ಬಳಸುವಂತಿಲ್ಲ, ಸಂಪೂರ್ಣ ನೈಸರ್ಗಿಕ ಮಾದರಿಯಲ್ಲೇ ಕೃಷಿ ಕಾರ್ಯ ಕೈಗೊಳ್ಳಬೇಕು.
ಈಗ ಹೇಳಿ, ಯಾವುದೇ ರಾಸಾಯನಿಕಗಳನ್ನೂ ಭೂಮಿಗೆ ಸುರಿಯದೇ, ವಿಷಕಾರೀ ಕ್ರಿಮಿನಾಶಕಗಳನ್ನೂ ಬಳಸದೇ ಸಾವಯವ ಹಾಗೂ ಪರಿಸರಸ್ನೇಹಿ ಮಾದರಿಯಲ್ಲಿ ಕೃಷಿ ಕಾರ್ಯ ಮಾಡಿದರೆ ಅವರೇ ತಿಳಿಸಿರುವಂತೆ ಸಂಪೂರ್ಣ ಸಾವಯವ ಆಹಾರ ದೊರೆಯುವುದು ಸುಳ್ಳೇ? ಆ ಪದ್ಧತಿಯನ್ನಳವಡಿಸಿಕೊಳ್ಳುವ ರೈತರಿಗೆ ಖರ್ಚು ಕಡಿಮೆಯಾಗುವುದು ಸುಳ್ಳೇ? ಭೂಮಿಯಲ್ಲಿನ ಫಲವತ್ತತೆ ಹೆಚ್ಚಾಗಿ ಕ್ರಮೇಣ ಇಳುವರಿ ಕೂಡಾ ಹೆಚ್ಚಾಗುವುದು ಕೂಡಾ ಸುಳ್ಳೇ? ಇದರಿಂದ ಪರಿಸರದ ಮೇಲಿನ ಒತ್ತಡವೂ ಕಡಿಮೆಯಾಗುವುದು ಸುಳ್ಳೇ?
ಖಂಡಿತಾ ಯಾವುದೂ ಸುಳ್ಳಲ್ಲ. ಯಾವತ್ತೂ ಹೊಲದಲ್ಲಿಳಿದು ಕೆಲಸ ಮಾಡದ ವಿಚಾರವಾದಿಗಳೂ ಕೂಡಾ ಅದನ್ನು ವೈಚಾರಿಕವಾಗಿ ಸುಳ್ಳೆಂದು ಸಾಬೀತುಪಡಿಸಲು ಸಾಧ್ಯವಿಲ್ಲ. ಆದರೂ “ಭೂಮಿಗೆ ವಿಷಕಾರೀ ರಾಸಾಯನಿಕಗಳನ್ನು ಸುರಿಯದೇ ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಿ ಎಂದಷ್ಟೇ ಹೇಳುವುದು ಬಿಟ್ಟು ವೇದಮಂತ್ರವನ್ನು ಪಠಿಸಿ ಎಂದೇಕೆ ಅವರು ಸಲಹೆ ನೀಡಬೇಕು?” ಎಂದು ಬೇಕಾದರೆ ಅವರು ಕೇಳಬಹುದು.
ಮನುಷ್ಯ ಯಾವತ್ತಿಗೂ ಕಾನೂನು ಕಟ್ಟಳೆಗಿಂತಲೂ ಧಾರ್ಮಿಕ ನಂಬಿಕೆಗಳು ಮತ್ತದರ ಕಟ್ಟಳೆಗಳನ್ನು ಹೆಚ್ಚು ಭಯಭಕ್ತಿಯಿಂದ ಪಾಲಿಸುತ್ತಾನೆ. ಏಕೆಂದರೆ ಕಾನೂನಿಗೆ ಬೇಕಿರುವುದು ಸಾಕ್ಷಿ. ಸಾಕ್ಷಿ ಸಿಗದಂತೆ ಯಾವ ನಿಯಮ ಮುರಿದರೂ ಕಾನೂನಿನ ಪ್ರಕಾರ ನಾವು ಅಪರಾಧಿಗಳಲ್ಲ. ಆದರೆ ಧಾರ್ಮಿಕ ಕಟ್ಟಳೆಗಳನ್ನು ಮುರಿಯುವುದು ಸಾಕ್ಷಿ ಸಿಗದ ರೀತಿಯಲ್ಲಿ ಕಾನೂನನ್ನು ಮುರಿದು ನಿರಪರಾಧಿಯೆಂದು ಎದೆಯುಬ್ಬಿಸಿ ನಡೆಯುವಷ್ಟು ಸುಲಭದ ಮಾತಲ್ಲ. ಏಕೆಂದರೆ ನಮ್ಮೊಳಗೇ ಇರುವ ಆತ್ಮಸಾಕ್ಷಿ ಹಾಗೆ ಆ ನಿಯಮಗಳನ್ನು ಮೀರಲು ಒಪ್ಪುವುದಿಲ್ಲ.
ಇನ್ನೂ ಸರಳವಾಗಿ ಹೇಳಬೇಕೆಂದರೆ ಮದ್ಯಪಾನ ಮಾಡಿ ವಾಹನ ಓಡಿಸಬಾರದೆನ್ನುವ ಕಾನೂನು ಮಾಡಿದರೆ ಆ ಕಾನೂನಿನ ಕಣ್ಣು ತಪ್ಪಿಸಿಯಾದರೂ ಅದು ಹೇಗೋ ಮದ್ಯಪಾನ ಮಾಡಿಯೇ ಮಾಡುತ್ತಾರೆ. ಮದ್ಯಪಾನ ಮಾಡಿ ವಾಹನ ಓಡಿಸಬಾರದೆಂದು ಮನೆ ದೇವರ ಚಿತ್ರದ ಮೇಲೆ ಕೈ ಇಡಿಸಿ ಆಣೆ ಮಾಡಿಸಿಕೊಂಡರೆ? ಆಧುನಿಕ ಕಾಲದ ಇಂದಿನ ಯುವಕರಿಗೂ ಅದನ್ನು ಮೀರುವುದು ಅಷ್ಟು ಸುಲಭದ ಮಾತಲ್ಲ. ಬಹುಶಃ ನೈಸರ್ಗಿಕ ಕೃಷಿ ಪದ್ಧತಿಗೆ ಆದ್ಯತೆ ನೀಡುವ ಸಲುವಾಗಿ ಗೋವಾ ಕೃಷಿ ಇಲಾಖೆ, ರೈತರಿಗೆ ಸಲಹೆ ನೀಡಿದ ವೇದ ಮಂತ್ರದೊಂದಿಗಿನ ‘ಬ್ರಹ್ಮಾಂಡ ಕೃಷಿ’ ಹಿಂದಿನ ಆಶಯ ಕೂಡಾ ಇದೇ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.