ದೇಶದ ಜನಪ್ರಿಯ ರಾಜಕಾರಣಿ ಹಾಗೂ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಯಸಚಿವರಾಗಿದ್ದ ಅನಂತ್ ಕುಮಾರ್ ಅಕಾಲಿಕವಾಗಿ ವಿಧಿವಶರಾಗಿದ್ದಾರೆ. ಕೇಂದ್ರ ಸಂಪುಟದಲ್ಲಿ 10 ವಿಭಿನ್ನ ಖಾತೆಗಳನ್ನು ನಿರ್ವಹಿಸಿದ್ದ ಏಕೈಕ ರಾಜಕಾರಣಿ ಎಂದರೆ ಅದು ಕನ್ನಡಿಗ ಅನಂತ್ ಕುಮಾರ್ ಅವರು.
ಕಳೆದ ಲೋಕಸಭಾ ಚುನಾವಣೆಯ ನಂತರ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಸಾಕಷ್ಟು ಜನರ ಕುತೂಹಲವಿದ್ದಿದ್ದು ಅನಂತ್ ಕುಮಾರ್ ಅವರಿಗೆ ಯಾವ ಖಾತೆಯ ಹೊಣೆಯನ್ನು ವಹಿಸಬಹುದು ಎನ್ನುವ ಬಗ್ಗೆ. ಅದುವರೆಗೂ ತಮಗೆ ನೀಡಲಾಗಿದ್ದ ಎಲ್ಲಾ ಖಾತೆಗಳನ್ನೂ ಸಮರ್ಥವಾಗಿ ನಿರ್ವಹಿಸಿ ಸಾಕಷ್ಟು ಹೆಸರು ಮಾಡಿದ್ದ ಅನಂತ್ ಕುಮಾರ್ ಅವರಿಗೆ ಅತೀ ಮಹತ್ವದ ಖಾತೆಯನ್ನೇ ನೀಡಲಾಗುತ್ತದೆ ಎನ್ನುವ ನಿರೀಕ್ಷೆ ಪ್ರತಿಯೊಬ್ಬರಲ್ಲೂ ಇದ್ದೇ ಇತ್ತು. ಆದರೆ ಮಂತ್ರಿ ಮಂಡಲ ರಚನೆಯಲ್ಲಿ ಅವರಿಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಹೊಣೆಗಾರಿಕೆ ದೊರೆತಿದ್ದು ಕಂಡು ಬಹುತೇಕರು ಅಚ್ಚರಿಪಟ್ಟಿದ್ದರು. ಅವರ ಅನುಭವವನ್ನು ಕಡೆಗಣಿಸಲಾಗಿದೆ ಎನ್ನುವ ಅಭಿಪ್ರಾಯಗಳೂ ಅಲ್ಲಲ್ಲಿ ಕೇಳಿಬಂದವು. ಆದರೆ ಭಾರತೀಯ ರೈತ ಸಮುದಾಯದ ಅತಿ ದೊಡ್ಡ ಸಮಸ್ಯೆಯೊಂದನ್ನು ಕೊನೆಗಾಣಿಸಲೇಬೇಕೆಂದು ಪಣ ತೊಟ್ಟಿದ್ದ ಮೋದಿ ಸರ್ಕಾರ ಆ ಕೆಲಸಕ್ಕಾಗಿ ಅತ್ಯಂತ ಸಮರ್ಥ ವ್ಯಕ್ತಿಯೊಬ್ಬರನ್ನೇ ಆಯ್ಕೆ ಮಾಡಿತ್ತು. ಮಹತ್ವದ ಖಾತೆಯನ್ನು ನಿರ್ವಹಿಸಿವುದರಲ್ಲೂ ಮತ್ತು ತಾವಿರುವ ಖಾತೆಯನ್ನೇ ಮಹತ್ವದ ಖಾತೆಯನ್ನಾಗಿ ಬದಲಾಯಿಸಿಕೊಳ್ಳುವುದರಲ್ಲೂ, ಹೀಗೆ ಎರಡಕ್ಕೂ ಸೈ ಎಂದು ಸಾಬೀತುಪಡಿಸಿದವರು ಸೋಲಿಲ್ಲದ ಸರದಾರ ಅನಂತ್ ಕುಮಾರ್ ಅವರು.
ಹಾಗಾದರೆ ನಗರಾಭಿವೃದ್ಧಿ,ನಾಗರಿಕ ವಿಮಾನ ಯಾನ ಖಾತೆಯಂತಹಾ ಮಹತ್ವದ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಅನಂತ್ ಕುಮಾರ್ ಅವರು ತಮಗೆ ಸಿಕ್ಕ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯನ್ನೂ ಹೇಗೆ ರಾಷ್ಟ್ರಹಿತಕ್ಕಾಗಿ ಬಳಸಿಕೊಂಡು ಆ ಇಲಾಖೆಯನ್ನು ಒಂದು ಮಹತ್ವದ ಖಾತೆಯನ್ನಾಗಿ ಬದಲಾಯಿಸಿದರು ಎನ್ನುವುದನ್ನು ತಿಳಿಯುವುದಕ್ಕೂ ಮೊದಲು ಈ ಹಿಂದೆ ರಸಗೊಬ್ಬರಕ್ಕಾಗಿ ನಡೆದ ಘಟನೆಯೊಂದನ್ನು ಮೆಲುಕು ಹಾಕೋಣ.
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಅವಧಿಯಾದ ಜೂನ್ 10, 2008 ರಂದು ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿ ರಸಗೊಬ್ಬರಕ್ಕಾಗಿ ರೈತರು ಪ್ರತಿಭಟನೆ ಮಾಡಿದ್ದರು. ಪ್ರತಿಭಟನೆ ತೀರಾ ವಿಕೋಪಕ್ಕೆ ತಿರುಗಿದಾಗ ಆ ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿದ್ದರು. ಆ ವೇಳೆಗೆ ಸಿದ್ದಲಿಂಗಪ್ಪ ಚೂರಿ ಮತ್ತು ಪುಟ್ಟಪ್ಪ ಹೊನ್ನತ್ತಿ ಎನ್ನುವ ಇಬ್ಬರು ರೈತರು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದರು. ಹಲವು ರೈತರು ಗಾಯಗೊಂಡಿದ್ದರು. ಇಂದಿಗೂ ಕರ್ನಾಟಕದ ಇತಿಹಾಸದಲ್ಲೇ ಅದೊಂದು ಮರೆಯಲಾಗದ ದುರ್ಘಟನೆಯಾಗಿ ಉಳಿದುಬಿಟ್ಟಿದೆ. ಈ ರೀತಿಯ ಘಟನೆ ನಡೆದಿರುವುದು ಕೇವಲ ಇದೊಂದೇ ಅಲ್ಲ. ದೇಶದ ಬಹುತೇಕ ರಾಜ್ಯಗಳಲ್ಲಿ ಪ್ರತಿ ವರ್ಷವೂ ರಸಗೊಬ್ಬರಕ್ಕಾಗಿ ರೈತರ ಆಗ್ರಹ, ಪ್ರತಿಭಟನೆ, ಲಾಠಿ ಚಾರ್ಜ್ ಮುಂತಾದವುಗಳು ಅತಿ ಸಾಮಾನ್ಯ ಎನ್ನಿಸಿದ್ದವು. ಆದರೆ ಇತ್ತೀಚಿಗೆ, ಅಂದರೆ ಕಳೆದ ನಾಲ್ಕು ವರ್ಷಗಳಿಂದೀಚೆಗೆ ರಸಗೊಬ್ಬರದ ಕೊರತೆ ವಿರೋಧಿಸಿ ಯಾವುದೇ ದೊಡ್ಡ ಪ್ರತಿಭಟನೆಗಳೂ ನಡೆಯುತ್ತಿಲ್ಲ. ಹಾಗಾದರೆ ದೇಶದ ಬೆನ್ನೆಲುಬಾದ ರೈತ ಸಮುದಾಯದ ಸಮಸ್ಯೆಯೊಂದು ಹೀಗೆ ಪರಿಹಾರ ಕಾಣುವಂತಾಗುವುದರ ಹಿಂದೆ ಯಾರ ಪರಿಶ್ರಮವಿದೆ? ಖಂಡಿತ ಅದರ ಹಿಂದಿರುವ ಪ್ರಮುಖ ಶಕ್ತಿ ಅನಂತ್ ಕುಮಾರ್ ಅವರು.
ಕೃಷಿ ಪ್ರಧಾನ ದೇಶವಾದ ಭಾರತದ ಇಂತಹಾ ಬಹು ದೊಡ್ಡ ಸಮಸ್ಯೆಯೊಂದನ್ನು ಬೇವು ಲೇಪಿತ ಯೂರಿಯಾ ಬಿಡುಗಡೆ ಮಾಡುವ ಮೂಲಕ ಭಾರತದ ರಸಗೊಬ್ಬರ ವಲಯದಲ್ಲಿ ಕ್ರಾಂತಿ ಮಾಡಿದ ಹಾಗೂ ಬೇವು ಲೇಪಿತ ಯೂರಿಯಾವನ್ನು ದೇಶದಾದ್ಯಂತ ಹೆಚ್ಚು ಬಳಕೆಗೆ ತಂದ ಖ್ಯಾತಿ ಅನಂತಕುಮಾರ್ ಅವರಿಗೆ ಸಲ್ಲುತ್ತದೆ. ರಸಗೊಬ್ಬರ ಆಮದು ಮಾಡಿಕೊಳ್ಳುವುದರಲ್ಲಿ ಮುಂಚೂಣಿಯಲ್ಲಿದ್ದ ಈ ದೇಶವನ್ನು ಮುಂದಿನ ನಾಲ್ಕೈದು ವರ್ಷಗಳಲ್ಲಿ ರಸಗೊಬ್ಬರ ರಫ್ತು ಮಾಡುವುದರಲ್ಲಿ ಮುಂಚೂಣಿಗೆ ದೇಶವನ್ನಾಗಿ ಪರಿವರ್ತಿತವಾಗಬಲ್ಲಂತೆ ಮಾಡಿದ ಕೀರ್ತಿ ಕೂಡಾ ಅನಂತ್ ಕುಮಾರ್ ಅವರಿಗೆ ಸಲ್ಲುತ್ತದೆ.
ಸಬ್ಸಿಡಿ ದರದಲ್ಲಿ ಪೂರೈಕೆಯಾಗುತ್ತಿದ್ದ ಯೂರಿಯಾ ಕಾಳ ಸಂತೆಯಲ್ಲಿ ಬಿಕರಿಯಾಗುವುದನ್ನು ತಡೆಯಲು ಪರಿಣಾಮಕಾರಿ ಕಾರ್ಯ ನಡೆಸಿದ ಅನಂತ ಕುಮಾರ್ ಅವರು ರಸಗೊಬ್ಬರ ಲಾಬಿ ಮೆಟ್ಟಿ ನಿಂತು ರೈತರಿಗೆ ಪೂರೈಕೆಯಾಗುವ ಶೇ.100ರಷ್ಟು ಯೂರಿಯಾಕ್ಕೆ ಬೇವು ಲೇಪನ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ಇಂದು ದೇಶದ ಬೊಕ್ಕಸಕ್ಕೆ ವಾರ್ಷಿಕ 10,000 ಕೋಟಿ ರೂ. ಉಳಿತಾಯವಾಗುತ್ತಿದೆ. ಈ ಅವಧಿಯಲ್ಲಿ ದೇಶದ ಯಾವುದೇ ಭಾಗದಲ್ಲಿ ರಸಗೊಬ್ಬರಕ್ಕಾಗಿ ರೈತರ ದೊಡ್ಡ ಹೋರಾಟಗಳು ನಡೆಯದೇ ಇರುವುದೇ ಅವರ ಕಾರ್ಯಕ್ಷಮತೆಗೆ ಸಾಕ್ಷಿ.
ಹಾಗಾದರೆ ಅನಂತ್ ಕುಮಾರ್ ಅವರು ಒಬ್ಬ ರೈತನಾಯಕರೇ?
ಖಂಡಿತ ಅಲ್ಲ. ಅದೆಷ್ಟೋ ಜನ ರಾಜಕಾರಣಿಗಳು ತಮ್ಮನ್ನು ತಾವು ರೈತ ನಾಯಕರೆಂದು ಗುರುತಿಸಿಕೊಳ್ಳುವ ಸಲುವಾಗಿಯೇ ಸದಾ ಹಸಿರು ಶಾಲು ಹೊದ್ದು ಸಾರ್ವಜನಿಕರೆದುರು ಕಾಣಿಸಿಕೊಳ್ಳುತ್ತಿರುವಾಗ, ಇಡೀ ದೇಶದ ರೈತ ಸಮುದಾಯದ ಅತಿ ದೊಡ್ಡ ಸಮಸ್ಯೆಯೊಂದು ಪರಿಹಾರ ಕಾಣಲು ಶ್ರಮಿಸಿದ ಅನಂತ್ ಕುಮಾರ್ ಅವರು ತಮ್ಮನ್ನು ತಾವು ಎಂದಿಗೂ ರೈತ ನಾಯಕ ಎಂದು ಕರೆದುಕೊಳ್ಳಲಿಲ್ಲ. ಅಷ್ಟೇ ಅಲ್ಲ, ರೈತ ಸಂಘಟನೆಗಳು ಕೂಡಾ ಅವರ ಈ ಮಹತ್ವದ ಸಾಧನೆಗಾಗಿ ಅವರನ್ನು ಅದ್ದೂರಿಯಾಗಿ ಸನ್ಮಾನಿಸಿ ರೈತ ನಾಯಕನೆನ್ನುವ ಬಿರುದು ಕೊಟ್ಟ ನೆನಪಿಲ್ಲ. ಅದೆಲ್ಲಕ್ಕಿಂತಲೂ ಹೆಚ್ಚಾಗಿ ಅವರು ಯಾವತ್ತೂ ತಮ್ಮ ಜವಾಬ್ಧಾರಿಯನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸಿ ಮುಂದಿನ ಕಾರ್ಯಕ್ಕೆ ಅಣಿಯಾಗುತ್ತಿದ್ದರೇ ಹೊರತೂ ಅದನ್ನೇ ತಮ್ಮ ರಾಜಕೀಯದ ಮೆಟ್ಟಿಲಾಗಿ ಬಳಸಿಕೊಳ್ಳುತ್ತಿದ್ದವರಲ್ಲ.
ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಅವರು ಲೋಕಸಭಾ ಚುನಾವಣೆಗಳಲ್ಲಿ ನಿರಂತರವಾಗಿ ಗೆದ್ದುಬರುತ್ತಿದ್ದುದು ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ. ಒಂದು ವೇಳೆ ಅವರು ವಿಧಿವಶರಾಗಿರದಿದ್ದರೆ ಮುಂದಿನ ಚುನಾವಣೆಯಲ್ಲಿ ಅವರು ಸ್ಪರ್ಧಿಸುತ್ತಿದ್ದುದೂ ಅದೇ ಕ್ಷೇತ್ರದಲ್ಲಿ. ಅವರನ್ನು ಚುನಾಯಿಸುತ್ತಿದ್ದುದು ನಗರ ಮತದಾರರೇ ಹೊರತೂ ರೈತರಲ್ಲ. ರಸಗೊಬ್ಬರ ಸಮಸ್ಯೆ ಪರಿಹಾರಕ್ಕಾಗಿ ಅವರು ಅಷ್ಟೊಂದು ಶ್ರಮ ವಹಿಸದಿದ್ದರೂ ಅವರ ಮತದಾರರೇನೂ ಅವರನ್ನು ತಿರಸ್ಕರಿಸುತ್ತಿರಲಿಲ್ಲ. ಆದರೂ ಅವರು ತಮ್ಮ ಪ್ರಾಮಾಣಿಕ ಸೇವೆಯಲ್ಲಿ ಒಂದಿನಿತೂ ಉದಾಸೀನ ತೋರಿಸಲಿಲ್ಲ. ಏಕೆಂದರೆ ಅವರಿಗೆ ರೈತ ನಾಯಕ ಎಂದು ಕರೆಸಿಕೊಳ್ಳುವುದಕ್ಕಿಂತಲೂ ಈ ದೇಶಕ್ಕಾಗಿ, ಈ ದೇಶದ ಏಳಿಗೆಗಾಗಿ ಕೊನೆಯವರೆಗೂ ಪ್ರಾಮಾಣಿಕವಾಗಿ ದುಡಿಯುವುದಷ್ಟೇ ಮುಖ್ಯವಾಗಿತ್ತು.
ಹೌದು. ಅನಂತ್ ಕುಮಾರ್ ಅವರು ರೈತ ನಾಯಕರಲ್ಲ; ಅವರೊಬ್ಬ ಎಲ್ಲರ ನಾಯಕ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.