ದಿನಾಂಕ 21, ಅಕ್ಟೊಬರ್ 2018 ಇತಿಹಾಸದಲ್ಲಿ ದಾಖಲಾಗಬೇಕಾಗಿದ್ದ ಬಹು ಮುಖ್ಯ ದಿನ. ಸರಿಯಾಗಿ 75 ವರ್ಷಗಳ ಹಿಂದೆ, ಅಂದರೆ 1943ರ ಅಕ್ಟೋಬರ್ 21, 1943 ಮೊದಲ ಬಾರಿಗೆ ಸುಭಾಷ್ ಚಂದ್ರ ಬೋಸ್ ಅವರು ಸೂರ್ಯ ಮುಳುಗದ ನಾಡು ಎಂದು ಗರ್ವಪಡುತ್ತಿದ್ದ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಬೃಹತ್ ಶಕ್ತಿಗೆ ಸೆಡ್ಡುಹೊಡೆದು ಅದಕ್ಕೆ ಪರ್ಯಾಯವಾದ ಸ್ವತಂತ್ರ ಭಾರತದ ಪ್ರಾಂತೀಯ (ಭಾರತ) ಸರಕಾರವನ್ನು ಸ್ಥಾಪಿಸುತ್ತಾರೆ. ಬ್ರಿಟಿಷ್ ವಸಾಹತು ಪ್ರದೇಶವಾಗಿದ್ದ ಮಲಯಾ, ಸಿಂಗಾಪುರ ದ್ವೀಪಸಮೂಹದಲ್ಲಿ ಭಾರತದ್ದೇ ಸ್ವಂತ ಸರಕಾರವನ್ನು ನಿರ್ಮಿಸಿದ್ದು ಮಾತ್ರವಲ್ಲದೆ, ನಾಗರಿಕ ಹಾಗೂ ಮಿಲಿಟರಿ ಅಧಿಕಾರವನ್ನು ಸ್ಥಾಪಿಸಿದ್ದು ಪ್ರಾಂತೀಯ ಸ್ವತಂತ್ರ ಸರಕಾರದ ಸಾಧನೆ. ಆಜಾದ್ ಹಿಂದ್ ಎಂದೂ ಕರೆಯಲ್ಪಡುವ ಆ ಸ್ವತಂತ್ರ ಸರಕಾರ ಸ್ಥಾಪನೆಯಾದ ದಿನವೇ ನಮ್ಮ ನಿಜವಾದ ಸ್ವಾತಂತ್ರ್ಯ ದಿನ ಎಂದರೂ ತಪ್ಪಾಗಲಿಕ್ಕಿಲ್ಲ. ಆ ದಿನವನ್ನು ಸ್ವಾತಂತ್ರ್ಯ ದಿನದಷ್ಟೇ ಐತಿಹಾಸಿಕ ದಿನದಂತೆ ಇಡೀ ಭಾರತ ದೇಶ ಕಾಣಬೇಕಾಗಿತ್ತಾದರೂ ಅದೇನೂ ಅಂತಹಾ ಮಹತ್ವದ ದಿನವಲ್ಲ ಎನ್ನುವ ನಿರ್ಲಕ್ಷ್ಯ ಮಾಡಿಕೊಂಡೇ ಬರಲಾಗಿದೆ. ಶಾಲಾ ಪಠ್ಯಗಳಲ್ಲೂ ಎಲ್ಲೋ ಒಂದು ಕಡೆ ಪ್ರಸ್ತಾಪವಾಗಿ ಹೀಗೆ ಬಂದು ಹಾಗೆ ಹೋಗುವ ಮೂಲಕ ಅಷ್ಟೇನೂ ಮಹತ್ವವಲ್ಲದ ವಿಚಾರವೆಂಬಂತೆ ಕಡೆಗಣಿಸಿಕೊಂಡೇ ಬರಲಾಗಿದೆ.
ಇದೀಗ ಆಜಾದ್ ಹಿಂದ್ ಸರ್ಕಾರ ಸ್ಥಾಪನೆಯ 75ನೆಯ ವರ್ಷಾಚರಣೆಯ ಹಿನ್ನೆಲೆಯಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ಮಾಡುವ ಮೂಲಕ ಇನ್ನೊಂದು ಇತಿಹಾಸಕ್ಕೆ ಮುನ್ನುಡಿ ಬರೆದಿದ್ದಾರೆ. ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯ ಮೇಲೆ ಭಾರತದ ಪ್ರಧಾನಿಗಳು ಧ್ವಜಾರೋಹಣ ಮಾಡುತ್ತಿದ್ದ ಸಂಪ್ರದಾಯವಿತ್ತು. ಆದರೆ ಇದೀಗ ಸ್ವತಂತ್ರ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ವ್ಯಾಪಕವಾಗಿ ಭಾರತೀಯರಿಗೆ ಪರಿಚಯಿಸಲೆಂದೇ ಆಜಾದ್ ಹಿಂದ್ ಸರ್ಕಾರ ಸ್ಥಾಪನೆಯ 75ನೆಯ ವರ್ಷಾಚರಣೆಯನ್ನು ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ಮಾಡುವ ಮೂಲಕ ನೆರವೇರಿಸಿದ್ದಾರೆ. ನಿಜಕ್ಕೂ ಸ್ವತಂತ್ರ ಭಾರತದಲ್ಲಿ ಇದೊಂದು ಐತಿಹಾಸಿಕ ದಿನವೇ ಸರಿ.ಇಡೀ ದೇಶದ ಜನರಲ್ಲಿ, ಅದರಲ್ಲೂ ಯುವ ಜನರಲ್ಲಿ ಈ ದಿನವೊಂದು ಹೆಮ್ಮೆಯ ದಿನವಾಗಬೇಕಿತ್ತು. ದೇಶದ ಇತಿಹಾಸ,ಸುಭಾಸ್ ಚಂದ್ರ ಬೋಸರ ಹೋರಾಟದ ಕಿಚ್ಚು,ಆಜಾದ್ ಹಿಂದ್ ಸರ್ಕಾರದ ಸಾಧನೆಯ ವಿಚಾರಗಳು ತಿಳಿದು ಈ ದೇಶದ ಪ್ರತಿಯೊಬ್ಬನ ಎದೆ ಮತ್ತೊಮ್ಮೆ ಹೆಮ್ಮೆಯಿಂದ ಉಬ್ಬಬೇಕಾಗಿತ್ತು.
ಆದರೆ ದುರದೃಷ್ಟವಶಾತ್ ಹಾಗಾಗಲಿಲ್ಲ. ಸ್ವತಂತ್ರ ಭಾರತದಲ್ಲಿ ಒಂದು ಐತಿಹಾಸಿಕ ದಿನವಾಗಬೇಕಾಗಿದ್ದ ಆ ಸಮಾರಂಭ, ದಿನ ನಿತ್ಯದ ಹತ್ತರಲ್ಲಿ ಹನ್ನೊಂದರಂತೆ ಒಂದು ಸುದ್ದಿಯಾಗಿದ್ದನ್ನು ಹೊರತುಪಡಿಸಿ ಅಂತಹದ್ದೇನೂ ಆಗಿಲ್ಲ. ದಿನಪತ್ರಿಕೆಗಳಂತೂ ಆ ಸುದ್ದಿಗಳಿಗೆ ಪ್ರಾಮುಖ್ಯತೆಯನ್ನೇ ನೀಡಲಿಲ್ಲ. ಕನ್ನಡದ ಅತ್ಯಂತ ಪ್ರಮುಖ, ಹಿರಿಯ ಮತ್ತು ವಿಶ್ವಾಸಾರ್ಹ ಪತ್ರಿಕೆಯೆಂದೇ ಬಿಂಬಿಸಲ್ಪಟ್ಟ ದಿನ ಪತ್ರಿಕೆಯೊಂದನ್ನು ಗಮನಿಸಿ ಹೇಳುವುದಾದರೆ ಅದು ವಿಶ್ವ ಕಪ್ ಆಗಲೀ,ಏಷ್ಯಾ ಕಪ್ ಆಗಲೀ ಅಲ್ಲದ,ಕನಿಷ್ಟ ಯಾವುದೋ ಪಂದ್ಯಾವಳಿಯ ಫೈನಲ್/ಸೆಮಿ ಫೈನಲ್ ಕೂಡಾ ಅಲ್ಲದ ಕ್ರಿಕೆಟ್ ಪಂದ್ಯವೊಂದರ ಸಚಿತ್ರ ವರದಿಯನ್ನು ಪ್ರತ್ಯೇಕ ಕ್ರೀಡಾ ಪುಟಗಳಿದ್ದೂ ತನ್ನ ಮುಖ ಪುಟದ ಮೇಲ್ಭಾಗದಲ್ಲೇ ಪ್ರಕಟಿಸಿತ್ತು. ಉಳಿದಂತೆ ನಟ ನಟಿಯರ ಆರೋಪ ಪ್ರತ್ಯಾರೋಪಗಳ ವರದಿಯನ್ನು ಚಿತ್ರ ಸಮೇತ ಮುಖಪುಟದಲ್ಲಿ ಪ್ರಕಟಿಸಿತ್ತು. ಆದರೆ ಆಜಾದ್ ಹಿಂದ್ ಸರ್ಕಾರ ಸ್ಥಾಪನೆಯ 75ನೆಯ ವರ್ಷಾಚರಣೆಯ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳು ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ಮಾಡಿದ ಸುದ್ದಿಯನ್ನು ತನ್ನ ಏಳನೆಯ ಪುಟದಲ್ಲಿ ಹತ್ತಾರು ಸುದ್ದಿಗಳೊಳಗೆ ಒಂದೆನ್ನುವಂತೆ ಕೆಲವೇ ಕೆಲವು ಶಬ್ಧಗಳಲ್ಲಿ ಪ್ರಕಟಿಸಿತ್ತು. ಆ ಸುದ್ದಿಯೂ ಕೂಡಾ ಆ ಐತಿಹಾಸಿಕ ಸಮಾರಂಭದ ಹಿನ್ನೆಲೆಯನ್ನು ವಿವರಿಸುವುದಾಗಿರದೇ ಕೇವಲ ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಸೀಮಿತವಾದ ಕಾರ್ಯಕ್ರಮವೆನ್ನುವಂತೆ ಬರೆಯಲಾಗಿತ್ತು. ಇದನ್ನೆಲ್ಲಾ ಗಮನಿಸಿದಾಗ ಇಂತಹಾ ಸಕಾರಾತ್ಮಕ ಸುದ್ದಿಗಳನ್ನು ಕೊಡುವುದು ಮುಖ್ಯವಲ್ಲ ಎನ್ನುವ ಧೋರಣೆ ಮಾಧ್ಯಮಗಳಿಗೆ ಇದೆ ಎನ್ನುವುದು ಸ್ಪಷ್ಟವಾಗುತ್ತದೆ. ಮತ್ತು ಸಕಾರಾತ್ಮಕ ಸುದ್ದಿಗಳನ್ನು, ಇತಿಹಾಸ, ದೇಶಭಕ್ತಿ ಅಥವಾ ರಾಷ್ಟ್ರೀಯತೆಗೆ ಸಂಬಂಧಿಸಿದ ಸುದ್ದಿಗಳನ್ನು ಮಾಧ್ಯಮಗಳು ಉದ್ದೇಶಪೂರ್ವಕವಾಗಿಯೇ ಯುವ ಜನರಿಂದ ಮುಚ್ಚಿಡಲು ಪ್ರಯತ್ನಿಸುತ್ತಿವೆ ಎನ್ನುವುದೂ ಸ್ಪಷ್ಟವಾಗುತ್ತದೆ. ಅಷ್ಟೇ ಅಲ್ಲ, ಸ್ವಾತಂತ್ರ್ಯಾನಂತರ ಈ ದೇಶದ ಯುವ ಜನರಿಂದ ಪ್ರಮುಖ ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟ ಇತಿಹಾಸಗಳೆಷ್ಟಿರಬಹುದು ಎನ್ನುವ ಅಂದಾಜಿಗೂ ಸಿಗದಷ್ಟು ಅನುಮಾನಗಳು ವ್ಯಕ್ತವಾಗುತ್ತವೆ.
ಇದು ಕೇವಲ ಒಂದು ಪತ್ರಿಕೆಯ ಕಥೆಯಲ್ಲ. ಬಹುತೇಕ ಮಾಧ್ಯಮಗಳು ಸಕಾರಾತ್ಮಕ ಹಾಗೂ ಇತಿಹಾಸ, ದೇಶಭಕ್ತಿ ಅಥವಾ ರಾಷ್ಟ್ರೀಯತೆಗೆ ಸಂಬಂಧಿಸಿದ ಸುದ್ದಿಗಳ ಬಗ್ಗೆ ಇದೇ ನೀತಿಯನ್ನು ಅನುಸರಿಸುತ್ತಿವೆ. ದಿನದ ಇಪ್ಪತ್ನಾಲ್ಕು ಗಂಟೆಯೂ, ವರ್ಷದ ಮುನ್ನೂರರವತ್ತೈದು ದಿನವೂ ಪ್ರಸಾರವಾಗುವ ಬಹುತೇಕ ವಾರ್ತಾ ವಾಹಿನಿಗಳೂ ಕೂಡಾ ತಮ್ಮ ಎಂದಿನ ರಾಜಕೀಯ, ಸೆಕ್ಸ್, ಸಿನಿಮಾ ಕಾರ್ಯಕ್ರಮಗಳ ಸುದ್ದಿಗಳನ್ನೇ ಪ್ರಮುಖ ಸುದ್ದಿಗಳೆನ್ನುವಂತೆ ಪ್ರಸಾರ ಮಾಡಿದವೇ ಹೊರತೂ ಈ ಐತಿಹಾಸಿಕ ಕಾರ್ಯಕ್ರಮದ ಸುದ್ದಿ ಪ್ರಮುಖವಾಗಿ ಪ್ರಸಾರವಾಗಲೇ ಇಲ್ಲ. ಹಾಗೆಯೇ ಆ ಬಗ್ಗೆ ವಿಶೇಷ ಚರ್ಚೆಗಳನ್ನಾಗಲೀ, ವಿಶೇಷ ಕಾರ್ಯಕ್ರಮಗಳನ್ನಾಗಲೀ ಅವು ಪ್ರಸಾರ ಮಾಡಲೇ ಇಲ್ಲ.
ತುರ್ತು ಪರಿಸ್ಥಿತಿಯಂತಹಾ ಕಾಲದಲ್ಲಿ ಮಾಧ್ಯಮಗಳಿಗೆ ತಮ್ಮ ಪರವಾಗಿಯೇ ಸುದ್ದಿ ಮಾಡುವಂತೆ ಅಥವಾ ಮಾಧ್ಯಮಗಳನ್ನೇ ಮುಚ್ಚುವಂತೆ ಬಲವಂತವಿತ್ತು.ಅದರಿಂದಾಗಿ ಜನರಿಗೆ ನಿಜವಾಗಿ ಯಾವ ಸುದ್ದಿ ದೊರೆಯಬೇಕಿತ್ತೋ, ಆ ಸುದ್ದಿಗಳು ದೊರೆಯುತ್ತಿರಲಿಲ್ಲ. ಆಗ ಕೆಲವು ಉತ್ಸಾಹಿಗಳು ಯಾವ ಸರ್ವಾಧಿಕಾರಕ್ಕೂ ಬೆದರದೇ ತಮ್ಮದೇ ಪತ್ರಿಕೆಗಳನ್ನು ಪ್ರಾರಂಭಿಸಿ ಯಾವ ಬಂಧನಕ್ಕೂ ಬಗ್ಗದೆ ತಲುಪಬೇಕಾಗಿದ್ದ ಸುದ್ದಿಗಳನ್ನು ತಲುಪಿಸತೊಡಗಿದರು. ಆದರೆ ಈಗ ಅಂತಹಾ ತುರ್ತುಪರಿಸ್ಥಿತಿಯೇನೂ ಇಲ್ಲ. ಆದರೂ ದೇಶದ ಜನರಿಗೆ ಸಕಾರಾತ್ಮಕ ಸುದ್ದಿಗಳನ್ನು ದೊರೆಯದಂತೆ ಮಾಧ್ಯಮಗಳೇ ಉದ್ದೇಶಪೂರ್ವಕವಾಗಿ ನೋಡಿಕೊಳ್ಳುತ್ತಿವೆ. ಇದೂ ಕೂಡಾ ಒಂದು ರೀತಿಯ ತುರ್ತು ಪರಿಸ್ಥಿತಿಯೇ ಸರಿ. ಹಾಗಾದರೆ ಇದಕ್ಕೆಲ್ಲಾ ಪರಿಹಾರವೇನು? ಸಕಾರಾತ್ಮಕ ಸುದ್ದಿಗಳೇ ವಿಜೃಂಭಿಸುತ್ತಾ ಹೋದರೆ ಆ ಮೂಲಕ ಈ ದೇಶದ ಯುವ ಜನಾಂಗ ದಾರಿ ತಪ್ಪಿದರೆ ಅದಕ್ಕೆ ಯಾರು ಹೊಣೆ? ಸಕಾರಾತ್ಮಕ ಸುದ್ದಿಗಳನ್ನು, ಇತಿಹಾಸ, ದೇಶಭಕ್ತಿ ಅಥವಾ ರಾಷ್ಟ್ರೀಯತೆಗೆ ಸಂಬಂಧಿಸಿದ ಸುದ್ದಿಗಳನ್ನು ನಾವೆಲ್ಲಿ ಹುಡುಕಬೇಕು?
ಬಹುಶಃ ಇದಕ್ಕೆಲ್ಲಾ ಒಂದೇ ಒಂದು ಪರಿಹಾರವೆಂದರೆ ಇಂದಿನ ಸಾಮಾಜಿಕ ಮಾಧ್ಯಮಗಳನ್ನು ನಾವು ಸಮರ್ಥವಾಗಿ ಬಳಸಿಕೊಳ್ಳುವುದು.ಆ ಮೂಲಕ ನಮಗೆ ಬೇಕಾದ ಸಕಾರಾತ್ಮಕ ಸುದ್ದಿಗಳನ್ನು ನಾವೇ ಅರಸಿಕೊಳ್ಳುವುದು. ನಮಗೆ ದೊರೆತ ಉತ್ತಮ,ಸಕಾರಾತ್ಮಕ ಸುದ್ದಿಗಳನ್ನು ಇತರರೊಂದಿಗೂ ಹಂಚಿಕೊಳ್ಳುವುದು. ಮಾಧ್ಯಮಗಳು ಉದ್ದೇಶಪೂರ್ವಕವಾಗಿ ನೀಡುವ ನಕಾರಾತ್ಮಕ ಸುದ್ದಿಗಳನ್ನು ತಿರಸ್ಕರಿಸುವುದು ಮತ್ತು ಆ ಮೂಲಕ ಅವುಗಳಿಗೂ ಸಕಾರಾತ್ಮಕ ಸುದ್ದಿಗಳನ್ನೇ ಪ್ರಸಾರ ಮಾಡುವ ಅನಿವಾರ್ಯತೆಯನ್ನು ಸೃಷ್ಟಿಸುವುದು.
ಬನ್ನಿ, ಸ್ವಯಂ ತುರ್ತು ಪರಿಸ್ಥಿತಿ ಘೋಷಿಸಿಕೊಂಡ ಮಾಧ್ಯಮಗಳಿಂದ ದೂರ ಉಳಿಯುವ ಮೂಲಕ ಇನ್ನಾದರೂ ಸಕಾರಾತ್ಮಕ ಸುದ್ದಿ ಪ್ರಪಂಚದೆಡೆಗೆ ಸಾಗೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.