ನರೇಂದ್ರ ಮೋದಿಯವರ ಕನಸಿನ ನವಭಾರತದ ನಿರ್ಮಾಣಕಾರ್ಯದಲ್ಲಿ ಅತ್ಯಂತ ಪ್ರಮುಖ ಭಾಗವೆಂದರೆ ದೇಶದ ಯುವಜನಾಂಗದ ಸರ್ವಾಂಗೀಣ ಅಭಿವೃದ್ಧಿ. ಅಂತಹ ಗುರುತರವಾದ ಜವಾಬ್ದಾರಿಯನ್ನು ಹೊತ್ತು ಮೋದಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಮಹತ್ತ್ವದ ’ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ’ ಖಾತೆಯಲ್ಲಿ ರಾಜ್ಯಸಚಿವರಾಗಿ ಅನಂತಕುಮಾರ ಹೆಗಡೆ ಅವರೊಂದಿಗೆ ಅನಿಲ್ ಕುಮಾರ್ ಮೊಳಹಳ್ಳಿ ಅವರು ನಡೆಸಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ.
ಯುವಜನರ ಕೌಶಲಾಭಿವೃದ್ಧಿಗೆ ಸಂಬಂಧಿಸಿದಂತೆ ವಿಶ್ವಮಟ್ಟದಲ್ಲಿ ನಡೆಯುತ್ತಿರುವ ಪ್ರಯತ್ನಗಳ ಅಧ್ಯಯನ, ನಮ್ಮ ಪಾರಂಪರಿಕ ಉದ್ಯೋಗಕೌಶಲಗಳ ರಕ್ಷಣೆ-ಪೋಷಣೆ, ಭವಿಷ್ಯದಲ್ಲಿ ಯುವಜನರಿಗಾಗಿ ಉದ್ಯೋಗಸೃಷ್ಟಿ ಮುಂತಾದ ವಿಚಾರಗಳ ಕುರಿತಾಗಿ ಕೇಂದ್ರಸರ್ಕಾರ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳ ಕುರಿತು ಮುಕ್ತವಾಗಿ ಇಲ್ಲಿ ಹಂಚಿಕೊಂಡಿದ್ದಾರೆ.
ಪ್ರಶ್ನೆ: ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಾಲಾವಧಿಯಲ್ಲಿ ಭಾರತದ ಎಲ್ಲ ಕ್ಷೇತ್ರಗಳಲ್ಲೂ ಪರಿಣಾಮಕಾರಿ ಬದಲಾವಣೆಗಳಾಗುತ್ತಿವೆ ಎನ್ನಲಾಗುತ್ತಿದೆ. ಸರ್ಕಾರದಲ್ಲಿ ’ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ’ ಖಾತೆಯ ರಾಜ್ಯಸಚಿವರಾಗಿ ಹೊಣೆಯನ್ನು ಹೊತ್ತಿರುವ ನಿಮಗೆ ನಿಮ್ಮ ಮುಂದಿರುವ ಅವಕಾಶಗಳು ಏನೇನು? ಹೊಣೆಗಾರಿಕೆಗಳೇನೇನು?
ಉತ್ತರ: ನರೇಂದ್ರ ಮೋದಿ ಪ್ರಧಾನಮಂತ್ರಿಗಳಾಗಿ ಅಧಿಕಾರಕ್ಕೆ ಬಂದಾಗ ಕೌಶಲಾಭಿವೃದ್ಧಿ ಸಚಿವಾಲಯ ಪ್ರತ್ಯೇಕವಾಗಿ ಇರಲಿಲ್ಲ. ಇದು ಕಾರ್ಮಿಕ ಇಲಾಖೆಯ ಭಾಗವಾಗಿತ್ತು. ಜಗತ್ತಿನ ವಿದ್ಯಮಾನಗಳ ಅವಲೋಕನ ಮಾಡಿದ ಮೋದಿ ಅವರಿಗೆ ಭಾರತದಲ್ಲಿ ಕೌಶಲದ ದೊಡ್ಡ ನ್ಯೂನತೆಯಿರುವುದು ಗಮನಕ್ಕೆ ಬಂತು. ಗುಜರಾತ್ನ ಮುಖ್ಯಮಂತ್ರಿಯಾಗಿದ್ದಾಗಲೂ ಇದು ಅವರ ಗಮನದಲ್ಲಿತ್ತು ಮತ್ತು ಆಗ ಅವರು ಈ ಕೆಲಸವನ್ನು ಒಂದು ವ್ಯವಸ್ಥಿತ ರೀತಿಯಲ್ಲಿ ಪ್ರಾರಂಭಿಸಿದ್ದರು.
2015 ರಲ್ಲಿ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆಯನ್ನು ಪ್ರತ್ಯೇಕ ಖಾತೆಯಾಗಿಸಿದರು. ಆಗ ಇಲಾಖೆಯನ್ನು ಹೇಗೆ ಬೆಳೆಸಬೇಕು ಎನ್ನುವ ಬಗೆಗೆ ಅಧಿಕಾರಿಗಳಲ್ಲೂ, ಸರ್ಕಾರದಲ್ಲಿಯೂ ಪೂರ್ಣ ಸ್ಪಷ್ಟತೆ ಇತ್ತು ಎನ್ನಲಾಗದು. ’ಟ್ರಯಲ್ ಅಂಡ್ ಎರರ್’ ಮಾದರಿಯಲ್ಲಿಯೇ ನಾವು ಮುಂದೆ ಹೋಗಬೇಕಿತ್ತು. ಹಿಂದೆ ರಕ್ಷಣೆ, ಕೃಷಿ, ರಾಸಾಯನಿಕ, ರಸಗೊಬ್ಬರ, ಕಾರ್ಮಿಕ ಇಲಾಖೆ ಸೇರಿದಂತೆ ಸುಮಾರು 23 ಸಚಿವಾಲಯಗಳು ಅವರವರ ಕಾರ್ಯಪ್ರಣಾಳಿಗಳಿಗೆ ತಕ್ಕಂತೆ ತರಬೇತಿ ಕೊಡುವ ವ್ಯವಸ್ಥೆ ಜಾರಿಯಲ್ಲಿತ್ತು. ಇವೆಲ್ಲವನ್ನೂ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯ ಅಡಿಯಲ್ಲಿ ತರುವ ದೃಷ್ಟಿಯಿಂದ ಆ ಎಲ್ಲ ಸಚಿವಾಲಯಗಳ ಜೊತೆಗೆ ಒಪ್ಪಂದ(ಎಂಓಯು) ಮಾಡಿಕೊಳ್ಳಲಾಯಿತು. ಒಂದೊಂದೇ ವಿಭಾಗಗಳನ್ನು ನಮಗೆ ಬಿಟ್ಟುಕೊಡಲಾಯಿತು. ಉದಾಹರಣೆಗೆ ಕಾರ್ಮಿಕ ಇಲಾಖೆಯಲ್ಲಿದ್ದ ಐಟಿಐ, ಪಾಲಿಟೆಕ್ನಿಕ್ನ್ನು ನಮಗೆ ಬಿಟ್ಟುಕೊಟ್ಟರು. ಈಗ ಜೆಎಸ್ಎಸ್ ಜನಶಿಕ್ಷಣ ಸಂಸ್ಥೆ ನಮ್ಮ ಜೊತೆಗೆ ಸೇರಿಕೊಳ್ಳುತ್ತಿದೆ. ಹೀಗೆ ನಮ್ಮ ವ್ಯಾಪ್ತಿ ಜಾಸ್ತಿಯಾಗುತ್ತಿದೆ. ಬೇರೆಬೇರೆ ಆಯಾಮಗಳಲ್ಲಿ ಕೆಲಸ ಪ್ರಾರಂಭವಾಗಿದೆ.
ಕೌಶಲ ಸಾಧ್ಯತೆಗಳನ್ನು (ಸ್ಕಿಲ್ ಹಾರೈಜನ್) ಸಮಗ್ರವಾಗಿ ಅರ್ಥಮಾಡಿಕೊಂಡು ನಾವು ಹೆಜ್ಜೆ ಇಡಬೇಕಾಗಿತ್ತು. ಬೇರೆಬೇರೆ ದೇಶಗಳ ಮಾದರಿಗಳಿದ್ದರೂ ಅಲ್ಲಿ ಭಾರತದಂತಹ ವಾತಾವರಣ ಇರಲಿಲ್ಲ. ಹೀಗಾಗಿ ಪ್ರಾರಂಭದಲ್ಲಿ ನಾವು ಒಂದು ಉದ್ಯಮ(industry) ಕ್ಕೆ ಬೇಕಾಗಿರುವುದು ಮಾತ್ರ ಕೌಶಲಾಭಿವೃದ್ದಿ ಎಂದುಕೊಂಡಿದ್ದೆವು. ಅನಂತರದಲ್ಲಿ ಕೌಶಲವು ಬಿಸಿನೆಸ್ನಲ್ಲೂ ಅಗತ್ಯ ಎನಿಸಿತು. ಮುಂದುವರಿದಂತೆ ಕೇವಲ ಇಂಡಸ್ಟ್ರಿಗಳಿಗೆ, ಬಿಸಿನೆಸ್ಗಳಿಗೆ ಮಾತ್ರವಲ್ಲ, ಶಿಕ್ಷಣ ಸೇರಿದಂತೆ ಬದುಕಿನ ಎಲ್ಲ ಆಯಾಮಗಳಿಗೂ – ಅದು ಮನೆಕೆಲಸದಿಂದ ಪ್ರಾರಂಭಿಸಿ ಬಾಹ್ಯಾಕಾಶ ವಿಜ್ಞಾನದ ತನಕದ – ಕೌಶಲದ ಅಗತ್ಯವಿದೆ ಎಂಬುದು ಅರಿವಿಗೆ ಬಂತು.
ಇದಕ್ಕೊಂದು ವ್ಯವಸ್ಥಿತ ಸೂತ್ರರೂಪದಲ್ಲಿ ಅಂತಾರಾಷ್ಟ್ರೀಯ ಮಾನದಂಡದ ಆಧಾರದಲ್ಲಿ ಗುಣಮಟ್ಟದ ಚೌಕಟ್ಟು ಮತ್ತು ನೀತಿ-ನಿಯಮಗಳ ಆಧಾರಸೂತ್ರಗಳನ್ನು ರೂಪಿಸಲು National Skills and Qualifications Framework (NSQF)ನ್ನು ರಚಿಸಲಾಯಿತು. ಇದನ್ನು ’ಅರ್ಹತೆಯ ನುತ್ತಿ’ (ಕ್ವಾಲಿಫಿಕೇಷನ್ ಪ್ಯಾಕ್), ’ಉದ್ಯೋಗದ ಹಾದಿಗಳು’ (ಜಾಬ್ ರೋಡ್ಸ್) ಎನ್ನಬಹುದು. ಉದಾಹರಣೆಗೆ ಮುದ್ರಣ ತಂತ್ರಜ್ಞಾನದಲ್ಲಿ ಡಿಟಿಪಿ, ಸಿಟಿಪಿ, ಪ್ಲೇಟ್ ಮೇಕಿಂಗ್, ಪ್ರಿಂಟಿಂಗ್ ಇರುವಂತೆ ಅಥವಾ ಸಾಮಾನ್ಯ ಕ್ಯಾಮೆರಾದಿಂದ ಆರ್ಟಿಸ್ಟಿಕ್ ಕ್ರಿಯೇಟಿವ್ ಕ್ಯಾಮೆರಾದ ತನಕ ಅಲ್ಲಲ್ಲಿಯೇ ಪರಿಷ್ಕಾರಗೊಳಿಸಬಹುದಾದಂಥ ಬೇರೆಬೇರೆ ಹಂತಗಳ ಕೆಲಸಗಳಿರುತ್ತವೆ. ಹೀಗೆ NSQF ಈ ಕೆಲಸವನ್ನು ಅಂತಾರಾಷ್ಟ್ರೀಯ ಮಾನದಂಡಗಳ ಆಧಾರದಲ್ಲಿ ವಿವಿಧ ಹಂತಗಳಾಗಿ (ಲೆವೆಲ್ ಒಂದರಿಂದ ಲೆವೆಲ್ ೧೦ರ ವರೆಗೆ) ವಿಂಗಡಿಸಿದೆ. ಇದನ್ನು ಗಮನಿಸಿಕೊಂಡು ಅರ್ಹತಾ ಚೌಕಟ್ಟನ್ನು ಈಗಾಗಲೇ ರೂಪಿಸಲಾಗಿದೆ.
ಇದನ್ನು ಯಾರು ಮಾಡಬೇಕು, ಯಾರು ಹಣ ಕೊಡುವವರು, ಯಾರು ಜಾರಿಗೆ ತರುವವರು ಎಂಬುದನ್ನು ನಿರ್ಧರಿಸಲು ’ನ್ಯಾಷನಲ್ ಸ್ಕಿಲ್ ಡೆವಲಪ್ ಫಂಡ್’ ಅನ್ನು ಪ್ರಾರಂಭಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಹಣ ನೀಡುತ್ತದೆ. ಇದನ್ನು ಇಂಡಸ್ಟ್ರಿಗಳ ಜೊತೆಗೆ ಬಳಸಲಾಗುತ್ತಿದೆ. ಇದಕ್ಕಾಗಿ ದೇಶದಾದ್ಯಂತ ಬೃಹತ್ ಪ್ರಮಾಣದಲ್ಲಿ ಗುಣಮಟ್ಟದ ಕೌಶಲಗಳನ್ನು ಬೆಳೆಸಲು ಖಾಸಗಿ-ಸಾರ್ವಜನಿಕ ಪಾಲುದಾರಿಕೆಯಲ್ಲಿ National Skill Development Corporation (NSDC) ಎನ್ನುವ ಸಂಸ್ಥೆಯನ್ನು ವಿಶಿಷ್ಟ ಕಾರ್ಯಪದ್ಧತಿಯೊಂದಿಗೆ ವ್ಯವಸ್ಥೆಗೊಳಿಸಲಾಗಿದೆ.
ನಮ್ಮ ಬದುಕಿನಲ್ಲಿ ವಿವಿಧ ಅಂಗಗಳನ್ನು ಗುರುತಿಸಿ (ಅದು ಮ್ಯಾನುಫ್ಯಾಕ್ಚರ್, ಟೆಕ್ಸ್ಟೈಲ್, ಎಲೆಕ್ಟ್ರಾನಿಕ್ಸ್, ಮರಗೆಲಸ, ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಶಿಕ್ಷಣ ಇವೆಲ್ಲವನ್ನೂ ಸೇರಿಸಿಕೊಂಡು) 38 ಪ್ರತ್ಯೇಕ ವಿಷಯಗಳ ಸ್ಕಿಲ್ ಕೌನ್ಸಿಲ್ಗಳನ್ನು ರಚಿಸಲಾಗಿದೆ. ಈ ಸೆಕ್ಟರಲ್ ಸ್ಕಿಲ್ ಕೌನ್ಸಿಲ್ಗಳ ಅಧ್ಯಕ್ಷರು ಆಯಾ ಉದ್ದಿಮೆಗಳ ಪ್ರಮುಖರು – ಅಂದರೆ ದೇಶವಿದೇಶಗಳಲ್ಲಿ ಪ್ರಖ್ಯಾತ ಉದ್ಯಮಗಳನ್ನು, ಕಾರ್ಪೋರೇಟ್ ಕಂಪೆನಿಗಳನ್ನು ನಡೆಸುತ್ತಿರುವವರು ಅಥವಾ ಆಯಾ ಉದ್ಯಮ ಒಕ್ಕೂಟಗಳ ಮುಖ್ಯಸ್ಥರೇ ಪ್ರಮುಖರಾಗಿರುತ್ತಾರೆ. ಇಂತಹ 450 ಕಾರ್ಪೋರೇಟ್ ಉದ್ಯಮಗಳೊಂದಿಗೆ ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಇವರು ’ಸೆಕ್ಟರಲ್ ಸ್ಕಿಲ್ ಕೌನ್ಸಿಲ್’ಗಳನ್ನು ನಡೆಸುತ್ತಾರೆ. ಈ ಕೌನ್ಸಿಲ್ಗಳು ಉದ್ಯಮದ ಅಗತ್ಯತೆಗಳೇನು, ಅದರ ಬಯಕೆಗಳೇನು, ಬೇಡಿಕೆಗಳೇನು ಎಂಬ ಆಧಾರದ ಮೇಲೆ ಮೌಲ್ಯಮಾಪನ, ನಿರ್ಧಾರ ಹಾಗೂ ವಿಶ್ಲೇಷಣೆ (Evaluation, Assessment and Analysis) ನಡೆಸುತ್ತವೆ. ಕೌಶಲ ಗುಣಮಟ್ಟದ ಚೌಕಟ್ಟಿನಲ್ಲಿ ಸರ್ಕಾರ ತಲೆಹಾಕುವುದಿಲ್ಲ. ಇದನ್ನು ಸಂಪೂರ್ಣ ಸಮಾಜಕ್ಕೆ, ಅಂದರೆ ಇಂಡಸ್ಟ್ರಿ ಮತ್ತು ಬಿಸಿನೆಸಸ್ಗೆ ಬಿಟ್ಟಿದ್ದೇವೆ. ಹೀಗೆ ಸೆಕ್ಟರ್ ಸ್ಕಿಲ್ ಕೌನ್ಸಿಲ್ಗಳು ಕೆಲಸ ಮಾಡುತ್ತಿವೆ.
ಸಾಮಾನ್ಯವಾಗಿ ಮೂರು ರೀತಿಯ ಕೆಲಸಗಳಿರುತ್ತವೆ. ಒಂದು, ಗ್ರೇ ಕಲರ್ ಜಾಬ್ ಅಥವಾ ಕೆಳಹಂತದ ಕೆಲಸಗಳು (ಅಟೆಂಡರ್, ಹೆಲ್ಪರ್ ಕೆಲಸಗಳು ಇತ್ಯಾದಿ). ಇನ್ನೊಂದು ಮಧ್ಯಂತರದ ಕೆಲಸಗಳು. ಅನಂತರ ವೈಟ್ಕಾಲರ್ ಜಾಬ್ ಅಥವಾ ನಿರ್ವಹಣಾ ಕೌಶಲಗಳಿರುವ, ಅನುಷ್ಠಾನ ಕೌಶಲಗಳಿರುವ ಕೆಲಸಗಳು. ಸಾಮಾನ್ಯ (basic), ಮಧ್ಯಂತರ ಮತ್ತು ಉನ್ನತ – ಹೀಗೆ ಮೂರು ಹಂತಗಳಲ್ಲಿ ಕೆಲಸಗಳನ್ನು ವಿಂಗಡಿಸಿ ಇವಕ್ಕೆ ತಕ್ಕಂತೆ ತರಬೇತಿ ಕಾರ್ಯಕ್ರಮಗಳನ್ನು ಜೋಡಿಸಲಾಗುತ್ತಿದೆ.
ಕೌಶಲ ತರಬೇತಿ ನೀಡಲು ನಾವು ಮೊದಲು ಪ್ರಾರಂಭಿಸಿದ್ದು, PMKVY (ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ) ಮೂಲಕ. ಇದು ಇಡೀ ದೇಶದ ಬಹುತೇಕ ಎಲ್ಲ ಕಡೆಗಳಲ್ಲಿ ಈಗಾಗಲೆ ನಡೆಯುತ್ತಿದೆ. ಇದೊಂದು ಸಂಚಾರಿ ಘಟಕ. ಇದು ಓಡಾಡುತ್ತಿರುತ್ತದೆ ಎಂದಲ್ಲ; ಈ ವರ್ಷ ಇಲ್ಲಿದ್ದರೆ, ಮುಂದಿನ ವರ್ಷ ಇಲ್ಲಿ ಬೇಡಿಕೆ ಇಲ್ಲ ಎಂದಾದರೆ ಇನ್ನೊಂದು ಕಡೆಗೆ ಹೋಗುತ್ತಾರೆ. ಇದನ್ನು ಇಂಡಸ್ಟ್ರಿ ಪಾರ್ಟ್ನರ್ಗಳು ನಡೆಸುತ್ತಾರೆ. 2016-2020 ರ ಒಳಗೆ ಸುಮಾರು 10 ದಶಲಕ್ಷ ಜನರಿಗೆ ತರಬೇತಿ ನೀಡಲು ನಿಶ್ಚಯಿಸಲಾಗಿದೆ. ಇದಕ್ಕಾಗಿ 12,000 ಕೋಟಿ ರೂಪಾಯಿಯನ್ನು ಬಜೆಟ್ನಲ್ಲಿ ತೆಗೆದಿರಿಸಲಾಗಿದೆ.
ಅನಂತರದಲ್ಲಿ PMKK (ಪ್ರಧಾನಮಂತ್ರಿ ಕೌಶಲ ಕೇಂದ್ರ). ಇದು ಸ್ಟಾಟಿಕ್ (ಸ್ಥಿರ) ಸೆಂಟರ್. ಇದನ್ನೂ ಉದ್ಯಮಗಳ ಜೊತೆಗೆ ಜೋಡಿಸಲಾಗಿದೆ.
ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ದೇಶದ ಎಲ್ಲ ಜಿಲ್ಲೆಗಳಲ್ಲಿ ಕೌಶಲಕೇಂದ್ರಗಳನ್ನು ಪ್ರಾರಂಭಿಸಲು ಕೇಂದ್ರಸರ್ಕಾರ ನಿರ್ಧರಿಸಿದೆ. ನಾವು ಉದ್ಯಮಿಗಳನ್ನು ಕರೆತಂದು ಟ್ರೈನಿಂಗ್ ಕೊಡುತ್ತೇವೆ. ಅನಂತರ ಅವರಿಗೆ ಕೆಲಸ ಕೊಡುವವರಾರು? ಅದಕ್ಕಾಗಿ ಹತ್ತಾರು Placement Agency ಗಳನ್ನು ತೊಡಗಿಸಿಕೊಳ್ಳಲಾಗುತ್ತಿದೆ. ಈಗಾಗಲೇ ಕಂಪೆನಿಗಳಿಗೆ ಅಗತ್ಯ ಜನರನ್ನು ಒದಗಿಸುತ್ತಿರುವ ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ಲೇಸ್ಮೆಂಟ್ ಏಜೆನ್ಸಿಗಳನ್ನು ಗುರುತಿಸಿ ಅಧಿಕೃತವಾಗಿ ನೋಂದಾಯಿಸಿ ಅವನ್ನು ಇದಕ್ಕೆ ಜೋಡಿಸಿಕೊಳ್ಳಲಾಗುತ್ತಿದೆ. ವಾಸ್ತವವಾಗಿ ಸರ್ಕಾರ ಯಾವುದೇ ಕೌಶಲಕೇಂದ್ರವನ್ನು ನಡೆಸುವುದಿಲ್ಲ. ಈಗಾಗಲೇ 580 ಕ್ಕೂ ಅಧಿಕ ಪಿಎಂಕೆಕೆ ಕೇಂದ್ರಗಳಿವೆ. ಈ ಸಂಖ್ಯೆ ಒಂದು ವರ್ಷ ಜಾಸ್ತಿ, ಇನ್ನೊಂದು ವರ್ಷ ಕಡಮೆ ಆಗುತ್ತಿರುತ್ತದೆ. ಇದು ಬೇಡಿಕೆ ಆಧಾರಿತ. ಈ ವರ್ಷ ಬೆಂಗಳೂರಿನಲ್ಲಿ ೫ ಕೇಂದ್ರಗಳಿವೆ. ಮುಂದಿನ ವರ್ಷ ಇಷ್ಟು ಇರುತ್ತದೆಂದಿಲ್ಲ, ಉದ್ಯೋಗಕೇಂದ್ರ ಬದಲಾಗಬಹುದು ಅಥವಾ ಬೇರೆ ಉದ್ಯೋಗಮಾದರಿ ಪ್ರಾರಂಭಿಸಿರಬಹುದು. ಅದು ಪೂರ್ಣವಾಗಿ ಸಂದರ್ಭಗಳಿಗೆ ಹೊಂದಿಕೊಳ್ಳುವಂತಹದ್ದಾಗಿರುತ್ತದೆ.
ಕೌಶಲ ತರಬೇತಿಯನ್ನು ಶುಲ್ಕ ಆಧಾರಿತ ಮತ್ತು ನಿಃಶುಲ್ಕ ಎಂದು ಎರಡು ರೀತಿಯಲ್ಲಿ ನೀಡಲಾಗುತ್ತಿದೆ. ಪ್ರಾರಂಭದಲ್ಲಿ ಬಡಜನರು ಹಾಗೂ ಸಾಮಾನ್ಯ ಕೆಳಹಂತದ ಮತ್ತು ಮಧ್ಯಂತರ ಕೆಲಸಗಾರರಿಗೆ ಸಹಾಯವಾಗಬೇಕು ಎಂಬ ಉದ್ದೇಶದಿಂದ ನಿಃಶುಲ್ಕ ತರಬೇತಿ ಕೇಂದ್ರವನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಾರಂಭಿಸಿದೆವು. ಇದಕ್ಕಾಗಿ ಪಿಎಂಕೆವಿವೈ ಅಡಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಬ್ಸಿಡಿ ಕೊಟ್ಟು ತರಬೇತಿ ನೀಡಲಾಯಿತು. ಇದು ದಂಧೆಯ ಸ್ವರೂಪ ಪಡೆಯುತ್ತಿರುವುದು ಗಮನಕ್ಕೆ ಬಂತು. ಈಗ ಅದನ್ನು ಶಿಸ್ತುಬದ್ಧಗೊಳಿಸಲಾಗಿದೆ.
ಈಗ ಪಿಎಂಕೆಕೆ ಅಡಿಯಲ್ಲಿ ಶುಲ್ಕ ಆಧಾರಿತ ಮಾದರಿಯನ್ನು ಹೆಚ್ಚಿಸಲಾಗಿದೆ. ಶುಲ್ಕ ನೀಡಿ ಕಲಿತರೆ ಅದಕ್ಕೊಂದು ಗಂಭೀರತೆ ಇರುತ್ತದೆ. ವಿದ್ಯಾರ್ಥಿಗಳೂ ಕೂಡಾ ಗಂಭೀರವಾಗಿ ತರಬೇತಿ ಪಡೆಯುತ್ತಾರೆ, ಆನಂತರ ಕೆಲಸಕ್ಕೆ ಕರೆದಾಗಲೂ ಗಟ್ಟಿಯಾಗಿ ನಿಂತುಕೊಳ್ಳುತ್ತಾರೆ. ಹೀಗಾಗಿ ಇಂದು ಶುಲ್ಕ ಆಧಾರಿತ ತರಬೇತಿ ಜನಪ್ರಿಯವಾಗುತ್ತಿದೆ. ಖಾಸಗಿ ಸಂಸ್ಥೆಗಳು ಹೆಚ್ಚಾಗಿ ಶುಲ್ಕ ಆಧಾರಿತ ಮಾದರಿಯನ್ನೇ ಒಪ್ಪಿಕೊಳ್ಳುತ್ತಿವೆ. ಹೀಗೆ ಅನುಭವದ ಆಧಾರದಲ್ಲಿ ಮುಂದಕ್ಕೆ ಹೋಗುತ್ತಿದ್ದೇವೆ.
ತರಬೇತಿ ನೀಡುವಂತಹ ತರಬೇತುದಾರರಿಗೆ ಟ್ರೈನಿಂಗ್ ಕೊಡುವುದಕ್ಕಾಗಿ ಹಿಂದಿನ ಎಟಿಐ (Advance Training Institute) ಅನ್ನು ವ್ಯವಸ್ಥಿತಗೊಳಿಸಿ ’ರಾಷ್ಟ್ರೀಯ ಕೌಶಲಾಭಿವೃದ್ಧಿ ಸಂಸ್ಥೆ’ (National Skill Development Institute) ಎಂದು ಪ್ರಾರಂಭಿಸಲಾಗಿದೆ. ಇದು ದೇಶದ ಸುಮಾರು 43 ಕಡೆಗಳಲ್ಲಿದೆ. ಇಲ್ಲಿ ತರಬೇತುದಾರರಿಗೆ ತರಬೇತಿ ನೀಡಲಾಗುತ್ತಿದೆ.
ಪ್ರಾರಂಭದಲ್ಲಿ ನಾವು ದೊಡ್ಡ ಗುರಿಯನ್ನಿಟ್ಟುಕೊಂಡೆವು. ಆದರೆ ರಾಜ್ಯಸರ್ಕಾರಗಳ ಸೀಮಿತ ಚೌಕಟ್ಟಿನಲ್ಲಿ ನಾವು ಆ ಗುರಿಯನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಸಾಮಾನ್ಯವಾಗಿ ಭಾರತದಲ್ಲಿ ಪ್ರತಿ ವರ್ಷ 2 ಕೋಟಿ ಹೊಸ ಉದ್ಯೋಗಾಕಾಂಕ್ಷಿಗಳು ಸೃಷ್ಟಿಯಾಗುತ್ತಾರೆ; ಅದರಲ್ಲಿ ವೈಟ್, ಬ್ಲೂ, ಗ್ರೇ ಕಲರ್, ಡಿಗ್ರಿ, ಪಿಎಚ್.ಡಿ. ಮಾಡಿರುವ ಉದ್ಯೋಗಿಗಳೂ ಸೇರಿದ್ದಾರೆ. ಅದರಲ್ಲಿ ಶೇ. 2 ರಷ್ಟು ಜನರನ್ನು ಬಿಟ್ಟರೆ ಬಹುತೇಕರಿಗೆ ಕೆಲಸ ಮಾಡುವ ಸಾಮರ್ಥ್ಯ ಇರುವುದಿಲ್ಲ. ಹೀಗಾಗಿ ಆ ಎರಡು ಕೋಟಿ ಜನರನ್ನು ಉದ್ದಿಮೆಗೆ, ವ್ಯಾಪಾರ ವಹಿವಾಟುಗಳನ್ನು ನಡೆಸಲು ಸಿದ್ಧಗೊಳಿಸುವುದು ನಮಗಿರುವ ದೊಡ್ಡ ಸವಾಲು.
ಮೋದಿಯವರು ಅಧಿಕಾರ ಸ್ವೀಕರಿಸಿದಾಗ ಡಿಪ್ಲೊಮಾ, ಪಾಲಿಟೆಕ್ನಿಕ್, ರುಡ್ಸೆಟ್, ಪಿಪೆಡ್ ಎಲ್ಲವೂ ಸೇರಿದಂತೆ ನಮ್ಮ ದೇಶದ ಒಟ್ಟು ನಿರ್ಗಮನಸಾಮರ್ಥ್ಯ ಹೆಚ್ಚೆಂದರೆ ಸುಮಾರು 20 ರಿಂದ 30 ಲಕ್ಷ. ಇಷ್ಟು ಸಂಖ್ಯೆಯ ಜನರಿಗೆ ಮಾತ್ರ ತರಬೇತಿ ಲಭ್ಯವಾಗುತ್ತಿತ್ತು. ಆದರೆ ಬೇಡಿಕೆಯಿರುವುದು 2 ಕೋಟಿಗೆ. ಹೀಗೆ ಬೇಡಿಕೆ ಮತ್ತು ಪೂರೈಕೆಯ ಮಧ್ಯೆ ಬಹಳ ದೊಡ್ಡ ಅಂತರವಿತ್ತು. ಅಧಿಕಾರಕ್ಕೆ ಬರುತ್ತಿದ್ದಂತೆ ನಾವು ಪಿಎಂಕೆವಿ, ಪಿಎಂಕೆಕೆ ಸೆಂಟರ್ಗಳನ್ನು ಸ್ಥಾಪಿಸಿದೆವು, ಐಟಿಐಯಂತಹ ಈಗಾಗಲೇ ಇರುವ ತರಬೇತಿ ಕೇಂದ್ರಗಳ ಬಲವರ್ಧನೆಗೊಳಿಸಿದೆವು. ಖೊಟ್ಟಿ ಐಟಿಐಗಳನ್ನು ಯಾವುದೇ ದಾಕ್ಷಿಣ್ಯವಿಲ್ಲದೆ ಮುಚ್ಚಿಸಿದೆವು. ನಾನು ಅಧಿಕಾರ ಸ್ವೀಕರಿಸಿದ ನಂತರ ಈವರೆಗೆ ಸುಮಾರು 560 ಕ್ಕೂ ಹೆಚ್ಚು ಐಟಿಐಗಳ ಅನುಮತಿಯನ್ನು ಹಿಂಪಡೆದಿದ್ದೇವೆ. ಹೀಗೆ ಕಠಿಣ ನಿರ್ಣಯಗಳನ್ನು ತೆಗೆದುಕೊಂಡ ಪರಿಣಾಮವಾಗಿ ಇದೀಗ ಕೌಶಲಾಭಿವೃದ್ಧಿ ಇಲಾಖೆಯಿಂದ ಪ್ರತಿ ವರ್ಷ 1.10 ಕೋಟಿಯಿಂದ 1.20 ಕೋಟಿ ಜನರಿಗೆ ತರಬೇತಿ ನೀಡಲು ಸಾಧ್ಯವಾಗುತ್ತಿದೆ. ಮುಂಚೆ 10೦% ಕೂಡಾ ಇರದಿರುವುದನ್ನು ನಾವಿಂದು 60%ಗೆ ತಲಪಿದ್ದೇವೆ. ನಿಜ, ಸಾಧಿಸಲು ಇನ್ನೂ ದೊಡ್ಡ ಅಂತರವಿದೆ. ಕಳೆದ ಮೂರೂವರೆ ವರ್ಷದಲ್ಲಿ ಕಂಡುಬಂದ ವೇಗ ಕಳೆದ 70 ವರ್ಷಗಳಲ್ಲಿ ಇದ್ದಿದ್ದರೆ ನಮ್ಮಲ್ಲಿ ನಿರುದ್ಯೋಗ ಸಮಸ್ಯೆಯೇ ಇರುತ್ತಿರಲಿಲ್ಲ. ಕಳೆದ ಮೂರೂವರೆ ವರ್ಷಗಳಲ್ಲಿ ನಮ್ಮ ದಾರಿ, ಗುರಿ ಎರಡೂ ಸ್ಪಷ್ಟವಾಗಿದೆ. ಹೀಗಾಗಿ ವ್ಯಾಪಕವಾಗಿ ಹೆಜ್ಜೆಯನ್ನಿಡುತ್ತ ಮುಂದೆ ಹೋಗುತ್ತಿದ್ದೇವೆ.
ಸರ್ಕಾರ ಬದಲಾದರೂ ಈ ವ್ಯವಸ್ಥೆ ಅಲುಗಾಡಬಾರದು ಎಂಬ ದೃಷ್ಟಿಯಿಂದ ಇದನ್ನು ನೋಡಿಕೊಳ್ಳಲು ಇಂಡಿಯನ್ ಸ್ಕಿಲ್ ಡೆವಲೆಪ್ಮೆಂಟ್ ಸರ್ವೀಸ್ ಎಂಬ ಯುಪಿಎಸ್ಇ ಕ್ಯಾಡರ್ನ್ನು ನಿರ್ಮಿಸುತ್ತಿದ್ದೇವೆ. ಮೋದಿಯವರು ಅಧಿಕಾರಕ್ಕೆ ಬಂದ ತಕ್ಷಣ ಇದರ ಅಗತ್ಯವನ್ನು ಗಮನಿಸಿ ಕಾರ್ಯರೂಪಕ್ಕಿಳಿಸಿದರು. ಬಹುತೇಕ ಈ ವರ್ಷ ಇಂತಹ ಅಧಿಕಾರಿಗಳ ಮೊದಲ ತಂಡ ಹೊರಬರುತ್ತಿದೆ. ಐಎಎಸ್, ಐಪಿಎಸ್, ಆಫೀಸರ್ಗಳ ದರ್ಜೆಯ ತರಬೇತಿ ಪಡೆದ ಇಂಡಿಯನ್ ಸ್ಕಿಲ್ ಡೆವಲೆಪ್ಮೆಂಟ್ ಸರ್ವಿಸ್ (ಐಎಸ್ಡಿಎಸ್) ಕ್ಯಾಡರ್ನ ಈ ಅಧಿಕಾರಿಗಳು ಕೌಶಲಕ್ಕೆ ಸಂಬಂಧಿಸಿದ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಾರೆ. ಇದು ಮುಂದಿನ ದಿನಗಳಲ್ಲಿ ಅಗಾಧ ಬೇಡಿಕೆಯಿರುವ ಕ್ಷೇತ್ರ; ಬಹಳ ದೊಡ್ಡ ಕ್ಷೇತ್ರವಾಗಿ ಬೆಳೆಯುತ್ತದೆ.
ಪ್ರಶ್ನೆ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಎಂಬ ಪ್ರತ್ಯೇಕ ಖಾತೆಯನ್ನು ಆರಂಭಿಸಲು ಕಾರಣವೇನು?
ಉತ್ತರ: ಕಳೆದ 70 ವರ್ಷಗಳಿಂದ ಭಾರತದಲ್ಲಿ ಕೇವಲ ಸರ್ಟಿಫಿಕೇಟ್ಗಳನ್ನು ಕೊಡುತ್ತಾ ಬರಲಾಗಿದೆ; ಪ್ರಾಯೋಗಿಕತೆ ಅಥವಾ ವ್ಯಾವಹಾರಿಕತೆಯನ್ನು ನಿರ್ಲಕ್ಷಿಸಲಾಗಿತ್ತು. ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಲು ಇದು ಬಹಳ ದೊಡ್ಡ ಕಾರಣ. ಸರ್ಟಿಫಿಕೇಟ್ ತೆಗೆದುಕೊಂಡು ಬರುವವರೆಲ್ಲರಿಗೂ ಕೆಲಸ ಮಾಡುವ ಯೋಗ್ಯತೆ ಇರುತ್ತದೆನ್ನುವಂತಿಲ್ಲ. ನಮ್ಮ ಕಾರ್ಯಾಲಯಗಳಲ್ಲಿರುವ ಗುಮಾಸ್ತೆಗೆ ಸರಿಯಾಗಿ ಕನ್ನಡದಲ್ಲಿ ಪತ್ರ ಬರೆಯಲೂ, ಟೈಪ್ ಮಾಡಲೂ ಬರದಿರುವುದನ್ನು ನಾವು ಕಾಣುತ್ತೇವೆ. ಇದು ನಮ್ಮ ದೇಶದ ದೌರ್ಭಾಗ್ಯ. ಇಂದು ಅಂತರಂಗವೇ ಬೇರೆ, ಬದುಕೇ ಬೇರೆ ಆಗಿದೆ! ಬಹುತೇಕರ ಕಲಿಕೆಗೂ ಉದ್ಯೋಗಕ್ಕೂ, ಹವ್ಯಾಸಕ್ಕೂ ಕಲಿಕೆಗೂ, ಸ್ವಭಾವಕ್ಕೂ ಕಲಿಕೆಗೂ ಯಾವ ಸಂಬಂಧವೂ ಇಲ್ಲ. ಹೀಗೆ ಸಂಬಂಧವಿಲ್ಲದ ಒಂದು ಗೋಜಲಿನ ವಾತಾವರಣದಲ್ಲಿ ನಮ್ಮನ್ನು ಸಿಲುಕಿಸಲಾಗಿದೆ. ಈ ಮುಳ್ಳಿನಿಂದ ಹೊರಗೆ ಬರಬೇಕಾಗಿದೆ. ಯಾವುದೋ ಅನಿವಾರ್ಯತೆಗೆ ಬದುಕದೆ, ನಮ್ಮ ಅಂತರಂಗದ ಮಾರ್ದನಿ ಬದುಕಾಗಬೇಕು. ಅಂತರಂಗದ ಪ್ರತಿಫಲನ ಬದುಕಿನಲ್ಲಿ ಕಾಣಬೇಕು. ಸರ್ಟಿಫಿಕೇಟ್ಗಳ ಹಿಂದುಗಡೆ ಓಡುತ್ತಿರುವ ಯುವಸಮುದಾಯವನ್ನು ಕೌಶಲಯುಕ್ತ ಮಾನವಶಕ್ತಿಯಾಗಿ ಪರಿವರ್ತಿಸಬೇಕಾಗಿದೆ.
ಇಂದು ಭಾರತ ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದು, ಈ ಬೆಳವಣಿಗೆಯು ನಿರಂತರ ಮತ್ತು ಎಲ್ಲರನ್ನೂ ಒಳಗೊಳ್ಳುವುದು ಮುಖ್ಯ. ದೇಶದ ಎಲ್ಲ ನಾಗರಿಕರು ಪ್ರಗತಿಗೆ ತಮ್ಮ ಕೊಡುಗೆಯನ್ನು ನೀಡಬೇಕು ಮತ್ತು ಅದರ ಲಾಭವನ್ನು ಅವರು ಪಡೆದುಕೊಳ್ಳಬೇಕೆನ್ನುವ ಉದ್ದೇಶದಿಂದ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ಎಂಬ ಪ್ರತ್ಯೇಕ ಖಾತೆಯನ್ನು ಸೃಷ್ಟಿಸಲಾಯಿತು. ಈವರೆಗೆ ತಲಪಲು ಸಾಧ್ಯವಾಗದಿದ್ದ ವಿಶಾಲ ಗ್ರಾಮಾಂತರ ಪ್ರದೇಶಗಳು ಹಾಗೂ ದೂರದ ಹಳ್ಳಿಮೂಲೆಗಳನ್ನೂ ತಲಪುವುದು; ಜೊತೆಜೊತೆಗೆ ಉದ್ಯೋಗದಾತರಿಗೆ ಕೌಶಲಪೂರ್ಣ ಕಾರ್ಮಿಕರು ದೊರೆಯಬೇಕು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಮತ್ತವರ ಕುಟುಂಬಗಳಿಗೆ ಉತ್ತಮ ಜೀವನೋಪಾಯವನ್ನು ಒದಗಿಸುವ ಅವಕಾಶಗಳನ್ನು ಪೂರೈಸುವುದು ಇಲಾಖೆಯ ಉದ್ದೇಶವಾಗಿದೆ.
ಭಾರತವನ್ನು ಜಗತ್ತಿನ ’ಕೌಶಲಗಳ ರಾಜಧಾನಿ’ಯಾಗಿ (ಸ್ಕಿಲ್ ಕ್ಯಾಪಿಟಲ್) ರೂಪಿಸುವುದೇ ನರೇಂದ್ರ ಮೋದಿಯವರ ಕನಸು.
ಪ್ರಶ್ನೆ: ಕೌಶಲಾಭಿವೃದ್ಧಿಗೆ ಸಂಬಂಧಿಸಿದಂತೆ ಬೇರೆ ದೇಶಗಳು ಅನುಸರಿಸುತ್ತಿರುವ ವಿಧಾನಗಳಿಗೂ ಮತ್ತು ನಮ್ಮ ದೇಶದಲ್ಲಿ ನಾವು ಅನುಸರಿಸುವ ವಿಧಾನಗಳಿಗೂ ಏನಾದರೂ ವ್ಯತ್ಯಾಸಗಳಿವೆಯೇ?
ಉತ್ತರ: ಭಾರತದ ಕೌಶಲಾಭಿವೃದ್ಧಿ ಇಲಾಖೆಯು ಕೇವಲ ಮೂರೂವರೆ ವರ್ಷದ ಶಿಶು. ಇದಕ್ಕೆ ಭಾರೀ ದೊಡ್ಡ ಇತಿಹಾಸ ಇಲ್ಲ. ಸಿಂಗಾಪುರ ಹಾಗೂ ಜರ್ಮನಿಗಳಲ್ಲಿ ಕಳೆದ 80 ವರ್ಷಗಳ ಹಿಂದಿನಿಂದಲೂ (ಅಂದರೆ ಮೊದಲ ವಿಶ್ವಯುದ್ದಕ್ಕೂ ಪೂರ್ವದಲ್ಲಿ) ಕೌಶಲಾಭಿವೃದ್ಧಿಯನ್ನು ಅನೌಪಚಾರಿಕವಾಗಿ ನಡೆಸಿಕೊಂಡು ಬರಲಾಗುತ್ತಿತ್ತು. ಮಹಾಯುದ್ಧದ ನಂತರ ಜನರಿಗೆ ಉದ್ಯೋಗ ನೀಡುವುದಕ್ಕಾಗಿ ವ್ಯವಸ್ಥಿತ ತರಬೇತಿಯ ಅಗತ್ಯವನ್ನು ಮನಗಂಡು ಅದಕ್ಕೆ ಅಧಿಕೃತ ರೂಪ ಕೊಟ್ಟಿದ್ದರು.
ಜರ್ಮನಿ, ಸಿಂಗಾಪುರ, ಜಪಾನ್ ಮುಂತಾದ ಜಗತ್ತಿನ ಬೇರೆ ಬೇರೆ ದೇಶಗಳ ಒಳ್ಳೆಯ ಮಾದರಿಗಳು ನಮ್ಮ ಎದುರಿಗಿದ್ದವು. ಅಲ್ಲಿ ಕೌಶಲಾಭಿವೃದ್ಧಿಯದ್ದೇ ಪ್ರತ್ಯೇಕ ಸಚಿವಾಲಯ ಇಲ್ಲ. Conservative Education ಜೊತೆಯಲ್ಲಿಯೇ ಕೌಶಲಾಭಿವೃದ್ಧಿಯನ್ನೂ ವಿದ್ಯಾಭ್ಯಾಸದ ಒಂದು ಭಾಗ ಎಂದು ಪರಿಗಣಿಸಿದ್ದರು. ಆದರೆ ನಮ್ಮಲ್ಲಿ ಹಾಗಿಲ್ಲ.
ಪ್ರಶ್ನೆ: ಸಾಮಾನ್ಯ ಅಭಿಪ್ರಾಯ ಎಂದರೆ, ಕೌಶಲಾಭಿವೃದ್ಧಿಯು ಸಾಂಪ್ರದಾಯಕ ಶಿಕ್ಷಣದ್ದೇ ಒಂದು ಭಾಗವಾಗಿ ಇರಬೇಕು; ಆದರೆ ಈಗ – ’ಅಲ್ಲಿ ಒಂದು ಪದವಿಯನ್ನು ಪೂರೈಸಿ, ಮತ್ತೆ ಇಲ್ಲಿಗೆ ಬಂದು ಕೌಶಲವನ್ನು ಹೆಚ್ಚಿಸಿಕೊಳ್ಳಬೇಕು’ ಅಂದರೆ ಅದು ಇನ್ನ? ಹೊರೆಯಾಗುತ್ತದೆ. ಆದ್ದರಿಂದ ಮೂಲದಲ್ಲೆ, ಅಂದರೆ ನಮ್ಮ ಶಿಕ್ಷಣವ್ಯವಸ್ಥೆಯಲ್ಲೆ ಬದಲಾವಣೆಯಾಗಬೇಕಲ್ಲವೆ? ಇದಕ್ಕೆ ನಿಮ್ಮ ಅಭಿಪ್ರಾಯವೇನು?
ಉತ್ತರ: ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಪಾಠಮಾಡುವಂತಹ ಪದ್ಧತಿ ಇರಲೇ ಇಲ್ಲ. ಶಿಕ್ಷಣ ’ಹ್ಯಾಂಡ್ಸ್-ಆನ್ ಟ್ರೈನಿಂಗ್’ ರೀತಿಯಲ್ಲಿ ಇತ್ತು. ಗುರುವಿನ ಜೊತೆಗೆ ಆಶ್ರಮದಲ್ಲಿಯೇ ಇದ್ದು ಶಿಷ್ಯ ಕಲಿಯುತ್ತಿದ್ದ. ಗುರು ಶಿಷ್ಯನಿಗೆ ಪಾಠ ಮಾಡುತ್ತಿರಲಿಲ್ಲ. ಚಿನಿವಾರರು ಚಿನ್ನದ ಕೆಲಸ ಮಾಡುವವರ ಜೊತೆಗೆ ಚಿನ್ನದ ಕೆಲಸ ಮಾಡುತ್ತಲೇ ಕಲಿಯುತ್ತಿದ್ದರೇ ಹೊರತು ಯಾವುದೇ ಬೋಧನಾ ಪಾಠಗಳ ಮೂಲಕ ಅಲ್ಲ. ಆದರೆ ನಮ್ಮ ದುರಂತ ಪಾಶ್ಚಾತ್ಯ ಶಿಕ್ಷಣಪದ್ಧತಿಯನ್ನು ಒಪ್ಪಿಕೊಂಡದ್ದು. ಸ್ವಾತಂತ್ರ್ಯೋತ್ತರ ಆಡಳಿತ ವ್ಯವಸ್ಥೆಯಲ್ಲಿ – ಅದು ಆರ್ಥಿಕತೆ, ಶಿಕ್ಷಣ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ – ನಮ್ಮ ಮೂಲಸತ್ತ್ವವನ್ನು ಬಿಟ್ಟು ಪಾಶ್ಚಾತ್ಯರನ್ನು ನಕಲು ಮಾಡತೊಡಗಿದೆವು. ಇದರ ಪರಿಣಾಮ ಇಂದು ನಾವು ಹ್ಯಾಂಡ್ಸ್-ಆನ್ ಟ್ರೈನಿಂಗ್ನಿಂದ ಸಂಪೂರ್ಣವಾಗಿ ಹೊರಗೆ ಬಂದಿದ್ದೇವೆ.
ಪ್ರಾಥಮಿಕ ಶಿಕ್ಷಣದಿಂದಲೇ ಕೌಶಲ ತರಬೇತಿಗಳನ್ನು ಪ್ರಾರಂಭಿಸಿ ಎಂಬ ಬೇಡಿಕೆ ಇಂದಿಗೂ ಇದೆ. ಆದರೆ ಈಗಾಗಲೇ ಚಾಲ್ತಿಯಲ್ಲಿರುವ ವ್ಯವಸ್ಥೆಗಳನ್ನು ಬದಲಾಯಿಸುವುದು ಅಷ್ಟು ಸುಲಭವಿಲ್ಲ. ಯುಜಿಸಿ, ಎಐಸಿಟಿ, ಎಸ್ಸಿಐಗಳಂತಹ ಸಾಂವಿಧಾನಿಕವಾಗಿ ಸ್ಥಾಪಿತವಾದ ಅಟೋನಮಸ್ ವ್ಯವಸ್ಥೆಗಳು ಸರ್ಕಾರದ ಮಾತನ್ನು ಕೇಳಲೇಬೇಕೆಂದು ಇಲ್ಲ. Integrated Support Ecosystem ಅಂತೆ ಕೆಲಸ ಮಾಡಬೇಕಿದ್ದ ಈ ವ್ಯವಸ್ಥೆಗಳು ’ಇಗೋ ಸಿಸ್ಟಮ್’ಗಳಾಗಿ ಬದಲಾಗಿವೆ. ಸರ್ಕಾರ ಹೇಳಿದ್ದನ್ನು ನಾವೇಕೆ ಕೇಳಬೇಕು, ನಮ್ಮದು ಬೇರೆಯೇ ಎನ್ನುತ್ತಿವೆ. ಈಗ ನಮ್ಮ ಪ್ರಯತ್ನದಿಂದಾಗಿ ನಿಧಾನವಾಗಿ ವಾತಾವರಣ ಬದಲಾಗುತ್ತಿದೆ, ಅವುಗಳು ಸ್ಪಂದಿಸುತ್ತಿವೆ. ಇಂದು ಕೇವಲ ಫೌಂಡೇ?ನ್ ಮಾತ್ರ ನಿರ್ಮಾಣವಾಗಿದೆ. ಈಗಲೇ ನೀವು ಮನೆಗೆ ಬಣ್ಣವನ್ನೇ ಬಳಿದಿಲ್ಲ ಎಂದರೆ ಹೇಗೆ? 2022 ರ ಹೊತ್ತಿಗೆ ನಿಮಗೆ ಇದರ ಸ್ಪಷ್ಟ ಚಿತ್ರಣ ಸಿಗಲಿದೆ.
ಪ್ರಶ್ನೆ: ಪಾರಂಪರಿಕ ಕೌಶಲಗಳನ್ನು (ಉದಾಹರಣೆಗೆ ನೇಯ್ಗೆ, ಆಭರಣ ತಯಾರಿ, ಕುಂಬಾರಿಕೆ, ಇತ್ಯಾದಿ ಕೌಶಲಗಳನ್ನು) ಉಳಿಸಿ ಬೆಳೆಸಲು ಏನಾದರೂ ಯೋಜನೆಗಳಿವೆಯೆ? ಜಾಗತೀಕರಣದ ಕಾರಣದಿಂದಾಗಿ ಅಳಿವಿನಂಚಿಗೆ ತಲಪಿರುವ ಅಂಥ ಕೌಶಲಗಳ ರಕ್ಷಣೆ ಪೋಷಣೆಗೆ ಸರ್ಕಾರದ ಕಾರ್ಯಯೋಜನೆಗಳೇನು?
ಉತ್ತರ: ಪಾರಂಪರಿಕ ಕೌಶಲಗಳ ಸಂರಕ್ಷಣೆಗಾಗಿ ಹೆರಿಟೇಜ್ ಸೆಕ್ಟರ್ ಕೌನ್ಸಿಲ್ಗಳು ಕಾರ್ಯನಿರ್ವಹಿಸುತ್ತಿವೆ. ನೇಯ್ಗೆ, ಗಂಧದ ಕೆಲಸ, ಲೋಹದ ಕೆಲಸ ಮುಂತಾದ ಪಾರಂಪರಿಕ ಕೆಲಸಗಳಿಗೆ ಶಿಕ್ಷಣ ಇರುವುದಿಲ್ಲ. ಅಲ್ಲಿ ಹ್ಯಾಂಡ್ಸ್-ಆನ್ ಟ್ರೈನಿಂಗ್ ಇರುತ್ತದೆ. ಅವರು ಕೆಲಸ ಮಾಡುತ್ತಾ ಕಲಿತವರು; ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದು ಕಲಿತವರಲ್ಲ. ಅವರು ಒಳ್ಳೆಯ ಕಸಬುದಾರರು, ಕೌಶಲವಂತರು. ಅಂತಹವರನ್ನು ಗುರುತಿಸಿ, Recognition of Prior Learning (RPL) ಸರ್ಟಿಫಿಕೇಟ್ ಕೊಡುವ ಪ್ರಯತ್ನ ನಡೆದಿದೆ. ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜೊತೆಯಾಗಿ ಇಂತಹ ಲಕ್ಷಾಂತರ ಮಂದಿಗೆ ಸರ್ಟಿಫಿಕೇಟ್ ಕೊಡಮಾಡಿವೆ.
ಪ್ರಶ್ನೆ: ಈ ಪಾರಂಪರಿಕ ಕೆಲಸಗಾರರನ್ನು ಸರ್ಕಾರ ಹೇಗೆ ಗುರುತಿಸುತ್ತದೆ?
ಉತ್ತರ: ಸಾಮಾನ್ಯವಾಗಿ ಈ ಪಾರಂಪರಿಕ ಕೆಲಸಗಾರರ ಸಂಘಟನೆ ಇರುತ್ತದೆ. ಅವರಲ್ಲಿ ಇದಕ್ಕೆ ಪೂರಕವಾದ ಅಗತ್ಯ ಮಾಹಿತಿಗಳು ಲಭ್ಯವಿರುತ್ತವೆ. ಆ ಸಮೂಹ ಸಂಘಟನೆಗಳ ಮೂಲಕವೇ ನಾವು ಅವರನ್ನು ಗುರುತಿಸುವ ಕೆಲಸವನ್ನು ಮಾಡುತ್ತೇವೆ. ಇದು ಸಂಪೂರ್ಣ ಸ್ವತಂತ್ರ ಖಾಸಗಿ ಪ್ರಯತ್ನ: ಸರ್ಕಾರೀ ದೃಷ್ಟಿ ಮತ್ತು ಖಾಸಗೀ ಪ್ರಯತ್ನ.
ಪ್ರಶ್ನೆ: ಪಾರಂಪರಿಕ ಕೌಶಲಗಳಿಗೆ ಉನ್ನತ ಶಿಕ್ಷಣದ ಘನತೆಯನ್ನು ತಂದುಕೊಡಲು ಅಥವಾ ಡಾಕ್ಟರೇಟ್ಗಳನ್ನು ನೀಡಲು ಸಾಧ್ಯವೇ? ಅಂಥವರನ್ನು ಸಮಾಜ ಗುರುತಿಸಿ ಪ್ರೋತ್ಸಾಹಿಸುವಂತೆ ಮಾಡಲು ಸಾಧ್ಯವೇ?
ಉತ್ತರ: ಪಾರಂಪರಿಕ ಕೆಲಸಗಾರರಿಗೆ ಹಾಗೂ ಕಸಬುಗಳಿಗೆ ಡಾಕ್ಟರೇಟ್ ನೀಡುವ ಚಿಂತನೆ ಇದೆ. ಆದರೆ ಅದು ಅಷ್ಟು ಸುಲಭವಲ್ಲ. ನಮ್ಮಲ್ಲಿ ಕಲ್ಲಿನಲ್ಲಿ ಮೂರ್ತಿಯನ್ನು ಕೆತ್ತುವವರಿದ್ದಾರೆ. ಅವರಿಗೆ ಕಲ್ಲಿನಲ್ಲಿ ಹೀಗೆಯೇ ಕೆತ್ತಬೇಕು ಎಂದು ಹೇಳಲು ಸಾಧ್ಯವೇ? ಇದು ಇಂದಿನ ಇಂಡಸ್ಟ್ರಿಯಂತೆ ಅಲ್ಲ.
ನಮ್ಮ ದೇಶದ ವೈಶಿಷ್ಟ್ಯವೆಂದರೆ ಇಲ್ಲಿ ಚಿಕಿತ್ಸೆಯಿಂದ ವಿದ್ಯೆಯ ತನಕ ಎಲ್ಲವೂ ರೂಢಿಗತ ಕೌಶಲ (Customised Skill). ಈವರೆಗೆ ಆಯುರ್ವೇದದ ಮಾಹಿತಿಗಳ ಸಂಪೂರ್ಣ ದಾಖಲೀಕರಣ (Documentation) ಸಾಧ್ಯವಾಗಿಲ್ಲ. ಪ್ರತಿಯೊಬ್ಬರ ದೇಹಪ್ರಕೃತಿಯೂ ಬೇರೆಬೇರೆಯೇ ಆಗಿರುತ್ತದೆಂಬುದೂ ಹೌದು. ಹೀಗಾಗಿ ಆಯುರ್ವೇದದಲ್ಲಿ ಒಂದೇ ರೋಗ ಬಂದಿದ್ದರೂ ಒಬ್ಬರಿಗೆ ಕೊಟ್ಟ ಔಷಧಿಯನ್ನು ಇನ್ನೊಬ್ಬರಿಗೆ ಕೊಡುವುದಿಲ್ಲ. ಆದರೆ ಇಂದಿನ ಅಲೋಪಥಿಯಲ್ಲಿ ಎಲ್ಲರಿಗೂ ಒಂದೇ. ಉದಾಹರಣೆಗೆ ನೋವು ನಿವಾರಕ ಎಂದರೆ ಎಲ್ಲರಿಗೂ ಒಂದೇ. ಕ್ಯಾನ್ಸರ್ ಆಗಿರುವವರಿಗೆ ಭಾರತದ ಫಾರ್ಮಾಸ್ಯೂಟಿಕಲ್ ಇಂಡಸ್ಟ್ರಿ ಕೆಮೋ ಚಿಕಿತ್ಸೆ ನೀಡುತ್ತದೆ. ಕೆಮೋ ಅಮೆರಿಕ-ಆಧಾರಿತ ಡಿಎನ್ಎ ಪ್ರೊಫೈಲ್ನಿಂದ ತಯಾರಾಗಿರುವಂತಹದ್ದು. ಇದು ಭಾರತದಲ್ಲಿ ಕೆಲಸಮಾಡುವುದೆಂಬ ಖಾತರಿಯಿಲ್ಲ. ಹೀಗಾಗಿ ನಮ್ಮಲ್ಲಿ ಕ್ಯಾನ್ಸರ್ಗಿಂತ ಕೆಮೋನಿಂದ ಸತ್ತಿರುವವರ ಸಂಖ್ಯೆಯೇ ಅಧಿಕ! (ಸುಮಾರು ಶೇ. 90ಕ್ಕೂ ಅಧಿಕ ಕ್ಯಾನ್ಸರ್ ರೋಗಿಗಳು ಕೆಮೋದಿಂದಲೇ ಸತ್ತಿರುತ್ತಾರೆನ್ನಲಾಗಿದೆ.) ಪ್ರಸ್ತುತ ನಮ್ಮ ಔ?ಧ ಸಂಶೋಧನೆಯ ಕೆಮಿಕಲ್ ಮೋಲಿಕ್ಯೂಲರ್ ಅಧ್ಯಯನ ಸಂಪೂರ್ಣ ಅಮೆರಿಕದ ಡಿಎನ್ಎ ಆಧಾರಿತ. ಅಲ್ಲಿಯ ಮತ್ತು ನಮ್ಮ ಡಿಎನ್ಎ ಪ್ರೋಫೈಲ್ಗಳಿಗೆ ಅಜಗಜಾಂತರವಿದೆ. ಹೀಗಾಗಿ ನಮ್ಮ ಮೆಡಿಕಲ್ ಆಪ್ರೋಚ್ ಸಮಗ್ರವಾಗಿ ಬೇರೆಯದೇ ಆಗಿರಬೇಕು.
ಇಂದು ನಮ್ಮಲ್ಲಿ ಒಂದು ರೂಮ್ನಲ್ಲಿ ಕತ್ತೆ, ಕುದುರೆ, ಆನೆ, ಮಂಗ, ನಾಯಿ ಎಲ್ಲವನ್ನೂ ಜೊತೆ ಕುಳ್ಳಿರಿಸಿ ಪಾಠ ಮಾಡಲಾಗುತ್ತಿದೆ. ಮರವನ್ನು ಹತ್ತಿ ಎಂಬುದು ಸಿಲಬಸ್. ಮಂಗ ಹತ್ತುತ್ತದೆ; ಆನೆಗೆ ಹತ್ತಲಾದೀತೇ? ಅದೇ ಮರವನ್ನು ದೂಡಿ ಕೆಡವಬೇಕು ಎಂಬ ಸಿಲಬಸ್ ಇದ್ದರೆ ಆನೆ ಮಾಡುತ್ತದೆ, ಮಂಗ, ಕತ್ತೆಗೆ ಸಾಧ್ಯವೇ? ಇಂದಿನ ನಮ್ಮ ಶಿಕ್ಷಣಪದ್ಧತಿ ಇದೇ ರೀತಿಯಲ್ಲಿದೆ. ವೈವಿಧ್ಯಗಳಿರುವ ವ್ಯಕ್ತಿಗಳನ್ನು ಒಂದೆಡೆ ಸೇರಿಸಿ ಎಲ್ಲರಿಗೂ ಒಂದೇ ಸಿಲಬಸ್ ಪಾಠ, ಒಂದೇ ಮಾದರಿ ನೀಡುತ್ತಿದ್ದೇವೆ. ಈ ಮಾದರಿಯನ್ನು ಬದಲಿಸುವ ಚಿಂತನೆ ನಡೆದಿದೆ. ಹೀಗೆ ನಮ್ಮ ಸಾಂಪ್ರದಾಯಿಕ ಕೌಶಲಗಳನ್ನು ಇಂಡಸ್ಟ್ರಿಯಲ್ ಪ್ರೊಡಕ್ಷನ್ನ ರೀತಿಯಲ್ಲಿ ಸರ್ವಸಾಮಾನ್ಯಗೊಳಿಸಲು ಸಾಧ್ಯವಿಲ್ಲ ಮತ್ತು ಹಾಗೆ ಮಾಡಲೂಬಾರದು. ನಮ್ಮೂರಿನಲ್ಲಿರುವ ಕಮ್ಮಾರನ ಹದವೇ ಬೇರೆ, ನಿಮ್ಮೂರಿನವರ ಹದವೇ ಬೇರೆ, ಸುಡುವ ರೀತಿಯೂ ಬೇರೆಬೇರೆಯಾಗಿರಬಹುದು. ಹೀಗಾಗಿ ಇದಕ್ಕೆ ಸರ್ವಸಮಾನತೆಯನ್ನು ಸೃಷ್ಟಿಸುವುದು ಸಾಧ್ಯವಿಲ್ಲ ಮತ್ತು ಅದು ಅವೈಜ್ಞಾನಿಕವಾದುದು.
ಹೀಗಾಗಿಯೇ ವಿದ್ವಾಂಸರು ಪಂಡಿತರು ಇದ್ದರೂ ಆಯುರ್ವೇದವನ್ನು ಒಂದು ಸರ್ವಸಮಾನ ದಾಖಲಾತಿಗೆ ಒಳಪಡಿಸಲು ಸಾಧ್ಯವಾಗಿಯೇ ಇಲ್ಲ. ಕೇರಳದಲ್ಲಿ ಕೊಡುವ ಗಿಡಮೂಲಿಕೆ ಒಡಿಸಾದಲ್ಲಿ ಇಲ್ಲದಿರಬಹುದು, ಆದರೆ ಆ ರೋಗಕ್ಕೆ ಒಡಿಸಾದಲ್ಲಿಯೂ ಔಷಧ ಕೊಡುತ್ತಾರೆ, ಆದರೆ ಅದು ಬೇರೆ ಗಿಡಮೂಲಿಕೆಯಿಂದ. ನಮ್ಮದು ಸ್ಥಳೀಯ ನಿರ್ಧಾರಣ ಪದ್ಧತಿ. ಅಲ್ಲಲ್ಲಿಯ ಸ್ವಭಾವ, ಸಂಸ್ಕೃತಿ ಎಲ್ಲವೂ ಬೇರೆಬೇರೆ. ಜಗತ್ತಿನ ಸೃಷ್ಟಿಯೇ ಹೀಗಿದೆ. ಇದನ್ನು ಪಾಶ್ಚಾತ್ಯರ ’ಯೂನಿಫಾರ್ಮ್ ಪ್ಲಾಟ್ಫಾರ್ಮ್’ಗೆ ತರಲು ಸಾಧ್ಯವೇ ಇಲ್ಲ. ಇದಕ್ಕೆ Holistic Approach ಅಗತ್ಯ. ಇದನ್ನು ಸಮಾಜವೇ ಬೆಳೆಸಿಕೊಳ್ಳಬೇಕು. ಸರ್ಕಾರ ಮಾಡಬೇಕು, ಮಾಡಿಲ್ಲ ಎನ್ನುವುದು ಅಪ್ರಸ್ತುತ. ಇದು ಇನ್ಕ್ಲೂಸಿವ್.
ಈ ಚಿಂತನೆ ಯಾವ ರೀತಿ ಅತಿರೇಕಕ್ಕೆ ಹೋಗುತ್ತದೆ ಎನ್ನುವುದಕ್ಕೆ ಒಂದು ಉದಾಹರಣೆ. ನಮ್ಮಲ್ಲಿ ಬಂಗಾರ ಮಾಡುವುದರಲ್ಲಿ ತಂಜಾವೂರು ಶೈಲಿ, ಬಂಗಾಳಿ ಶೈಲಿ, ಕೇರಳದ ಶೈಲಿ, ಗುಜರಾತೀ ಶೈಲಿ, ಕಾರವಾರದ ಶೈಲಿ ಹೀಗೆ ಬೇರೆ ಬೇರೆ ಶೈಲಿಗಳಿವೆ. ಎಲ್ಲರೂ ಆಭರಣದ ಕೆಲಸವನ್ನೇ ಮಾಡುತ್ತಾರೆ. ಆದರೆ ವಿನ್ಯಾಸ, ವಿಧಾನ ಬೇರೆ. ಇಂದು ನಮ್ಮ ಹಳೆಯ ಸಾಂಪ್ರದಾಯಿಕ ವಿನ್ಯಾಸಕ್ಕೂ ಮತ್ತು ಆಧುನಿಕ ಆಲಂಕಾರಿಕ (Ornamental Design) ವಿನ್ಯಾಸಕ್ಕೂ ಹೋಲಿಕೆ ಇಲ್ಲ. ಇಸ್ರೇಲಿ, ಇಟಾಲಿಯನ್, ಜಪಾನೀ ಡಿಸೈನ್ಗಳಿದ್ದರೂ ಕೈಯಲ್ಲಿ ಮಾಡಿರುವಂತಹ ಆಭರಣಗಳಿಗೆ ಇಂದಿಗೂ ವಿಶಿಷ್ಟ ಮೌಲ್ಯವಿದೆ. ಯಾವ ಯಂತ್ರಸಲಕರಣೆಗಳಿಂದಲೂ (ಕ್ಯಾಡ್ಕ್ಯಾಮ್ನಲ್ಲಿ) ಇದನ್ನು ಡಿಸೈನ್ ಮಾಡಲು ಆಗದು. ಸೂರತ್ನಲ್ಲಿ ಹಳೆಯ ತಂತ್ರಜ್ಞಾನವನ್ನು ಬಳಸಿ ಕೈಯಲ್ಲಿಯೇ ಡೈಮಂಡ್ ಕಟ್ಟಿಂಗ್ ಮಾಡಲಾಗುತ್ತಿದೆ. ರೂಟ್ಸ್ ಬದಲಾಗಿರಬಹುದು, ಮೆಥಡಾಲಜಿ ಇಂದಿಗೂ ಬದಲಾಗಿಲ್ಲ. ವಿಶ್ವದ ಶೇ. 91 ರಷ್ಟು ವಜ್ರದ ಕಟ್ಟಿಂಗ್ ಭಾರತದಲ್ಲಿಯೇ ಆಗುತ್ತದೆ; ಅದೂ ಸೂರತ್ನಲ್ಲಿ. ಇದನ್ನು ಕಂಪ್ಯೂಟರ್ಗಳು, ಮೆಶಿನ್ಗಳಲ್ಲಿ ಮಾಡುತ್ತಿಲ್ಲ. ಪ್ರತಿಯೊಂದನ್ನೂ ಸಣ್ಣದಿರಲಿ, ದೊಡ್ಡದಿರಲಿ, ಅದರ ಪಾಲಿಶ್, ಕಟ್ಟಿಂಗ್, ಶೇಪಿಂಗ್ ಎಲ್ಲವೂ ಕೈಯಲ್ಲಿಯೇ ಮಾಡಲಾಗುತ್ತದೆ. ಯಾವ ಆಧುನಿಕ ತಂತ್ರಜ್ಞಾನವೂ ಉಪಯೋಗಕ್ಕೆ ಬರುವುದಿಲ್ಲ; ತಂತ್ರಗಾರಿಕೆ ಉಪಯೋಗಕ್ಕೆ ಬರಬಹುದ?.
ಪ್ರಶ್ನೆ: ಭಾರತದಲ್ಲಿ 2025ರ ಹೊತ್ತಿಗೆ ಸುಮಾರು 50 ಕೋಟಿಯಷ್ಟು ಯುವಕರು ವಿದ್ಯಾಭ್ಯಾಸ ಮುಗಿಸಿ ಹೊರಬರುತ್ತಾರೆ ಎಂದು ಒಂದು ಅಂಕಿ-ಅಂಶ ಹೇಳುತ್ತದೆ. ಅಷ್ಟೊಂದು ದೊಡ್ಡ ಸಂಖ್ಯೆಯ ಯುವಕರಿಗೆ ಆಗಿನ ಕಾಲ- ಸಂದರ್ಭಕ್ಕೆ (ಡೆಮೊಗ್ರಾಫಿಕ್ ಡಿವಿಡೆಂಡ್ಗೆ) ಅನುಗುಣವಾಗಿ ಸೃಷ್ಟಿಯಾಗಬಹುದಾದ ಉದ್ಯೋಗಗಳೇನೇನು, ಅವುಗಳನ್ನು ನಿಭಾಯಿಸಲು ಸರ್ಕಾರ ತಯಾರಾಗುತ್ತಿದೆಯೇ? ಯಾವ ಯಾವ ಪ್ರಯತ್ನಗಳು ನಡೆಯುತ್ತಿವೆ?
ಉತ್ತರ: 30 ವರ್ಷದ ಹಿಂದೆ ಮೊಬೈಲ್, ಕಂಪ್ಯೂಟರ್ ಟೀವಿಗಳಿರಲಿಲ್ಲ. ಆದರೆ ಇಂದು ಇವುಗಳ ರಿಪೇರಿಯೇ ದೊಡ್ಡ ಉದ್ಯಮವಾಗಿದೆ. ಇವುಗಳಿಲ್ಲದೆ ಬದುಕು ನಡೆಯುವುದೇ ಇಲ್ಲ ಎಂಬ ಸ್ಥಿತಿಗೆ ಬಂದಿದ್ದೇವೆ. ಅಂತಾರಾಷ್ಟ್ರೀಯ ಅಧ್ಯಯನದ ಪ್ರಕಾರ ಪ್ರತಿ ತಲೆಮಾರಿಗೆ 37% ಉದ್ಯೋಗಮಾದರಿಗಳು ಬದಲಾಗುತ್ತವೆ. ಇಂದಿನ ಮಾದರಿಗಳು ಮುಂದಿನ ತಲೆಮಾರಿಗೆ (ಜನರೇಷನ್ಗೆ) ಇರುವುದಿಲ್ಲ. ಹಿಂದೆ ಅಚ್ಚಿನ ಮೊಳೆಯಲ್ಲಿ ಮುದ್ರಣ ನಡೆಯುತ್ತಿತ್ತು. ಇಂದು ಅವು ಎಲ್ಲಿವೆ? ಇಂದು ಸ್ಟೆನೋಗ್ರಾಫರ್ಗಳೇ ಸಿಗುವುದಿಲ್ಲ. (ಹೊಸದಾಗಿ ಸ್ಟೆನೋಗ್ರಾಫರ್ ಕೋರ್ಸ್ ಪ್ರಾರಂಭಿಸುತ್ತಿದ್ದೇವೆ.) ಹೀಗೆ ಅನೇಕ ಮಾದರಿಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಜಗತ್ತು ಬದಲಾದಂತೆ ಇದು ಸ್ವಾಭಾವಿಕ.
ಇಂದು ಬಹುದೊಡ್ಡ ಪ್ರಮಾಣದಲ್ಲಿರುವ ನೀರಿನ ಬಾಟಲ್ ಉದ್ಯಮ, ಆಹಾರ ಸಂಸ್ಕರಣೋದ್ಯಮ ಇದೆ; ಹಿಂದೆ ಇರಲಿಲ್ಲ. ಇನ್ನು ಹೈ-ಎಂಡ್ನಲ್ಲಿ, ಇಂದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇದೆ. ನಮ್ಮ ಬೇಸಿಕ್ ಮೊಬೈಲ್ಗಳಲ್ಲಿಯೇ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಒಳಗೊಂಡಿದೆ. ಮುಂದಿನ ದಿನಗಳಲ್ಲಿ ಎಲ್ಲ ರಂಗಗಳಲ್ಲಿಯೂ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಅನಿವಾರ್ಯ. ಶ್ರೇಷ್ಟ ವಿಜ್ಞಾನಿ ಸ್ಟೀಫನ್ ಹಾಕಿಂಗ್ನ ಉದಾಹರಣೆ ನೀವು ಕೇಳಿರಬಹುದು. ಯಾವುದೇ ಅಂಗವನ್ನು ಅಲುಗಾಡಿಸಲೂ ಮಾತನಾಡಲೂ ಆಗದ ಸ್ಥಿತಿಯಲ್ಲಿದ್ದ. ಆತನ ತಲೆಯಲ್ಲಿರುವ ಯೋಚನೆಗಳನ್ನು ತರಂಗಗಳ ಮೂಲಕ ಗ್ರಹಿಸಿ ಕಂಪ್ಯೂಟರ್ನಲ್ಲಿ ಗ್ರಾಫಿಕ್ಸ್ ರೂಪದಲ್ಲಿ ಬರೆದುಕೊಳ್ಳುವಷ್ಟು ನಮ್ಮ ತಂತ್ರಜ್ಞಾನ, ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಬೆಳೆದಿದೆ. ಇದು ಇಂದು ಅನಿವಾರ್ಯವೂ ಕೂಡ. ರಿಯಲ್ಟೈಮ್ ಟ್ರಾನ್ಸಿಷನ್-ಟ್ರಾನ್ಸ್ಕ್ರಿಪ್ಷನ್-ಇಂಟರ್ಪ್ರಿಟೇಷನ್ಗಳು ಇಂದು ಬಳಕೆಯಲ್ಲಿವೆ. ಪ್ರತಿಯೊಂದು ಹಂತದಲ್ಲಿಯೂ ತಂತ್ರಜ್ಞಾನ ಬೆಳೆಯುತ್ತಿದೆ.
ಈ ವಾಸ್ತವವನ್ನು ಹಾಗೂ ಡೆಮೊಗ್ರಾಫಿಕ್ ಡಿವಿಡೆಂಡನ್ನು ಗಮನದಲ್ಲಿರಿಸಿಕೊಂಡು ವಾರಾಣಸಿ, ಎರ್ನಾಕುಲಂ ಸೇರಿದಂತೆ ದೇಶದ 14 ಕಡೆಗಳಲ್ಲಿ ’ಇಂಡಿಯಾ ಇಂಟರ್ನ್ಯಾಷನಲ್ ಸ್ಕಿಲ್ ಸೆಂಟರ್’ಗಳನ್ನು ಪ್ರಾರಂಭಿಸಲಾಗಿದೆ. ಇದನ್ನು ದೇಶವಿದೇಶದ ಉದ್ಯಮಗಳೇ ನೋಡಿಕೊಳ್ಳುತ್ತವೆ, ನಡೆಸುತ್ತವೆ. ಮುಂದಿನ ತಲೆಮಾರಿನ ಕೌಶಲಗಳು ಹೇಗಿರಬೇಕು ಎಂಬುದನ್ನು ಕಣ್ಣಮುಂದಿಟ್ಟುಕೊಂಡು ’ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್’ಗೆ ಸ್ವತಃ ನರೇಂದ್ರ ಮೋದಿಯವರು ಇತ್ತೀಚೆಗೆ ಕಾನ್ಪುರದಲ್ಲಿ ಶಂಕುಸ್ಥಾಪನೆ ಮಾಡಿದ್ದಾರೆ. ಐಐಎಂ, ಐಐಟಿ ಇರುವಂತೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ ಪ್ರತಿಯೊಂದು ರಾಜ್ಯದಲ್ಲಿಯೂ ಪ್ರಾರಂಭವಾಗಲಿದೆ. ಅಲ್ಲಿ ಸಾಮಾನ್ಯ ಕೌಶಲಗಳಿಗೆ ಹೊರತಾಗಿ ಮುಂದಿನ ತಲೆಮಾರಿನ ಅಗತ್ಯಗಳೇನು, ಅದಕ್ಕೆ ಬೇಕಾದ ಸಿದ್ಧತೆಗಳೇನು ಹೀಗೆ ಹೊಸ ಆಯಾಮದಲ್ಲಿ ಯೋಚನೆ ನಡೆಯುತ್ತದೆ.
ಈಗಾಗಲೇ ಜಪಾನ್, ಸ್ವೀಡನ್, ಕೆನಡಾ, ಅಮೆರಿಕ, ಜರ್ಮನಿ, ಕೊರಿಯಾ, ನೈಜೀರಿಯಾ ಮುಂತಾದ ಸುಮಾರು 18 ದೇಶಗಳೊಂದಿಗೆ ಅಧಿಕೃತ ಒಪ್ಪಂದ (ಎಂಓಯು) ಮಾಡಿಕೊಳ್ಳಲಾಗಿದೆ. ಅವರ ವಿಶೇಷತೆಗಳೇನು, ಸಾಮರ್ಥ್ಯವೇನು, ಅವರಲ್ಲಿರುವುದು ತಾಂತ್ರಿಕ ಸಾಮರ್ಥ್ಯವೋ ಉತ್ಪಾದನಾ ಸಾಮರ್ಥ್ಯವೋ ಅಥವಾ ಇವುಗಳಿಗೆ ಹೊರತಾದ ಬೇರೆ ಸಾಮರ್ಥ್ಯವಿದೆಯೇ? ಅದನ್ನು ನಮ್ಮ ಜನರಿಗೆ ಹೇಳಿಕೊಡಲು ಸಾಧ್ಯವೇ? – ಈ ಚಿಂತನೆಯಲ್ಲಿ ಈ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಒಂದೊಂದೇ ದೇಶಗಳು ತಮ್ಮ ಕಾರ್ಯ ಪ್ರಾರಂಭಿಸುತ್ತಿವೆ. ಇದರೊಂದಿಗೆ ಕೌಶಲ ತರಬೇತಿ ನೀಡಿ, ಉದ್ಯೋಗ ಒದಗಿಸುವ ಏಜೆನ್ಸಿಗಳನ್ನೂ ಒಂದೊಂದಾಗಿ ಜೋಡಿಸಿಕೊಳ್ಳಲಾಗುತ್ತಿದೆ.
ಇಂದು ಖತಾರ್, ಜಪಾನ್, ಮುಂತಾದ ದೇಶಗಳ ಇಂಟರ್ನ್ಯಾ?ನಲ್ ಸಂಸ್ಥೆಗಳು ನಮ್ಮಲ್ಲಿ ಉದ್ಯೋಗಿಗಳಿಗಾಗಿ ಬೇಡಿಕೆ ಇಡುತ್ತಿವೆ. ಇತ್ತೀಚೆಗೆ ಜಪಾನ್ 3 ಲಕ್ಷ ಉದ್ಯೋಗಿಗಳನ್ನು ಕಳುಹಿಸಿಕೊಡಿ ಎಂದು ಕೇಳಿದೆ. ನಾವು ಈಗಾಗಲೇ ಒಂದು ತಂಡವನ್ನು ಕಳುಹಿಸಿಕೊಟ್ಟಿದ್ದೇವೆ. ಸ್ವೀಡನ್ 70 ಸಾವಿರ ಜನರನ್ನು ಕಳುಹಿಸಿಕೊಡಿ, ನಾವೇ ತರಬೇತಿ ನೀಡಿ ಕೆಲಸ ಕೊಡುತ್ತೇವೆ ಎನ್ನುತ್ತಿದೆ. ಅಲ್ಲಿ ಆರೋಗ್ಯ, ಸರ್ವಿಸ್ ಇಲಾಖೆಗಳಿಗೆ ಜನರ ಅಗತ್ಯವಿದೆ. ಕೆನಡಾ, ಯುಎಸ್, ಮಧ್ಯಪೂರ್ವ, ಯೂರೋಪ್, ಸ್ಕಾಂಡಿನೇವಿಯಾ ದೇಶಗಳು, ರಷ್ಯಾ, ಜಪಾನ್, ನ್ಯೂಜಿಲೆಂಡ್, ಕೊರಿಯಾ, ಆಸ್ಟ್ರೇಲಿಯಾ ಮುಂತಾದ ದೇಶಗಳಿಗೆ ಇಂದು ಕೌಶಲಯುಕ್ತ ಮಾನವಶಕ್ತಿಯ ಅಗತ್ಯವಿದೆ. ಅವರೆಲ್ಲರೂ ಇಂದು ನಮ್ಮಲ್ಲಿಗೆ ಉದ್ಯೋಗಕುಶಲಿಗಳನ್ನು ಕಳುಹಿಸಿ ಎಂದು ಬೇಡಿಕೆ ಇಡುತ್ತಿವೆ.
ಇವನ್ನೆಲ್ಲ ಗಮನಿಸಿದಾಗ ಇನ್ನು ಕೆಲವೇ ವರ್ಷಗಳಲ್ಲಿ ಭಾರತ ಜಗತ್ತಿನ ’ಕೌಶಲದ ರಾಜಧಾನಿ’ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇಡೀ ವಿಶ್ವಕ್ಕೆ ಬೇಕಾದ ಕೌಶಲಯುಕ್ತ ಮಾನವಶಕ್ತಿಯನ್ನು ನೀಡುವ ಸಾಮರ್ಥ್ಯ ನಮಗಿದೆ. ನಮ್ಮ ಜನಸಂಖ್ಯೆಯನ್ನು ಈವರೆಗೆ ಹೊರೆ, ಸ್ಫೋಟ ಎನ್ನಲಾಗುತ್ತಿತ್ತು. ಆದರೆ ನಿಜವಾಗಿಯೂ ಅದೊಂದು ಸಂಪತ್ತು ಎಂಬುದನ್ನು ಮೋದಿಯವರ ನೇತೃತ್ವದ ಸರ್ಕಾರ ಸಾಧಿಸಿ ತೋರಿಸುತ್ತಿದೆ. ಹೊರೆಯನ್ನು ಸಂಪತ್ತಾಗಿ ಹೇಗೆ ಬದಲಾಯಿಸಬೇಕು ಎನ್ನುವುದೇ ಮೋದಿ ನೇತೃತ್ವದ ಆಡಳಿತ ವಿಶೇಷತೆ.
ಪ್ರಶ್ನೆ: ನಿಮ್ಮ ಪ್ರಕಾರ ಕೌಶಲಾಭಿವೃದ್ಧಿ ಇಲಾಖೆಯಿಂದ ಪ್ರತಿ ವರ್ಷ 1 ರಿಂದ 1.20 ಕೋಟಿ ಜನರಿಗೆ ತರಬೇತಿ ನೀಡಲಾಗುತ್ತಿದೆ. ಜೊತೆಗೆ ಪ್ಲೇಸ್ಮೆಂಟ್ ಯೋಜನೆಯ ಮೂಲಕ ಉದ್ಯೋಗ ಕಲ್ಪಿಸುವ ವ್ಯವಸ್ಥೆಯೂ ನಡೆಯುತ್ತಿದೆ ಎನ್ನುತ್ತೀರಿ. ಹೀಗಿದ್ದೂ ಈ ಸರ್ಕಾರ ಉದ್ಯೋಗ ಕಲ್ಪಿಸುವಲ್ಲಿ ವಿಫಲವಾಗಿದೆ ಎಂಬ ಆಪಾದನೆಯಿದೆ. ಸರ್ಕಾರಕ್ಕೂ ಈವರೆಗೆ ಎಷ್ಟು ಜನರಿಗೆ ಉದ್ಯೋಗ ನೀಡಲಾಗಿದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಯಾಕೆ?
ಉತ್ತರ: ಭಾರತ 130 ಕೋಟಿ ಜನಸಂಖ್ಯೆ ಇರುವ ದೊಡ್ಡ ದೇಶ. ಈವರೆಗೆ ಡೇಟಾಬೇಸ್ ವೋಟರ್ ಐಡಿಯನ್ನು ಕೊಡುವುದಾಗಲೀ ಸಂಪೂರ್ಣ ದೇಶದಲ್ಲಿ ಆಧಾರ್ ಕಾರ್ಡ್ ಕಡ್ಡಾಯ ಮಾಡುವುದಾಗಲೀ (ಪ. ಬಂಗಾಳ, ಅಸ್ಸಾಂ, ಈಶಾನ್ಯ ಭಾರತ, ಜಮ್ಮು-ಕಾಶ್ಮೀರದಲ್ಲಿ ಇಂದಿಗೂ ಕಡ್ಡಾಯವಾಗಿಲ್ಲ) ಸಾಧ್ಯವಾಗಿಲ್ಲ. ಒಂದು ವ್ಯವಸ್ಥೆಯನ್ನು ಲೆಕ್ಕಕ್ಕೆ ಸಿಗುವಂತೆ ಮಾಡುವುದು, ಜವಾಬ್ದಾರಿಗೆ ಅಳವಡಿಸುವುದು ಭಾರತದಂತಹ ದೇಶದಲ್ಲಿ ಅಷ್ಟು ಸುಲಭವಲ್ಲ. ಇಂದು ನಾವು ತರಬೇತಿ ನೀಡಿ, ಪ್ಲೇಸ್ಮೆಂಟ್ ಏಜೆನ್ಸಿಯ ಮೂಲಕ ಒಂದೆಡೆ ಕೆಲಸ ನೀಡುತ್ತೇವೆ. ಇನ್ನೊಂದು ಕಡೆ ಸಂಬಳ ಸ್ವಲ್ಪ ಜಾಸ್ತಿ ಸಿಗುತ್ತದೆ ಎಂದಾಗ ಅವನು ಒಂದೇ ತಿಂಗಳಲ್ಲಿ ಇಲ್ಲಿ ಕೆಲಸ ಬಿಟ್ಟು ಬೇರೆ ಕಡೆ ಹೋಗಬಹುದು. ಅದನ್ನು ಪತ್ತೆಮಾಡಿಕೊಂಡು ಹೋಗಲು ಸಾಧ್ಯವೇ?
ಭಾರತದಲ್ಲಿ ಈವರೆಗೂ ಮಾಹಿತಿಗಳನ್ನು ಸಮಗ್ರವಾಗಿ ಸಂಗ್ರಹಿಸುವ ವ್ಯವಸ್ಥೆ ಅಥವಾ ವೇದಿಕೆ ಇಲ್ಲ. ನಾವು ಅಂದಾಜು ಮಾಡಬಹುದ?! ನಮ್ಮ ಮುದ್ರಾ ಯೋಜನೆಯಲ್ಲಿ ಈಗಾಗಲೇ 10 ರಿಂದ 12 ಕೋಟಿ ಜನ ಹಣ ತೆಗೆದುಕೊಂಡಿದ್ದಾರೆ. ಇವರೆಲ್ಲ ಸಣ್ಣಸಣ್ಣ ಉದ್ಯಮಗಳನ್ನು (ನ್ಯಾನೋ ಎಂಟರ್ಪ್ರೈಸಸ್) ನಡೆಸುತ್ತಿದ್ದಾರೆ. ಇವರಲ್ಲಿ 8 ಕೋಟಿ ಜನರು ಕನಿಷ್ಟ 2 ಜನರಿಗೆ ಉದ್ಯೋಗವನ್ನು ನೀಡಿದ್ದಾರೆ ಎಂದರೂ ಸುಮಾರು 16 ಕೋಟಿ ಜನರಿಗೆ ಉದ್ಯೋಗ ಸಿಕ್ಕಿದ ಹಾಗಾಗಲಿಲ್ಲವೆ? ಆದರೆ ನಮ್ಮ ವ್ಯವಸ್ಥೆಯಲ್ಲಿ ಇದರ ಮಾಹಿತಿಗಳ ಸಂಗ್ರಹ ಸಾಧ್ಯವಿಲ್ಲ. ಸಾಲ ಕೊಟ್ಟಿರುವ ಸಂಖ್ಯೆ ನಮಗೆ ತಿಳಿದಿದೆ, ಆದರೆ ಅವನು ಎಷ್ಟು? ಜನರಿಗೆ ಕೆಲಸ ಕೊಟ್ಟಿದ್ದಾನೆ, ಬದುಕನ್ನು ನೀಡಿದ್ದಾನೆ ಎಂದು ಹೇಳುವುದು ಅಷ್ಟು ಸುಲಭವಲ್ಲ.
ಇನ್ನು ಕೆಲವು ಪೂರಕ ಉದ್ದಿಮೆಗಳು. ಒಂದು ಮೂಲಉದ್ದಿಮೆಯ ಜೊತೆಗೆ ನೂರಾರು ಪೂರಕ ಉದ್ಯಮಗಳು ಬರುತ್ತವೆ. ಒಂದು ಸ್ಟೀಲ್ ಅಥವಾ ಸಾಫ್ಟ್ವೇರ್ ಉದ್ಯಮ ಬಂದರೆ ಅದಕ್ಕೆ ಪೂರಕವಾದ ಬೇರೆ ಬೇರೆ ಪ್ಲಗಿನ್ಸ್ಗಳನ್ನು ತಯಾರು ಮಾಡುವವರೂ ಬಂದಿರುತ್ತಾರೆ. ಆದರೆ ಇವೆಲ್ಲ ನಮಗೆ ಲೆಕ್ಕಕ್ಕೆ ಸಿಗುವುದೇ ಇಲ್ಲ. ಈ ಮಾಹಿತಿ ಸಂಗ್ರಹ, ಮಾಹಿತಿ ವಿಶ್ಲೇಷಣೆ – ಇದು ದೊಡ್ಡ ಸರ್ಕಸ್. ಇಂದಿಗೂ ನಮ್ಮ ವ್ಯವಸ್ಥೆ ಅ? ಸಮಗ್ರವಾಗಿಲ್ಲ.
ದೇಶದ ಇಂದಿನ ಕೊರತೆಗಳು 70 ವರ್ಷಗಳ ಆಡಳಿತದ ಫಲ. ಅವರು ಇದಕ್ಕೆ ಉತ್ತರ ಕೊಡಬೇಕು. ಕಳೆದ ನಾಲ್ಕೂವರೆ ವರ್ಷದಲ್ಲಿ ಇಷ್ಟು ಅಭಿವೃದ್ಧಿ ಸಾಧ್ಯವಾಗುವುದಾದರೆ ಅವರಿಗೇಕೆ ಸಾಧ್ಯವಾಗಲಿಲ್ಲ? ಜನರ ಬಗೆಗೆ ನಂಬಿಕೆ, ಭರವಸೆಯಾಗಲೀ, ಆಡಳಿತಕ್ಕೊಂದು ಸ್ಪಷ್ಟ ಗುರಿಯಾಗಲೀ, ರಾಜಕೀಯ ಇಚ್ಚಾಶಕ್ತಿಯಾಗಲೀ ಇರಲಿಲ್ಲವೆನ್ನಬೇಕಾಗುತ್ತದೆ. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಇದೆ, ದೂರದೃಷ್ಟಿಯಿದೆ. ಅಭಿವೃದ್ಧಿಯ ನೀಲನಕಾಶೆ ಇದೆ. ಇನ್ನು ಮುಂದಿನ ಇಪ್ಪತ್ತೈದು ಐವತ್ತು ವರ್ಷಗಳಲ್ಲಿ ನಾವೆಲ್ಲಿರಬೇಕು, ಅದಕ್ಕಾಗಿ ಏನು ಮಾಡಬೇಕು ಎಂಬ ಸ್ಪಷ್ಟ ದಾರಿ, ಗುರಿ ನಮ್ಮಲ್ಲಿದೆ.
ಪ್ರಶ್ನೆ: ನಿಮ್ಮ ಪ್ರಕಾರ ಕೌಶಲಾಭಿವೃದ್ಧಿ ಎಂದರೆ ಏನು?
ಉತ್ತರ: ನಮ್ಮ ದೊಡ್ಡ ಸಮಸ್ಯೆ ಎಂದರೆ 70 ವರ್ಷಗಳ ನಮ್ಮ ಶಿಕ್ಷಣನೀತಿಯಿಂದಾಗಿ ಜನರು ಕೌಶಲತರಬೇತಿಯನ್ನು ಅದೊಂದು ಗೌರವದ ವಿದ್ಯಾರ್ಹತೆ ಎಂದು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇಂದಿಗೂ ಇಲ್ಲ. ಡಿಗ್ರಿ, ಸ್ನಾತಕೋತ್ತರ, ಪಿಎಚ್.ಡಿ., ಮೊದಲಾದ ಪೂರ್ವಸ್ಥಾಪಿತ ವಿದ್ಯಾರ್ಹತೆಯನ್ನೇ ಬಯಸುತ್ತಿದ್ದಾರೆ. ಬದುಕಲು ಕೌಶಲವೂ ಬೇಕು ಎಂಬ ಅರಿವು ಇಂದಿಗೂ ಬಂದಿಲ್ಲ. ತಮ್ಮ ಮಗ ಇಂಜಿನಿಯರಾಗಬೇಕು, ಎಂಬಿಬಿಎಸ್, ಎಂ.ಡಿ., ಪಿಎಚ್.ಡಿ. ಮಾಡಬೇಕು ಎಂಬುದೇ ಜನರ ತಲೆಯಲ್ಲಿದೆ. ಅವನಿಗೆ ಬದುಕುವ ಸಾಮರ್ಥ್ಯ ಜಾಸ್ತಿ ಆಗಬೇಕು, ಅಂತಹದ್ದನ್ನು ಆತ ಕಲಿಯಬೇಕು, ಆತನ ಬದುಕು ಚೆನ್ನಾಗಿರಬೇಕು ಎಂದು ಯೋಚಿಸುತ್ತಿಲ್ಲ. ಈ ಅಂತರ ಸಮಾಜಕ್ಕಿನ್ನೂ ಅರ್ಥವಾಗಿಲ್ಲ.
ನಮ್ಮ ಮಕ್ಕಳನ್ನು ಹಾರ್ಡ್ ಡಿಸ್ಕ್ ಮಾಡಬೇಕು ಎಂದು ಹೊರಟಿದ್ದೇವೆ. ಸಾಮಾನ್ಯ ಜ್ಞಾನವನ್ನು ತುಂಬಿ ಅವನಿಗೊಂದು ಡಿಗ್ರಿ ಕೊಡಿಸಿದರೆ ನಾವು ಧನ್ಯ ಎಂದು ಭಾವಿಸುತ್ತಿದ್ದೇವೆ. ಬೇಡವಾದ ಏನೇನನ್ನೋ ಕೃತಕವಾಗಿ ತಲೆಗೆ ತುಂಬಿ ವಯಸ್ಸಿಗೆ ಬರುವ ಹೊತ್ತಿಗೆ ನಾವು ನಮ್ಮ ಮಗನನ್ನೇ ಕೊಂದಿರುತ್ತೇವೆ. ಇದು ಶಿಕ್ಷಣ ಅಲ್ಲ. ಅವನ ಸರ್ಜನಶೀಲತೆ, ಸಾಮರ್ಥ್ಯಕ್ಕೆ ತಕ್ಕಂತೆ ಅವನು ತನ್ನ ಬದುಕನ್ನು ಕಂಡುಕೊಳ್ಳಬೇಕು. ಅದಕ್ಕೆ ಬೇಕಾದ ವೇದಿಕೆಯನ್ನು ಕಲ್ಪಿಸಿಕೊಡಬೇಕು. ಅಂತರಂಗದ ಮಾರ್ದನಿ ಬದುಕಾಗಬೇಕು. ಅಂತರಂಗದ ಪ್ರತಿಫಲನ ಬದುಕಿನಲ್ಲಿ ಕಾಣಬೇಕು. ಅದನ್ನೇ ಕೌಶಲಾಭಿವೃದ್ಧಿ ಎನ್ನುತ್ತಾರೆ.
ಪ್ರಶ್ನೆ : ಕೌಶಲ ಶಿಕ್ಷಣ ಅಥವಾ ಕ್ರಿಯೇಟಿವ್ ಶಿಕ್ಷಣ ಅಗತ್ಯ ಎಂಬ ಅರಿವನ್ನು ನಾಗರಿಕರಲ್ಲಿ ಮೂಡಿಸಲು ಇಲಾಖೆ ಏನೇನು ಮಾಡುತ್ತಿದೆ?
ಉತ್ತರ: ದೇಶದ ಗ್ರಾಮೀಣ ಯುವಜನರಿಗೂ ಕೌಶಲದ ಮಹತ್ತ್ವದ ಜಾಗೃತಿ ಮತ್ತು ಕೌಶಲಾಭಿವೃದ್ದಿ ಇಲಾಖೆ ಮಾಡುತ್ತಿರುವ ಚಟುವಟಿಕೆಗಳನ್ನು ತಿಳಿಸುವ ಉದ್ದೇಶದಿಂದ ಇಲಾಖೆಯು Skill on Wheel ಮೂಲಕ Skillathon, Techathon, Teachathon, 3-I SUMIT ಎನ್ನುವ ಹೊಸ ಪರಿಕಲ್ಪನೆಯ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಸ್ಕಿಲಥಾನ್ ಎಂದರೆ ನಾವು ವಿಶ್ವವಿದ್ಯಾಲಯ, ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು, ಡಿಪ್ಲೋಮಾ, ಡಿಗ್ರಿ ಕಾಲೇಜುಗಳು ಮುಂತಾದ ಬೇರೆ ಬೇರೆ ಶೈಕ್ಷಣಿಕ ಸಂಸ್ಥೆಗಳಿಗೆ ಭೇಟಿ ನೀಡಿ ಸ್ಕಿಲ್ ಯಾಕೆ ಬೇಕು? ಶ್ರಮದಿಂದ ಕೌಶಲದಿಂದ ಹೇಗೆ ನಮ್ಮ ಬದುಕನ್ನು ಕಟ್ಟಿಕೊಳ್ಳಬಹುದು; ಶ್ರಮವಿಲ್ಲದ ಬದುಕು ಹೇಗೆ ಅನಾಥವಾಗುತ್ತದೆ ಎಂಬುದನ್ನು ಅಲ್ಲಿ ಬಿಂಬಿಸಲಾಗುತ್ತದೆ. ಇದೊಂದು ರೀತಿಯ ಮಾಸ್ ಕೌನ್ಸೆಲಿಂಗ್ ಕಾರ್ಯಕ್ರಮ. ಇದರಲ್ಲಿ ಶಾಲೆ ಬಿಟ್ಟವರು, ಪದವೀಧರರು, ಸ್ನಾತಕೋತ್ತರ ಪದವೀಧರರು ಎಲ್ಲರೂ ಸೇರುತ್ತಾರೆ. ಇದು ತುಂಬಾ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಕರ್ನಾಟಕದಲ್ಲಿ ಸುಮಾರು 6-7 ಕಡೆಗಳಲ್ಲಿ ನಡೆದಿದೆ. ಆಗಲೇ ಅದು ದೊಡ್ಡ ಸುದ್ದಿಯಾಗಿದೆ. ಇದು ಛತ್ತೀಸ್ಗಢ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶಗಳಲ್ಲಿಯೂ ಪ್ರಾರಂಭವಾಗುತ್ತಿದೆ. ಅಧಿಕಾರಿಗಳಿಗೂ ರಾಜ್ಯಸರ್ಕಾರಗಳಿಗೂ ಇದನ್ನು ಜನರ ಹತ್ತಿರ ತೆಗೆದುಕೊಂಡು ಹೋಗಬೇಕು ಎಂದೆನಿಸಿದೆ.
ಇನ್ನು 3-I SUMIT. 3-I ಎಂದರೆ Industry, Investor ಮತ್ತು Institution. ಇದು ಸ್ಥಳೀಯ ಯುವಕರಿಗೆ ಉದ್ಯಮ ಮತ್ತು ಸಂಸ್ಥೆಯ ನಡುವೆ ಹೂಡಿಕೆದಾರರ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ. ನಮ್ಮ ಜೆಎಸ್ಎಸ್, ಕೆಎಲ್ಇ, ಆರ್ವಿ ಇಂಜಿನಿಯರಿಂಗ್ ಕಾಲೇಜ್ನಂತಹ ಸಂಸ್ಥೆಗಳು ಡಿಗ್ರಿ ಕೊಡುತ್ತಿವೆ. ಆದರೆ ಅವರು ಎಷ್ಟರಮಟ್ಟಿಗೆ ಉದ್ಯೋಗಕ್ಕೆ ಸಿದ್ಧರಾಗಿದ್ದಾರೆ, ಎಷ್ಟರಮಟ್ಟಿಗೆ ಉದ್ಯೋಗ ಸಿಗುತ್ತಿದೆ? ಇದರ ಬದಲಾಗಿ ಈ ಸಂಸ್ಥೆಗಳು ಕೌಶಲ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಿದಲ್ಲಿ ಅದಕ್ಕೆ ಬೇಕಾದ ಡಿಗ್ರಿಯನ್ನು ನೀಡುವಂತೆ ಮಾಡಲು ಇದು ನೆರವಾಗುತ್ತದೆ.
ಟೆಕೆಥಾನ್ ಮೂಲಕ ನಾಲ್ಕನೇ ಕೈಗಾರಿಕಾ ಕ್ರಾಂತಿಯ ಹೊಸ್ತಿಲಿನಲ್ಲಿರುವ ಈ ಸಂದರ್ಭದಲ್ಲಿ ನೆಟ್ವರ್ಕ್ ಕನೆಕ್ಟಿವಿಟಿ (ಅಂತರ್ಜಾಲ ಸಂಪರ್ಕದ) ಮೂಲಕ ಕೈಗಾರಿಕಾ ಉತ್ಪಾದನೆಯನ್ನು ಸ್ವತಂತ್ರವಾಗಿಸುವ ಅಂದರೆ ಉತ್ಪಾದನೆಗೆ ಸ್ವತಂತ್ರ ಮಾರುಕಟ್ಟೆ ಕಲ್ಪಿಸುವ ದೃಷ್ಟಿಯಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ.
ಶಿಕ್ಷಕರನ್ನು ಗುರಿಯಾಗಿಸಿಕೊಂಡು ನಡೆಯುವ ಟೀಚಥಾನ್ ಮೂಲಕ ತಂತ್ರಜ್ಞಾನ ಮತ್ತು ಜ್ಞಾನವನ್ನು ಬೆಸೆಯುವ ಮೂಲಕ ಬೋಧನ ಕ್ಷೇತ್ರಕ್ಕೆ ಹೊಸತನವನ್ನು ತರುವುದು ಉದ್ದೇಶವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತಂತ್ರಜ್ಞಾನವು ಬಹುಬೇಗ ದೊರೆಯುತ್ತದೆ ಮತ್ತು ಸರಿಯಾದ ವೃತ್ತಿಜೀವನ ರೂಪಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸುತ್ತಾರೆ.
ಪಶ್ನೆ : ಸಾಮಾನ್ಯವಾಗಿ ಹೆಚ್ಚಿನ ವಿದ್ಯಾಭ್ಯಾಸವನ್ನು ಪೂರೈಸಿದವರು ತಮ್ಮ ಮೂಲ ಉದ್ದೇಶದಿಂದ ಬೇರ್ಪಡುತ್ತಾರೆ. ಅಂದರೆ ಒಬ್ಬ ಕೃಷಿಯಲ್ಲಿ ಉತ್ತಮ ಶಿಕ್ಷಣ ಪಡೆದವನು ಕೃಷಿಕಾರ್ಯಕ್ಕೆ ಮರಳುವುದಿಲ್ಲ. ಬದಲಿಗೆ ಕೃಷಿಗೆ ಸಂಬಂಧಿಸಿದ ಇಲಾಖೆಗಳಲ್ಲಿ ಉದ್ಯೋಗವನ್ನು ಬಯಸಿ ಹೋಗುತ್ತಾನೆ. ಆ ರೀತಿಯಲ್ಲಿ ’ವೈಟ್ಕಾಲರ್ ಉದ್ಯೋಗ’ವನ್ನು ಗಿಟ್ಟಿಸಿಕೊಳ್ಳಬೇಕು ಎಂಬ ಮನೋಭಾವ ಬೆಳೆದೀತೆಂಬ ಆತಂಕ ಇಲ್ಲಿ ಇಲ್ಲವೆ?
ಉತ್ತರ: ಸಮಯವೇ ಇದಕ್ಕೆ ಉತ್ತರ ಕೊಡುತ್ತದೆ. ಇಂದಿನ ನಮ್ಮ ಸಂಶೋಧನಾ ಪ್ರಬಂಧಗಳು ಅಲಂಕಾರಿಕ ಪ್ರಬಂಧಗಳಷ್ಟೆ. ಇಲ್ಲಿ ವ್ಯಾವಹಾರಿಕತೆ ಇಲ್ಲವೇ ಇಲ್ಲ. ನಮ್ಮ ವ್ಯವಸ್ಥೆಗೂ ಅಮೆರಿಕದ ವ್ಯವಸ್ಥೆಗೂ ವ್ಯತ್ಯಾಸ ಇರುವುದು ಇಲ್ಲಿ. ಅಮೆರಿಕದಲ್ಲಿ ಪಿಹೆಚ್.ಡಿ. ಮಾಡಿಕೊಂಡು ಹೊರಗೆ ಬರುವಾಗ, ಆತ ಅದರಲ್ಲಿ ಮಾಸ್ಟರ್ ಆಗಿರುತ್ತಾನೆ. ನಮ್ಮಲ್ಲಿ ಕೈಯಲ್ಲೊಂದು ಪೇಪರ್ ಇರುತ್ತದೆ. ಅದೂ ಯಾರೋ ಬರೆದುಕೊಟ್ಟ Cut and Paste ಮಾಡಿದ ಪೇಪರ್ ಆಗಿರಲೂಬಹುದು. ವಾಸ್ತವವಾಗಿ ಪಿಹೆಚ್.ಡಿ ಎಂದರೆ ಸಂಶೋಧನೆಯನ್ನು ಹೇಗೆ ಮಾಡಬೇಕು ಎಂಬುದನ್ನೂ ಕಲಿಸಬೇಕು; ಹೊಸ ಸಂಶೋಧನೆಯನ್ನಷ್ಟೇ ಅಲ್ಲ. ಇಂದಿನ ಥಿಯೊರೆಟಿಕಲ್ ಅಪ್ರೋಚ್ನ್ನು ಪ್ರಾಕ್ಟಿಕಲ್ ಅಪ್ರೋಚ್ಗೆ ತೆಗೆದುಕೊಂಡು ಹೋಗಬೇಕು ಎಂಬುದು ನಮಗೆ ದೃಢವಾಗಿದೆ. ಅದಕ್ಕೆ ಅಗತ್ಯವಾದ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಪ್ರಸ್ತುತ ಇರುವ ಎಐಸಿಟಿ, ಯುಜಿಸಿ ಇವೆಲ್ಲವನ್ನೂ ತೆಗೆದು ಹೈಯರ್ ಎಜುಕೇಷನ್ ಕೌನ್ಸಿಲ್ ಎಂದು ಮಾಡಿ ಅದನ್ನು ಉದ್ದಿಮೆಗಳಿಗೆ ನಿರ್ವಹಿಸಲು ಕೊಡುವ ಯೋಚನೆ ಇದೆ.
ಇನ್ನು ಮುಂದೆ ಶೈಕ್ಷಣಿಕ ಸಂಸ್ಥೆಗಳನ್ನು ಹಣವಿರುವವರು ನಡೆಸುವುದಿಲ್ಲ. ಹಣವಿದೆ ಎಂದು ವಿಶ್ವವಿದ್ಯಾಲಯ ಮಾಡಿ ಅಲ್ಲಿ ತಮಗೆ ಬೇಕಾದ ಸಾಂಬಾರುಗಳನ್ನೆಲ್ಲ ಹಾಕಲು ಸಾಧ್ಯವಿಲ್ಲ. ನಿರ್ದಿಷ್ಟ ಉದ್ಯಮಗಳೇ ನಡೆಸಬೇಕು. ಎಲೆಕ್ಟ್ರಾನಿಕ್ಸ್ಗೆ ಸಂಬಂಧಿಸಿದ ಉದ್ಯಮಿಗಳು ಎಲೆಕ್ಟ್ರಾನಿಕ್ಸ್ ಕುರಿತ ಶಿಕ್ಷಣಸಂಸ್ಥೆಗಳನ್ನು ನಡೆಸಬೇಕು, ಅಲ್ಲಿ ಎಲೆಕ್ಟ್ರಾನಿಕ್ಸ್ ಶಿಕ್ಷಣ ಕೊಡಬೇಕೇ ಹೊರತು ಅಲ್ಲಿ ಐಟಿ ಕುರಿತು ಶಿಕ್ಷಣ ನೀಡಲಾಗದು. ಮೆಕೆಟ್ರಾನಿಕ್ಸ್ ಉದ್ಯಮಿಗಳು ಮೆಕೆಟ್ರಾನಿಕ್ಸ್ಗೆ ಸಂಬಂಧಿಸಿದ ಶಿಕ್ಷಣಸಂಸ್ಥೆ ಮಾಡಬೇಕು. ಹೀಗೆ ನಿರ್ದಿಷ್ಟ ಮಾನದಂಡಗಳನ್ನಿಟ್ಟುಕೊಂಡು ನಾವು ಹೊರಟಿದ್ದೇವೆ.
ಪ್ರಶ್ನೆ: ’ಆರ್ಟಿಫಿಸಿಯಲ್ ಇಂಟೆಲಿಜೆನ್ಸ್’ನ ಕುರಿತಾಗಿ ಬಹಳ ದೊಡ್ಡಪ್ರಮಾಣದಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಅದರ ಪರಿಣಾಮವಾಗಿ ಮುಂದೆ ನಿರುದ್ಯೋಗ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತದೆ ಎಂಬ ವಾದ ಎಷ್ಟು ಸರಿ?
ಉತ್ತರ: ಇದು ಅತಿ ಬುದ್ಧಿವಂತರ ಮತ್ತು ದಡ್ಡರ ಭ್ರಮೆ. ವ್ಯಾವಹಾರಿಕಜ್ಞಾನ ಇರುವವರಿಗೆ ಈ ಭ್ರಮೆ ಇಲ್ಲ. ಕಂಪ್ಯೂಟರ್ ಬಂದಾಗಲೂ ಕಂಪ್ಯೂಟರ್ ಎಲ್ಲರ ಕೆಲಸ ತಿಂದುಬಿಡುತ್ತದೆ, ಪಾಶ್ಚಾತ್ಯರು ನಮ್ಮನ್ನು ಆಳುತ್ತಾರೆ ಎಂಬ ಭ್ರಮೆ ಹುಟ್ಟಿಸಲಾಗಿತ್ತು. ಆದರೆ ಅದರಿಂದ ಎಷ್ಟು ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ! ದೇಶದ ಆರ್ಥಿಕಾಭಿವೃದ್ಧಿಯಲ್ಲಿ, ಹೆಚ್ಚು ಜನರಿಗೆ ಕೆಲಸವನ್ನು, ಅವಕಾಶಗಳನ್ನು ನೀಡಿದ್ದರಲ್ಲಿ ಕಂಪ್ಯೂಟರ್ ಕೊಡುಗೆ ಇಲ್ಲವೇ? ಇಂದು ಇದನ್ನು ಬಿಟ್ಟುಬಿಡಲು ಸಾಧ್ಯವೇ? ಅದರಂತೆ ಇದೂ ಕೂಡ ಒಂದು ಮಿಥ್ಯೆಯ?. ’ಆರ್ಟಿಫಿಸಿಯಲ್ ಇಂಟೆಲಿಜೆನ್ಸ್’ ಜನರ ಕೆಲಸಗಳನ್ನು ಕಸಿದುಕೊಳ್ಳುತ್ತದೆ ಎನ್ನುವುದಕ್ಕಿಂತ ಹೊಸ ತಲೆಮಾರಿನ ಕೆಲಸಗಳನ್ನು ಸೃಷ್ಟಿ ಮಾಡುತ್ತದೆ ಎನ್ನುವುದೇ ಸೂಕ್ತ. ಅಷ್ಟೂ ಅಲ್ಲದೆ ಸಮಾಜಕ್ಕೆ ಹೊಸ ಕಲ್ಪನೆಗಳನ್ನೂ ನೀಡುತ್ತದೆ.
ನಮ್ಮಲ್ಲಿ ಮೊದಲು ಕಾರ್ಮಿಕ ಆಧಾರಿತ ಅರ್ಥವ್ಯವಸ್ಥೆ ಇತ್ತು. ಇಂದು ಜ್ಞಾನಾಧಾರಿತ ಅರ್ಥವ್ಯವಸ್ಥೆಗೆ ಬಂದಿದ್ದೇವೆ. ಹಿಂದೆ ಕೃಷಿ ಆಧಾರಿತವಾಗಿದ್ದುದು ಈಗ ಉದ್ಯಮ, Service ಆಧಾರಿತ ಅರ್ಥವ್ಯವಸ್ಥೆಗೆ ತಲಪಿದೆ. ಮುಂದೆ ಜ್ಞಾನ ಆಧಾರಿತ ಅರ್ಥವ್ಯವಸ್ಥೆಯಿಂದ ಕೌಶಲಾಧಾರಿತ ಅರ್ಥವ್ಯವಸ್ಥೆಗೆ ಹೋಗಬೇಕಾಗಿದೆ. ನನ್ನಲ್ಲಿ ಮತ್ತು ನಿಮ್ಮಲ್ಲಿ ಇಬ್ಬರಲ್ಲೂ ಟೆಕ್ನಿಕ್, ಟೂಲ್ಸ್ ಇದೆ. ಆದರೆ ಯಾರು ಹೆಚ್ಚು ಕ್ರಿಯೇಟಿವ್ ಆಗಿ ಪ್ರಸ್ತುತಪಡಿಸಬಲ್ಲರೋ ಅವರು ಗೆಲ್ಲುತ್ತಾರೆ. ಇದು ಜಗತ್ತಿನ ನಿಯಮ.
ಪ್ರಶ್ನೆ: ಮುಂದಿನ ಲೋಕಸಭಾ ಚುನಾವಣೆಗೂ ಮೊದಲು ನೀವು ಮಾಡಿ ಸಾಧಿಸಲೇಬೇಕು ಎಂದು ನಿರ್ಧರಿಸಿರುವ ಯೋಜನೆ ಯಾವುದಾದರೂ ಇದೆಯೇ? ಇದ್ದರೆ ಅದು ಈಗ ಯಾವ ಹಂತದಲ್ಲಿದೆ?
ಉತ್ತರ: ನರೇಂದ್ರ ಮೋದಿಯವರ ಸರ್ಕಾರ ಈಗಾಗಲೇ 2025 ರ ಹೊತ್ತಿಗೆ ನಮ್ಮ ತಾಂತ್ರಿಕತೆ, ಕೌಶಲ ಹೇಗಿರಬೇಕು ಎಂಬ ’ವಿಷನ್ 2025’ನ್ನು ಸಿದ್ಧಪಡಿಸಿದೆ. ಇದರ ಆಧಾರದ ಮೇಲೆ ದಾಖಲೀಕರಣ ನಡೆಯುತ್ತಿದೆ. ಇದರ ಜೊತೆಗೆ ಮೂಲಭೂತ ಸಾಂಪ್ರದಾಯಿಕ ಸಾಂಸ್ಕೃತಿಕ ವಿಷಯಗಳಿಗೆ ಒಂದು ವ್ಯವಸ್ಥಿತ ರೂಪ ಕೊಡುವುದು. ಉದಾಹರಣೆಗೆ ನಮ್ಮ ಎಷ್ಟು ದೇವಸ್ಥಾನಗಳಿಗೆ ಹೋದಾಗ ಅಲ್ಲಿಯ ವ್ಯವಸ್ಥೆಗಳು ನಮಗೆ ಬೇಸರ ತರುತ್ತವೆ. ಅದಕ್ಕೊಂದು ಶಿಸ್ತನ್ನು ರೂಪಿಸಿ, ಅದನ್ನು ಆಕರ್ಷಣೀಯ ಪ್ರವಾಸೋದ್ಯಮ ಕೇಂದ್ರವಾಗಿ ಮಾರ್ಪಡಿಸಬಹುದು. ಇದಕ್ಕೆ ಪೂರಕವಾದ ಟೆಂಪಲ್ ಮ್ಯಾನೇಜ್ಮೆಂಟ್ ಕೋರ್ಸ್ಗಳನ್ನು ರೂಪಿಸಬೇಕು ಎಂಬ ಕುರಿತು ಈಗಾಗಲೇ ಚಿಂತನೆ ನಡೆಸಿದ್ದೇನೆ.
ಜೆನೆಟಿಕ್ಸ್ನ ಮಹತ್ತ್ವವನ್ನು ಇಸ್ರೇಲ್ ವೈಜ್ಞಾನಿಕವಾಗಿ ಸಾಬೀತುಪಡಿಸಿದೆ. ಉತ್ತರೆಯ ಗರ್ಭದಲ್ಲಿದ್ದಾಗಲೇ ಕೃಷ್ಣನ ಕಥೆ ಕೇಳಿ ಚಕ್ರವ್ಯೂಹ ಭೇದಿಸುವುದನ್ನು ಕಲಿತ ಅಭಿಮನ್ಯುವಿನ ಕಥೆ ನಮ್ಮಲ್ಲಿದೆ. ಅದು ಸುಳ್ಳಲ್ಲ. ಇಂದಿಗೂ ಜಗತ್ತಿನಲ್ಲಿ ಗಣಿತದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರಲ್ಲಿ ಹೆಚ್ಚಿನವರು ಶೇ. 95 ರಷ್ಟು ಮಂದಿ ಯಹೂದಿಗಳೇ ಆಗಿದ್ದಾರೆ. ಯಾಕೆಂದರೆ ಅವರಲ್ಲಿ ಮಗು ಗರ್ಭದಲ್ಲಿರುವಾಗ ತಾಯಿಗೆ ಗಣಿತದ ಜೊತೆ ಆಟವಾಡುವುದನ್ನು, ಮನೆಯಲ್ಲಿಯೇ ಮಾಡಿ ನೋಡುವ ಸಣ್ಣ ಪುಟ್ಟ ವೈಜ್ಞಾನಿಕ ಸಂಶೋಧನೆಗಳನ್ನು ಹೇಳಿಕೊಡಲಾಗುತ್ತದೆ, ಕಲಿಸಲಾಗುತ್ತದೆ. ಇದರಿಂದ ಆನಾಂಗದಲ್ಲಿ ವೈಜ್ಞಾನಿಕತೆ ರಕ್ತಗತವಾಗಿರುತ್ತದೆ. ಇದು ಗರ್ಭದಲ್ಲಿಯೇ ಸಂಸ್ಕಾರ ಕೊಡುವಂತಹ ಕ್ರಮ. ಈ ಗರ್ಭಸಂಸ್ಕಾರ ನಮ್ಮಲ್ಲಿ ಪ್ರಾಚೀನ ಕಾಲದಿಂದ ರೂಢಿಯಲ್ಲಿದ್ದ ಪರಂಪರೆ. ಅದೊಂದು ವಿಜ್ಞಾನ. ಈ ರೀತಿ ವಿಜ್ಞಾನಗಳನ್ನು ನೀಡುವುದಕ್ಕಾಗಿ Early Childhood Initiativeಗಳನ್ನು ಪ್ರಾರಂಭಿಸಲಾಗಿದೆ. ಈಗಾಗಲೇ ಸುಮಾರು 25 ಲಕ್ಷ ಮಂದಿ ಈ ತರಬೇತಿ ಪಡೆಯಲು ಮುಂದೆ ಬಂದಿದ್ದಾರೆ. ತಾಯಂದಿರಿಗೆ ಗರ್ಭಧಾರಣೆಯ ಹಾಗೂ ಬಾಣಂತನದ ಹಂತದಲ್ಲಿ ಸಂಸ್ಕಾರ ನೀಡುವ ಕುರಿತು highly innovative scientific ಯೋಜನೆ ಸಿದ್ಧವಾಗುತ್ತಿದೆ. ಈ ಹಿಂದೆ ಕೇರಳ ಹೈಕೋರ್ಟ್ ಕೂಡಾ ಗರ್ಭಿಣಿಯರನ್ನು ನೋಡಿಕೊಳ್ಳುವ ಹಾಗೂ ಸಂಸ್ಕಾರಗಳು ಹೇಗಿರಬೇಕು ಎಂಬ ಕುರಿತು ತೀರ್ಪು ನೀಡಿತ್ತು. ಇವೆಲ್ಲವನ್ನು ಗಮನದಲ್ಲಿಟ್ಟು ಹೊಸತನದಲ್ಲಿ ಯೋಜನೆ ಸಿದ್ಧವಾಗುತ್ತಿದೆ.
ಪ್ರಶ್ನೆ: ನಿಮ್ಮ ಕಾರ್ಯಯೋಜನೆಗಳ ಅನುಷ್ಠಾನದ ವಿಷಯಕ್ಕೆ ಬಂದಾಗ ಪ್ರಧಾನಿಗಳ ಕಾರ್ಯಾಲಯ ಮತ್ತು ಅಧಿಕಾರಿವರ್ಗ ಸಕಾರಾತ್ಮಕವಾಗಿ ಸ್ಪಂದಿಸುತ್ತವೆ ಎಂದು ನಿಮಗೆ ಅನಿಸುತ್ತದೆಯೆ?
ಉತ್ತರ: ಪ್ರಧಾನಿ ಕಾರ್ಯಾಲಯದಿಂದ ನಮಗೆ ಯಾವುದೇ ನಿಬಂಧನೆಗಳಿಲ್ಲ. ಹೊಸ ಯೋಚನೆ- ಯೋಜನೆಗಳಿಗೆ ಪಿಎಂಒ ತಕ್ಷಣ ಹಾಗೂ ತುಂಬಾ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತದೆ. ಮಾತ್ರವಲ್ಲ, ನಮ್ಮ ಅಗತ್ಯತೆಗಳನ್ನು ಪಿಎಂಒನಿಂದಲೇ ಮಾನಿಟರ್ ಮಾಡುತ್ತಾರೆ. ಆಡಳಿತದಲ್ಲಿ ತುಂಬಾ ಹಿಡಿತ ಮತ್ತು ಅಚ್ಚುಕಟ್ಟುತನ, ಶಿಸ್ತು ಇದೆ. ಹೊಸ ಯೋಚನೆಗಳಿಗೆ ಸ್ಪಂದನೆ ಮಾತ್ರವಲ್ಲ ಸ್ವೀಕಾರದ ಜೊತೆಗೆ ಮೆಚ್ಚುಗೆಯೂ ಇದೆ. ಹೀಗಾಗಿಯೇ ಸ್ಟಾರ್ಟ್-ಅಪ್ನಂತಹ ಯೋಜನೆಗಳು ಜಾರಿಗೆ ಬರುತ್ತಿರುವುದು.
ಪ್ರಶ್ನೆ: ಪ್ರಮುಖವಾಗಿ ಕಾಶ್ಮೀರಕ್ಕಾಗಿ ಮಾಡಿದ ’ಉಡಾನ್’ ಯೋಜನೆ ವಿಫಲವಾಗಿದೆ ಎಂದೆನಿಸುವುದಿಲ್ಲವೇ?
ಉತ್ತರ: ನಿಜ. ಉಡಾನ್ ಯೋಜನೆ ಕಾಶ್ಮೀರದಲ್ಲಿ ಅಷ್ಟೊಂದು ಸಫಲತೆ ಕಂಡಿಲ್ಲ. ಯಾರು ಕಲ್ಲುತೂರಾಟ, ಭಯೋತ್ಪಾದಕತೆಯಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೋ ಅವರನ್ನು ಶರಣಾಗಿಸಿ ಒಂದೆರಡು ವರ್ಷ ತರಬೇತಿ ನೀಡಿ ಕೆಲಸ ದೊರಕಿಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಬೇಕು ಎನ್ನುವುದು ಈ ಯೋಜನೆಯ ಉದ್ದೇಶ. ಆದರೆ ನಕ್ಸಲ್- ಪೀಡಿತ ಪ್ರದೇಶದಲ್ಲಿ ಈ ಯೋಜನೆ ಯಶಸ್ವಿಯಾಗಿದೆ. ಜಮ್ಮು-ಕಾಶ್ಮೀರದಲ್ಲಿ ನಮಗೆ ಯಶಸ್ಸು ಸಿಕ್ಕಿಲ್ಲ. ಯಾಕೆಂದರೆ ಜಮ್ಮು-ಕಾಶ್ಮೀರದಲ್ಲಿ ನಿರುದ್ಯೋಗದಿಂದ ಅಥವಾ ಹೊಟ್ಟೆಗೆ ಹಿಟ್ಟಿಲ್ಲ ಎಂಬ ಕಾರಣಕ್ಕೆ ಕಲ್ಲು ತೂರಾಟ ಮಾಡುತ್ತಿರುವುದಲ್ಲ. ಅವರು ಕಲ್ಲುತೂರಾಟ ನಡೆಸುತ್ತಿರುವುದು ಜಿಹಾದ್ಗಾಗಿ. ಇದನ್ನು ಈ ರೀತಿಯ ಯೋಜನೆಗಳ ಮೂಲಕ ನಿಯಂತ್ರಿಸಲು ಸಾಧ್ಯವಿಲ್ಲ.
ಪ್ರಶ್ನೆ: ಕೊನೆಯದಾಗಿ ನಿಮ್ಮ ಮಾತು ಅಥವಾ ಸಂದೇಶ ಏನು?
ಉತ್ತರ: ದೇಶದ ಜನರು ನರೇಂದ್ರ ಮೋದಿ ಅವರ ಸರ್ಕಾರದ ಸಾಧನೆಗಳನ್ನು ಅಧ್ಯಯನ ಮಾಡುತ್ತಾರೆ ಮತ್ತು ಗ್ರಹಿಸುತ್ತಾರೆಂಬ ವಿಶ್ವಾಸವಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಅವರ ಕಲ್ಪನೆಗೆ ತಕ್ಕಂತೆ ದೇಶಕಟ್ಟುವ ಕೆಲಸದಲ್ಲಿ ನಾವು ಬದ್ಧರಿದ್ದೇವೆ. ಇಷ್ಟು ಮಾತ್ರ ಅವರಿಗೆ ಭರವಸೆ ನೀಡಬಲ್ಲೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.