“ಭಾರತದಲ್ಲಿ, ತಾಯಿಯೇ ಕುಟುಂಬದ ಕೇಂದ್ರ ಮತ್ತು ತಾಯಿಯೇ ಭಾರತೀಯರ ಅತ್ಯುನ್ನತ ಆದರ್ಶ. ದೇವರು ಈ ಬ್ರಹ್ಮಾಂಡದ ತಾಯಿಯಾಗಿದ್ದರೆ ತಾಯಿಯಲ್ಲೇ ನಾವು ದೇವರನ್ನು ಕಾಣುತ್ತೇವೆ. ದೇವನೊಬ್ಬನೇ ಎನ್ನುವ ಸಿದ್ಧಾಂತವನ್ನು ಮೊದಲ ಬಾರಿಗೆ ಕಂಡುಕೊಂಡು ನಮ್ಮ ವೇದಗಳಲ್ಲಿ ಅದನ್ನು ಶ್ಲೋಕಗಳ ಮೂಲಕ ವರ್ಣಿಸಿದ ತಪಸ್ವಿಯೂ ಕೂಡಾ ಹೆಣ್ಣೇ. ನಾವು ದೇವರನ್ನು ಪ್ರಕೃತಿ ಮತ್ತು ಪುರುಷ ರೂಪದಲ್ಲಿ ಕಾಣುತ್ತೇವೆ. ಪ್ರಕೃತಿಯೆಂದರೆ ಹೆಣ್ಣು ಮತ್ತು ಪುರುಷ ಎಂದರೆ ಗಂಡು. ಹೀಗೆ ನಮ್ಮನ್ನು ತೊಟ್ಟಿಲಲ್ಲಿಟ್ಟು ತೂಗಿದ ಕೈಗಳೇ ನಮಗೆ ದೇವರು ಎನ್ನುವುದನ್ನು ನಾವು ಭಾರತೀಯರು ಬಲವಾಗಿ ನಂಬುತ್ತೇವೆ ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತದೆ.” ಸ್ವತಃ ಸ್ವಾಮಿ ವಿವೇಕಾನಂದರೇ ಭಾರತೀಯರು ಹೆಣ್ಣನ್ನು ಕಾಣುವ ರೀತಿಯನ್ನು ಹೀಗೆ ವಿವರಿಸಿದ್ದರು.
ಹೆಣ್ಣನ್ನು ದೇವರೆಂದು ಪೂಜಿಸುವ ಹಬ್ಬವಾದ ನವರಾತ್ರಿಯನ್ನು ನಾವು ಆಚರಿಸುತ್ತೇವೆ. ಆದರೆ ದುರದೃಷ್ಟವಶಾತ್ ಇತ್ತೀಚಿಗೆ ತಮ್ಮ ಕೆಲಸದ ಸ್ಥಳಗಳಲ್ಲಿ ಎಂದೋ ನಡೆದ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳಗಳ ಸುದ್ದಿಗಳು #MeToo ಎನ್ನುವ ಹ್ಯಾಷ್ ಟ್ಯಾಗ್ ಜೊತೆಯಲ್ಲಿ ಸಾಲು ಸಾಲಾಗಿ ಪ್ರಕಟಗೊಳ್ಳುತ್ತಿವೆ. ಶವ ಪೆಟ್ಟಿಗೆಯೊಳಗಿದ್ದ ಎಷ್ಟೋ ಅಸ್ಥಿಪಂಜರಗಳು ಇದೀಗ ಸಾಮಾಜಿಕ ಮಾಧ್ಯಮಗಳ ಮುಖಾಂತರ ಎದ್ದು ಬಂದು ಮನರಂಜನೆ,ಫ್ಯಾಷನ್ ಉದ್ಯಮ, ರಾಜಕೀಯ ಇತ್ಯಾದಿ ಕ್ಷೇತ್ರಗಳ ಅನೇಕ ಪ್ರಮುಖ ವ್ಯಕ್ತಿಗಳ ವಿರುದ್ಧ ಎದ್ದು ಕುಳಿತಿವೆ. ಈ ಆಪಾದನೆಗಳ ವಿಶ್ವಾಸಾರ್ಹತೆಯ ಬಗ್ಗೆ ಕೆಲವು ಅನುಮಾನಗಳಿದ್ದು ಇದ್ದಕ್ಕಿದ್ದಂತೆಯೇ ಪ್ರಚಾರಕ್ಕೆ ಬಂದ ಈ ಅಭಿಯಾನದ ಸಂದರ್ಭದ ಔಚಿತ್ಯದ ಪ್ರಶ್ನೆಗಳೂ ಅನುಮಾನವನ್ನು ಹೆಚ್ಚಿಸುತ್ತಿವೆ. ಪಕ್ಷಪಾತದಿಂದ ಕೂಡಿದ,ಏಕ ಮುಖಿ ಆರೋಪಗಳಿಂದ ಕೂಡಿದ ಚರ್ಚೆಗಳು #MeToo ಸಂದರ್ಭದಲ್ಲಿ ಆರೋಪಿಸಲಾಗುತ್ತಿರುವ ಸಮಸ್ಯೆಗಳ ಮೂಲವನ್ನು ಖಂಡಿತವಾಗಿಯೂ ಪರಿಹರಿಸಲಾರವು.
ಅಮೆರಿಕಾದ ಸಾಮಾಜಿಕ ಹೋರಾಟಗಾರ್ತಿ ತರಾನಾ ಬುರ್ಕೆ ಎನ್ನುವವರು 2006ರಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಾರಂಭಿಸಿದ ಈ #MeToo ಲೈಂಗಿಕ ಕಿರುಕುಳ ವಿರೋಧೀ ಅಭಿಯಾನ, ನಟಿ ಎಲಿಸ್ಸಾ ಅವರು ಅಕ್ಟೊಬರ್ 2017 ರಲ್ಲಿ ಪ್ರಖ್ಯಾತ ಹಾಲಿವುಡ್ ನಿರ್ಮಾಪಕ ಹಾರ್ವೆ ವೈನ್ಸ್ಟಿನ್ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಟ್ವೀಟ್ ಮಾಡುವ ಮೂಲಕ ಬಹಿರಂಗಗೊಳಿಸಿದ ನಂತರ ಮತ್ತಷ್ಟು ವೇಗ ಪಡೆದುಕೊಂಡಿತು.
ನಂತರದಲ್ಲಿ ಈ ಅಭಿಯಾನವನ್ನೇ ಅನುಸರಿಸಿ ಯುಎಸ್ ಮತ್ತು ಯುರೋಪ್ ಗಳಲ್ಲಿ #ChurchToo ಎನ್ನುವ ಅಭಿಯಾನ ಕೂಡಾ ಜೋರಾಗಿಯೇ ನಡೆಯಿತು. ಆ ಅಭಿಯಾನದಿಂದಾಗಿ ಚರ್ಚ್ ಗಳ ಒಳಗೆ ನಡೆಯುವ ಅನೇಕ ಲೈಂಗಿಕ ಕಿರುಕುಳಗಳು ಬಯಲಿಗೆ ಬಂದವು. ಕೇರಳದಲ್ಲಿ ಕ್ರೈಸ್ತ ಬಿಷಪ್ ಗಳಿಂದ ಆದ ಲೈಂಗಿಕ ಕಿರುಕುಳ ಹಾಗೂ ಅದನ್ನು ಮುಚ್ಚಿ ಹಾಕುವ ಪ್ರಯತ್ನಗಳು ಚರ್ಚಿತವಾಗತೊಡಗಿದಾಗ ಭಾರತದಲ್ಲೂ #MeToo ಟ್ರೆಂಡ್ ಮೊದಲ ಬಾರಿಗೆ ಕಾಣಿಸಿಕೊಂಡಿತು. ಪ್ರಮುಖವಾಗಿ ರೂಪದರ್ಶಿಯರು,ಚಿತ್ರ ನಟಿಯರು,ಪತ್ರಕರ್ತೆಯರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತಮ್ಮ ಕಥೆಗಳನ್ನು ಸ್ವಾರಸ್ಯಕರವಾಗಿ ಹಂಚಿಕೊಳ್ಳುವ ಮೂಲಕ #MeToo ಅಭಿಯಾನವನ್ನು ಸೇರಿಕೊಂಡರು. ಈ ಆರೋಪಗಳ ಬಗ್ಗೆ ಸೂಕ್ತ ತನಿಖೆಗಳು ನಡೆದು ಅಪರಾಧಿಗಳಿಗೆ ಕಾನೂನು ಪ್ರಕಾರ ಶಿಕ್ಷೆಗೊಳಪಡಿಸಬೇಕು ಎನ್ನುವುದು ಎಲ್ಲರ ಒತ್ತಾಯವೂ ಆಗಿದೆ.
ಆದರೆ ಇದೇ ಸಮಯದಲ್ಲಿ ನಮಗೆ ಈ ವಿದ್ಯಮಾನಗಳ ಬಗ್ಗೆ ಸೂಕ್ಷ್ಮವಾಗಿ ವಿಶ್ಲೇಷಿಸಿ ಅರ್ಥ ಮಾಡಿಕೊಳ್ಳಬೇಕಾದ ಹೊಣೆಗಾರಿಕೆಯೂ ಇದೆ. ಬಹುತೇಕ ಈ ಎಲ್ಲಾ ಲೈಂಗಿಕ ಕಿರುಕುಳದ ಆರೋಪಗಳನ್ನೂ ಗ್ಲ್ಯಾಮರ್ ಅಥವಾ ಅಪಾರ ಹಣವನ್ನೊಳಗೊಂಡ ನಿರ್ದಿಷ್ಟ ಉದ್ಯಮ ಅಥವಾ ಉದ್ಯಾಪತಿಗಳ ವಿರುದ್ಧವೇ ಮಾಡಲಾಗಿದೆ. ಹಾಗಾದರೆ ಮಾಡೆಲಿಂಗ್ ಮತ್ತು ನಟನಾ ವೃತ್ತಿಗಳ ಜೊತೆಯಲ್ಲೇ ಏಕೆ ಈ ರೀತಿಯ ಲೈಂಗಿಕ ಕಿರುಕುಳ ಪ್ರಕರಣಗಳು ಸುತ್ತಿಕೊಂಡಿವೆ ಮತ್ತು ಇದೆಲ್ಲವೂ ತಿಳಿದೂ ಇಂದಿಗೂ ಹೆಚ್ಚಿನವರು ಈ ವಿಷಯದಲ್ಲಿ ಮೌನವಾಗಿದ್ದು ಜಾಣ ಕುರುಡರಂತೆ ಏಕೆ ವರ್ತಿಸುತ್ತಿದ್ದಾರೆ? ಅಂತಹ ಅಮಾನವೀಯ ವರ್ತನೆಗಳಿಂದ ಪೀಡಿತರಾಗಿಯೂ ಮತ್ತೆ ಅದೇ ವೃತ್ತಿಯತ್ತ ಅವರನ್ನು ಸೆಳೆಯುತ್ತಿರುವ ಅಂಶಗಳಾದರೂ ಯಾವುದು? #MeToo ಹೆಸರಿನಲ್ಲಿ ಈಗ ತಮ್ಮ ಧ್ವನಿಯನ್ನು ಮೊಳಗಿಸುತ್ತಿರುವವರು ಚರ್ಚ್ ಗಳ ಒಳಗೆ ಬಿಷಪ್ ಗಳು ನಡೆಸಿದ ಲೈಂಗಿಕ ಕಿರುಕುಳದ ಬಗ್ಗೆ ಬಾಯಿ ತೆರೆಯದೆ ಕುಳಿತಿದ್ದೇಕೆ?
ವಿಚಿತ್ರವೆಂದರೆ ಅನೇಕ ಸಂದರ್ಭಗಳಲ್ಲಿ ಸಾಮಾನ್ಯ ಪುರುಷರಿಂದಲೇ ಕಿರುಕುಳಕ್ಕೊಳಗಾಗುವ ಅಥವಾ ತೊಂದರೆಗಳನ್ನನುಭವಿಸುವ ಅತೀ ಸಾಮಾನ್ಯ ಮಹಿಳೆಯರು ಈ #MeToo ಅಭಿಯಾನದ ಭಾಗವಾಗಿಯೇ ಇಲ್ಲ! ಹಾಗೆಯೇ ಗ್ಲಾಮರ್ ಉದ್ಯಮದ ಕೊನೆಯ ಹಂತದಲ್ಲಿ ಬರುವ ಸಾಮಾನ್ಯ ಬಡ ಮಹಿಳೆಯರೂ ಕೂಡಾ ಈ ಅಭಿಯಾನದ ಭಾಗವಾಗಿಲ್ಲ. ಬಹುತೇಕ ಆಪಾದಿತರು ಅಥವಾ ಲೈಂಗಿಕ ಕಿರುಕುಳಕ್ಕೆ ಬಲಿಯಾಗಿದ್ದೇನೆಂದು ಆರೋಪಿಸುತ್ತಿರುವ ವ್ಯಕ್ತಿಗಳು ಸಮಾಜದಲ್ಲಿ ಸಾಕಷ್ಟು ಹೆಸರು ಮಾಡಿರುವ ಅಥವಾ ಸಾಕಷ್ಟು ಹಣ ಸಂಪಾದಿಸಿರುವವರೇ ಆಗಿದ್ದಾರೆ. ಈ ಅಂಶಗಳೇ ಈ ಅಭಿಯಾನದ ಚರ್ಚೆಗಳು ಜನಸಾಮಾನ್ಯರ ಕಣ್ಣಿನಲ್ಲಿ ಹೆಚ್ಚು ವಿವಾದಾತ್ಮಕವಾಗಿಯೂ ಮತ್ತು ಸಾಕಷ್ಟು ಮಸಾಲೆಭರಿತವಾಗಿಯೂ ಕಾಣಿಸಲು ಕಾರಣವಾಗಿದೆ. ಆದ್ದರಿಂದಲೇ ಈ ಅಭಿಯಾನವು ಮಹಿಳೆಯರನ್ನು ಕೇವಲ ಒಂದು ಸರಕಾಗಿ ಕಾಣುವ ಉದ್ಯಮಗಳಲ್ಲಿ ಕೆಲಸ ಮಾಡುವ ವೃತ್ತಿಪರರಿಗೆ ಮಾತ್ರ ಇದು ಸೀಮಿತವಾದಂತೆನಿಸುತ್ತಿದೆ.
ಎಲ್ಲಿಯವರೆಗೂ ಸಮಾಜದಲ್ಲಿ ಇಂತಹಾ ಬೆಳೆಯುತ್ತಿರುವ ದುರ್ವರ್ತನೆಗಳ ಪ್ರವೃತ್ತಿಗಳ ಬಗ್ಗೆ ಯಾವುದೇ ಲಿಂಗ ಅಥವಾ ಬಡವ ಶ್ರೀಮಂತರೆನ್ನುವ ಭೇದಗಳಿಲ್ಲದೆ ಸಮಾನವಾಗಿ ಧ್ವನಿ ಎತ್ತಲಾಗುವುದಿಲ್ಲವೋ, ಅಲ್ಲಿಯ ವರೆಗೂ ಇದು ಕೇವಲ ಸಮಾಜದ ಒಂದು ಪ್ರತಿಷ್ಠಿತ ವರ್ಗದ ಪ್ರಚಾರ ಅಭಿಯಾನವಾಗಿ ಮಾತ್ರ ಉಳಿಯಲಿದೆ.
ಈ ಗ್ಲಾಮರ್ ಜಗತ್ತಿನಿಂದ ಹೊರಗೆ ಭಾರತದಲ್ಲಿ ನಡೆಯಲ್ಪಡುತ್ತಿರುವ ಲೈಂಗಿಕ ಶೋಷಣೆಗಳ ಹಿಂದೆ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳೂ ಇರುವ ಬಗ್ಗೆ ಕೂಡಾ ಭಾರತೀಯ ಸನ್ನಿವೇಶಗಳನ್ನಾಧರಿಸಿಯೇ ಚರ್ಚಿಸಬೇಕಾದ ಅನಿವಾರ್ಯತೆಯಿದೆ.
ವಿವೇಚನಾರಹಿತ ನಗರೀಕರಣ ಹಾಗೂ ಅತಿಯಾದ ವಲಸೆ ಮತ್ತು ಹಣಕ್ಕಾಗಿ ಅಶ್ಲೀಲ ವಿಚಾರಗಳನ್ನು ಹರಡುವ ಜಾಲಗಳ ಬಗ್ಗೆಯೂ ಚರ್ಚೆಯಾಗಬೇಕಿದೆ. ಸದಾ ಉತ್ತಮ ಮೌಲ್ಯಗಳನ್ನೇ ಬಯಸುತ್ತಿದ್ದ ಭಾರತೀಯರ ಮನೋಭಾವಗಳು ಇದೀಗ ಹಣ ಹಾಗೂ ಅಶ್ಲೀಲತೆ ಹಿಂದೆ ಬಿದ್ದಿರುವ ಹಿಂದಿನ ನಿಜವಾದ ಕಾರಣಗಳ ಬಗ್ಗೆಯೂ ಚರ್ಚೆಯಾಗಬೇಕಿದೆ.
ಆದಾಗಿಯೂ ನಾವು ಸ್ತ್ರೀಯರನ್ನು ದೈವತ್ವದ ಪಟ್ಟಕ್ಕೇರಿಸಿ ಭಜನೆ ಮಾಡುತ್ತಿದ್ದರೂ ವಾಸ್ತವದಲ್ಲಿ ಅವರೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳುತ್ತಿರುವುದಂತೂ ಸುಳ್ಳಲ್ಲ.
ಭಾರತೀಯ ದೃಷ್ಟಿಕೋನದಲ್ಲಿ ನೋಡುವುದಾದರೆ ಮೂಲಭೂತವಾಗಿ ಪುರುಷ-ಮಹಿಳೆ ಸಂಬಂಧವು ಪರಸ್ಪರರನ್ನು ಗೌರವಿಸುವ ಮತ್ತು ಒಬ್ಬರಿಗೊಬ್ಬರು ಪೂರಕವಾಗಿ ಸ್ಪಂದಿಸುವ ಸಂಬಂಧವೇ ಹೊರತೂ, ಅದು ಇಬ್ಬರ ಸ್ಪರ್ಧೆಯಾಗಲೀ ಅಥವಾ ಇಬ್ಬರ ನಡುವಿನ ಹೋರಾಟವಾಗಲೀ ಅಲ್ಲ. ಈ ನವರಾತ್ರಿಯ ಸಂದರ್ಭದಲ್ಲಿ ನಿಜವಾಗಿ ಆ ಶಕ್ತಿದೇವತೆಯ ಮುಂದೆ ನಾವು ಇದುವರೆಗೂ ಕಳೆದುಕೊಂಡ ಅತ್ಯುತ್ತಮ ಸಂಸ್ಕಾರವನ್ನು ಮತ್ತೆ ಪುನರ್ ಸ್ಥಾಪಿಸುವ ಪ್ರಮಾಣ ಮಾಡದಿದ್ದರೆ, ಕೌಟುಂಬಿಕ ಮೌಲ್ಯ ಮತ್ತು ಮೌಲ್ಯಯುತ ಶಿಕ್ಷಣದ ಮೂಲಕ ಸಾಂಪ್ರದಾಯಿಕವಾಗಿಯೇ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ನಿರ್ಣಯ ತೆಗೆದುಕೊಳ್ಳದಿದ್ದರೆ, ಸಮಾಜದ ಒಂದು ಭಾಗವಾಗಿ ‘ನಾವು’ ಈಗ ನಡೆಯುತ್ತಿರುವ #MeToo ಅಭಿಯಾನದೊಂದಿಗೆ ನಮ್ಮನ್ನು ನಾವು ಕಂಡುಕೊಳ್ಳಲು ಸಾಧ್ಯವಿಲ್ಲ.
ಹಾಗಾಗಿಯೇ ನಮ್ಮ ಕೆಲ ಸಹೋದರಿಯರು #MeTooShakti ಎನ್ನುವ ಹೊಸಾ ರಚನಾತ್ಮಕ ಅಭಿಯಾನವೊಂದನ್ನು ಪ್ರಾರಂಭಿಸುವ ಮೂಲಕ ಸರಿಯಾದ ಮಾರ್ಗವನ್ನೇ ಆಯ್ದುಕೊಂಡಿದ್ದಾರೆ. #MeTooShakti ಅಭಿಯಾನದಿಂದಾದರೂ ಮಹಿಳೆ ಮತ್ತು ಪುರುಷರಿಬ್ಬರನ್ನೂ ಸಮಾನವಾಗಿ ಗೌರವಿಸುವ ಹಾಗೂ ಗಂಡು ಹೆಣ್ಣುಗಳಿಬ್ಬರೂ ಪರಸ್ಪರ ಪೂರಕ ಸಂಬಂಧಗಳನ್ನರಿತು ಸರಿಯಾದ ಮಾರ್ಗದಲ್ಲಿ ನಡೆಯುವಂತಾಗಲಿ ಎನ್ನುವ ಆಶಯ ನಮ್ಮದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.