ಮಲಯಾಳಂ ಸಿನೆಮಾ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ಇತ್ತೀಚೆಗೆ ಬರೆದ ಬ್ಲಾಗ್ನಲ್ಲಿ ಪ್ರಧಾನಮಂತ್ರಿ ಮೋದಿಯವರನ್ನು ಭೇಟಿಯಾಗಿ ಮೂರು ವಾರಗಳು ಕಳೆದರೂ ಅವರ ಧನಾತ್ಮಕ ಶಕ್ತಿ (Positive Energy) ನಿರಂತರವಾಗಿ ನನಗೆ ಸ್ಫೂರ್ತಿಯನ್ನು ನೀಡುತ್ತಿದೆ ಎಂದು ಹೇಳಿದ್ದಾರೆ. ಕೃಷ್ಣಜನ್ಮಾಷ್ಟಮಿಯಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿಯಾಗಿತ್ತು. ಇದೀಗ ನಟ ಮೋಹನ್ ಲಾಲ್ ಅವರು ತಮ್ಮ ಬ್ಲಾಗ್ನಲ್ಲಿ ‘MODIfied Waves’ ಎಂಬ ಪೋಸ್ಟ್ನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ನಟ ಮೋಹನ್ ಲಾಲ್ ಅವರು ಮೋದಿಯವರೊಂದಿಗೆ ನಡೆದ ಮಾತುಕತೆಯ ಹಲವು ವಿಚಾರಗಳನ್ನು ಬರೆದಿದ್ದಾರೆ. ಅವರು ಬರೆದ ‘MODIfied Waves’ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮೋದಿಯವರನ್ನು ಭೇಟಿಯಾದ ನಂತರ ನಟ ಮೋಹನ್ ಲಾಲ್ ಅವರ ರಾಜಕೀಯ ಜೀವನ ಪ್ರಾರಭವಾಗುವುದೇ? ಬಿಜೆಪಿಯ ಬೆಂಬಲದೊಂದಿಗೆ ಮಲಯಾಳಂ ನಟ ರಾಜಕೀಯಕ್ಕೆ ಇಳಿಯುತ್ತಾರಾ? ಇಂತಹ ಹಲವು ಪ್ರಶ್ನೆಗಳು/ಉಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದ್ದವು. ಈ ಎಲ್ಲ ಉಹಾಪೋಹಗಳನ್ನು ಬದಿಗಿರಿಸಿ ಮೋಹನ್ ಲಾಲ್ ಅವರು ಇತ್ತೀಚಿನ ಬ್ಲಾಗ್ ಪೋಸ್ಟ್ನಲ್ಲಿ ’ಮೋದಿಯವರನ್ನು ಭೇಟಿಯಾದಾಗ ಕೆಲವು ವೈಯಕ್ತಿಕ ವಿಚಾರ ಹಾಗೂ ಸ್ವಲ್ಪಮಟ್ಟಿಗೆ ರಾಜಕೀಯ ವಿಚಾರಗಳನ್ನೂ ಚರ್ಚಿಸಲಾಯಿತು’ ಎಂದು ಅವರು ಬರೆದಿದ್ದಾರೆ. ನಟ ಮೋಹನ್ ಇತ್ತೀಚೆಗೆ ತಮ್ಮ ತಂದೆ-ತಾಯಿಯವರ ಹೆಸರಿಸಲ್ಲಿ ಪ್ರಾರಂಭಿಸಿರುವ ’ವಿಶ್ವಸಂತಿ ಫೌಂಡೇಶನ್’ನ ಚಟುವಟಿಕೆಗಳ ಬಗ್ಗೆ ಕೂಡ ಮಾತನಾಡಿರುವುದಾಗಿ ಉಲ್ಲೇಖಿಸಿದ್ದಾರೆ.
‘ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ 3 ವಾರಗಳೇ ಕಳೆದವು ಆದರೆ ನಾನಿನ್ನೂ ಅವರಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ಭಾವಿಸಬಲ್ಲೇ. ನನ್ನ ಜೀವಮಾನದಲ್ಲಿಯೇ ಭೇಟಿಯಾಗಿರುವ ವ್ಯಕ್ತಿಗಳಲ್ಲಿ ಪ್ರಧಾನಿ ಮೋದಿ ಅತ್ಯಂತ ಒಳ್ಳೆಯ ಕೇಳುಗರಾಗಿದ್ದಾರೆ. ನಾನು ಹೇಳಿದ ಪ್ರತಿಯೊಂದು ವಿಷಯವನ್ನು ಅವರು ಅತ್ಯಂತ ಸಮಾಧಾನದಿಂದ ಆಲಿಸಿದ್ದರು.’ ಎಂದು ಮೋಹನ್ ಲಾಲ್ ಅವರು ಬ್ಲಾಗ್ನಲ್ಲಿ ಬರೆದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿರುವ ಎಲ್ಲ ಉಹಾಪೋಹಗಳಿಗೆ ಉತ್ತರವೆಂಬಂತೆ, ‘ನಮ್ಮ ಸಭೆಯ ಕುರಿತಾದ ಅತ್ಯಂತ ಆಸಕ್ತಿದಾಯಕ ಸಂಗತಿಯೆಂದರೆ ನಾವು ರಾಜಕೀಯದ ಬಗ್ಗೆ ಮಾತನಾಡಿಯೇ ಇಲ್ಲ. ನಾನು ’ಕರ್ನಾಭರಂ’ ಎಂಬ ಸಂಸ್ಕೃತ ನಾಟಕದಲ್ಲಿ ಅಭಿಸಯಿಸಿರುವುದನ್ನು ಪ್ರಧಾನಮಂತ್ರಿಯವರಿಗೆ ವಿವರಿಸಿದೆ. ಮತ್ತು ಭಾರತದ ಪ್ರಾದೇಶಿಕ ಸೇನಾಪಡೆಯ ಲೆಫ್ಟಿನೆಂಟ್ ಕರ್ನಲ್ ಗೌರವಾನ್ವಿತ ಶ್ರೇಣಿಯನ್ನು ಹೊಂದಿರುವುದಾಗಿ ತಿಳಿಸಿದೆ. ಪ್ರಧಾನಮಂತ್ರಿ ಮೋದಿಯವರು ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು, ಆದರೆ ರಾಜಕೀಯಕ್ಕೆ ಸಂಬಂಧಿಸಿದ ಯಾವ ವಿಚಾರಗಳೂ ಪ್ರಸ್ತಾಪವಾಗಿಲ್ಲ’ ಎಂದು ನಟ ಮೋಹನ್ ಲಾಲ್ ಬ್ಲಾಗ್ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಮುಂದುವರೆದು ಬ್ಲಾಗ್ನಲ್ಲಿ ‘ಇಂದಿನ ಸಾಮಾಜಿಕ ಜೀವನದಲ್ಲಿ ಉಹಾಪೋಹಗಳು ಸಾಮಾನ್ಯವಾಗಿವೆ, ಆದಕಾರಣ ನಾನು ಯಾವುದಕ್ಕೂ ಪ್ರತಿಕ್ರಿಯಿಸಬಾರದೆಂದು ನಿರ್ಧರಿಸಿದ್ದೆ. ನಾನು ಬಹಳ ದಿನಗಳ ಹಿಂದೆಯೇ ಪ್ರಧಾನಮಂತ್ರಿಯವರನ್ನು ಭೇಟಿಯಾಗಲು ವಿನಂತಿಸಿದ ಆಧಾರದ ಮೇಲೆ ಈ ಸಭೆ ಏರ್ಪಟ್ಟಿತ್ತು, ಆದರೆ ಸಭೆಯಲ್ಲಿ ಯಾವುದೇ ರಾಜಕೀಯ ಸಂಬಂಧಿತ ಚರ್ಚೆಗಳಾಗಿಲ್ಲ’ ಎಂದು ಮೋಹನ್ ಲಾಲ್ ಅವರು ಹೇಳಿದ್ದಾರೆ.
ಮೋದಿಯವರಿಗೆ ಕೇರಳಕ್ಕೆ ಸಂಬಂಧಿಸಿದ ಅತೀ ಚಿಕ್ಕ ವಿಷಯಗಳ ಮಾಹಿತಿ ಕೂಡ ಲಭ್ಯವಿರುವುದನ್ನು ಕಂಡು ನಾನು ಅಶ್ಚರ್ಯಚಕಿತನಾದೆ. ಕೇರಳಕ್ಕೆ ಸಂಬಂಧಿಸಿದ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ಮೋದಿಯವರು ಸದಾ ಸಿದ್ಧರಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ಮೋಹನ್ ಲಾಲ್ ಬರೆದಿದ್ದಾರೆ.
ಅವರು ಬ್ಲಾಗ್ನಲ್ಲಿ ಬರೆದಿರುವುದನ್ನು ಸ್ವತಃ ಅವರ ಮಾತುಗಳಲ್ಲೇ ಕೇಳಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.