ಫ್ರೆಂಚ್ ಕ್ರಾಂತಿ (1789-99) ಹಾಗೂ ಅಮೆರಿಕಾದ ಸ್ವಾತಂತ್ರ್ಯ (1776) ಪಶ್ಚಿಮದ ಜಗತ್ತಿಗೆ ಹೊಸ ಕ್ರಿಯಾಶೀಲತೆ (Dynamism) ನೀಡುತ್ತದೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಕಲ್ಪನೆ ಜನಮಾನಸಕ್ಕೆ ಹೊಸದೊಂದು ಕನಸನ್ನು ನೀಡುತ್ತದೆ. ಇದರ ಜೊತೆಗೆ ರಾಷ್ಟ್ರ-ರಾಜ್ಯಗಳ (Nation-States) ಉಗಮವಾಗುತ್ತದೆ. ಹಬೆಯಂತ್ರದ (Steam Engine) ಸಂಶೋಧನೆಯ ಜೊತೆಗೆ ಪಶ್ಚಿಮದ ಕೈಗಾರಿಕಾ – ಆರ್ಥಿಕ ವಿಕಾಸಕ್ಕೆ ಅಪಾರ ವೇಗ ಸಿಗುತ್ತದೆ. ಉತ್ಪಾದನೆ, ಸಾಗಾಣಿಕೆ, ಸಂಪರ್ಕದ ತ್ರಿವಿಧ ಹೆದ್ದಾರಿಯ ಪಶ್ಚಿಮದ ನಾಗಾಲೋಟ ‘ತಾನು ಎಲ್ಲದಕ್ಕೂ ಅಧಿಪತಿ’, ‘ಎಲ್ಲವನ್ನೂ ನಿಯಂತ್ರಿಸಬಲ್ಲೆ’, ‘ಎಲ್ಲವನ್ನೂ ವಿವರಿಸಬಲ್ಲೆ’ ಎಂಬ ಸ್ಥಿತಿಗೆ ತಲುಪುತ್ತದೆ.
ಪಶ್ಚಿಮದ ಆರ್ಥಿಕ ಪ್ರಗತಿ ವ್ಯಕ್ತಿ ಶೋಷಣೆಯ ಮಾರ್ಗ ಹಿಡಿದಾಗ ಅದೇ ಪಶ್ಚಿಮದಲ್ಲಿ ಕಾರ್ಲ್ ಮಾರ್ಕ್ಸ್ 1848ರಲ್ಲಿ ಕೈಗಾರೀಕರಣದ ಶೋಷಣೆ ಹಾಗೂ ಬಂಡವಾಳಶಾಹಿ ವಾದಕ್ಕೆ ಪ್ರತಿವಾದವಾಗಿ ಸಾಮ್ಯವಾದವನ್ನು (Communism) ಮಂಡಿಸುತ್ತಾನೆ, ಜೊತೆಗೆ 1859ರಲ್ಲಿ ಚಾರ್ಲ್ಸ್ ಡಾರ್ವಿನ್ ವಿಕಾಸವಾದ (Theory of Evolution) ವನ್ನು ಮಂಡಿಸುತ್ತಾನೆ. ಜಗತ್ತು ಬಂಡವಾಳಶಾಹಿ, ಸಮಾಜವಾದ, ಸಾಮ್ಯವಾದ, ಪ್ರಜಾಪ್ರಭುತ್ವ ಇತ್ಯಾದಿ ಹಲವು ವಾದ-ವ್ಯವಸ್ಥೆಗಳ ಸರಣಿಯನ್ನು ತನ್ನದಾಗಿಸಿಕೊಳ್ಳುತ್ತದೆ. ಪಶ್ಚಿಮದ ಬೌದ್ಧಿಕ ಜಗತ್ತು ‘ಮನುಷ್ಯ ಹಾಗೂ ವಿಶ್ವ’ದ ಕುರಿತು ತನ್ನದೇ ಕಡೆಯ ಮಾತು (last word) ಎಂಬ ನಂಬಿಕೆಗೆ ಬರುತ್ತದೆ. ಮನುಷ್ಯ, ಸಮಾಜ ಜೀವನದ ಸಪಲತೆಯನ್ನು GDP – GVP – Per Capita income – Growth rate ಗಳಲ್ಲಿ ಮಾತ್ರ ಅಳೆಯುವ ಪದ್ಧತಿ ಆರಂಭವಾಗುತ್ತದೆ.
ಯುರೋಪಿಯನ್ ಸಾಮ್ರಾಜ್ಯಶಾಹಿಯ ವಿಸ್ತಾರದ ಕಾರಣಕ್ಕೆ ಈ ಎಲ್ಲಾ ಬೆಳವಣಿಗೆಗಳು ಪೂರ್ವದ ದಡಗಳನ್ನೂ ಅಪ್ಪಳಿಸುತ್ತದೆ. ಭಾರತಕ್ಕೂ ಕಾಲಿಡುತ್ತವೆ. ಪರಾಭವಗೊಂಡು ಪರಕೀಯ ಆಳ್ವಿಕೆಗೊಳಗಾಗಿದ್ದರೂ ನಿಸ್ತೇಜಗೊಳ್ಳದ ಭಾರತದ ಮನಸ್ಸು ಸ್ವತಂತ್ರ ಚಿಂತನೆಗಳ ತನ್ನ ಸಾಮರ್ಥ್ಯದೊಡನೆ ಇವೆಲ್ಲವನ್ನು ವಿಮರ್ಶಿಸುತ್ತದೆ. ಸಂಘರ್ಷ, ಸ್ಪರ್ಧೆಗಳ ಆಧಾರದ ಮೇಲಿನ ಪಶ್ಚಿಮದ ವಾದಗಳನ್ನು ಸಮನ್ವಯ – ಸಹಿಷ್ಣುತೆ – ಸಹಬಾಳ್ವೆಗಳ ತನ್ನ ನಂಬಿಕೆಗಳೊಡನೆ ತುಲನೆ ಮಾಡುತ್ತದೆ. ಸ್ವರಾಜ್ಯದ ಪ್ರಬಲ ಆಕಾಂಕ್ಷೆಯೊಡನೆ ತನ್ನತನದ ಸತ್ವದ ಗಂಭೀರ ಹುಡುಕಾಟದಲ್ಲಿ ತೊಡಗಿಸಿಕೊಳ್ಳುತ್ತದೆ. ಆದರೆ ಬ್ರಿಟೀಷರ ದಬ್ಬಾಳಿಕೆ ಸ್ವರಾಜ್ಯದ ಆಕಾಂಕ್ಷೆಗೆ ಅನಿಲವೆರೆದಂತಾದಾಗ ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಎಂಬ ತಿಲಕರ ಕರೆ ಸರ್ವಮಾನ್ಯವಾಗುತ್ತದೆ. ‘ಸ್ವರಾಜ್ಯ’ದ ಲಕ್ಷ್ಯಪ್ರಾಪ್ತಿಯ ಸಂಘರ್ಷದೊಡನೆ ನಡೆಯಬೇಕಾಗಿದ್ದ ಸ್ವತಂತ್ರದ ಚಿಂತನೆಯ ಕಾರ್ಯ ಹಿನ್ನೆಲೆಗೆ ಸರಿಯುತ್ತದೆ.
ಜನವರಿ 23-25, 1965ರಲ್ಲಿ ನಡೆದ ವಿಜಯವಾಡದ ಭಾರತೀಯ ಜನಸಂಘದ ಅಖಿಲಭಾರತೀಯ ಪ್ರತಿನಿಧಿ ಸಭಾದಲ್ಲಿ ಅಂಗೀಕರಿಸಲ್ಪಟ್ಟ ಈ ವಿಚಾರದ ಕುರಿತು 22-25 ಏಪ್ರಿಲ್ 1965ರಲ್ಲಿ ಮುಂಬಯಿಯಲ್ಲಿ ಪಂ. ದೀನದಯಾಳರು ವಿಚಾರ ಮಂಡಿಸುತ್ತಾರೆ.
ವ್ಯಕ್ತಿ-ವ್ಯಕ್ತಿ, ವ್ಯಕ್ತಿ-ಸಮಾಜ, ಸಮಾಜ-ಪ್ರಕೃತಿಗಳ ಮಧ್ಯೆ ಕ್ಷಣಿಕವಾಗಿರುವ ಕೆಲವು ಸಂಘರ್ಷಗಳನ್ನೇ ಶಾಶ್ವತವಾಗಿಸಿದ ಪಶ್ಚಿಮದ ಪ್ರತಿಕ್ರಿಯಾತ್ಮಕ (reactive) ‘ism’ ಗಳು ಇಂದು ಶಸ್ತ್ರಗಳ ಮೇಲಾಟ, ಆರ್ಥಿಕ ಅಂತರ (Economic disparity), ವರ್ಗ ಸಂಘರ್ಷ (Class Struggle), ವ್ಯಕ್ತಿಯ ಸ್ವಂತ ಜೀವನದ ದಮನ, ಕೌಟುಂಬಿಕ ವ್ಯವಸ್ಥೆಯ ಪಲ್ಲಟ (disruption), ಉಪಬೋಗವಾದವನ್ನು ನಮ್ಮ ಬದುಕಿನ ಭಾಗವನ್ನಾಗಿಸಿದೆ. ಸಂಘರ್ಷ, ವೈಪರೀತ್ಯ, ಅಪಶ್ರುತಿಗಳ (Conflict, Contradiction, discord) ನಡುವೆ ಪರಸ್ಪರ ಅನುಕೂಲತೆ, ಸಹಕಾರ, ಸಾಮರಸ್ಯದ (Complementing each other, Co-operation, Concord)ಗಳ ಜೀವನದ – ಸಮಾಜದ ಕಡೆಗೆ ಹೆಜ್ಜೆ ಹಾಕುವ ಕುರಿತು ಚಿಂತಿಸಿದ ಪಂ. ದಿನದಯಾಳರ ಶೋಧನದ ಫಲ ‘ಏಕಾತ್ಮ ಮಾನವ ದರ್ಶನ’.
ವ್ಯಕ್ತಿ – ಸಮಷ್ಟಿ, ಸೃಷ್ಟಿ – ಪರಮೇಷ್ಟಿಯನ್ನು ಪರಸ್ಪರ ಪೂರಕ (Complementary) ವ್ಯವಸ್ಥೆಯಲ್ಲಿ ಜೋಡಿಸಿರುವ ಜೀವನಕ್ರಮಕ್ಕೆ ಧರ್ಮ ಎಂದರು ಈ ನೆಲದ ಋಷಿಗಳು – ಹಿರಿಯರು.
ಧರ್ಮ ಎಂದರೆ ಧಾರಣಾತ್ ಧರ್ಮಮಿತ್ಯಾಹುಃ ಧರ್ಮೋ ಧಾರಯತಿ ಪ್ರಜಾನಾಂ… that which sustains all – life forms, society, world… ಈ ನೆಲದಲ್ಲಿ ಧರ್ಮ ಎಂದರೆ ಆರಾಧನಾ ಪದ್ಧತಿಯಲ್ಲ; ಏಕದೇವ ವಾದವಲ್ಲ; ಪುಸ್ತಕ – ನಿಯಮಗಳಿಗೆ ಅಧೀನವಲ್ಲ; ಅಪರಿವರ್ತನೀಯವಲ್ಲ; ಧರ್ಮದ ವ್ಯವಸ್ಥೆಯಲ್ಲಿ ಅಭಿವೃದ್ಧಿಗಿಂತ ವಿಕಾಸಕ್ಕೆ ಆದ್ಯತೆ; ಶುೃತಿಗಿಂತ ಸ್ಮೃತಿಗೆ ಆದ್ಯತೆ; ವ್ಯಕ್ತಕ್ಕಿಂತ ಅವ್ಯಕ್ತಕ್ಕೆ ಪ್ರಾಮುಖ್ಯತೆ; ಜ್ಞಾನದೊಡನೆ ವಿವೇಚನೆಗೂ ಗೌರವ; ನಿಯಮಕ್ಕಿಂತ ಸಮನ್ವಯಕ್ಕೆ ಆದ್ಯತೆ (Complementing, understanding). ಧರ್ಮ ಹಕ್ಕು (right) ಆಧಾರಿತ ಆಡಳಿತ ವ್ಯವಸ್ಥೆಯಲ್ಲ – ಕರ್ತವ್ಯ ನಿಷ್ಠ (duty bound) ವ್ಯಕ್ತಿ -ಸಮಾಜಗಳ ಸಮೂಹ. ಈ ವ್ಯವಸ್ಥೆಯಲ್ಲಿ ವ್ಯಕ್ತಿ, ಸಮಾಜ, ಸೃಷ್ಠಿ, ಪರಮೇಷ್ಠಿ ಪರಸ್ಪರ ಪೂರಕ.
ವ್ಯಕ್ತಿ – ಏಕಾತ್ಮ ಮಾನವ ದರ್ಶನದ ಕೇಂದ್ರ ಬಿಂದು ವ್ಯಕ್ತಿ – ಏಕಾತ್ಮ ಮಾನವ (Integrated Human Being) ಧರ್ಮಾಧಾರಿತವಾದ, ಆರ್ಥಿಕವಾಗಿ ಸುಸ್ಥಿರವಾದ, ವಿಶ್ವಕಲ್ಯಾಣದ ಲಕ್ಷ್ಯವುಳ್ಳ ವ್ಯಕ್ತಿಯೇ ಎಲ್ಲ ರೀತಿಯ ವಿಕಾಸದ ಕೇಂದ್ರ ಬಿಂದು.
ವ್ಯಕ್ತಿ ಧರ್ಮದ ನೆಲೆಯಲ್ಲಿ Man – Normal Man – Superman – Divine Man (ಪುರುಷೋತ್ತಮ) ಆಗುವುದೇ ಲಕ್ಷ್ಯ. ಅದಕ್ಕಾಗಿ ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ವಿಜ್ಞಾನಮಯ ಕೋಶ, ಆನಂದಮಯ ಕೋಶಗಳನ್ನು ಹಂತಹಂತವಾಗಿ ವಿಕಾಸಗೊಳಿಸುತ್ತಾನೆ.
ಸಮಾಜ – ಸುತ್ತಲಿನ ವ್ಯವಸ್ಥೆಯಲ್ಲಿ ಉತ್ತಮ ಬದುಕು ನಡೆಸುವುದು ‘ಪ್ರಕೃತಿ’, ಸುತ್ತಲಿನ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಂಡು ತನ್ನ ಹಿತ ಕಾಪಾಡಿಕೊಳ್ಳುವುದು ‘ವಿಕೃತಿ’, ಸುತ್ತಲಿನ ವ್ಯವಸ್ಥೆಯನ್ನು ಪೋಷಿಸಿ ಇತರರೂ ಹಿತಕರ ಬದುಕು ನಡೆಸುವಂತೆ ಮಾಡುವುದು ‘ಸಂಸ್ಕೃತಿ’. ವ್ಯಕ್ತಿ ಪ್ರಕೃತಿಯಿಂದ ಸಂಸ್ಕೃತಿಯ ಕಡೆಗೆ ಬೆಳೆಯುವಂತೆ, ವಿಕಾಸವಾಗುವಂತೆ ಮಾಡುವ ಧರ್ಮಾಧಿಷ್ಠಿತ ವ್ಯವಸ್ಥೆಯೇ ಸಮಾಜ. ಸಮಾಜದ ವ್ಯಕ್ತ ರೂಪವೇ ವ್ಯಕ್ತಿ. He is the manifestation of the ideals of society.
ಸೃಷ್ಠಿ – ವ್ಯಕ್ತಿ – ಸಮಾಜ ಎರಡೂ ಸಹಾ ಪ್ರಕೃತಿ ಪೋಷಕವಾಗಿ ತಮ್ಮ ವ್ಯವಸ್ಥೆಗಳನ್ನು ಅರಳಿಸಿಕೊಳ್ಳಬೇಕು. ಸೃಷ್ಟಿ – ಪ್ರಕೃತಿಯಲ್ಲಿ ಇನ್ನಿತರ ಜೀವ ಸಮೂಹಗಳೂ ಸಹಾ ಇವೆ. ಅವು ಒಂದು ಸುಂದರ ಜೋಡಣೆಯಲ್ಲಿ ಸಮ್ಮಿಲಿತವಾಗಿವೆ. ಈ ಜೀವ ಜೋಡಣೆ (Life Cycle) ವ್ಯತ್ಯಾಸವಾಗದಂತೆ ಅಭಿವೃದ್ಧಿ – ಸಮಾಜ ಜೀವನ ಮುಂದೆ ಸಾಗಬೇಕು.
Nature has enough for every one’s needs; but not enough for every one’s greeds ಎಂದು ಹಿರಿಯರು ಹೇಳಿದ್ದಾರೆ. ಗಾಂಧೀಜಿ ಗಂಗೆಯ ದಡದಲ್ಲಿ ನದಿಯಿಂದ ಚೊಂಬಿನಲ್ಲಿ ನೀರು ತೆಗೆದುಕೊಂಡು ದಡಕ್ಕೆ ಬಂದು ಮುಖ ತೊಳೆಯುತ್ತಿದ್ದ ಉದಾಹರಣೆ ನಾವು ಕೇಳಿದ್ದೇವೆ.
ಪರಮೇಷ್ಟಿ – ‘ಈಶಾವಾಸ್ಯಮಿದಂ ಸರ್ವಂ…’, ‘ಆತ್ಮವತ್ ಸರ್ವಭೂತೇಷು…..’, ‘ಯತ್ ಪಿಂಡೇ ತತ್ ಬ್ರಹ್ಮಾಂಡೇ..’. ಎಂಬ ಹಿಂದು ಕಲ್ಪನೆಯಂತೆ ಪ್ರತೀ ಅಣುವಿನಲ್ಲಿ ಏಕಾತ್ಮತೆಯ ದರ್ಶನ ಮಾಡಿದ ಸಂಸ್ಕೃತಿ ನಮ್ಮದು. ಸೃಷ್ಠಿ-ಪರಮೇಷ್ಠಿಯೊಡನೆ ವ್ಯಕ್ತಿ, ಸಮಾಜ ಏಕಾತ್ಮತೆ ಸಾಧಿಸುವ ‘ವಿಶ್ವಕಲ್ಯಾಣ’ದ ಜೀವನಮಾರ್ಗ ಭಾರತದ್ದು.
ಚಾರ್ಲ್ಸ್ ಡಾರ್ವಿನ್ನನ Theory of evolution 4 ಪ್ರಮುಖ ಅಂಶಗಳು struggle for existence, survival of the fittest, exploitation of nature, individual rights. ಆದರೆ ಏಕಾತ್ಮತೆಯಲ್ಲಿ, ಪರಸ್ಪರ ಅನುಕೂಲತೆಗಳ ಸಂಸ್ಕೃತಿಯಲ್ಲಿ ಡಾರ್ವಿನ್ನನ Fittest, struggle, exploitationಗೆ ಸ್ಥಾನವಿಲ್ಲ. struggleಗೆ ಬದಲಾಗಿ mutual Co-operation ಇದೆ. Fittestಗೆ ಬದಲಾಗಿ ಸರ್ವಹಿತದ ಭಾವವಿದೆ. Exploitation ಶೋಷಣೆಯ ಬದಲಾಗಿ ‘ದೋಹನ’ವಿದೆ.Individual rights ಬದಲಾಗಿ ‘collective responsibility’ ಇದೆ. ಭಾರತೀಯ ಚಿಂತನೆ ಸಹಸ್ರಾರು ವರ್ಷಗಳ ಕಾಲದ ಜೀವನ ಕ್ರಮದಲ್ಲಿ ವಿಕಸನಗೊಳಿಸಿದ ಜೀವನ ಕ್ರಮ ಇದು. ‘ಅರ್ಥ, ಕಾಮ’ಗಳನ್ನು ‘ಧರ್ಮ-ಮೋಕ್ಷ’ದ ಚೌಕಟ್ಟಿನಲ್ಲಿ ಅರಳಿಸಿಕೊಳ್ಳಲು ಪ್ರೇರೇಪಿಸಿದ ಸಮಾಜ ಇಲ್ಲಿನದು. ‘ನ ತ್ವಹಂ ಕಾಮಯೇ ರಾಜ್ಯಂ…. ಕಾಮಯೇ ದುಃಖ ತಪ್ತಾನಾಂ ಪ್ರಾಣಿನಾಂ ಆರ್ತಿ ನಾಶನಂ’ ಎಂದು ಶಿಬಿ ಚಕ್ರವರ್ತಿ ಬದುಕಿ ತೋರಿಸಿದ ಉದಾತ್ತ ಜೀವನ ಇಲ್ಲಿನದು.
ಅದೇ ರೀತಿ ಇಲ್ಲಿನ ಜೀವನದಲ್ಲಿ ಬೀಜ-ವೃಕ್ಷದ ನಡುವೆ ಸಂಘರ್ಷದ ವಾದವಿಲ್ಲ. Flower is because of petals; the worth of petals is being with the whole & contributing to its beauty. Development = exploitation ಎನ್ನುವಂತಾಗಿರುವ ಇಂದಿನ ದಿನಗಳಲ್ಲಿ ಗಿಡ-ಮರ, ನೀರು, ಭೂಮಿ, ಬೆಟ್ಟ, ಮಣ್ಣಿನಲ್ಲೂ ದೇವರನ್ನು ಗುರುತಿಸಿ ಸಂರಕ್ಷಣೆಯ ಪಾಠಕ್ಕೆ ನಾಂದಿ ಹಾಡಲಾಯಿತು. ದೇವರ ಬನ -ನಾಗವನಗಳು ಪರಿಸರ ರಕ್ಷಣೆಯ ಹೆಜ್ಜೆ ಗುರುತುಗಳಾದವು. As much as possible, as early as possible ಎಂಬ ಮನೋಭಾವ ಪರಿಸರವನ್ನು ವಿನಾಶದ ಅಂಚಿಗೆ ತೆಗೆದುಕೊಂಡು ಹೋಗಿರುವ ದಿನಗಳಲ್ಲಿ ಸಮನ್ವಯದ, ಸಮತೋಲನದ ಬದುಕಿನ ರೀತಿಯನ್ನು ಧರ್ಮದ ಚೌಕಟ್ಟಿನಲ್ಲಿ ಬದುಕಿ ತೋರಿಸಿತು ಇಲ್ಲಿನ ಸಮಾಜ. ಧೃತಿ ಕ್ಷಮಾ ದಮೋಸ್ತೇಯಂ… ದಶಕಂ ಧರ್ಮಲಕ್ಷಣಂ ಎಂಬ ಧರ್ಮದ ಹತ್ತು ಲಕ್ಷಣಗಳಲ್ಲಿ ವ್ಯಕ್ತಿ – ಸಮಾಜದ ನೆಲೆಯಲ್ಲಿ ಅಳವಡಿಸಿಕೊಳ್ಳಬೇಕಾದ ಎಲ್ಲ ಗುಣಗಳನ್ನು ಉಲ್ಲೇಖಿಸಲಾಗಿದೆ.
ಈ ಭಾವನೆಗಳಿಂದ ಪ್ರೇರಿತವಾಗಿ, ‘ವಸುಧೈವ ಕುಟುಂಬಕಂ’ ಎಂಬ ವಿಶುದ್ಧ ಭಾವನೆಯೊಡನೆ, ‘ಕೃಣ್ವಂತೋ ವಿಶ್ವಮಾರ್ಯಾಂ…’ ಎಂಬ ಕರ್ತವ್ಯ ಭಾವದೊಡನೆ ವಿಕಸನಶೀಲವಾದ ಸಮಾಜ ಭಾರತದ್ದು. ಗ್ರಾಮ ಆಧಾರಿತ ವ್ಯವಸ್ಥೆ, ವಿಕೇಂದ್ರೀಕೃತ ಅರ್ಥ ನೀತಿ, ದುಡಿಯುವ ಕೈಗಳಿಗೆ ಕೆಲಸ, ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು, ಸಬ್ ಕಾ ಸಾಥ್ – ಸಬ್ ಕಾ ವಿಕಾಸ್, ಸಂಪತ್ತಿನ ನ್ಯಾಯಯುತ ಹಂಚಿಕೆಯನ್ನು ಸಾಧಿಸುವ ನಿಟ್ಟಿನಲ್ಲಿ ‘ಏಕಾತ್ಮ ಮಾನವ ದರ್ಶನ’ ವಿಚಾರವನ್ನು ಪಂ. ದೀನದಯಾಳರು ಮಂಡಿಸಿದರು.
ಪಶ್ಚಿಮದ ವಿಜ್ಞಾನ ಸಮಯ – ಅವಕಾಶ (time – space)ಗಳ ಗಡಿಯಲ್ಲಿ ನಿಂತಿರುವಾಗ ಮನುಷ್ಯನ ಮನಸ್ಸನ್ನು ಸಾಧನಗಳ ಸೀಮಿತತೆಯಿಂದ (limitations) ಆಧ್ಯಾತ್ಮದ ಅನಂತತೆಯ ಕಡೆಗೆ ಭಾರತೀಯ ಸಂಸ್ಕೃತಿ ಕೊಂಡೊಯ್ದಿದೆ. ಎಲ್ಲವನ್ನೂ ಅಳೆಯಬಹುದು ಎಂಬ ಸಾಮರ್ಥ್ಯಕ್ಕಿಂತ, ಮಿತಿಗಳನ್ನು ದಾಟಿ ಅರಳಬಹುದು ಎಂಬ ವಿಕಸನಶೀಲತೆ ಮನುಷ್ಯನಿಗೆ ಬೇಕಾಗಿದೆ. ಪಶ್ಚಿಮದ ವಿಜ್ಞಾನದ ಅಭಿವೃದ್ಧಿಗೆ ಪೂರ್ವದ ಆಧ್ಯಾತ್ಮದ ಚೌಕಟ್ಟನ್ನು ಹಾಕಿ ಅಭ್ಯುದಯ – ನಿಶ್ರೇಯಸ್ಸು ಎರಡನ್ನೂ ಸಮತೋಲನದಿಂದ ಸಾಧಿಸಬೇಕಾಗಿದೆ. ಅಭ್ಯುದಯ – ನಿಶ್ರೇಯಸ್ಸಿನ ಈ ಜೋಡಿ ಹೆಜ್ಜೆಗಳ ರಾಜಮಾರ್ಗದ ಪ್ರಯಾಣದಿಂದಲೇ ‘ವಿಶ್ವಕಲ್ಯಾಣ’ ಸಾಧ್ಯ.
‘ವಿಶ್ವಶಾಂತಿಗೆ ಬಲಿಷ್ಠ ಭಾರತ ಅತ್ಯವಶ್ಯ. ಭಾರತೀಯ ಸಂಸ್ಕೃತಿಯನ್ನು ಮೂಲ ಕಲ್ಪನೆಯೊಡನೆ ಅಳವಡಿಸಿಕೊಂಡ ಸಮಾಜ ಬಲಿಷ್ಠ ಭಾರತಕ್ಕೆ ಆಧಾರ. ರಾಷ್ಟ್ರದ ‘ಚಿತಿ’ಯ ಚೈತನ್ಯದ ಜಾಗರಣದಿಂದ ಮಾತ್ರ ಆ ಗುರಿ ಸಾಧ್ಯ ಎಂಬ ನಂಬಿಕೆ ಪಂ. ದೀನದಯಾಳರದ್ದು. ಆ ದಿಕ್ಕಿನೆಡೆ ಹೆಜ್ಜೆ ಹಾಕಲು ನೀತಿ-ಕಾರ್ಯಕ್ರಮಗಳನ್ನು ರೂಪಿಸಬೇಕೆಂಬ ಕರೆಯೊಡನೆ, ‘ಅಂತ್ಯೋದಯ ವಿಶ್ವಕಲ್ಯಾಣ – ರಾಷ್ಟ್ರೀಯತೆ’ದ ಗುರಿಯನ್ನು ಅವರು ನೀಡಿದರು. ಹಿಂದೆಂದಿಗಿಂತಲೂ ಪಂ. ದೀನದಯಾಳರ ಚಿಂತನೆಗಳು ಇಂದು ಹೆಚ್ಚು ಪ್ರಸ್ತುತ.
ಕೃಪೆ : ವಿಕ್ರಮ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.