ಮಂಗಳೂರು: ತಾಯಿ ಮಠ ಮಂದಿರಕ್ಕಿಂತ ಮಿಗಿಲು. ತಾಯಂದಿರು ಮಕ್ಕಳ ಹಸಿವು ನೀಗಿಸಿದರೆ ಸಾಲದು. ಸಂಸ್ಕಾರವನ್ನೂ ತುಂಬುವ ಮನಸ್ಸು ಮಾಡಬೇಕು ಎಂದು ಕೇಮಾರು ಶ್ರೀ ಸಾಂದೀಪನಿ ಸಾಧನಾಶ್ರಮ ಶ್ರೀ ಈಶ ವಿಠಲದಾಸ ಸ್ವಾಮೀಜಿ ನುಡಿದರು.
ಅವರು ಕೊಣಾಜೆ ಕೋಟಿಪದವಿನ ಶ್ರೀರಾಮ ಭಜನಾ ಮಂದಿರದಲ್ಲಿ ನಡೆದ ಶ್ರೀರಾಮ ದೇವರ ಪುನರ್ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಭಜನಾ ಮಂದಿರಗಳು ಕೇವಲ ಮಂದಿರವಾಗಿ ಉಳಿಯದೆ ಮಕ್ಕಳಿಗೆ ಲೌಕಿಕ ಶಿಕ್ಷಣ ನೀಡುವ ಕೇಂದ್ರಗಳಾಗಬೇಕು. ಕಷ್ಟದಲ್ಲಿರುವವರಿಗೆ ಸ್ಪಂದಿಸಬೇಕು. ಅದು ಕೇವಲ ಧಾರ್ಮಿಕತೆಗೆ ಸೀಮಿತವಾಗಿರದೆ ಬಡಜನರ ಸೇವೆಯನ್ನೂ ಮಾಡಲಿ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಸಮಾಜ ಒಡೆಯುವ ಕೆಲಸ ಆಗಬಾರದು. ಎಲ್ಲರೂ ಒಗ್ಗಟ್ಟಾಗಿರಬೇಕು. ಅಂತಹ ಪ್ರಯತ್ನ ನಡೆಯಲಿ. ಅದಕ್ಕೆ ಪೂರಕವಾಗಿ ತಾಯಂದಿರ ಮಗ್ಗಲು ಸಂಸ್ಕಾರ ಕೇಂದ್ರವಾಗಬೇಕು. ಗೌರವದಿಂದ ಘರ್ಜಿಸುವವ ಹಿಂದು ಅಂತಹ ಹೇಳುವುದರ ಬದಲು ಸಂಸ್ಕ ತಿ ಅಧ್ಯಯನ ಮಾಡಿ ಹೇಳಲಿ. ಮಠ- ಮಂದಿರಗಳು ಧಾರ್ಮಿಕ ಗ್ರಂಥಾಲಯ ಆಗಬೇಕು. ತಾಯಿಗಿಂತ ದೊಡ್ಡ ಮಂದಿರ ಇಲ್ಲ. ಗ್ರಾಮೀಣ ಪ್ರದೇಶದ ತಾಯಂದಿರಿಂದಾಗಿ ಹಿಂದೂ ಸಂಸ್ಕ ತಿ ಉಳಿದಿದೆ
ಎಂದು ನುಡಿದರು.
ಸಂಸ್ಕಾರವಂತ ಸಮಾಜ ಭಜನಾ ಮಂದಿರದಿಂದ ಸಾಧ್ಯ. ದೇವರನ್ನು ಒಲಿಸುವ ಕಾರ್ಯ ಭಜನೆಯಿಂದ ಸಾಧ್ಯ. ಭಜನೆ ಇದ್ದಲ್ಲಿ ವಿಭಜನೆ ಇಲ್ಲ. ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ವೇದಮೂರ್ತಿ ಕೊಲೆಕಾಡಿ ಮುಲ್ಕಿ ವಾದಿರಾಜ ಉಪಾಧ್ಯಾಯ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನಡೆಯಿತು. ಕಣಂತೂರು ಶ್ರೀ ಕ್ಷೇತ್ರ ತೋಡಕುಕ್ಕಿನಾರ್ ದೈವಸ್ಥಾನದ ಆಡಳಿತ ಮೊಕ್ತೇಸರ ತಿಮ್ಮಪ್ಪ ಕೊಂಡೆ ಯಾನೆ ಮಂಜು ಭಂಡಾರಿ ನಾರ್ಯಗುತ್ತು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ, ಮುಡಿಪು ಮುಡಿಪಿನ್ನಾರ್ ದೈವಸ್ಥಾನದ ಆಡಳಿತ ಮೊಕ್ತೇಸರ ಮುರಳಿ ಮೋಹನ್ ಭಟ್ ಕೆ., ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಸುಂದರ ಕೋಟ್ಯಾನ್, ಗೌರವಾಧ್ಯಕ್ಷ ದೇವಪ್ಪ ಗಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಂದಿರ ನಿರ್ಮಾಣ ಹಂತದಲ್ಲಿ ಶ್ರಮಿಸಿದ ನರಸಿಂಹ ನಾಯಕ್ ಮಿತ್ತನಡ್ಕ ಅವರನ್ನು ಸನ್ಮಾನಿಸಲಾಯಿತು. ಧಾರ್ಮಿಕ ಮುಂದಾಳುಗಳಾದ ರಾಮ್ ಭಟ್, ಗಣೇಶ್ ದೇವಾಡಿಗ, ಉದ್ಯಮಿ ಹಾಗೂ ಸಮಾಜಸೇವಕ ಮಾಧವ ಬಗಂಬಿಲ ಉಪಸ್ಥಿತರಿದ್ದರು.
ಶ್ರೀರಾಮ ಮಂದಿರದ ಲೆಕ್ಕ ಪರಿಶೋಧಕ ನಾರಾಯಣ ಬೆಳ್ಚಾಡ ಬೀಜಗುರಿ ಸ್ವಾಗತಿಸಿದರು. ದಕ್ಷ ಯುವಬಳಗದ ಗೌರವ ಅಧ್ಯಕ್ಷ ಜಗದೀಶ್ ಭಂಡಾರಿ ಸನ್ಮಾನಪತ್ರ ವಾಚಿಸಿದರು. ಮಂದಿರದ ಕಾರ್ಯದರ್ಶಿ ನವೀನ್ ಎನ್. ಕೊಣಾಜೆ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಗಟ್ಟಿ ಕಂಬ್ಳಪದವು ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.