ಮಗು ಜನಿಸಿದ ಕ್ಷಣದಿಂದಲೇ ತಾಯಿಯ ಮೇಲೆ ಪ್ರೀತಿ ಮೊದಲಾಗುತ್ತದೆ. ಕ್ರಮೇಣ ತನ್ನ ತಂದೆ, ಕುಟುಂಬದ ಸದಸ್ಯರ ಬಗೆಗೆ ಬಾಂಧವ್ಯ ಬೆಳೆಯುತ್ತದೆ. ತನ್ನ ಬಂಧುಬಳಾದವರ ಬಗ್ಗೆ ಅಭಿಮಾನವನ್ನು ಹೊಂದುತ್ತದೆ. ಮಗು ಶಾಲೆಗೆ ಸೇರಿದ ಮೇಲೆ ತನ್ನ ಶಾಲೆ, ಶಿಕ್ಷಕರು, ಗೆಳೆಯರೊಂದಿಗೆ ಸ್ನೇಹಭಾವವನ್ನು ಬೆಳೆಸಿಕೊಳ್ಳುತ್ತದೆ. ಹಂತಹಂತವಾಗಿ ತಾನು ವಾಸಿಸುವ ಊರು, ರಾಜ್ಯಗಳ ಬಗೆಗೂ ಮಮಕಾರ ಸಹಜವಾಗಿ ಮೂಡುತ್ತದೆ. ಅಂತೆಯೇ ತನ್ನ ದೇಶದ ಬಗೆಗೂ ಅಭಿಮಾನವನ್ನು ಹೊಂದಬೇಕು. ಮಗುವಿಗೆ ತಾಯಿಯನ್ನು ಪ್ರೀತಿಸುವಂತೆ ಯಾರೂ ಹೇಳಿಕೊಡುವುದಿಲ್ಲ. ತನ್ನಷ್ಟಕ್ಕೆ ತಾನೇ ಅವರ್ಣನೀಯವಾಗಿ ಪ್ರೀತಿ, ಗೌರವಗಳು ಮೂಡುತ್ತವೆ. ಕುಟುಂಬದ ಸದಸ್ಯರ ಬಗೆಗೆ ಬಾಂಧವ್ಯ ಬೆಸೆಯಲು ತಾಯಿ ನೆರವಾಗುತ್ತಾಳೆ. ಸುತ್ತಲ ಪರಿಸರ, ವಿಶೇಷವಾಗಿ ಶಾಲೆ ಸಮಾಜ ಹಾಗೂ ದೇಶದ ಬಗ್ಗೆ ಮಗುವಿಗೆ ಪ್ರೀತಿ, ಗೌರವ, ಹೆಮ್ಮೆಯ ಭಾವನೆಗಳು ಮೂಡವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸಮಾಜದಲ್ಲಿ ತಾಯಿಗೆ ಅತ್ಯಂತ ಉನ್ನತ ಸ್ಥಾನ. ಮಾತೃ ದೇವೋ ಭವ ಎಂದು ಗೌರವಿಸಲಾಗುತ್ತದೆ. ತಾಯಿಗೆ ಸಮಾನವಾದ ಸ್ಥಾನ ದೇಶ, ಭಾಷೆಗೆ. ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ – ಈ ಮಾತು ಜನ್ಮಭೂಮಿ(ದೇಶ)ದ ಬಗೆಗೆ ನಮ್ಮ ಪೂರ್ವಿಕರು ಹೊಂದಿದ್ದ ಪೂಜ್ಯ ಭಾವನೆಯ ದ್ಯೋತಕ. ನಮ್ಮ ದೇಶ ನಮಗೆ ಆಹಾರ, ಬಟ್ಟೆ, ವಸತಿ, ಶಿಕ್ಷಣ, ಉದ್ಯೋಗ ಹೀಗೆ ಎಲ್ಲವನ್ನೂ ಕೊಡುತ್ತದೆ. ಈ ಎಲ್ಲದರ ಋಣ ನಮಗೆ ಸದಾ ಇರುತ್ತದೆ. ಹಾಗಾಗಿ ನಾವು ದೇಶಕ್ಕೆ ಸದಾ ಋಣಿಗಳಾಗಿದ್ದು ದೇಶಕ್ಕೆ ಯಾವುದೇ ಆಪತ್ತು ಎದುರಾಗದಂತೆ ಎಚ್ಚರ ವಹಿಸಬೇಕಾದುದು ಎಲ್ಲರ ಕರ್ತವ್ಯ. ಅಷ್ಟೇ ಅಲ್ಲದೆ ದೇಶದ ಸರ್ವತೋಮುಖ ಏಳಿಗೆಯಲ್ಲಿ ಭಾಗಿಗಳಾಗಬೇಕಾದುದು ಅವಶ್ಯ. ಹಾಗಾಗಬೇಕಾದರೆ ಪ್ರತಿಯೊಬ್ಬರಲ್ಲೂ ದೇಶಾಭಿಮಾನ ಇರಲೇಬೇಕಲ್ಲವೇ?
ವೇದ, ಉಪನಿಷತ್ತು, ಪುರಾಣಗಳ ಕಾಲದಿಂದಲೂ ಭಾರತ ಸಂಪದ್ಭರಿತ ದೇಶ. ಪ್ರಕೃತಿ ನೀಡಬಹುದಾದ ಎಲ್ಲ ಸಂಪತ್ತು, ಸೌಂದರ್ಯಗಳಿಂದ ಕೂಡಿ ಸ್ವರ್ಗ ಸಮಾನವಾಗಿತ್ತು. ಋಷಿ, ಮುನಿಗಳಾದಿಯಾಗಿ ನಮ್ಮ ಪೂವಿಕರ ಬೌದ್ಧಿಕ ಮಟ್ಟ ಅತ್ಯುನ್ನತವಾಗಿತ್ತು. ಆದ್ದರಿಂದಲೇ ವಿಜ್ಞಾನದಲ್ಲಿ ಅನೇಕ ಸಂಶೋಧನೆಗಳನ್ನು ಮಾಡಿ ಸಂಶಯಗಳಿಗೆ ಪರಿಹಾರ ನೀಡಿದ್ದಾರೆ. ನೌಕಾಯಾನ, ಖಗೋಳಶಾಸ್ತ್ರ, ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಶರೀರಶಾಸ್ತ್ರಗಳಲ್ಲಿ ಭಾರತೀಯರ ಸಾಧನೆ ಅಪ್ರತಿಮವಾದುದು. ಭಾರತದ ಸಾಹಿತ್ಯ, ಇತಿಹಾಸಗಳು ಎಂಥವರಲ್ಲೂ ಹೆಮ್ಮೆಯ ಭಾವನೆ ಮೂಡಿಸುವುದರಲ್ಲಿ ಅನುಮಾನವೇ ಇಲ್ಲ. ಪ್ರಾಚೀನ ಭರತವು ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರವೆಂಬ ಹೆಗ್ಗಳಿಕೆ 17 ನೇ ಶತಮಾನದವರೆಗೂ ಇತ್ತು. ಅನಂತರ ವಿದೇಶಿಯರ ದಾಳಿಗಳಿಂದಾಗಿ ಭಾರತದ ಸಂಪತ್ತೆಲ್ಲವೂ ಧೂಳೀಪಟವಾಯಿತು. ಭಾರತೀಯ ಸಂಸ್ಕೃತಿಯು ಅತ್ಯುನ್ನತ ಮಟ್ಟದ್ದಾಗಿದ್ದು ವಿದೇಶಗಳಮೇಲೆ ಪ್ರಭಾವ ಬೀರಿದೆ, ಬೀರುತ್ತಿದೆ. ಎಲ್ಲ ದೃಷ್ಟಿಕೋನಗಳಿಂದಲೂ ಭಾರತ ಹೆಮ್ಮೆಯ ರಾಷ್ಟ್ರವೇ ಸರಿ. ದೇಶಾಭಿಮಾನ ಭಾರತೀಯರ ರಕ್ತದ ಕಣಕಣಗಳಲ್ಲೂ ಚಿಮ್ಮಿ, ಮೈ ನವಿರೇಳಿಸುವ ಸಾಹಸಗಾಥೆಗಳು ನಮ್ಮ ಇತಿಹಾಸದಲ್ಲಿದೆ. ಭಾರತ ಸ್ವಾತಂತ್ರ್ಯ ಸಂಗ್ರಾಮಗಳಲ್ಲಿ ಪ್ರಾಣಾರ್ಪಣೆ ಮಾಡಿದ ವೀರರ ಸಾಹಸಗಳು ರೋಮಾಂಚನಗೊಳಿಸುತ್ತವೆ, ಮೈಯಲ್ಲಿ ಮಿಂಚಿನ ಸಂಚಾರ ಹರಿಸುತ್ತದೆ. ರಾಷ್ಟ್ರಕ್ಕಾಗಿ ಸರ್ವಸ್ವವನ್ನೂ ತ್ಯಾಗಮಾಡಿ ಪ್ರಾಣಾರ್ಪಣೆಗೈದ ರಾಷ್ಟ್ರಭಕ್ತರ ಈ ನಾಡಿನಲ್ಲಿ ವಿದೇಶಿಯರ ಆಗಮನದಿಂದ ಪರಿಸ್ಥಿತಿ ಬೇರೆಯದೇ ಆಗತೊಡಗಿತು. ವಿಶೇಷವಾಗಿ ಬ್ರಿಟಿಷರ ಆಗಮನ, ಪ್ರಭಾವದಿಂದಾಗಿ ಭಾರತೀಯರು ತಮ್ಮತನವನ್ನು ಮರೆಯುತ್ತಾ, ಕಳೆದುಕೊಳ್ಳುತ್ತಾ ಬಂದರು. ಬ್ರಿಟಿಷರ ಶಿಕ್ಷಣ ನೀತಿ, ಆಡಳಿತ ನೀತಿಗಳಿಂದಾಗಿ ಭಾರತೀಯರು ತಮ್ಮ ದೇಶದ ಬಗೆಗೆ ಅಭಿಮಾನವನ್ನು ಕಳೆದುಕೊಳ್ಳಲಾರಂಭಿಸಿದರು. ಭಾರತದಲ್ಲಿ ಹುಟ್ಟಿ ಬೆಳೆದು, ಇಲ್ಲಿ ಶಿಕ್ಷಣವನ್ನು ಪಡೆದು ಭಾರತೀಯವಾದುದೆಲ್ಲದರ ಬಗ್ಗೆ ತಾತ್ಸಾರ ಮನೋಭಾವ ಮೂಡಿಸಿಕೊಂಡು ವಿದೇಶದಲ್ಲಿ ನೆಲೆಸಿ, ವಿದೇಶೀಯವಾದುದನ್ನು ಹೊಗಳುವ ಪರಿಸ್ಥಿತಿಯನ್ನು ಈಗಿನ ಬಹಳಷ್ಟು ಯುವಕರಲ್ಲಿ ಕಾಣುವಂತಾಗಿದೆ. ಈ ಪರಿಸ್ಥಿತಿ ಬದಲಾಗಿ ಯುವಕರು ಭಾರತದ ಬಗಗೆ ಹೆಮ್ಮೆ, ಅಭಿಮಾನ ಪಡುವಂತೆ ಮಾಡಿ ಅವರಿಂದ ದೇಶದ ಅಭಿವೃದ್ಧಿಯಾಗುವಂತೆ ಮಾಡುವ ಗುರುತರವಾದ ಹೊಣೆ ಶಿಕ್ಷಕರದು ಎಂದರೆ ತಪ್ಪಾಗಲಾರದು.
ವಿದ್ಯಾರ್ಥಿಗಳಿಗೆ ಸಹಜವಾಗಿ ತಮ್ಮ ಗುರುಗಳ ಬಗೆಗೆ ವಿಶೇಷವಾದ ಪ್ರೀತಿ ಇರುತ್ತದೆ. ಗುರುಗಳ ಬೋಧನೆ ಬಹುಬೇಗ ಮನದಟ್ಟಾಗುತ್ತದೆ. ಶಿಕ್ಷಕರು ತಮ್ಮ ಶಿಷ್ಯರ ವಿಶ್ವಾಸದ ಸದ್ಬಳಕೆ ಮಾಡಿಕೊಂಡು ದೇಶದ ಬಗೆಗೆ ಅಭಿಮಾನ, ಹೆಮ್ಮೆ ಮೂಡಿಸುವ ಕಾರ್ಯದಲ್ಲಿ ಪ್ರವೃತ್ತರಾದರೆ ಖಂಡಿತ ಯಶಸ್ಸು ಪಡೆಯುವುದರಲ್ಲಿ ಅನುಮಾನವಿಲ್ಲ. ಈ ಕೆಲಸ ಇತಿಹಾಸ ಶಿಕ್ಷಕರಿಗೆ ಮಾತ್ರ ಸಾಧ್ಯ ಎಂಬ ಭಾವನೆ ಹೊಂದದೆ ಎಲ್ಲ ವಿಷಯಗಳ ಬೋಧಕರೂ ತಮ್ಮ ಬೋಧನೆಯ ವಿಷಯಗಳಲ್ಲಿ ರಾಷ್ಟ್ರಪ್ರಜ್ಞೆಯನ್ನು ಬೆಳೆಸುವ ಪ್ರಯತ್ನದಲ್ಲಿ ನಿರತರಾಗುವುದು ಅಗತ್ಯ. ಗಣಿತ, ವಿಜ್ಞಾನ ವಿಷಯಗಳ ಬೋಧಕರು ಪಠ್ಯಪುಸ್ತಕದಲ್ಲಿರುವ ಅಂಶಗಳ ಜೊತೆಗೆ ಭಾರತೀಯರ ಸಾಧನೆಗಳನ್ನೂ ಪರಿಚಯಿಸಿದಾಗ ನಮ್ಮ ದೇಶದವರ ಸಾಧನೆಗಳ ಬಗ್ಗೆ ಸಹಜವಾಗಿ ಹೆಮ್ಮೆ ಮೂಡುತ್ತದೆ. ಸಮಾಜವಿಜ್ಞಾನ ಹಾಗೂ ಭಾಷಾಬೋಧಕರು ಭಾರತೀಯ ವೀರರ ಸಾಹಸದ ಗಾಥೆಗಳ ಪರಿಚಯ ಮಾಡಿಸಬಹುದು. ಅವರ ಭಾವಚಿತ್ರಗಳನ್ನು ಪ್ರದರ್ಶಿಸಬಹುದು. ಭಾರತೀಯ ಸಾಧಕರು, ವೀರರು, ಸಾಹಿತ್ಯ ಸಾಧಕರ ಬಗೆಗಿನ ಕೃತಿಗಳನ್ನು ವಿದ್ಯಾರ್ಥಿಗಳು ಓದುವಂತೆ ಪ್ರೋತ್ಸಾಹಿಸಬಹುದು. ಚರ್ಚಾಸ್ಪರ್ಧೆ, ಪ್ರಬಂಧಸ್ಪರ್ಧೆ, ರಸಪ್ರಶ್ನೆ ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮಾಲಕ ದೇಶಾಭಿಮಾನ ಜಾಗೃತಗೊಳಿಸಬಹುದು. ರಾಷ್ಟ್ರೀಯ ದಿನಾಚರಣೆಗಳ ಸಂದರ್ಭದಲ್ಲಿ ಗಣ್ಯವ್ಯಕ್ತಿಗಳಿಂದ ಭಾಷಣಗಳನ್ನು ಏರ್ಪಡಿಸುವುದರ ಜೊತೆಗೆ ವಿದ್ಯಾರ್ಥಿಗಳಿಂದ ಭಾರತೀಯ ಸಾಧಕರ ಬಗೆಗೆ ಕಿರುನಾಟಕಗಳನ್ನು ಮಾಡಿಸಬಹುದು. ಇದಲ್ಲದೆ ಶಿಕ್ಷಕರು ತಮ್ಮ ಪ್ರತಿಭೆ ಬಳಸಿಕೊಂಡು ಸೂಕ್ತವಾದ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ರಾಷ್ಟ್ರಾಭಿಮಾನವನ್ನು ಬೆಳೆಸಿ, ವಿದೇಶದ್ದೆಲ್ಲ ಶ್ರೇಷ್ಠ, ಸ್ವದೇಶದ್ದೆಲ್ಲ ತ್ಯಾಜ್ಯ ಎಂಬ ಮನೋಭಾವ ಬದಲಾಗಿ ಯುವಕರಲ್ಲಿ ಸ್ವದೇಶ ಹಿರಿಮೆಯನ್ನು ಪುನರ್ಸ್ಥಾಪಿಸಲು ಪ್ರಯತ್ನ ಮಾಡಬೇಕಾಗಿದೆ. ದೇಶದ ಅಭ್ಯುದಯದಲ್ಲಿ ತನ್ನ ಕಾಣಿಕೆಯ ಇರಬೇಕು ಎಂಬ ಮನೋಭಾವ ವಿದ್ಯಾರ್ಥಿಗಳಲ್ಲಿ ಮೂಡಿಸಿ ಭಾರತದ ಹಿರಿಮೆಯನ್ನು ಹೆಚ್ಚಿಸಲು ನಮ್ಮ ಕಾಣಿಕೆಯನ್ನು ನೀಡೋಣ.
ಶ್ವೇತಾದ್ರಿ, ನಿವೃತ್ತ ಮುಖ್ಯಶಿಕ್ಷಕರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.