ಭಾರತಿ ಫಿಲಂಸ್ ಸಂಸ್ಥೆಯಿಂದ ವಾದಿರಾಜ್-ಜವಾಹರ್ ರವರು 1964 ರಲ್ಲಿ ಲಕ್ಷ್ಮೀನಾರಾಯಣರವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ ಒಂದು ಅತ್ಯುತ್ತಮ ಚಲನಚಿತ್ರ. ಕೇವಲ ಮನೋರಂಜನೆಯೊಂದೇ ಅಲ್ಲದೇ, ಜನರ ಸಾಮಾಜಿಕ ಆಲೋಚನೆಯ ದೃಷ್ಟಿಕೋನದೆಡೆಗೆ ಕೂಡಾ ಸೆಳೆಯಬೇಕು ಎಂಬುದಕ್ಕೆ ನಾಂದಿ ಒಂದು ಉತ್ತಮ ಉದಾಹರಣೆ. “ಕಿವುಡ-ಮೂಗರ” ಸಮಸ್ಯೆಯ ಕುರಿತಾದ ಚಿತ್ರ ನಾಂದಿ. ಆರ್.ಎನ್.ಜಯಗೋಪಾಲ್ ರವರ ಸಾಹಿತ್ಯವಿದ್ದು, ವಿಜಯಭಾಸ್ಕರ್ ರವರ ಸಂಗೀತವಿರುತ್ತದೆ. ಕಥಾ ಪ್ರಧಾನವಾದ ಈ ಚಿತ್ರದಲ್ಲಿ ರಾಜ್ ಕುಮಾರ್, ಕಲ್ಪನಾ, ಹರಿಣಿ, ದಿನೇಶ್, ಬಾಲಕೃಷ್ಣ ಹಾಗೂ ವಾದಿರಾಜ್ ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಉದಯ್ ಕುಮಾರ್ ರವರು ಗೌರವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಆರ್.ಎನ್. ಜಯಗೋಪಾಲ್ ರವರ ಸಾಹಿತ್ಯದ ಹಾಡುಗಳಿಗೆ ಪಿ.ಬಿ.ಶ್ರೀನಿವಾಸ್, ಜಯದೇವ್, ಎಸ್.ಜಾನಕಿ, ಎಲ್.ಆರ್.ಈಶ್ವರಿ ಮತ್ತು ಬಿ.ಲತಾ ರವರು ದನಿಯಾಗಿದ್ದಾರೆ.
ಲಂಡನ್ ನಲ್ಲಿ ನಡೆದ ಕಾಮನ್ ವೆಲ್ತ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಸಿನಿಮಾ ಎಂಬ ಖ್ಯಾತಿ ಈ “ನಾಂದಿ” ಸಿನಿಮಾದ್ದು.
ಕಥೆ:
ಶಾಲೆಯ ತರಗತಿಯಲ್ಲಿ ಶಿಕ್ಷಕರು ಇರದಿದ್ದಾಗ ಹುಡುಗರು ಮಾಡುವ ಚೇಷ್ಟೆ ಹಾಗೂ ಕಿತಾಪತಿಗಳ ಅನಾವರಣದೊಂದಿಗೆ ಸಿನಿಮಾ ಪ್ರಾರಂಭವಾಗುತ್ತದೆ. ಹುಡುಗನೊಬ್ಬ ಬೋರ್ಡಿನ ಮೇಲೆ ಬೆಕ್ಕಿನ ಚಿತ್ರ ಬರೆಯುತ್ತಿರುತ್ತಾನೆ. ಮತ್ತೊಬ್ಬ ಅವನ ಚಡ್ಡಿಗೆ ಪೇಪರಿನಿಂದ ಮಾಡಿದ ಬಾಲವನ್ನು ಸಿಕ್ಕಿಸುತ್ತಾ ಇರುತ್ತಾನೆ. ಮತ್ತೊಂದಿಬ್ಬರು ಚೆಂಡಾಟ ಆಡುತ್ತಾ ಇರುತ್ತಾರೆ. ಕೆಲವರು ಡೆಸ್ಕಿನ ಮೇಲೆಯೇ ತಲೆಯೊರಗಿಸಿ ಮಲಗಿರುತ್ತಾರೆ. ಇದೆಲ್ಲವನೂ ನೋಡಿ, ನಮಗೆ ನಮ್ಮ ಬಾಲ್ಯದ ಶಾಲಾದಿನಗಳು ನೆನಪಾಗದೇ ಇರಲ್ಲ. ಅಷ್ಟರಲ್ಲಿ ಅಲ್ಲಿಗೆ ಬಂದ ಶಾಲಾ ಹೆಡ್ ಮಾಸ್ತರು ಹೊಸದಾಗಿ ಬಂದ ಮೂರ್ತಿ (ರಾಜ್ ಕುಮಾರ್) ಎಂಬ ಶಿಕ್ಷಕರನ್ನು ಮಕ್ಕಳಿಗೆ ಪರಿಚಯಿಸಿ, ಅಲ್ಲಿಂದ ಹೊರಡುತ್ತಾರೆ. ಕಚ್ಚೆಪಂಚೆ, ಕರಿಕೋಟು, ಮೈಸೂರು ಪೇಟ ತೊಟ್ಟ ರಾಜಕುಮಾರ್ ರವರನ್ನು ನೋಡೋದೆ ಚೆಂದ. ಮಕ್ಕಳ ತುಂಟಾಟ ಕಂಡ ಮೂರ್ತಿ, ಮಕ್ಕಳಿಗೆ ಬೈಯದೇ, ಒಳ್ಳೆ ಮಾತುಗಳನ್ನಾಡಿ ಪ್ರೋತ್ಸಾಹಿಸುವುದರ ಜೊತೆ, ಒಳ್ಳೆಯ ಕೆಲಸದಲ್ಲಿ ನಿಮ್ಮ ಈ ಪ್ರತಿಭೆ ತೋರಿಸಬೇಕು ಎಂದು ಮಕ್ಕಳಿಗೆ ಮನನ ಮಾಡಿಕೊಡುತ್ತಾನೆ. ಅದು ಮಕ್ಕಳ ಮನಸಿಗೆ ಒಳ್ಳೆಯ ಪರಿಣಾಮ ಬೀರುತ್ತದೆ. ಅಂದಿನಿಂದ ಮಕ್ಕಳು ಶಿಕ್ಷಕರ ಮೇಲೆ ಗೌರವಯುತವಾಗಿ ನಡೆದುಕೊಳ್ಳುತ್ತಾರೆ. ಹೊಸದಾಗಿ ಮದುವೆಯಾಗಿ ಬಂದ ಮೂರ್ತಿ ದಂಪತಿಗಳು ಜೊತೆಯಾಗಿ ಮನೆಯ ಸಾಮಾನು ಸರಂಜಾಮುಗಳನ್ನು ಜೋಡಿಸುತ್ತಾರೆ. ಮೂರ್ತಿ ತನ್ನ ಹೆಂಡತಿ ನಿರ್ಮಲಾಳನ್ನು (ಕಲ್ಪನಾ) ಅಷ್ಟೇ ಪ್ರೀತಿ ಹಾಗೂ ಮಮತೆಯಿಂದ ಜೀವನ ನಡೆಸುತ್ತಿರುತ್ತಾನೆ. ಅವರಿಬ್ಬರ ಪ್ರೀತಿಯೂ ಅಷ್ಟೇ ನಿರ್ಮಲ. ಇವರಿಬ್ಬರ ನಡುವಿನ ಪ್ರೀತಿಯ ದೃಶ್ಯಗಳು ನೋಡುಗನ ಮನಸಿಗಾಂನಂದ ನೀಡುತ್ತದೆ ಹಾಗೂ ಅಷ್ಟೇ ನೈಜತೆಯಿಂದ ಕೂಡಿದೆ. ಸ್ವಾಭಾವಿಕವಾಗಿ ಆಕೆ ಗರ್ಭವತಿಯೂ ಆಗುತ್ತಾಳೆ. “ಚಂದ್ರಮುಖಿ ಪ್ರಾಣಸಖಿ ಚತುರೆ ನೀ ಹೇಳೆ..” ಎಂಬ ಗೀತೆ ಆಕೆಯ ಸೀಮಂತ ಸಂಭ್ರಮಕೆ ಸಾಕ್ಷಿಯಾಗುತ್ತದೆ. ನಡುವೆ ಪಕ್ಕದ ಮನೆ ಪ್ರಾಣೇಶನ (ವಾದಿರಾಜ್) ಸಂಗೀತಾಭ್ಯಾಸ ಬಲುಹಿತವಾಗಿ ಕಿರಿಕಿರಿಯೂ ಮಾಡುತ್ತಿರುತ್ತದೆ. ಇದೆಲ್ಲದರ ನಡುವೆ ಆತನ ಮನೆಯಲ್ಲೇ ಆಕೆಯ ಹೆರಿಗೆ ನೋವು ಶುರುವಾಗುತ್ತದೆ. ಆ ಸಮಯದಲ್ಲಿ ಗಂಡನಿಗೂ ಆಗುವ ಸಂಕಟದ ಸೂಕ್ಷ್ಮಗಳನ್ನು ನಿರ್ದೇಶಕರು ತುಂಬಾ ಜಾಗರೂಕತೆಯಿಂದ ಸೆರೆ ಹಿಡಿದಿದ್ದಾರೆ. ಮನೆಯಲ್ಲಿಯೇ ಹೆರಿಗೆ ಮಾಡಿಸುವುದು ಅಸುರಕ್ಷಿತ ಹಾಗೂ ತಾಯಿ-ಮಗುವಿನ ಪ್ರಾಣಕ್ಕೆ ಅಪಾಯ ಎಂಬುದರ ಬಗ್ಗೆ ಸೂಕ್ಷ್ಮವಾಗಿ ತಿಳಿಸುತ್ತಾರೆ ನಿರ್ದೇಶಕರು. ಆಕೆ ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟು ತೀರಿಕೊಳ್ಳುತ್ತಾಳೆ. ಇದರಿಂದಾಗಿ ಮೂರ್ತಿ ಬಹುವಾಗಿ ನೊಂದುಕೊಳ್ಳುತ್ತಾನೆ. ಆ ಮಗುವಿನ ಹಾರೈಕೆಯ ಜವಬ್ದಾರಿಯು ಮೂರ್ತಿಯ ಹೆಗಲ ಮೇಲೆ ಬೀಳುತ್ತದೆ. ತೀವ್ರ ಜ್ವರದ ಕಾರಣದಿಂದಾಗಿ ಮಗುವಿಗೆ ಶ್ರವಣದೋಷ ಉಂಟಾಗುತ್ತದೆ. ಗಾಯದ ಮೇಲೆ ಮತ್ತೊಂದು ಬರೆಯಂತೆ ಆ ಕಿವುಡು ಮಗುವಿನ ಆರೈಕೆಯು ಮೂರ್ತಿಗೆ ಅತಿ ಕಷ್ಟಕರವಾಗುತ್ತದೆ.
ಇದೆಲ್ಲದರ ನಡುವೆ ನಿಮಗೊಂದು ವಿಷಯ ಹೇಳಲೇಬೇಕು. ಪಕ್ಕದ ಮನೆಯ ಕುಟುಂಬದ ಎಲ್ಲರೂ ಮೂರ್ತಿಯ ಕುಟುಂಬದೊಂದಿಗೆ ವಿಶ್ವಾಸದಿಂದ, ಅನ್ಯೋನ್ಯತೆಯಿಂದ ಇರುತ್ತಾರೆ. ಅವರಿಗೆ ವರ್ಗವಾಗಿ ಬೇರೆ ಊರಿಗೆ ಹೋಗುವ ಸಂಧರ್ಭದಲ್ಲಿ ಪಕ್ಕದ ಮನೆಯ ಹುಡುಗಿ, ಮೂರ್ತಿಯ ಮಗುವನ್ನು ಬಿಟ್ಟು ಹೋಗುವಾಗ, ಆಕೆಯ ಕಣ್ಣಲ್ಲಿ ಜಿನುಗುವ ನೀರು, ಪ್ರೇಕ್ಷಕನ ಕಣ್ಣಲ್ಲೂ ತರಿಸುವಂತಿದೆ ಆ ದೃಶ್ಯ. ಪಕ್ಕದ ಮನೆಯಾಕೆಯೇ, ಮಗುವಿಗಾಗಿ ನೀವು ಮತ್ತೊಂದು ಮದುವೆಯಾಗಲೇಬೇಕು ಎಂದು ಮೂರ್ತಿಗೆ ತಿಳಿಸುತ್ತಾಳೆ. ನಿರ್ಮಲಾಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಮೂರ್ತಿ, ಕೊನೆಗೂ ಮರುಮದುವೆಗೆ ಒಪ್ಪುತ್ತಾನೆ. ಮಕ್ಕಳೊಂದಿಗೆ ಬೆಂಗಳೂರು ಸಮೀಪದ ನಂದಿ ಬೆಟ್ಟಕ್ಕೆ ಪಿಕ್ ನಿಕ್ ಹೋದಾಗ, ಅಲ್ಲಿಯ ಗೈಡ್ ಮಗಳಾದ ಗಂಗಾಳನ್ನು (ಹರಿಣಿ) ನೋಡಿರುತ್ತಾನೆ. ರೂಪವತಿಯು ಹಾಗೂ ಗುಣವತಿಯಾದ ಆಕೆಗೆ ದುರಾದೃಷ್ಟವಶಾತ್ ಕಿವಿ ಕೇಳಿಸುವುದಿಲ್ಲ ಹಾಗೂ ಮಾತು ಬರುವುದಿಲ್ಲ. ಆ ಕಾರಣಕ್ಕಾಗಿ ಆಕೆಯನ್ನು ಮದುವೆಯಾಗಲು ಯಾರೂ ಮುಂದೆ ಬಾರದಿದ್ದಾಗ, ಮೂರ್ತಿ ಆಕೆಗೆ ಜೊತೆಯಾಗಿ ಹೊಸಬಾಳು ಕೊಡುತ್ತಾನೆ. ಇಬ್ಬರ ಹೊಸಜೀವನದಲ್ಲಿ ನಿರ್ಮಲಾ ಆಗಾಗ ನೆನಪಾಗುತ್ತಲೇ ಇರುತ್ತಾಳೆ ರಾಜೀವನಿಗೆ. ಒಮ್ಮೆ ಬೆಂಗಳೂರಿನ ಕಿವುಡು ಮೂಗರ ಶಾಲೆಗೆ ಭೇಟಿ ಕೊಟ್ಟು, ಅಲ್ಲಿನ ವಿದ್ಯಾಭ್ಯಾಸ, ಶಿಕ್ಷಣ ಕ್ರಮ ಅರಿತು, ಮನೆಯಲ್ಲಿಯೇ ಹೆಂಡತಿ ಹಾಗೂ ತನ್ನ ಮಗುವಿಗೆ ಶಿಕ್ಷಣ ನೀಡುತ್ತಾನೆ. ಸಂಕೋಚ-ಅವಮಾನಗಳಲ್ಲಿಯೇ ಬೆಂಡಾಗಿದ್ದ ಅವಳ ಮನಸು ಇದರಿಂದಾಗಿ ಚೈತನ್ಯದಾಯಕವಾಗುತ್ತದೆ. ಹೊಸ ಹುಮ್ಮಸ್ಸು ಹಾಗೂ ಆತ್ಮವಿಶ್ವಾಸದಿಂದ ಆಕೆ ಜೀವನ ಮಾಡುತ್ತಾಳೆ. ಹೀಗೆ ಸಂತೋಷದಿಂದಿರುವಾಗ ಹೊರಗೆ ರಂಗೋಲಿ ಹಾಕುವ ವೇಳೆ ಮೂರ್ತಿಯ ಮಗು ಅಡುಗೆ ಮನೆಗೆ ತನಗೆ ಬೇಕಾದ ತಿಂಡಿ ತೆಗೆದುಕೊಂಡು ತಿನ್ನುತ್ತಿರುವಾಗ, ಅಕಸ್ಮಾತ್ ಆದ ಅಗ್ನಿ ಅನಾಹುತಕ್ಕೆ ಆಹುತಿಯಾಗುತ್ತದೆ. ಆ ಮಗು ನೋವಿನಿಂದ ಅಮ್ಮಾ ಎಂದು ಕೂಗುವ ಕೂಗು ಕೇಳಿಸುವುದೇ ಆಕೆಗೆ ಕೇಳಿಸುವುದಿಲ್ಲ. ಎಷ್ಟಾದರೂ ಆಕೆ ಕಿವುಡಿಯಲ್ಲವೇ. ತನ್ನದಲ್ಲದ ತಪ್ಪಿನಿಂದ ಆದ ಅನಾಹುತದಿಂದ ಮಗುವನ್ನು ಕಳೆದುಕೊಂಡಿದ್ದಕ್ಕಾಗಿ ಆಕೆ ದುಃಖಿಸುತ್ತಾಳೆ. ಎಲ್ಲಕ್ಕಿಂತ ಹೆಚ್ಚಾಗಿ ಆಕೆ ಮೂರ್ತಿಯ ಮೊದಲ ಹೆಂಡತಿಯ ಫೋಟೋ ಮುಂದೆ ಕುಳಿತು, ತನ್ನನ್ನು ಕ್ಷಮಿಸುವಂತೆ ಗೋಳಿಡುವ ದೃಶ್ಯ ಕರುಳು ಹಿಂಡುತ್ತದೆ. ದಂಪತಿಗಳು ಆ ನೋವನ್ನು ಸಹ ನುಂಗಿ ಜೀವನದ ಮುಂದಿನ ದಿನಗಳನ್ನು ದೂಡುತ್ತಾ ಇರುತ್ತಾರೆ. ಸ್ವಾಭಾವಿಕವಾಗಿ ಈಕೆಯೂ ಕೂಡ ತುಂಬು ಗರ್ಭಿಣಿಯಾಗುತ್ತಾಳೆ. ಆಕೆಯ ಸೀಮಂತವೂ ಆದ ಮೇಲೆ, ಗರ್ಭದೊಳಗಿನ ಮಗು ಆಗಾಗ ಒಳ್ಳೆಯ ಹಾಡು ಹಾಗೂ ಸಂಗೀತ ಕೇಳುತ್ತಿರಬೇಕು ಎಂಬ ಉದ್ದೇಶದಿಂದ ಗರ್ಭದೊಳಗಿನ ಮಗುವಿಗಾಗಿ “ಹಾಡೊಂದ ಹಾಡುವೆ, ನೀ ಕೇಳು ಮಗುವೆ” ಎಂಬ ಹಾಡು ಹಾಡುತ್ತಾನೆ. ಆ ಹಾಡು ಅದೆಷ್ಟು ಮಧುರವಾಗಿದೆ ಎಂದರೆ ಜೇನಿನ ಹೊಳೆಯಲಿ ಮಿಂದು ಬಂದ ಚಂದಿರ, ತಮಗಾಗಿ ಜೋಗುಳವಾಡುತ್ತಿದ್ದಾನೆ ಎಂಬಂತೆ ಭಾಸವಾಗುತ್ತದೆ. ಅಂತಹ ಹಾಡು ಕೇಳಲು ಗಂಗಾಳಿಗೆ ಸಾಧ್ಯವಾಗುವುದಿಲ್ಲ. ತಾನೇ ಮುತುವರ್ಜಿಯಿಂದ ಪ್ರಾರಂಭಿಸಿದ ಕಿವುಡು-ಮೂಗರ ಶಾಲೆಯಲ್ಲಿ ಮಕ್ಕಳಿಂದ ಕಾರ್ಯಕ್ರಮ ಏರ್ಪಡಿಸಿರುತ್ತಾನೆ. ಆ ಸಮಯದಲ್ಲಿ ಹೆಂಡತಿಗೆ ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಸೇರಿಸುತ್ತಾರೆ. ಈ ಹಿಂದೆ ಇಂತಹುದೇ ಸಂಧರ್ಭದಲ್ಲಿ ನಿರ್ಮಲಾಳನ್ನು ಕಳೆದುಕೊಂಡ ಮೂರ್ತಿ, ಎಲ್ಲಿ ಗಂಗಾಳನ್ನು ಕಳೆದುಕೊಂಡು ಬಿಡುವೆನೋ ಎಂಬ ಕಳವಳ, ಅವನನ್ನು ಅಧೀರನಾಗುವಂತೆ ಹಾಗೂ ಭಯಭೀತನಾಗುವಂತೆ ಮಾಡುತ್ತದೆ. ದೇವರ ಆಶೀರ್ವಾದದಿಂದ ಆಕೆ ಸಿಸೇರಿಯನ್ ಹೆರಿಗೆ ಕ್ರಮದಿಂದ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಅಲ್ಲಿಗೆ ಸಿನಿಮಾ ಸುಖಾಂತ್ಯವಾಗುತ್ತದೆ. ನಿರ್ದೇಶಕರ ಜಾಣ್ಮೆ ನೋಡಿ. ಮನೆಯಲ್ಲಿ ಆದ ಹೆರಿಗೆಯಿಂದ ತಾಯಿಯ ಸಾವು. ಆಸ್ಪತ್ರೆಯಲ್ಲಾಗುವ ಹೆರಿಗೆ ಸುರಕ್ಷಿತ ಎಂಬ ವಿಷಯವನ್ನು ಸೂಕ್ಷ್ಮವಾಗಿ ಮನದಟ್ಟು ಮಾಡುತ್ತಾರೆ.
ಸಿನಿಮಾ ನೋಡಲೇಬೇಕೆಂಬುದಕ್ಕೆ ಕಾರಣಗಳು:
1. ಜೀವನದಲ್ಲಿ ಬರಬಹುದಾದ ಆಕಸ್ಮಿಕ ನೋವುಗಳಿಗೆ ಹೇಗೆ ಸ್ಪಂದಿಸಬೇಕು? ಅಂತಹ ಸಮಯಗಳಲ್ಲಿ ಸೂಕ್ತ ನಿರ್ಧಾರ ಹೇಗೆ ತೆಗೆದುಕೊಳ್ಳಬೇಕು? ಎಂಬುದನ್ನು ತಿಳಿಯಲು.
2. ಸಾಮಾಜಿಕ ಜವಬ್ದಾರಿಯೊಂದಿಗೆ ವೈಯುಕ್ತಿಕ ಜೀವನ ನಿಭಾಯಿಸುವ ಪರಿ ತಿಳಿಯಲು.
3. ಅಂಗವೈಕಲ್ಯ ಇರುವವರು ಕೂಡ ಸಮಾಜದಲ್ಲಿ ಎಲ್ಲರೊಂದಿಗೆ ಸಮಾನರಾಗಿ ಬಾಳುವ ಬಗೆ ಹೇಗೆ ಎಂಬುದನ್ನು ತಿಳಿಯಲು.
4. ಅಕ್ಕಪಕ್ಕದ ಮನೆಯವರೊಂದಿಗೆ ಇರಬೇಕಾದ ಆತ್ಮೀಯತೆ ಕುರಿತು ತಿಳಿಯಲು.
5. ಕುಟುಂಬದ ಸದಸ್ಯರ ಆತ್ಮವಿಶ್ವಾಸ ಹೆಚ್ಚಿಸುವುದು ಹೇಗೆ? ಎಂಬುದನ್ನು ತಿಳಿಯಲು.
6. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.