ಮುಂಬಯಿ: ನಾವೆಲ್ಲಾ ಸ್ವತಂತ್ರವಾಗಿ ಉಸಿರಾಡಲಿ ಎಂಬ ಕಾರಣಕ್ಕೆ ಬ್ರಿಟಿಷರೊಂದಿಗೆ ಹೋರಾಡಿ ಅಪ್ರತಿಮ ತ್ಯಾಗವನ್ನು ಮಾಡಿರುವ ಮಹಾನ್ ದೇಶಭಕ್ತರ ಹೆಸರಲ್ಲಿ ಮರ ನೆಟ್ಟು ಅವರನ್ನು ಸ್ಮರಣೆ ಮಾಡುವಂತಹ ಅಪೂರ್ವ ಕಾರ್ಯವನ್ನು ‘ಕ್ರಾಂತಿ ವನ’ದಲ್ಲಿ ಮಾಡಲಾಗುತ್ತಿದೆ.
ಮಹಾರಾಷ್ಟ್ರದ ಸಾಂಗ್ಲಿ ಗ್ರಾಮದ ಬಲ್ವಾಡಿ ಎಂಬ ಸಣ್ಣ ಗ್ರಾಮದಲ್ಲಿ ಈ ‘ಕ್ರಾಂತಿ ವನ’ ಇದೆ. ಇಲ್ಲಿನ ಪ್ರತಿಯೊಂದು ಮರಕ್ಕೂ ಸ್ವಾತಂತ್ರ್ಯ ವೀರರ ಹೆಸರುಗಳನ್ನು ಇಡಲಾಗಿದೆ. 77 ವರ್ಷದ ಸಂಪತ್ ರಾವ್ ಪವಾರ್ ಈ ಕ್ರಾಂತಿ ವನದ ನಿರ್ಮಾತೃ ಆಗಿದ್ದಾರೆ.
‘ಕ್ರಾಂತಿ ವನ’ ಹುತಾತ್ಮರಿಗೆ ಜೀವಂತ ಸ್ಮಾರಕವಾಗಿದೆ, ಹುತಾತ್ಮರು ಎಂದಿಗೂ ಸಾವನ್ನಪ್ಪುವುದಿಲ್ಲ’ ಎನ್ನುವ ಸಂಪತ್ ರಾವ್, ಈ ಜೀವಂತ ಸ್ಮಾರಕವನ್ನು ಸ್ಥಾಪನೆ ಮಾಡಲು 36 ವರ್ಷಗಳನ್ನು ತೆಗೆದುಕೊಂಡಿದ್ದಾರೆ. 1992ರ ಕ್ವಿಟ್ ಇಂಡಿಯಾ ಚಳುವಳಿಯ ದಿನದಂದು ಅವರು ಈ ಕಾರ್ಯ ಆರಂಭಿಸಿದ್ದರು, ಇಂದು 700 ಮರಗಳು 700 ಹುತಾತ್ಮರ ಹೆಸರುಗಳನ್ನು ಪಡೆದುಕೊಂಡಿದೆ.
ಮಂಗಲ್ ಪಾಂಡೆ, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಗಾಂಧೀಜಿ, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಬಹುತೇಕ ಹುತಾತ್ಮರು ಈ ಮರಗಳ ಮೂಲಕ ಈ ಕ್ರಾಂತಿ ವನದಲ್ಲಿ ಜೀವಂತವಾಗಿದ್ದಾರೆ.
ತಮ್ಮ ಕುಟುಂಬಕ್ಕೆ ಜೀವನಾಧಾರವಾಗಿದ್ದ ಕಬ್ಬು ಬೆಳೆಯುವ ಭೂಮಿಯಲ್ಲಿ ಅವರು ಈ ಮರಗಳನ್ನು ನೆಟ್ಟಿದ್ದಾರೆ, ಈ ಮರಗಳಿಗಾಗಿ ಬಾವಿ ತೋಡುವಾಗ ಮಗನನ್ನು ಕಳೆದುಕೊಂಡಿದ್ದಾರೆ. ಇದರಿಂದ ಕುಟುಂಬದವರ, ಗ್ರಾಮಸ್ಥರ ಟೀಕೆಗಳನ್ನು ಕೇಳ ಬೇಕಾಗಿ ಬಂದಿತ್ತು. ಆದರೂ ಎದೆಗುಂದದೆ ಕಾರ್ಯವನ್ನು ಮುಂದುವರೆಸಿ ಇಂದು ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಇವರು ನಿರ್ಮಿಸಿರುವ ಕ್ರಾಂತಿವನವನ್ನು ನೋಡುವುದಕ್ಕೆಂದೇ ಶಾಲಾ ಮಕ್ಕಳು, ದೂರದ ಊರಿನ ಜನರು ಇಲ್ಲಿಗೆ ಬರುತ್ತಿರುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.