ಇಂದಿನ ತಾಂತ್ರಿಕ ಯುಗದಲ್ಲಿ ಬೆರಳಿನ ತುದಿಯಲ್ಲೇ ನಮಗೆ ಬೇಕಾದ ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಿದೆ. ಶತಮಾನಗಳ ಹಿಂದೆ ಕಾಲ, ಗ್ರಹಣ ಮತ್ತು ಅನೇಕ ಖಗೋಳ ಶಾಸ್ತ್ರದ ಬಗ್ಗೆ ಬಯಲಿನಲ್ಲಿ ಸ್ಥಾಪಿಸಿರುವ ಕಟ್ಟಡ, ಗೋಪುರ ಮತ್ತು ಗೋಲಾಕಾರದ ರಚನೆಯ ಸಹಾಯದಿಂದ ನಿಖರವಾಗಿ ಅರಿಯುತ್ತಿದ್ದರು. ಜಂತರ್ ಮಂತರ್ ಎನ್ನುವುದು ಈ ವಿಸ್ಮಯಕಾರಿ ಗಡಿಯಾರ ಮಾಪನ ಹೊಂದಿರುವ ಧಾಮ. ಜಂತರ್ ಅಂದರೆ ಯಂತ್ರ ಎಂತಲೂ ಮಂತರ್ ಅಂದರೆ ಸೂತ್ರ ಎಂದೂ ಅರ್ಥವಿದೆ. ಹೀಗಾಗಿ ಜಂತರ್ ಮಂತರ್ ಅಂದರೆ ಕನ್ನಡದಲ್ಲಿ ಲೆಕ್ಕಾಚಾರ ಯಂತ್ರ ಎಂದು ಅರ್ಥ ಕಲ್ಪಿಸಬಹುದಾಗಿದೆ. ದೇಶದ ಐದು ಅತಿದೊಡ್ಡ ಖಗೋಳ ವೀಕ್ಷಣಾಲಯಗಳಲ್ಲಿ ಜಂತರ್ ಮಂತರ್ ಕೂಡಾ ಒಂದು.
ದೇಶದ ಐದು ಕಡೆ ನಿರ್ಮಿಸಲಾಗಿತ್ತು
ಪ್ರಸ್ತುತ ರಾಜಸ್ಥಾನದ ಜೈಪುರ ಮತ್ತು ದೇಶದ ರಾಜಧಾನಿ ದೆಹಲಿಯಲ್ಲಿ ಜಂತರ್ ಮಂತರ್ ರಚನೆಗಳನ್ನು ಕಾಣಬಹುದು. ಜೈಪುರದಲ್ಲಿರುವ ಜಂತರ್ ಮಂತರ್ ರಚನೆಯಲ್ಲಿ ದೊಡ್ಡದಾಗಿದ್ದು, ಹೆಚ್ಚು ಪ್ರಸಿದ್ಧಿ ಪಡೆದಿದೆ. ರಜಪೂತ ದೊರೆ ಸವಾಯ್ ಜಯಸಿಂಗ್ ಈ ರಚನೆಗಳ ನಿರ್ಮಾಣಕಾರ. ದೇಶದ ಒಟ್ಟು ಐದು ಸ್ಥಳಗಳಲ್ಲಿ ಇಂತಹ ರಚನೆಯನ್ನು ನಿರ್ಮಿಸಲಾಗಿತ್ತು. ದೆಹಲಿ ಮತ್ತು ಜೈಪುರಗಳನ್ನು ಹೊರತುಪಡಿಸಿ ಮಥುರಾ, ವಾರಾಣಸಿ ಹಾಗೂ ಉಜ್ಜಯಿನಿಗಳಲ್ಲಿ ಈ ರಚನೆಯನ್ನು ಜೈಸಿಂಗನು ನಿರ್ಮಿಸಿದ್ದನು. 1724ರಿಂದ 1738ರ ಅವಧಿಯಲ್ಲಿ ಈ ರಚನೆಗಳು ನಿರ್ಮಾಣಗೊಂಡಿವೆ. 1724ರಲ್ಲಿ ದೆಹಲಿ, 1728ರಲ್ಲಿ ಜೈಪುರ, 1734ರಲ್ಲಿ ಉಜ್ಜಯಿನಿ, 1737ರಲ್ಲಿ ವಾರಾಣಸಿ ಹಾಗೂ 1738ರಲ್ಲಿ ಮಥುರಾದಲ್ಲಿ ವೀಕ್ಷಣಾಲಯ ಸ್ಥಾಪಿಸಿದ ಬಗ್ಗೆ ದಾಖಲೆಗಳಿವೆ.
ತಾರಾ ಮಂಡಲ, ಗ್ರಹಣಗಳನ್ನು ತಿಳಿಯಲು ಬಳಕೆ
ಈ ರಚನೆಗಳ ಹಿಂದಿರುವ ಉದ್ದೇಶವೆಂದರೆ ಖಗೋಳಕ್ಕೆ ಸಂಬಂಧಿಸಿದ ವಿಷಯಗಳನ್ನು ಅವಲೋಕಿಸುವುದು. ತಾರಾ ಮಂಡಲದಲ್ಲಾಗುವ ಹಲವು ಬದಲಾವಣೆಗಳು, ಗ್ರಹಣಗಳನ್ನು ತಿಳಿಯುವುದು. ಒಟ್ಟು 14 ಬಗೆಯ ಪ್ರಮುಖ ಜಾಮಿತಿಯ (ರೇಖಾಗಣಿತ) ರಚನೆಯನ್ನು ಜೈಪುರದ ಜಂತರ್ ಮಂತರ್ ವೀಕ್ಷಣಾಲಯದಲ್ಲಿ ಕಾಣಬಹುದು. ವಿವಿಧ ಭಂಗಿ ಹಾಗೂ ಕೋನಗಳಲ್ಲಿ ರಚಿಸಲಾದ ಈ ರಚನೆಯನ್ನು ವಿಶ್ಲೇಷಿಸುವ ಮೂಲಕ ಅಂದಿನ ಕಾಲದಲ್ಲಿ ತಾರೆಗಳ ಭ್ರಮಣೆ, ಗ್ರಹಣ, ಭೂಮಿಯ ಪ್ರದಕ್ಷಿಣೆಗಳ ಕುರಿತು ತಿಳಿಯಲಾಗುತ್ತಿತ್ತು. ಜೈಪುರದಲ್ಲಿರುವ ಜಂತರ್ ಮಂತರ್ನಲ್ಲಿ ಸಾಮ್ರಾಟ್ ಯಂತ್ರ ಎಂಬ ರಚನೆಯು ಎಲ್ಲಕ್ಕಿಂತ ದೊಡ್ಡದಾಗಿದ್ದು, 90 ಅಡಿಗಳಷ್ಟು ಎತ್ತರವಿದೆ. ಇದರ ಮುಖವು ಜೈಪುರ ನಗರದ ಅಕ್ಷಾಂಶಕ್ಕೆ 27 ಡಿಗ್ರಿಯಷ್ಟು ಕೋನದಲ್ಲಿ ನಿರ್ಮಿಸಲಾಗಿದೆ. ಈ ರಚನೆಯು ದಿನದ ಸಮಯವನ್ನು ತನ್ನ ನೆರಳಿನ ಮೂಲಕ ಕರಾರುವಕ್ಕಾಗಿ ತಿಳಿಸುತ್ತದೆ. ಇಲ್ಲಿನ ಪ್ರತಿಯೊಂದು ರಚನೆಯು ಅಳತೆ ಮಾಪನವನ್ನು ಒಳಗೊಂಡಿದೆ. ಉತ್ತಮ ಗುಣಮಟ್ಟದ ಮಾರ್ಬಲ್ ಮತ್ತು ಕಲ್ಲುಗಳಿಂದ ಜಂತರ್ ಮಂತರ್ ನಿರ್ಮಿಸಲಾಗಿದೆ. ಅಳತೆಯನ್ನು ಕರಾರುವಕ್ಕಾಗಿ ಮುದ್ರಿಸಲಾಗಿದೆ. 1948ರಲ್ಲಿ ಇದನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಾಗಿದೆ. ಯುನೆಸ್ಕೋದ ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರಿಸಲಾಗಿದೆ. ಮೂಲದಲ್ಲಿದ್ದ ಹಿತ್ತಾಳೆಯ ಫಲಕಗಳ ಬದಲು ಅಮೃತ ಶಿಲೆಯ ಫಲಕಗಳನ್ನು ಈಗ ಅಳವಡಿಸಲಾಗಿದೆ.
ಗಡಿಯಾರದಷ್ಟೇ ನಿಖರ ಸಮಯ!
ಸಾಮ್ರಾಟ್ ಯಂತ್ರವು ಎಷ್ಟು ನಿಖರವಾಗಿದೆ ಅಂದರೆ ಜೈಪುರದ ಸಮಯಕ್ಕೆ ಕೇವಲ ಎರಡು ಕ್ಷಣಗಳ ವ್ಯತ್ಯಾಸವಿದೆ. ಸಾಮ್ರಾಟ್ ಯಂತ್ರದ ಸನ್ ಡಯಲ್ (ಸೂರ್ಯನ ಬೆಳಕಿನಿಂದ ಸಮಯ ಹೇಳುವ ಗಡಿಯಾರ)ನ ನೆರಳು ಪ್ರತಿ ಸೆಕೆಂಡಿಗೆ ಒಂದು ಮಿ.ಮೀ.ಗಳಷ್ಟು ದೂರ ಚಲಿಸುತ್ತದೆ. ಇಂದಿಗೂ ಹಲವು ಜ್ಯೋತಿಷಿಗಳಿಂದ ಮದುವೆ ಮುಂಜಿಯಂತಹ ಶುಭ ಕಾರ್ಯಗಳಿಗೆ ಮುಹೂರ್ತವನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಜಂತರ್-ಮಂತರ್ ಉಪಯೋಗಿಸಲ್ಪಡುತ್ತವೆ.
ಇಂತಹ ಅದ್ಭುತ ಭಾರತದಲ್ಲಿ ನಿರ್ಮಾಣವಾಗಿದ್ದು ಇಡೀ ಜಗತ್ತಿನಲ್ಲಿ ಇದೇ ಮೊದಲು. ಇದು ಭಾರತದ ವೈಭವ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.