×
Home About Us Advertise With s Contact Us

ಒಂದೇ ದಿನದಲ್ಲಿ ಬಿಡಿಗಾಸು ಖರ್ಚಿಲ್ಲದೆ ನಡೆದ ಅದ್ಬುತ !

ಇಂದಿನ ಇಂಟರ್ನೆಟ್, ಸಾಮಾಜಿಕ ಮಾಧ್ಯಮಗಳ ಹೊರತಾಗಿ ನೋಡಿದರೆ ಈ ಸ್ನೇಹಿತರ ದಿನ ಎನ್ನುವುದು ನನಗೆ ವಿಶೇಷವಾಗಿ ಕಾಣಿಸಲೇ ಇಲ್ಲ. ಸ್ನೇಹ, ಸ್ನೇಹಿತರು ನಮ್ಮ ಉಸಿರಾಗಿರುವಾಗ ಅದಕ್ಕೊಂದು ದಿನ ಬೇಕಾ ಎಂಬ ಪ್ರಶ್ನೆ ಪದೆ ಪದೇ ಕಾಡುತ್ತಿದ್ದಾಗ ಇಂದು ಭಾನುವಾರ ಕೆಲವು ಚನ್ನಪಟ್ಟಣದ ಸ್ನೇಹಿತರು ಬಿ ವಿ ಹಳ್ಳಿಯ ಪಾಳುಬಿದ್ದ ಕಲ್ಯಾಣಿಯ ಸ್ವಚ್ಛತಾ ಕೆಲಸವನ್ನು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5ಗಂಟೆಯವರೆಗೆ ನಿರಂತರವಾಗಿ ಶ್ರಮಿಸಿ ಕಲ್ಯಾಣಿಗೆ ಜೀವ ಕಳೆ ತುಂಬಿದ್ದಾರೆ.

ಕೇವಲ 15 ಯುವಕರು ಭಾನುವಾರ ಬೆಳಿಗ್ಗೆ ನಗರ ವಾಸಸ್ಥಾಗಳಿಂದ ಬಿ.ವಿ ಹಳ್ಳಿಗೆ ತಲುಪಿ ಎಂಟು ಗಂಟೆಗೆ ಸರಿಯಾಗಿ ಪೊದೆ, ಕಲ್ಲು, ಗಿಡ, ಪ್ಲಾಸ್ಟಿಕ್ ತ್ಯಾಜ್ಯದಿಂದ ಪಾಳು ಬಿದ್ದಂತೆ ಇದ್ದ ಕಲ್ಯಾಣಿಯು ಸಂಜೆ ಐದರ ವೇಳೆಗೆ ಜೀವಕಳೆ ಯೊಂದಿಗೆ ನಳನಳಿಸಿತು. ಇದು ಬಿ ವಿ ಹಳ್ಳಿ ಭಾಗದ ಯುವಕರಿಗೆ ತಮ್ಮ ಗ್ರಾಮದ ನೆಲ-ಜಲ, ಐತಿಹಾಸಿಕ ಮತ್ತು ಪ್ರಾಕೃತಿಕ ತಾಣಗಳನ್ನು ವಿಶೇಷವಾಗಿ ನೋಡಿಕೊಳ್ಳುವ ಪ್ರೇರಣೆ ಒದಗಿಸಿಕೊಟ್ಟಿದೆ.

ಯುವಾ ಬ್ರಿಗೇಡ್ ಮತ್ತು ಮಾತೃಭೂಮಿ ಫೌಂಡೇಶನ್ ನ ಈ ಕಲ್ಯಾಣಿ ಸ್ವಚ್ಛತಾ ಕೆಲಸವನ್ನು ಮುಂದಿನ ದಿನಗಳಲ್ಲಿ ರಾಮನಗರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಇರುವ ಪಾಳುಬಿದ್ದ ಕಲ್ಯಾಣಿಗಳನ್ನು ಇದೇ ರೀತಿ ಪುನರುಜ್ಜೀವನಗೊಳಿಸುವ ಧ್ಯೇಯದೊಂದಿಗೆ ಈ ಕೈಂಕರ್ಯ ಪ್ರಾರಂಭಿಸಿದ್ದಾರೆ. ಕೆಲಸಗಳೇ ನಡೆಯದಿದ್ದರೂ ನಡೆದಿದೆ ಎಂಬಂತೆ ಫೋಟೊ ಮಾಡಿಸಿ ಸರ್ಕಾರದ ಹಣ ಲಪಟಾಯಿಸುವ ಪ್ರಕರಣಗಳ ನಡುವೆ ನೆಲ-ಜಲ, ಐತಿಹಾಸಿಕ ಮತ್ತು ಪ್ರಾಕೃತಿಕ ಅರಿವನ್ನು ಪ್ರಾಯೋಗಿಕವಾಗಿ ಯಾವುದೇ ಹಣ ಇಲ್ಲದೆ ಯುವಕರನ್ನು ಜಾಗೃತಗೊಳಿಸುವ ಇಂತಹ ಮಹತ್ ಕಾರ್ಯಗಳು ನಿಜವಾಗಿಯೂ ರಾಷ್ಟ್ರ ನಿರ್ಮಾಣದ ಅಡಿಗಲ್ಲುಗಳು ಎಂದು ಹೇಳಬಹುದು..

ಇದು ಯುವಕರು ತಮ್ಮ ಹಳ್ಳಿಯ ಸಾರ್ವಜನಿಕ, ಐತಿಹಾಸಿಕ, ಪ್ರಾಕೃತಿಕ ಸ್ಥಳಗಳನ್ನು ಸ್ವಚ್ಛವಾಗಿ ರೂಪಿಸಿಕೊಳ್ಳಲು ಪ್ರೇರಣೆ. ಈ ಕೆಲಸದಲ್ಲಿ ಪಾಲ್ಗೊಂಡ ಯುವಾ ಬ್ರಿಗೇಡ್, ಮಾತೃಭೂಮಿ ಫೌಂಡೇಶನ್ ನ ಸ್ವಯಂ ಸೇವಕರಿಗೆ ಅಭಿನಂದನೆಗಳು. ಇಂತಹ ನೆಲ-ಜಲ , ಪ್ರಕೃತಿ ಸಂರಕ್ಷಣಾ ರಚಾನಾತ್ಮಕ ಕೆಲಸಗಳು ಯಾರು ಮಾಡಿದರೂ ನಾವು ಪಾಲ್ಗೊಳ್ಳೋಣ, ಪ್ರೋತ್ಸಾಹಿಸೋಣ.

ವರದಿ: ಧನಂಜಯ, ರಾಮನಗರ

 

Recent News

Back To Top
error: Content is protected !!