ಆಂಗ್ಲ ಶಿಶುಗೀತೆಗಳಲ್ಲೇಕೆ ಪ್ರಾದೇಶಿಕತೆಯ ಕೊರತೆ?
ಮಕ್ಕಳು ಅಮ್ಮ, ಅಪ್ಪ ಎನ್ನುವ ತೊದಲ್ನುಡಿಗಳನ್ನು ಕಲಿಯುತ್ತಿದ್ದಂತೆಯೇ ನಾವು ಅವರಿಗೆ ಕಲಿಸುವುದೇ ಪ್ರಾಸಬದ್ಧ ಶಿಶು ಗೀತೆಗಳನ್ನು. ಹೇಳಲು ಸುಲಭವಾಗಿರುವ ಮತ್ತು ಕೇಳಲು ತುಂಬಾ ಮಧುರವಾಗಿರುವ, ಮಕ್ಕಳು ಅತಿಯಾಗಿ ಇಷ್ಟಪಡುವ ನಾಯಿ, ಬೆಕ್ಕು, ಆನೆ, ಇಲಿ, ಅಪ್ಪ, ಅಮ್ಮ, ಅಜ್ಜ, ಅಜ್ಜಿ, ಚಂದಿರ, ನಕ್ಷತ್ರ, ಮರ, ಗಿಡಗಳ ಮೇಲೆ ರಚಿತವಾಗಿರುವ ಕಡಿಮೆ ಸಾಲುಗಳುಳ್ಳ ಶಿಶು ಗೀತೆಗಳು ಕೇವಲ ಮನರಂಜನೆಯಷ್ಟೇ ಅಲ್ಲದೆ ಆಗ ತಾನೇ ಕುತೂಹಲದ ಕಣ್ಣುಗಳಿಂದ ಈ ಜಗತ್ತನ್ನು ನೋಡುತ್ತಿರುವ ಮಗುವಿಗೆ ಪ್ರಪಂಚ ಜ್ಞಾನವನ್ನೂ ಕಲಿಸುತ್ತವೆ. ಕನ್ನಡದಲ್ಲಂತೂ ಅತ್ಯದ್ಭುತ ಶಿಶುಗೀತೆಗಳು ಸಾಕಷ್ಟಿವೆ. ಅಷ್ಟೇ ಸೊಗಸಾದ ಹೊಸ ಹೊಸ ಶಿಶು ಗೀತೆಗಳೂ ರಚನೆಯಾಗುತ್ತಲೂ ಇವೆ.
ಬೇಕೇ ಬೇಕೇ ತರಕಾರಿ ತರತರದೂಟಕೆ ರುಚಿಕಾರಿ… ಎನ್ನುವ ಶಿಶು ಗೀತೆಯು ಮಗುವಿಗೆ ವಿವಿಧ ತರಕಾರಿಗಳ ಹೆಸರುಗಳು, ಅವುಗಳ ಬಣ್ಣ, ಅವುಗಳ ರುಚಿಯ ಬಗ್ಗೆಯಷ್ಟೇ ಅಲ್ಲದೆ ಉತ್ಪಾದಕರು, ಮಾರಾಟಗಾರರು ಹಾಗೂ ಗ್ರಾಹಕರ ನಡುವಿನ ಸಂಬಂಧಗಳ ಪರಿಚಯವನ್ನೂ ಮಾಡಿಸುತ್ತದೆ.
ಆನೆ ಬಂತು ಆನೆ ಯಾವೂರಾನೆ ಬಿಜಾಪುರದಾನೆ ಇಲ್ಲಿಗ್ಯಾಕೆ ಬಂತು… ಎನ್ನುವ ಶಿಶು ಗೀತೆಯು ಆನೆಯಂತಹಾ ದೈತ್ಯ ಪ್ರಾಣಿಯನ್ನು ಬಳಸಿಕೊಂಡು ಮಕ್ಕಳನ್ನು ರಂಜಿಸುವುದರ ಜೊತೆಗೆ ನಮ್ಮದೇ ರಾಜ್ಯದ ಊರೊಂದರ ಹೆಸರನ್ನು ಪರಿಚಯಿಸಿ ಒಂದೂರಿನಿಂದ ಇನ್ನೊಂದೂರಿಗೆ ಪ್ರಯಾಣಿಸಲು ಇರುವ ಕಾರಣಗಳ ಕುರಿತು ಚಿಂತನೆಗೆ ಹಚ್ಚುತ್ತದೆ. ಮುಂದೆ ಆ ಮಗು ಬಿಜಾಪುರದ ಜಾಗದಲ್ಲಿ ತನ್ನದೇ ಅಜ್ಜಿಯ/ಚಿಕ್ಕಪ್ಪನ/ದೊಡ್ಡಮ್ಮನ ಊರಿನ ಹೆಸರು ಸೇರಿಸಿ ಹಾಡತೊಡಗುತ್ತದೆ. ಮಗುವಿನ ಸೃಜನಶೀಲತೆ ಅಲ್ಲಿಂದಲೇ ಪ್ರಾರಂಭವಾಗುತ್ತದೆ.
ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ, ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕೂ… ಎನ್ನುವ ಶಿಶು ಗೀತೆಯು ಸಾಕು ಪ್ರಾಣಿಗಳ ಜೊತೆಗಿನ ಸಂಬಂಧ ಮತ್ತು ಆತ್ಮೀಯತೆಗಳ ಬಗ್ಗೆ ಆ ಮಗುವಿಗೆ ತಿಳಿಸಿಕೊಡುತ್ತದೆ. ಅವು ನಮಗೆ ಹೇಗೆ ಉಪಕಾರಿಯಾಗಿವೆ ಎನ್ನುವ ಬಗ್ಗೆಯೂ ಆ ಪುಟ್ಟ ಮಗುವಿಗೆ ಅರಿವು ಮೂಡಿಸುತ್ತದೆ.
ಉಂಡಾಡಿ ಗುಂಡ ಹತ್ತು ಲಾಡು ತಿಂದ ಹೊಟ್ಟೆ ನೋವು ಎಂದ… ಎನ್ನುವ ಶಿಶು ಗೀತೆಯು ಕೂಡಾ ಮನರಂಜನೆಯ ಜೊತೆಗೆ ಅತಿಯಾದ ಆಹಾರದಿಂದಾಗುವ ಪರಿಣಾಮದ ಬಗ್ಗೆ ಎಚ್ಚರಿಸುತ್ತದೆ. ಗುಂಡನ ಜಾಗದಲ್ಲಿ ತನ್ನನ್ನೇ ಅಥವಾ ತನ್ನ ಓರಗೆಯ ಇತರ ಯಾವುದೇ ಮಗುವನ್ನು ಕಲ್ಪಿಸಿಕೊಳ್ಳುತ್ತದೆ. ಲಾಡಿನ ಜಾಗದಲ್ಲಿ ಇತರ ತಿಂಡಿಗಳನ್ನೂ ಕಲ್ಪಿಸಿಕೊಳ್ಳಬಹುದು. ಆಹಾರದ ವಿಚಾರದಲ್ಲಿ ತನಗೆ ತಾನೇ ಒಂದಷ್ಟು ನಿರ್ಬಂಧಗಳನ್ನು ಹಾಕಿಕೊಳ್ಳುವ ಮೂಲಕ ಮಗು ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂದಾಗಬಹುದು.
ನಮ್ಮ ಮನೆಯಲೊಂದು ಪುಟ್ಟ ಪಾಪವಿರುವುದು, ತೋಟಕೆ ಹೋಗೋ ತಿಮ್ಮ ತೋಳ ಬಂದೀತಮ್ಮಾ… ಹೀಗೆ ಹಲವಾರು ಕನ್ನಡ ಶಿಶು ಗೀತೆಗಳು ಪುಟ್ಟ ಮಕ್ಕಳನ್ನು ರಂಜಿಸುತ್ತಲೇ ಸುತ್ತ ಮುತ್ತಲಿನ ಪರಿಚಯ, ಆಚಾರ ವಿಚಾರಗಳ ಪರಿಚಯ, ಕೆಲಸ ಕಾರ್ಯಗಳ ಪರಿಚಯ ಮಾಡಿಕೊಡುತ್ತವೆ.
ಆದರೆ ಇದೀಗ ಮಕ್ಕಳಿಗೆ ಕನ್ನಡ ಕಲಿಸುವ ಆಸಕ್ತಿ ಬಹುತೇಕರಲ್ಲಿಲ್ಲ. ಏಕೆಂದರೆ ಅವರಂದುಕೊಂಡಂತೆ ಕನ್ನಡ ಅನ್ನ ಕೊಡುವ ಭಾಷೆಯಲ್ಲ! ಆಂಗ್ಲ ಭಾಷೆ ಮಾತ್ರ ಏಕೈಕ ಅನ್ನ ಕೊಡುವ ಭಾಷೆ. ಇದನ್ನು ಯಾವ ಸರ್ಕಾರವೂ ಅಲ್ಲಗಳೆದಿಲ್ಲ. ಹಾಗೆಯೇ ಕನ್ನಡವನ್ನು ಅನ್ನ ಕೊಡುವ ಭಾಷೆಯನ್ನಾಗಿ ಮಾಡುವುದಾಗಿ ಯಾವ ಸರ್ಕಾರಗಳೂ ಆಶ್ವಾಸನೆ ಕೊಟ್ಟಿಲ್ಲ. ಹಾಗಾಗಿಯೇ ಎರಡು ವರ್ಷದ ಪುಟ್ಟ ಮಗುವಿಗೆ ಕೂಡಾ ಅನ್ನ ಕೊಡುವ ಭಾಷೆಯಾದ ಆಂಗ್ಲ ಭಾಷೆಯ ಮೂಲಕವೇ ಶಿಕ್ಷಣ ಪ್ರಾರಂಭವಾಗುತ್ತದೆ. ಬದುಕು ಅವರದ್ದಾಗಿರುವಾಗ ಅನ್ನ ಕೊಡುವ ಭಾಷೆಯಲ್ಲದ ಕನ್ನಡ ಮಾಧ್ಯಮದಲ್ಲೇ ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ಎಂದು ಪೋಷಕರಿಗೆ ಹೇಳುವ ಹಕ್ಕನ್ನು ಬಹುಷಃ ಸರ್ಕಾರಗಳು ಕೂಡಾ ಕಳೆದುಕೊಂಡುಬಿಟ್ಟಿವೆ.
ಆದರೆ ಒಂದನ್ನಂತೂ ಕೇಳಬಹುದು. ಅನ್ನ ಕೊಡುವ ಭಾಷೆ ಎನ್ನುವ ಏಕೈಕ ಕಾರಣಕ್ಕಾಗಿ ಮಕ್ಕಳಿಗೆ ಆಂಗ್ಲ ಭಾಷೆಯ rhymes ಗಳನ್ನು ಕಲಿಸುವಾಗ ಅವುಗಳನ್ನು ಇಂಗ್ಲೆಂಡಿನಲ್ಲಿ ಬರೆದಿಟ್ಟಂತೆ ಯಥಾವತ್ತಾಗಿ ಕಲಿಸಬೇಕೆಂದೇನೂ ಇಲ್ಲ. ಮಕ್ಕಳಿಗೆ ಆಂಗ್ಲ ಭಾಷೆಯನ್ನು ಕಲಿಸುವುದೇ ಉದ್ದೇಶವಾಗಿದ್ದರೆ ಆಂಗ್ಲ ಭಾಷೆಯಲ್ಲಿ ಭಾರತೀಯರು ಬರೆದ rhymesಗಳನ್ನೂ ಕಲಿಸಬಹುದು. ಅದೂ ಸಾಧ್ಯವಾಗದಿದ್ದರೆ ಯಾವುದೋ ದೇಶದಲ್ಲಿ ಅಲ್ಲಿಗೆ ತಕ್ಕಂತೆ ರಚಿತವಾದ ಶಿಶುಗೀತೆಗಳಲ್ಲಿ ಈ ದೇಶದಲ್ಲಿ ಅಪ್ರಸ್ತುತವೆನ್ನಿಸಬಹುದಾದ ಸಂಗತಿಗಳನ್ನು ತೆಗೆದು ಆ ಜಾಗಕ್ಕೆ ಇಲ್ಲಿನ ಸಂಗತಿಗಳನ್ನು ಸೇರಿಸುವ ಮೂಲಕ ಈ ದೇಶದ ಮಗು ಆ ಶಿಶುಗೀತೆಗಳಲ್ಲಿ ತನ್ನನ್ನು, ತನ್ನ ಸುತ್ತಲಿನ ಪರಿಸರವನ್ನು ಕಂಡುಕೊಳ್ಳುವಂತೆಯೂ ಮಾಡಬಹುದು.
ಅತೀ ಹೆಚ್ಚು ಆಂಗ್ಲ ಭಾಷಾ ತಜ್ಞರುಗಳಿರುವ, ಬರಹಗಾರರಿರುವ, ಆಂಗ್ಲ ಭಾಷಾ ಸ್ಪರ್ಧೆಗಳಲ್ಲಿ ಆಂಗ್ಲ ಭಾಷಿಕರನ್ನೇ ಮೀರಿಸಿದ ಉದಾಹರಣೆಗಳಿರುವ ನಮ್ಮ ದೇಶದಲ್ಲಿ ಮೂರ್ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಕಲಿಸಬಹುದಾದ ಚಿಕ್ಕ ಚಿಕ್ಕ ಶಿಶುಗೀತೆಗಳನ್ನು ಇದುವರೆಗೂ ಯಾರೂ ಬರೆದು ಜನಪ್ರಿಯಗೊಳಿಸಿಲ್ಲದಿರುವುದು ನಿಜಕ್ಕೂ ಆಶ್ಚರ್ಯವೇ ಸರಿ.
ಉದಾಹರಣೆಗಾಗಿ ನಮ್ಮ ಮಕ್ಕಳಿಗೆ ಈಗ ಕಲಿಸಲಾಗುತ್ತಿರುವ ಒಂದಷ್ಟು ಜನಪ್ರಿಯ rhymesಗಳನ್ನೇ ತೆಗೆದುಕೊಳ್ಳೋಣ.
ಓಲ್ಡ್ ಮೆಕ್ಡೊನಾಲ್ಡ್ ಹ್ಯಾಡ್ ಎ ಫಾರ್ಮ್… ಇಲ್ಲಿ ಓಲ್ಡ್ ಮೆಕ್ಡೊನಾಲ್ಡ್ ಯಾರು? ಆತ ನಮ್ಮ ನಡುವಿದ್ದಾನೆಯೇ? ಆ ಹೆಸರಿನ ಬದಲು ಭಾರತೀಯ ವ್ಯಕ್ತಿಯೊಬ್ಬನ ಹೆಸರನ್ನೇ ಬಳಸಿಕೊಳ್ಳಬಹುದಲ್ಲವೇ?
ಒನ್ ಎ ಪೆನ್ನಿ ಟು ಎ ಪೆನ್ನಿ ಹಾಟ್ ಕ್ರಾಸ್ ಬನ್ಸ್… ಹಾಟ್ ಕ್ರಾಸ್ ಬನ್ಸ್ ಎನ್ನುವುದನ್ನು ಬೀದಿಯಲ್ಲಿ ಮಾರಿಕೊಂಡು ಬರುತ್ತಿರುವುದು ನಮ್ಮ ಮಕ್ಕಳು ಕಾಣಲಾದೀತೇ? ಅದರ ಬದಲು ನಮ್ಮದೇ ಊರಿನಲ್ಲಿ ಮಾರುತ್ತಾ ಬರುವ ಬೊಂಬಾಯಿ ಮಿಠಾಯಿಯನ್ನೋ, ಮಂಡಕ್ಕಿಯನ್ನೋ, ಕಡಲೆ ಕಾಯಿಯನ್ನೋ ಸೇರಿಸಬಹುದಲ್ಲವೇ? ನಮ್ಮ ದೇಶದಲ್ಲಿ ಚಲಾವಣೆಯಲ್ಲೇ ಇಲ್ಲದ ಪೆನ್ನಿ ಎನ್ನುವ ಬದಲು ಪೈಸೆ ಅಥವಾ ರೂಪಾಯಿ ಎಂದು ಬಳಸಿಕೊಳ್ಳಬಹುದಲ್ಲವೇ?
ಲಂಡನ್ ಬ್ರಿಡ್ಜ್ ಈಸ್ ಫಾಲ್ಲಿಂಗ್ ಡೌನ್ ಮೈ ಫೇರ್ ಲೇಡಿ… ಇಲ್ಲಿ ಲಂಡನ್ ಸೇತುವೆಯ ಬದಲು ವಿಶಾಲ ಭಾರತದಲ್ಲೇ ಇರುವ ಯಾವುದಾದರೂ ಅದ್ಭುತ ವಿನ್ಯಾಸವನ್ನು ಬಳಸುವ ಮೂಲಕ ಮಗುವಿಗೆ ಭಾರತದ ಪರಿಚಯ ಮಾಡಿಕೊಡಬಹುದಲ್ಲವೇ? ಹಾಗೆಯೇ ಮೈ ಫೇರ್ ಲೇಡಿ ಎನ್ನುತ್ತಾ ನಮ್ಮ ಪ್ರಜಾ ಪ್ರಭುತ್ವ ದೇಶದ ಮಕ್ಕಳು ಯಾರಿಗೆ ವರದಿ ಒಪ್ಪಿಸುವುದು?
ಜಾಕ್ ಅಂಡ್ ಜಿಲ್ ವೆಂಟ್ ಅಪ್ ದ ಹಿಲ್… ಜಾಕ್ ಮತ್ತು ಜಿಲ್ ಎನ್ನುವ ಹೆಸರಿನ ಎಷ್ಟು ಮಕ್ಕಳು ನಮ್ಮ ಮಕ್ಕಳ ಸಮೀಪದಲ್ಲಿದ್ದಾರೆ? ಜಾಕ್ ಮತ್ತು ಜಿಲ್ ಬದಲು ಅವರ ಸುತ್ತಮುತ್ತಲೇ ಇರಬಹುದಾದ ಕಿಟ್ಟಿ, ಕುಸುಮ, ರಾಜ, ರಾಣಿ, ಕೀರ್ತಿ, ಸ್ಫೂರ್ತಿ ಎನ್ನುವ ಯಾವುದಾದರೂ ಹೆಸರನ್ನಾದರೂ ಸೇರಿಸಬಹುದಲ್ಲ. ಆ ಮೂಲಕ ತಾವು ಕಲಿತ ಆ ಶಿಶು ಗೀತೆಯಲ್ಲಿ ತಮ್ಮದೇ ಓರಗೆಯವರನ್ನು ಕಲ್ಪಿಸಿಕೊಳ್ಳುವ ಅವಕಾಶ ನೀಡಬಹುದಲ್ಲ.
ಪುಸ್ಸಿಕ್ಯಾಟ್ ಪುಸ್ಸಿಕ್ಯಾಟ್ ವೇರ್ ಹ್ಯಾವ್ ಯು ಬೀನ್? ಐ ಹ್ಯಾವ್ ಬೀನ್ ಟು ಲಂಡನ್ ಟು ಲುಕ್ ಅಟ್ ದ ಕ್ವೀನ್… ಭಾರತದಲ್ಲಿರುವ ನನ್ನ ಮಗುವಿನ ಮುದ್ದು ಬೆಕ್ಕು ಲಂಡನ್ ಅರಮನೆಗೇ ಏಕೆ ಹೋಗಬೇಕು? ಹಾಗೊಂದು ವೇಳೆ ಹೋಗಲೇ ಬೇಕೆಂದಿದ್ದರೆ ಇಂದಿಗೂ ದೇಶದ ಅತೀ ಹೆಚ್ಚು ಪ್ರವಾಸಿಗರು ಭೇಟಿ ಕೊಡುವ ಸ್ಥಳಗಳಲ್ಲೊಂದಾದ ಮೈಸೂರು ಆರಮನೆಗೆ ಕೂಡಾ ಹೋಗಬಹುದಲ್ಲವೇ? ಆ ಮೂಲಕ ಬೆಕ್ಕಿನ ಮೂಲಕ ನಮ್ಮ ದೇಶದ ಇತಿಹಾಸವನ್ನು ಹೇಳಿಕೊಡಲು ಸಾಧ್ಯವಿದೆಯಲ್ಲವೇ?
ಕರ್ಲಿ ಹೇರ್ ವೆರಿ ಫೇರ್, ಐಸ್ ಆರ್ ಬ್ಲೂ ಲವ್ಲೀ ಟೂ… ಇದನ್ನು ಕಲಿತ ನಮ್ಮೂರಿನ ಮಕ್ಕಳು ತಮ್ಮ ಸುತ್ತ ಮುತ್ತ ನೀಲಿ ಕಣ್ಣಿನವರನ್ನು ಹುಡಿಕಿದರೆ ಎಷ್ಟು ಜನ ಸಿಗಬಹುದು? ಭಾರತೀಯರಲ್ಲಿ ನೀಲಿ ಕಣ್ಣನ್ನು ಹೊಂದಿರುವ ಮಕ್ಕಳೆಷ್ಟು? ಹೊಂಬಣ್ಣದ ಕೂದಲಿರುವ ಮಕ್ಕಳೆಷ್ಟು? ಅಂದರೆ ತಾನು ಹೊಗಳುತ್ತಿರುವುದು ಯಾವುದೋ ವಿದೇಶೀ ಮಗುವಿನ ಸೌಂಧರ್ಯವನ್ನೇ ಹೊರತೂ ನನ್ನ ಸುತ್ತಮುತ್ತಲಿರುವ ಯಾವುದೋ ಮಗುವಿನದ್ದಲ್ಲ ಎಂದು ಆ ಮಗುವಿಗೂ ಒಮ್ಮೆಯಾದರೂ ಅನ್ನಿಸಲೇಬೇಕಲ್ಲವೇ?
ಕೇವಲ ಇವಿಷ್ಟೇ ಅಲ್ಲ. ನಾವು ಮಕ್ಕಳಿಗೆ ಹೇಳಿಕೊಡುವ ಬಹುತೇಕ rhymesಗಳು ನಮ್ಮ ದೇಶದ್ದೇ ಅಲ್ಲ. ಅವುಗಳಲ್ಲಿ ಪ್ರಾದೇಶಿಕತೆಯ ಲವಲೇಶವೂ ಇಲ್ಲ.
ಹಾಗಾದರೆ ಕೇವಲ ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಕಲಿಸಲು ನಾಲ್ಕು ಸಾಲುಗಳ ಆಂಗ್ಲ ಶಿಶುಗೀತೆಗಳನ್ನು ಬರೆಯುವ ಸಾಮರ್ಥ್ಯ ಕೂಡಾ ನಮ್ಮ ದೇಶದಲ್ಲಿ ಯಾರೊಬ್ಬರಿಗೂ ಇಲ್ಲ ಎಂದು ಒಪ್ಪಿಕೊಳ್ಳಬೇಕೇ ಅಥವಾ ಆಂಗ್ಲ ಭಾಷಾ ಕಲಿಕೆಯೆಂದರೆ ಕೇವಲ ಭಾಷೆಯ ಕಲಿಕೆಯಷ್ಟೇ ಅಲ್ಲದೆ ಇಂಗ್ಲೆಂಡಿನ ಮಗುವೊಂದು ಅಲ್ಲಿ ಕುಳಿತು ಏನು ಕಲಿಯುತ್ತಿದೆಯೋ, ಏನನ್ನು ತಿನ್ನುತ್ತಿದೆಯೋ, ಏನನ್ನು ತೊಡುತ್ತಿದೆಯೋ, ಏನನ್ನು ಮೆಚ್ಚುತ್ತಿದೆಯೋ, ಯಾರನ್ನು ಹೊಗಳುತ್ತಿದೆಯೋ, ಯಾರನ್ನು ಯಾವ ಹೆಸರಿನಿಂದ ಕರೆಯುತ್ತಿದೆಯೋ, ಯಾವ ಆಟವನ್ನಾಡುತ್ತಿದೆಯೋ ಅದನ್ನೇ ಯಥಾವತ್ತಾಗಿ ಇಲ್ಲಿ ನಮ್ಮ ಮಗುವೂ ಅನುಕರಿಸುವಂತೆ ಮಾಡುವುದು ಕೂಡಾ ಆಂಗ್ಲ ಭಾಷೆಯ ಕಲಿಕೆಯ ಒಂದು ಭಾಗವೇ?
ಒಹ್! ಕ್ಷಮಿಸಿ. ಬರೀತಾ ಬರೀತಾ ಸಮಯ ಹೋಗಿದ್ದೇ ತಿಳೀಲಿಲ್ಲ. ಕಾಕ್ ಅ ಡೂಡಲ್ ಡೂ… ಎಂದು ಕೂಗೋ ಹುಂಜ ಎಲ್ಲಿದೆ ತೋರಿಸು ಅಂತ ನನ್ನ ಮಗಳು ಒಂದೇ ಸಮನೆ ಹಠ ಮಾಡ್ತಾ ಇದ್ದಾಳೆ. ನಿಮ್ಮ ಮನೆಯ ಸಮೀಪವೆನಾದರೂ ಆ ರೀತಿ ಕೂಗೋ ಹುಂಜ ಇದ್ದರೆ ದಯವಿಟ್ಟು ತಿಳಿಸಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.