ಶ್ರಿನಿಧಿ ಪ್ರೊಡಕ್ಷನ್ಸ್ ರವರು 1972 ರಲ್ಲಿ “ಬಂಗಾರದ ಮನುಷ್ಯ” ಎಂಬ ಸಿನಿಮಾ ಬಿಡುಗಡೆ ಮಾಡಿದರು. ರಾಜ್ ಕುಮಾರ್, ಭಾರತಿ, ಬಾಲಕೃಷ್ಣ, ಎಂ.ಪಿ.ಶಂಕರ್, ಶ್ರೀನಾಥ್, ವಜ್ರಮುನಿ, ಆರತಿ, ಬಿ.ವಿ.ರಾಧ, ಆದವಾನಿ ಲಕ್ಷ್ಮಿದೇವಿ, ದ್ವಾರಕೀಶ್ ಮುಂತಾದವರು ನಟಿಸಿರುತ್ತಾರೆ. ಟಿ.ಕೆ.ರಾಮರಾವ್ ರವರ ಬಂಗಾರದ ಮನುಷ್ಯ ಕಾದಂಬರಿ ಆಧಾರಿತ ಸಿನಿಮಾಗೆ ಹುಣಸೂರು ಕೃಷ್ಣಮೂರ್ತಿ ರವರು ಸಂಭಾಷಣೆ ಬರೆದಿದ್ದಾರೆ. ಹುಣಸೂರು ಕೃಷ್ಣಮೂರ್ತಿ, ಚಿ.ಉದಯಶಂಕರ್, ಜಯಗೋಪಾಲ್, ವಿಜಯನಾರಸಿಂಹ ರವರು ಗೀತೆಗಳನ್ನು ರಚಿಸಿದ್ದಾರೆ. ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮೋತಿ ರವರು ಗೀತೆಗೆ ದನಿಯಾಗಿದ್ದಾರೆ. ಈ ಅದ್ಭುತ ಸಿನಿಮಾವನ್ನು ಗೋಪಾಲ್ ಲಕ್ಷ್ಮಣ್ ರವರ ನಿರ್ಮಾಣದಲ್ಲಿ ಸಿದ್ದಲಿಂಗಯ್ಯ ರವರು ಚಿತ್ರಕತೆ ಹಾಗೂ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಜಿ.ಕೆ.ವೆಂಕಟೇಶ್ ರವರ ಸಂಗೀತಕ್ಕೆ ಹಾಗೂ ಹುಣಸೂರು ಕೃಷ್ಣಮೂರ್ತಿ ರವರ ಸಾಹಿತ್ಯವು ಜೊತೆಯಾಗಿ “ನಗುನಗುತಾ ನಲಿ ನಲಿ” ಎಂಬ ಗೀತೆಯೊಂದಿಗೆ ತೆರೆಮೇಲೆ ರಾಜಕುಮಾರ್ ರವರು ಹಚ್ಚಹಸಿರಿನ ಮಲೆನಾಡಿನ ಸೊಬಗನ್ನು ಹಾಡಿ ಹೊಗಳುತ್ತಾರೆ. ಹೀಗೆ ಹಾಡುತ್ತಾ, ಕುಣಿಯುತ್ತಾ ಬಂದ ರಾಜೀವನಿಗೆ (ರಾಜ್ ಕುಮಾರ್) ತನ್ನ ಭಾವನ ಸಾವು ತುಂಬಾ ನೋವನುಂಟು ಮಾಡುತ್ತೆ. ತನ್ನ ಅಕ್ಕನ (ಆದವಾನಿ ಲಕ್ಷ್ಮಮ್ಮ) ಸಂಸಾರದ ಜವಾಬ್ದಾರಿಯನ್ನು ತಾನೇ ಹೊರಲು ತೀರ್ಮಾನಿಸಿದಾಗ, ಅಣ್ಣ (ಅಂಕಲ್ ಲೋಕನಾಥ್) ಯಾವುದೇ ರೀತಿಯ ಸಹಾಯ ಮಾಡಲು ಮುಂದಾಗುವುದಿಲ್ಲ. ಹೃದಯವಂತಿಕೆಯಲ್ಲೂ ಸಹ ಸಿರಿವಂತರಾದ ಊರಿನ ಹಿರಿಯರಾದ ರಾಚೋಟಪ್ಪ (ಬಾಲಕೃಷ್ಣ) ರವರು ರಾಜೀವನಿಗೆ ಆರ್ಥಿಕ ಸಹಾಯ ಮಾಡುತ್ತಾರೆ.
ಅಕ್ಕನ ಮಕ್ಕಳಾದ ಕೇಶವ (ವಜ್ರಮುನಿ) ಹಾಗೂ ಚಕ್ರಪಾಣಿ (ಶ್ರೀನಾಥ್) ರವರನ್ನು ತನ್ನ ಭಾವನ ಆಸೆಯಂತೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ಕಳುಹಿಸುತ್ತಾನೆ. ಒಂದಷ್ಟು ಜಮೀನು ಖರೀದಿಸಿ, ಹೊಸದಾಗಿಯೇ ಬಿತ್ತುಳುವುದನು ಕಲಿತು ರೈತನಾಗಿ, ಬೆವರು ಸುರಿಸಿ ದುಡಿದು ಉತ್ತಮವಾದ ಬೆಳೆ ಬೆಳೆಯುತ್ತಾನೆ. ಸಾಲ ತೀರಿಸಿ, ಮನೆಯನ್ನು ಕಟ್ಟಿಸಿ ಊರಿನಲ್ಲಿ ಗೌರವಯುತವಾಗಿ ಬಾಳುವಂತೆ ಅಕ್ಕನ ಸಂಸಾರವನ್ನು ಕಾಪಾಡಿಕೊಂಡು ಬರುತ್ತಾನೆ. ಅಂತೂ ಇಂತೂ ಕೇಶವ-ಚಕ್ರಪಾಣಿ ಚೆನ್ನಾಗಿ ಓದಿ, ಡಾಕ್ಟರ್ – ಇಂಜಿನಿಯರ್ ಆಗುತ್ತಾರೆ. ಕಾರು, ಬಂಗಲೆ, ವಿದ್ಯಾವಂತರಾದ ಇವರನ್ನು ಹುಡುಕಿಕೊಂಡು ಕಷ್ಟಕಾಲದಲ್ಲಿ ದೂರ ಸರಿದಿದ್ದ ಅಣ್ಣ ತನ್ನ ಕುಟುಂಬ ಸಮೇತ ತಂಗಿಯ ಮನೆಗೆ ಬರುತ್ತಾನೆ. ಕೊನೆಗೆ ಕೇಶವನ ಆಸೆಯಂತೆ ಅಕ್ಕ ಹಾಗೂ ತನಗಿಷ್ಟವಿರದಿದ್ದರೂ ಕೇಶವನಿಗೆ ತನ್ನ ಅಣ್ಣನ ಮಗಳನ್ನು ಕೊಟ್ಟು ಮದುವೆ ಮಾಡಲು ಒಪ್ಪುತ್ತಾನೆ ರಾಜೀವ. ಅಕ್ಕನ ಮೂರು ಮಕ್ಕಳ ಮದುವೆಯನ್ನು ಒಟ್ಟಿಗೆ ಮಾಡುತ್ತಾನೆ. ಆಗಿನ ಕಾಲದಂತೆ, ಮದುವೆಮನೆಯಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುವ ಸಂಪ್ರದಾಯ ತುಂಬಾ ಖುಷಿ ತರುತ್ತೆ. ಊಟವನ್ನು ನೆಲದ ಮೇಲೆ ಕುಳಿತೇ ಮಾಡುವುದು ಉತ್ತಮ. ಆ ಸಂಪ್ರದಾಯ, ಈಗಿನ ಕಾಲದ ಮದುವೆಮನೆಗಳಿಗೆ ಆದಷ್ಟೂ ಬೇಗ ಟ್ರೆಂಡ್ ಆಗಲಿ ಎಂದು ಆಶಿಸುತ್ತೇನೆ.
ಅಕ್ಕನ ಮಕ್ಕಳ ಮದುವೆ ನಂತರ, ಕೊಟ್ಟ ಮಾತಿನಂತೆ ಬಹಳ ದಿನಗಳಿಂದಲೂ ಪ್ರೀತಿಸುತ್ತಿದ್ದ ಲಕ್ಷ್ಮಿ (ಭಾರತಿ) ಯನ್ನು ಮದುವೆಯಾಗುತ್ತಾನೆ ರಾಜೀವ. ಅದೇ ರಾಜೀವ ಬೆಳಗಾವಿಯಲ್ಲಿ ಗುಟ್ಟಾಗಿ ಸಾಕಿ ಸಲಹುತ್ತಿದ್ದ ಶರಾವತಿ (ಆರತಿ) ಕುಟುಂಬದ ಬಗ್ಗೆ ಕೇಶವನಿಗೆ ಗೊತ್ತಾಗುತ್ತದೆ. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂಬುದರ ಅರ್ಥ ತಿಳಿಯದೆ ಆತುರದಿಂದ ಮತಿಹೀನನಾಗಿ ತನ್ನ ಮಾವನಾದ ರಾಜೀವನನ್ನು ನಿಂದಿಸುತ್ತಾನೆ, ಅವಮಾನಿಸುತ್ತಾನೆ. ಇದರ ನಡುವೆ ರಾಜೀವ ತನ್ನ ಪತ್ನಿಯನ್ನು ಕಳೆದುಕೊಳ್ಳುತ್ತಾನೆ. ಕೊನೆಯಲ್ಲಿ ಕೇಶವನ ಮೊನಚು ಮಾತುಗಳಿಂದ ನೊಂದು ಒಂದಗಳನ್ನು ತಿನ್ನದೇ ಊಟದ ತಟ್ಟೆಯಲ್ಲಿ ಕೈತೊಳೆದುಕೊಂಡು, ಉಟ್ಟ ಬಟ್ಟೆಯಲ್ಲಿಯೇ, ಕಾಲಿಗೆ ಚಪ್ಪಲಿಯನ್ನು ಸಹ ಧರಿಸದೇ ಮನೆ ಬಿಟ್ಟು ಬಲು ದೂರ ಹೋಗಿಬಿಡುತ್ತಾನೆ. ರಾಜೀವನ ಪಾತ್ರದಲ್ಲಿನ ರಾಜ್ ಕುಮಾರ್ ರವರ ನಟನೆಗೆ ಸೋಲದ ಮನಸುಗಳಿರಲು ಸಾಧ್ಯವೇ ಇಲ್ಲ. ಪೋಷಕ ಪಾತ್ರದಲ್ಲಿ ನಟಿಸಿರುವ ಬಾಲಕೃಷ್ಣ ರವರ ನಟನೆ ಈ ಚಿತ್ರದ ಜೀವಾಳ. ಈ ಸಿನಿಮಾದಲ್ಲಿ ಪ್ರತಿ ದೃಶ್ಯದಲ್ಲಿರುವ ಸಂಭಾಷಣೆಯ ಪ್ರತಿ ಅಕ್ಷರಗಳೂ ವೇದವಾಕ್ಯದಂತಿವೆ. ಮಹತ್ತರ ಅರ್ಥ ನೀಡುವ, ಗಂಭೀರ, ಸೂಕ್ಷ್ಮ ಪದಗಳನ್ನು ಹೆಣೆದು ಹುಣಸೂರು ಕೃಷ್ಣಮೂರ್ತಿ ರವರು ಸಂಭಾಷಣೆ ಬರೆದಿದ್ದಾರೆ. ಇದು ಕನ್ನಡಿಗರ ಹೆಮ್ಮೆ ಎಂಬ ಬಗ್ಗೆ ಎರಡು ಮಾತಿಲ್ಲ.
ಹಾಡುಗಳು:
ಈ ಸಿನಿಮಾದ ಹಾಡುಗಳ ಬಗ್ಗೆ ವಿಶೇಷವಾಗಿ ಹೇಳಲೇಬೇಕು. ಹುಣಸೂರು ಕೃಷ್ಣಮೂರ್ತಿ ರವರ ಸಾಹಿತ್ಯದ “ನಗುನಗುತಾ ನಲಿನಲಿ” ಗೀತೆಯನ್ನು ಪಿ.ಬಿ. ಶ್ರೀನಿವಾಸ್ ರವರ ದನಿಯಲ್ಲಿ ಕೇಳುವಾಗ ಜೀವನದ ಪಾಠ ಕೇಳಿದಂತಾಗುತ್ತದೆ ಹಾಗೂ “ಬಾಳ ಬಂಗಾರ ನೀನು, ಹಣೆಯ ಸಿಂಗಾರ ನೀನು” ಗೀತೆಯನ್ನು ಪಿ. ಸುಶೀಲಾ ರವರ ದನಿಯಲ್ಲಿ ಕೇಳುವಾಗ ನಲ್ಲೆಯ ಪ್ರೀತಿಯ ಮಧುರತೆಯ ಪರಿಚಯವಾಗುತ್ತದೆ. ಆರ್.ಎನ್.ಜಯಗೋಪಾಲ್ ರವರ “ಆಗದು ಎಂದು ಕೈಕಟ್ಟಿ ಕುಳಿತರೆ” ಗೀತೆಯನ್ನು ಪಿ.ಬಿ.ಶ್ರೀನಿವಾಸ್ ರವರ ದನಿಯಲ್ಲಿ ಕೇಳಿದರೆ ಎಂತವರಿಗೂ ಜೀವನದಲ್ಲಿ ಏನನ್ನಾದರೂ ಸಾಧಿಸುವ ಮನಸಾಗುವುದು ಗ್ಯಾರಂಟಿ. ಅದೇ ರೀತಿ ಚಿ.ಉದಯಶಂಕರ್ ರವರ ಸಾಹಿತ್ಯದ “ಆಹಾ ಮೈಸೂರು ಮಲ್ಲಿಗೆ” ಗೀತೆಯನ್ನು ಪಿ.ಬಿ.ಶ್ರೀನಿವಾಸ್ ಹಾಗೂ ಪಿ.ಸುಶೀಲಾ ರವರ ದನಿಯಲ್ಲಿ ಕೇಳೋದೆ ಚಂದ. ವಿಜಯನಾರಸಿಂಹ ರವರ ಸಾಹಿತ್ಯದ ‘ಹನಿಹನಿಗೂಡಿದರೆ ಹಳ್ಳ”ಎಂಬ ಗೀತೆಗೆ ಪಿ.ಬಿ.ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಪಿ.ಸುಶೀಲಾ ರವರು ದನಿಯಾಗಿದ್ದಾರೆ.
ಈ ಸಿನಿಮಾ ತಪ್ಪದೇ ನೋಡಲು ಕಾರಣಗಳು:
1. ಕಷ್ಟ ಬಂದಿತೆಂದು ಧೃತಿಗೆಡದೇ ಒಂದು ಕುಟುಂಬವನ್ನು ಜವಾಬ್ದಾರಿಯುತವಾಗಿ ಹೇಗೆ ಉತ್ತಮ ಸ್ಥಿತಿಗೆ ತರಬೇಕು ಎಂದು ತಿಳಿಯಲು.
2. ಅನ್ನ ಕೊಡುವ ರೈತನ ಪಾತ್ರವೇನು? ನಿಸ್ವಾರ್ಥದಿಂದ ಕಷ್ಟಪಟ್ಟು ದುಡಿದರೆ ಸಿಗುವ ಪ್ರತಿಫಲವೇನು ಎಂದು ತಿಳಿಯಲು.
3. ಬಂಧುತ್ವ, ಪ್ರೀತಿ, ಮಮತೆ, ಕುಟುಂಬದ ಅರ್ಥ, ಸಂಸಾರದ ಜವಾಬ್ದಾರಿ ಇದೆಲ್ಲದರ ಸೂಕ್ಷ್ಮತೆಯನ್ನು ತಿಳಿಯಲು.
4. ಊರೆಲ್ಲರಿಗೂ ಸಾಲ ಕೊಟ್ಟರೂ, “ನಾನು ಕೊಟ್ಟೆ, ನನ್ನಿಂದಾಗಿಯೇ ನಿಮ್ಮ ಜೀವನ” ಎಂಬ ಅಹಂಕಾರದ ಮಾತುಗಳು ಸಾಲ ಕೊಟ್ಟ ರಾಚೋಟಪ್ಪನ ಬಾಯಿಂದ ಬರುವುದಿಲ್ಲ. ಅದು ಏಕೆ ಎಂದು ತಿಳಿಯಲು.
5. ಇದೆಲ್ಲದರ ಜೊತೆಯಲ್ಲಿ ಇಂದಿನ ಪೀಳಿಗೆಯವರಿಗೆ ಅಂದರೆ ನಮ್ಮ ಮಕ್ಕಳ ಜೊತೆ ಕುಟುಂಬ ಸಮೇತ ಕುಳಿತು ನೋಡಬೇಕಾದ ಹಾಗೂ ನೋಡಿ ಒಂದಷ್ಟು ಉತ್ತಮ ಗುಣಗಳನ್ನು ಕುಟುಂಬದ ಪ್ರತಿಯೊಬ್ಬ ಸದಸ್ಯರು ಅಳವಡಿಸಿಕೊಳ್ಳಲು ನೋಡಲೇಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.