ಭಾಗ – 1
ಜನವರಿ 24, 1972, ಸ್ಥಳ ಪಾಕಿಸ್ಥಾನದ ರಾಜಧಾನಿ ಇಸ್ಲಾಮಾಬಾದ್ನಿಂದ 250 ಮೈಲಿ ಅಂತರದಲ್ಲಿರುವ ಮುಲ್ತಾನಿನ ರಹಸ್ಯ ಸ್ಥಾನ. ಪಾಕಿಸ್ತಾನದ ಸೈನ್ಯದ ಮರ್ಜಿಯಂತೆ ಆಗಷ್ಟೇ ದೇಶದ ಅಧ್ಯಕ್ಷನ ಪದವಿ ಗಿಟ್ಟಿಸಿದ್ದ ಜುಲ್ಫಿಕರ್-ಅಲಿ-ಭುಟ್ಟೊ ತನ್ನ ಸುತ್ತ ನೆರೆದಿದ್ದ ದೇಶದ 50 ಅತ್ಯುನ್ನತ ಮಿಲಿಟರಿ ಮತ್ತು ಪ್ರತಿಭಾವಂತ ವೈಜ್ಞಾನಿಕ ಅಧಿಕಾರಿಗಳಲ್ಲಿ ತನ್ನ ಮಹತ್ವಾಕಾಂಕ್ಷೆಯ ಕನಸೊಂದನ್ನು ಹಂಚಿಕೊಳ್ಳುವವನಿದ್ದ. ಅದು ಭುಟ್ಟೊನ ಹೊಸ ಮಹಾತ್ವಾಕಾಂಕ್ಷೆಯಾಗಿರಲಿಲ್ಲ. 1960 ರಲ್ಲಿ ದೇಶದ ಇಂಧನ ಮತ್ತು ಶಕ್ತಿಮೂಲಗಳ ಮಂತ್ರಿಯಾಗಿದ್ದಾಗಲೇ ಆತನ ತಲೆಯಲ್ಲಿ ಮೊಳೆತಿದ್ದ ಕನಸದು. 1967 ರಲ್ಲಿ ತನ್ನ ಆತ್ಮಚರಿತ್ರೆಯಲ್ಲಿ ಅದರ ಕುರಿತ ವಿಸ್ತ್ರತ ಅಧ್ಯಾಯವನ್ನೇ ಆತ ಬರೆದಿದ್ದ. ಯಾವುದೇ ಮುಚ್ಚುಮರೆಯಿಲ್ಲದೆ ತನ್ನ ಕಲ್ಪನೆಗಳನ್ನೆಲ್ಲ ಅಲ್ಲಿ ಬಯಲಾಗಿಸಿದ್ದ. ಆದರೆ ಇಂದು, ಆತನಿಗೆ ದೇಶದ ಅಧ್ಯಕ್ಷ ಪದವಿಯೇ ಒಲಿದಿರುವಾಗ, ಇಷ್ಟು ದಿನ ಮನದಲ್ಲೇ ಮೆದ್ದ ಮಂಡಿಗೆ ನಿಜಕ್ಕೂ ಬಾಯಿಗೆ ಬೀಳುವ ಕಾಲ ಕೂಡಿ ಬಂದಿರುವಾಗ ಆತನ ಭಾವನೆಗಳು ಹಿಂದೆಂದಿಗಿಂತಲೂ ಹೆಚ್ಚು ಉತ್ಕಟಗೊಂಡಿದ್ದವು.
ಅಪ್ಪಟ ಮಾತುಗಾರನಾದ ತನಗೆ ಕಿವಿಗೊಟ್ಟು ಕೇಳುವ ವರ್ಗವೂ ಸಿಕ್ಕಾಗ ಸಹಜವಾಗಿಯೇ ತನ್ನೆದುರಿರುವ ಕೇಳುಗನ ಎದೆಯಾಳಕ್ಕೆ ದಶಕಗಳ ತನ್ನ ಮಹತ್ವಾಕಾಂಕ್ಷಿ ಕನಸಿನ ಬೀಜ ಬಿತ್ತುವ ಕಾರ್ಯಕ್ಕೆ ಆತ ಮುಂದಾಗಿದ್ದ.
’ತಮ್ಮ ಪರಮವೈರಿ ಭಾರತ ತಮ್ಮ ಕಣ್ಣೆದುರೇ ಪಾಕಿಸ್ತಾನದ ಕರುಳನ್ನೇ ಬಗೆದು ತುಂಡಾಗಿಸಿ ಬಾಂಗ್ಲಾದೇಶವೆಂಬ ಹಸಿಗೂಸಿನ ಬಲವಂತದ ಹುಟ್ಟಿಗೆ ಕಾರಣವಾದ ಅಸಹನೀಯ ಅಪಮಾನ, ನೋವು, ರೋಷ’ ಆತನ ಮಾತಿನಲ್ಲಿ ದಟ್ಟವಾಗಿ ಕವಿದಿತ್ತು.
“ಶತ್ರುವಿನ ಕೈಯ್ಯಲ್ಲಿ ಸಿಕ್ಕು ಮಣ್ಣಲ್ಲಿ ಮಣ್ಣಾಗಿರುವ ಪಾಕಿಸ್ತಾನದ ಗೌರವವನ್ನು ಮರಳಿ ಪಡೆಯುವಂತಾಗಲು ನಾವೆಲ್ಲಾ ಶಕ್ತಿ ಸಂಚಯಕ್ಕೆ ಇಳಿಯಲೇಬೇಕು. ಹಿಂದೂಸ್ಥಾನದ ಹಿರಿದಾದ ಸೈನ್ಯಕ್ಕೆ ತಕ್ಕ ಪಾಠ ಕಲಿಸಲೇಬೇಕೆನ್ನುವುದು ಪ್ರತಿಯೊಬ್ಬ ಸಾಮಾನ್ಯ ಪಾಕಿಸ್ತಾನಿಯನ ಬೇಡಿಕೆಯಾಗಿದೆ. ದೇಶದ ಸುರಕ್ಷೆ ಮತ್ತು ಭದ್ರತೆಗೆ ಹಿಂದೆಂದಿಗಿಂತಲೂ ಇಂದು ಹೆಚ್ಚಿನ ಅಪಾಯವಿದೆ. ದೇಶದ ಪ್ರಜೆಗಳೆಲ್ಲ ನಮ್ಮ ಮೇಲಿಟ್ಟಿರುವ ಭರವಸೆಗೆ ಇದು ಅತ್ಯಂತ ಕಠಿಣ ಸವಾಲಿನ ಸಮಯವಾಗಿದೆ. ಅವರ ಭರವಸೆ ಈ ದೇಶದಲ್ಲಿ ಅದರ ಆಡಳಿತಗಾರರಲ್ಲಿ, ಸುರಕ್ಷಾ ಪಡೆಗಳಲ್ಲಿ, ವಿಜ್ಞಾನಿಗಳ ಪ್ರತಿಭೆಗಳಲ್ಲಿ ಮತ್ತೆ ಮೂಡಬೇಕಾಗಿದೆ. ಇಲ್ಲಿ ನೆರೆದಿರುವ ನೀವೆಲ್ಲ ಆ ಕೆಲಸವನ್ನು ನನಗಾಗಿ ನಮ್ಮ ಪಾಕಿಸ್ತಾನಕ್ಕಾಗಿ ಮಾಡಿಯೇ ಮಾಡುತ್ತೀರಿ ಎಂದು ನಂಬಿದ್ದೇನೆ”. ಎಂದು ತನ್ನ ಉಗ್ವೇದದ ಮಾತುಗಳಿಗೆ ಮುಂದಾದಾಗ ನಿಧಾನವಾಗಿ ಆತನ ಹುಚ್ಚು ಆವೇಶ ನೆರೆದವರ ಮನದಲ್ಲಿ ಇಳಿಯುತ್ತಿತ್ತು.
“ನಿಶ್ಚಿತವಾಗಿಯೂ ನಾವೇನು ಮಾಡಬೇಕು ?” ಸಭಿಕರ ಮಧ್ಯದಿಂದ ಬಂದ ಈ ಪ್ರಶ್ನೆಗಾಗಿಯೇ ಕಾಯುತ್ತಿದ್ದವನಂತೆ ತಳಮಳಿಸುತ್ತಿದ್ದ ಭುಟ್ಟೊ ಗಂಭೀರವಾಗಿ ತನ್ನ ಕನಸು ಬಿಚ್ಚಿಟ್ಟ..”ಬಾಂಬ್ ! ಆಟಂಬಾಂಬ್.. ಶತ್ರುವಿನ ಹುಟ್ಟಡಗಿಸಲು, ಮಣ್ಣು ಪಾಲಾಗಿರುವ ನಮ್ಮ ಮರ್ಯಾದೆಯನ್ನು ಮತ್ತೆ ಗಳಿಸಿಕೊಳ್ಳಲು, ನನಗೆ..! ನಮ್ಮ ಪಾಕಿಸ್ತಾನಕ್ಕೆ..! …ಪರಮಾಣು ಬಾಂಬ್ ಬೇಕು. ಬೇಕೇಬೇಕು”.
ಒಂದು ಕ್ಷಣಕ್ಕೆ ಅಲ್ಲಿ ಸೇರಿದ್ದ ಅನೇಕರಿಗೆ ತಾವೇನು ಕೇಳುತ್ತಿದ್ದೇವೆ ಎಂಬುದರ ಕುರಿತಾಗಿ ನಂಬಿಕೆಯೇ ಹುಟ್ಟಲಿಲ್ಲ.
ಸ್ವಾತಂತ್ರ್ಯಗಳಿಸಿ ಇನ್ನೂ ಶೈಶವದಲ್ಲಿರುವ ನಮ್ಮಂತಹ ದೇಶಕ್ಕೆ ನಿಜಕ್ಕೂ ಆಟಂಬಾಂಬಿನ ಆವಶ್ಯಕತೆ ಇದೆಯೇ? ಒಂದು ವೇಳೆ ಇದ್ದರೂ, ಅದರ ತಯಾರಿಗೆ ತಗಲುವ ಖರ್ಚಿನ ಅಂದಾಜು ಈ ಮನುಷ್ಯನಿಗಿದೆಯೇ? ತುತ್ತು ಕೂಳಿಗೂ ಊಳಿಡುವ ಈ ದೇಶದ ಬಡತನಕ್ಕೆ ಆಟಂಬಾಂಬಿನ ಖರ್ಚಿನ ಭಾರಹೊರಲು ಸಾಧ್ಯವೇ ? ಎಲ್ಲಕ್ಕೂ ಮಿಗಿಲಾಗಿ ಅಂತಹ ದುಸ್ಸಾಧ್ಯ ಕಾರ್ಯವನ್ನು ವಿಶ್ವದ ಇತರೆ ದೇಶಗಳ ಸಹಾಯವಿಲ್ಲದೆ ತಯಾರಿಸುವ ಜ್ಞಾನ, ತಾಂತ್ರಿಕತೆ, ಅನುಭವ ನಮ್ಮಲ್ಲಿದೆಯೇ ? ಎಂಬ ಪ್ರಶ್ನೆಗಳು International Atomic Energy Agencyಯಿಂದ ಆಗಷ್ಟೆ ಪಾಕಿಸ್ತಾನಕ್ಕೆ ಮರಳಿದ್ದ ಮುನೀರ್ಅಹ್ಮದ್ ಖಾನ್, ಅಬ್ದುಸ್ ಸಲಾಂ ಮತ್ತು ಕಳೆದೊಂದು ದಶಕದಿಂದ ಆಣ್ವಿಕ ಶಸ್ತ್ರಗಳಿಗಾಗಿ ಪಾಕಿಸ್ತಾನದಲ್ಲೇ Pakistan Automic Energy Comission ಮೂಲಕ ಸಂಶೋಧಿಸುವ ಪ್ರಯತ್ನದಲ್ಲಿದ್ದ ಐ.ಜೆ.ಉಸ್ಮಾನಿಯಂತಹ ತಲೆ ನೆರೆತ ಹಿರಿಯ ವಿಜ್ಞಾನಿಗಳ ಮಿದುಳಿನಲ್ಲಿ ಛಕ್ಕನೆ ಮಿಂಚಿ ಹೋದವು. ಒಂದು ವೇಳೆ ಅಣು ಬಾಂಬನ್ನು ಸ್ಫೋಟಿಸುವುದೇ ಆದಲ್ಲಿ ಅಮೇರಿಕನ್ನರ, ರಷ್ಯನ್ನರ, ಫ್ರಾನ್ಸ್, ಬ್ರಿಟನ್ ಮತ್ತು ಇತರೇ ಯೂರೋಪಿನ ಬಲಿಷ್ಠ ದೇಶಗಳ ಕೋಪಕ್ಕೆ ಈಡಾಗುವ ಹೆದರಿಕೆ. ಆರ್ಥಿಕ ದಿಗ್ಬಂಧನಗಳಿಗೆ ತುತ್ತಾಗುವ ಭಯ ಮತ್ತು ಇವೆಲ್ಲದರ ಪರಿಣಾಮವಾಗಿ ಈ ದೇಶಗಳಿಂದಲೇ ಅನಾಮತ್ತಾಗಿ ಸಿಗುತ್ತಿರುವ ಅಪಾರ ಧನಸಹಾಯದ ಮಾರ್ಗವೇ ಮುಚ್ಚಿಕೊಂಡರೆ ನಾವುಗಳು ತಿನ್ನುವುದೇನು? ನಮ್ಮನ್ನೇ ನಂಬಿ ಬದುಕುತ್ತಿರುವ ಮಂದಿಗೆ ತಿನ್ನಿಸುವುದೇನು ಎಂಬ ಲೆಕ್ಕಾಚಾರಗಳು ಅಲ್ಲಿದ್ದ ಅನೇಕ ಹಿರಿ ಮಿಲಿಟರಿ ಜನರಲ್ಗಳ ತಲೆಕೊರೆಯಲು ಶುರುವಾಗಿತ್ತು.
ಅಷ್ಟರಲ್ಲೇ ಮತ್ತೆ ಮಾತುಮುಂದುವರೆಸಿದ ಭುಟ್ಟೊ, “ಅಲ್ಲಾಹುವಿನ ಕೃಪೆಯಿಂದ ಮತ್ತು ಕಾಯ್ದೆ- ಆಜಂ ಮೊಹ್ಮದ್ ಅಲಿ ಜಿನ್ನಾರ ಆಶೀರ್ವಾದದಿಂದಾಗಿ ನಾವು ಕಾಫಿರರ ಸಹವಾಸದಿಂದ ಬಿಡುಗಡೆ ಹೊಂದಿ, ಇಂದಿಗೆ ನಮ್ಮದೇ ಸ್ವಂತ ನಾಡಿನಲ್ಲಿ ಬಾಳುತ್ತಿದ್ದೇವೆ. ಆದರೆ, ನಿಜಕ್ಕೂ ಇದೊಂದು ಸಾರ್ಥಕ ಸ್ವಾತಂತ್ರ್ಯವಾಗಬೇಕಾದರೆ ಶಾಶ್ವತವಾಗಿ ಆ ನಮ್ಮ ಶತ್ರುಗಳ ಸದ್ದಡಗಿಸಬೇಕಾದ್ದು ನಮ್ಮ ಕರ್ತವ್ಯವಲ್ಲವೇ? ನಿಮ್ಮ ಮೈಮನಗಳಲ್ಲಿ ನಿಜಕ್ಕೂ ಮುಸ್ಲಿಮನ ರಕ್ತ ಹರಿಯುತ್ತಿರುವುದು ಸತ್ಯವೇ ಆದಲ್ಲಿ ಇಂತಹ ಹೀನಾತಿಹೀನ ಸೋಲಿಗೆ ಪ್ರತಿಕಾರ ತೀರಿಸದೇ ನೆಮ್ಮದಿಯಿಂದ ಹೇಗೆ ನಿದ್ದೆ ಮಾಡಬಲ್ಲಿರಿ? ನಿಮ್ಮದೇ ಬಂಧುಗಳು ಕಾಶ್ಮೀರದಲ್ಲಿ ಹಗಲು-ರಾತ್ರಿ ಸ್ವಾತಂತ್ರ್ಯಕ್ಕಾಗಿ ನಿಮ್ಮಲ್ಲಿ ಮೊರೆಯಿಡುತ್ತಿರುವಾಗ ಹೇಡಿಗಳಂತೆ ಕೂಡುಲು ನಿಮ್ಮಿಂದ ಸಾಧ್ಯವೇ? ನಮ್ಮದೇ ಕಣ್ಣೆದುರಲ್ಲಿ ನಮ್ಮ ದೇಶವನ್ನು ತುಂಡಾಗಿಸಿ ಬಾಂಗ್ಲಾದೇಶವೆಂಬ ಹೆಸರಿನ ಕಳಂಕವನ್ನು ನಮ್ಮ ಹಣೆಯಲ್ಲಿ ಬರೆದವರ ನೆರೆತನವನ್ನು ನೆಚ್ಚಿ ಬಾಳುವುದುನಿಮ್ಮಿಂದ ಸಾಧ್ಯವೇ? ….ಇಲ್ಲ ಯಾವತ್ತೂ ಇಲ್ಲ …ಅದಕ್ಕಾಗಿಯೇ ನಮಗೆ ಈ ಪರಮಾಸ್ತ್ರ ಬೇಕು. ಹೇಳಿ, ನೀವು ಮಾಡಬಹುದೇ? ನಿಮ್ಮ ನೆಚ್ಚಿನ ದೇಶವಾಸಿಗಳಿಗಾಗಿ, ನಿಮ್ಮ ದೇಶಕ್ಕಾಗಿ, ನಿಮ್ಮಪರಿವಾರಕ್ಕಾಗಿ …ಎಲ್ಲಕ್ಕೂ ಹಿರಿದಾಗಿ ಅಪಾಯದಲ್ಲಿರುವ ನಿಮ್ಮ ಪವಿತ್ರ ದೀನ್ಗಾಗಿ, ಶತ್ರುವಿನ ವಿರುದ್ಧದ ಪವಿತ್ರ ಜಿಹಾದಿಗಾಗಿ ಇಸ್ಲಾಮಿ ಪರಮಾಣು ಬಾಂಬನ್ನು ತಯಾರುಮಾಡಬಹುದ?… ಹೇಳಿ?? ಎಂದು ಮಾತು ಮುಗಿಸಿ ಪ್ರಶ್ನಾರ್ಥಕವಾಗಿ ತನ್ನೆದುರಿದ್ದವರನ್ನೇ ನೋಡುತ್ತಿದ್ದ ಭುಟ್ಟೊ.
ತಾವೀಗ ಕುಳಿತಿರುವುದು ಐತಿಹಾಸಿಕ ತಿರುವಿನಲ್ಲಿರುವ, ತಮ್ಮ ಎಳೆಯ ದೇಶದ ಭಾಗ್ಯವನ್ನೇ ಪಲ್ಲಟಗೊಳಿಸಲಿರುವ ಅತಿ ಮಹತ್ವದ ಸಭೆಯಲ್ಲಿ ಎಂದು ಅಲ್ಲಿ ನೆರೆದ ಅನನುಭವಿ ಆದರೂ ಉತ್ಸಾಹಿ ಕಿರಿ ವಿಜ್ಞಾನಿಗಳ, ತರುಣ ವಯಸ್ಸಿನ ಆದರೆ ಘಾತಕ ಸಾಮರ್ಥ್ಯದ ಮಿಲಿಟರಿ ಅಧಿಕಾರಿಗಳ ಚಿತ್ತಪಟಲಗಳಿಗೂ ಸ್ಪಷ್ಟವಾಗತೊಡಗಿದ್ದನ್ನು, ನೈರಾಶ್ಯದ ಬೇರುಗಳಿಂದಲೇ ಪುಟಿಯುತ್ತಿದ್ದ ಹೊಸ ಆಶಾಭಾವದ ಚಿಗುರುಗಳು ಅವರೆಲ್ಲರಲ್ಲಿ ಈ ಕಾರ್ಯದ ಬೇಡಿಕೆಗೆ, ಅದರ ತೀವ್ರತೆಗೆ ತಮ್ಮನ್ನೇ ಒಡ್ಡಿಕೊಳ್ಳುವ ಸವಾಲನ್ನು ಹುಟ್ಟು ಹಾಕುತ್ತಿದ್ದದನ್ನು ಭುಟ್ಟೋನ ಮಾಧ್ಯಮ ಕಾರ್ಯದರ್ಶಿ ಖಾಲೇದ್ ಹಸನ್ನ ಚುರುಕು ಕಣ್ಣುಗಳು ಗುರುತಿಸದೇ ಇರಲಿಲ್ಲ.
ಹೇಳಿ, ನಿಮ್ಮಿಂದ ಸಾಧ್ಯವೇ? ನೀವಿದನ್ನು ಕೊಡಬಲ್ಲಿರೇ? ನಿಮ್ಮ ದೇಶ ನಿಮ್ಮಿಂದ ಇದನ್ನು ಅಪೇಕ್ಷಿಸಬಹುದೇ? ಅಪಾಯದಲ್ಲಿರುವ ನಿಮ್ಮ ದೀನ್ಗಾಗಿ ನೀವು ಇದನ್ನ ಮಾಡಬಲ್ಲಿರೇ?? ಹಂತಹಂತಕ್ಕೂ ಹರಿತವಾಗುತ್ತಿದ್ದ ಭುಟ್ಟೋನ ಮಾತುಗಳನ್ನು ಕೇಳುತ್ತ, ಮತಬೋಧಕನ ಉನ್ಮಾದಕರ ಬೋಧನೆಗೆ ಮನಸೋತು ಆತ ಹೇಳಿದಕ್ಕೆಲ್ಲ ಹ್ಞೂಂಗೊಡುವ ನವಮತಾಂತರಿತರಂತೆ ಅವರಲ್ಲನೇಕರು, ಹೌದು! ಹೌದು! ನಾವು ಸಿದ್ಧರಿದ್ದೇವೆ, ನಮ್ಮ ದೇಶಕ್ಕಾಗಿ, ನಮ್ಮ ಜನರಿಗಾಗಿ ಎಲ್ಲಕ್ಕೂ ಮಿಗಿಲಾಗಿ ಪರಮದಯಾಳು ಅಲ್ಲಾಹುವಿನ ಕೃಪೆಗಾಗಿ, ನಿಮ್ಮ ಅಣು ಬಾಂಬಿನ ಕನಸನ್ನು ನಾವು ನನಸಾಗಿಸುತ್ತೇವೆ – ಎಂದು ಆವೇಶದಿಂದ ಕೈ ಎತ್ತಿ ತಮ್ಮ ರಾಷ್ಟ್ರಾಧ್ಯಕ್ಷನ ಮಾತುಗಳಿಗೆ ಒಪ್ಪಿಗೆ ಸೂಚಿಸಿದರು. ಹಾಗಾದರೆ ಯಾವಾಗ ..? ಎಷ್ಟು ಬೇಗ ಕೊಡಬಲ್ಲಿರಿ ಆಟಂಬಾಂಬನ್ನು? ಎಷ್ಟು ದಿನಗಳಲ್ಲಿ ಪೂರ್ಣಗೊಳಿಸಬಲ್ಲಿರಿ ಈ ಕೆಲಸವನ್ನು? ಕಲ್ಪನೆಯ ಗರಿಗಳಿಂದ ಅತಿ ಮೇಲಕ್ಕೆ ಹಾರುತ್ತಿದ್ದವರನ್ನು ಭುಟ್ಟೋನ ಮುಂದಿನ ಪ್ರಶ್ನೆಗಳು ಮತ್ತೆ ವಾಸ್ತವದ ನೆಲೆಗೆ ಎಳೆದುತಂದವು.
ವಾಸ್ತವದಲ್ಲಿ ಅಣು ಬಾಂಬಿನಂತಹ ಜಟಿಲ, ತ್ರಾಸದಾಯಕ ಮತ್ತು ಅಪಾಯಕಾರಿ ಅಸ್ತ್ರದ ತಯಾರಿಕೆಗೆ ಬೇಕಾದ ಪೊಟ್ಯಾಶಿಯಂ ಅಥವಾ ಯುರೇನಿಯಂನಂತಹ ಮೂಲ ದ್ರವ್ಯಗಳ ಹೊಂದಾಣಿಕೆಗೆ ಸೂಕ್ತ ಯೋಜನೆಗಳ ಆವಶ್ಯಕತೆಯಿತ್ತು. ಮೂಲ ದ್ರವ್ಯಗಳ ಸಂಚಯದ ನಂತರವೂ ಅವುಗಳ ನಿರ್ವಹಣೆ, ಪರೀಕ್ಷಣೆಗೆ ಬೇಕಾದ ಸೂಕ್ತ ಬ್ಯಾರಲ್ ಅಥವಾ ಟ್ಯಾಂಕ್ನಂತಹ ಪರಿಕರಗಳ, ಜೊತೆಗೆ ಅದಕ್ಕೆ ಹೊಂದುವ ಡಿಸೈನ್ಗಳ ಬೇಡಿಕೆಯಿತ್ತು. ಈ ಬೇಡಿಕೆಗಳನ್ನು ಯೋಜನೆಯ ಪ್ರತಿ ಹಂತದಲ್ಲೂ ಅಚ್ಚುಕಟ್ಟಾಗಿ ಪೂರೈಸಲು ನುರಿತ ಕುಶಲ ತಂತ್ರಜ್ಞರ ಮತ್ತು ಇವೆಲ್ಲವನ್ನೂ ಗುಪ್ತರೀತಿಯಲ್ಲಿ ಮಾಡುವ ಮೂಲಭೂತಸೌಕರ್ಯಗಳ ವ್ಯವಸ್ಥೆಗಳನ್ನು ಪೂರ್ತಿಮಾಡುವ ಗುರುತರ ಜವಾಬ್ದಾರಿಯಿತ್ತು. ಈ ಎಲ್ಲ ವ್ಯವಸ್ಥೆಗಳ ಮೇಲ್ವಿಚಾರಣೆಗಳಿಗೇ ಅನೇಕ ತಿಂಗಳುಗಳಿಂದ ವರ್ಷಗಳ ಸಮಯಾವಕಾಶದ ಅಗತ್ಯವಿತ್ತು. ಎಲ್ಲಕ್ಕೂ ಮಿಗಿಲಾಗಿ ಇವುಗಳ ಪೂರ್ತಿಗೆ ಬೇಕಾದ ಮಿಲಿಯನ್ಗಟ್ಟಲೆ ಹಣ ಪಾಕಿಸ್ತಾನದಂತಹ ದಾರದ್ರ್ಯದ ದೇಶದ ಖಜಾನೆಯಲ್ಲಿ ನಿಜವಾಗಿಯೂ ಹುಟ್ಟುವುದೇ ಎಂಬುದೇ ಇನ್ನೂ ಅವರಿಗೆ ತಿಳಿದಿರಲಿಲ್ಲ. ಇಷ್ಟೆಲ್ಲ ಗೋಜಲುಗಳ ಅರಿವಿನಿಂದಲೇ ಉಸ್ಮಾನಿಯಂತಹ ಅನುಭವಿ ವಿಜ್ಞಾನಿಗಳು ಭುಟ್ಟೋಗೆ ಈ ಯೋಜನೆಯನ್ನೇ ಕೈಬಿಡುವಂತೆ ಮೊದಲೊಮ್ಮೆಯೂ ಸೂಚಿಸಿದ್ದರು.
ಉನ್ಮಾದ ಹೊಕ್ಕಿಯಾಗಿರುವ ಮಿದುಳಿನಲ್ಲಿ ಉಚಿತ-ಅನುಚಿತಗಳ ಸಮಬುದ್ಧಿಗೆ ಜಾಗವೆಲ್ಲಿ? ಹೀಗಾಗಿ ಅಲ್ಲಿ ನೆರೆದಿದ್ದ ಗುಂಪಿನವರಿಂದಲೇ ಹೊರಟ ಒಂದು ಧ್ವನಿ ಹೇಳಿತು …”ಬಾಂಬ್ ತಯಾರಿಸಲು ಐದುವರ್ಷ ಬೇಕಾಗಬಹುದು”. ಅದನ್ನು ಧಿಕ್ಕರಿಸಿ , “ಇಲ್ಲ! ಮೂರು ವರ್ಷ, ಮೂರೇ ಮೂರುವರ್ಷ ಸಾಕು ನಮಗೆ” ಎಂದಿತ್ತು ಎ. ಸಿದ್ದಿಕ್ ಎಂಬ ತರುಣ ವಿಜ್ಞಾನಿಯ ಧ್ವನಿ. ತನಗೆ ಬೇಕಾದ ಉತ್ತರಗಳೇ ಕೇಳಲು ಸಿಕ್ಕಾಗ ಸಹಜವಾಗಿಯೇ ಭುಟ್ಟೋನ ಮುಖದಲ್ಲಿ ಮಂದಹಾಸ ಮೂಡಿತ್ತು. ತನ್ನ ಮಾತನ್ನು ಶಿರಸಾ ವಹಿಸಿ ಕೆಲಸ ಮಾಡುವ ಶಕ್ತಿಯಿರುವ ಮುನೀರ್ ಖಾನ್ನನ್ನು PAECನ ಮುಖ್ಯಸ್ಥನ ಸ್ಥಾನಕ್ಕೆ ನಿಯುಕ್ತಿಗೊಳಿಸಲಾಯ್ತು. ರಾಷ್ಟ್ರಾಧ್ಯಕ್ಷನ ಮಾತಿಗೆ ಸಹಮತಿಯಿರದ ಉಸ್ಮಾನಿಯಂತಹ ಹಿರಿತಲೆಗಳನ್ನು ಸಂಸ್ಥೆಯಿಂದ ಹೊರಗಟ್ಟಲಾಯಿತು. ಅಣು ಬಾಂಬ್ ತಯಾರಿಕೆಯಂತಹ ಸಂಪೂರ್ಣ ಯೋಜನೆಯ ಬಗ್ಗೆಯೇ ತಾತ್ಸಾರ ಹೊಂದಿದ್ದ ಅಬ್ದುಲ್ ಸಲಾಂನನ್ನು ದೇಶಭ್ರಷ್ಟನಾಗಿಸಲಾಯ್ತು.
ಪಾಕಿಸ್ತಾನದಲ್ಲಿ ನಡೆದ ಅಂದಿನ ಘಟನೆ ಕೇವಲ ತಮ್ಮ ದೇಶದ ಸುರಕ್ಷತೆಗಾಗಿ ಸರ್ಕಾರವೊಂದು ಹಮ್ಮಿಕೊಂಡಿದ್ದ ಗುಪ್ತಯೋಜನೆಯಾಗಿ ಸೀಮಿತವಾಗಿರಲಿಲ್ಲ. ವಾಸ್ತವದಲ್ಲಿ ಅದು ಪರಮತ ದ್ವೇಷ ಮತ್ತು ಸ್ವಮತದ ಅಂಧಾನುಕರಣೆಗಳನ್ನೇ ಬಂಡವಾಳವಾಗಿ ಹೊಂದಿ ಪ್ರಪಂಚ ಪಟಲದ ಮೇಲೆ ಈಗಷ್ಟೇ ಕಣ್ಣುಬಿಟ್ಟಿದ ಅನನುಭವಿ ದೇಶ ತನ್ನ ವರ್ತಮಾನ ಮತ್ತು ಭವಿಷ್ಯತ್ತಿಗಾಗಿ ನಡೆಸುತ್ತಿರುವ ಹೋರಾಟವಾಗಿತ್ತು. ಭಾರತವೆಂಬ ತನ್ನ ಆಜನ್ಮ ವೈರಿಯ ಮುಂದೆ ಹೂಂಕರಿಸಲು ಅವರ ಪಂಥಕ್ಕೆ ಎದುರಾಗಿದ್ದ ಸ್ವಕಲ್ಪಿತ ಅಪಾಯದ ನಿವಾರಣೆಗಾಗಿ, ಮತ್ತು ಇಸ್ಲಾಮೀ ಜಗತ್ತಿನೆದುರು ತನ್ನ ಅಣು ಸಾಮರ್ಥ್ಯ, ಸಾರ್ಥಕ್ಯಗಳನ್ನು ಸಾರಲು ಪಾಕಿಸ್ತಾನಕ್ಕೆ ನೆಪಬೇಕಾಗಿತ್ತು. ಇಡೀ ವಿಶ್ವವನ್ನೇ ವಿನಾಶದಂಚಿಗೆ ದೂಡಲಿರುವ ಭೀಕರ ಘಳಿಗೆಗೆ ಅಂದು ಬೀಜಾಂಕುರವಾಗಿತ್ತು. ಅದು ನ್ಯೂಕ್ಲಿಯರ್ ಜಿಹಾದ್ನ ಪ್ರಾರಂಭವಾಗಿತ್ತು.
(ಸಶೇಷ…)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.