ಮತ್ತೊಮ್ಮೆ ಕಾರ್ಗಿಲ್ ಅನ್ನು ನೆನೆಯುವ ಹೊತ್ತು ಇಂದು ಬಂದಿದೆ ! ಸೈನಿಕರ ಪರಾಕ್ರಮ, ದೇಶದ ಸ್ವಾಭಿಮಾನ, ಶೌರ್ಯ ಪದಕಗಳನ್ನು ಗೆದ್ದು ದೇಶ ಹೆಮ್ಮೆ ಪಡುತ್ತಿದೆ !! ಬೇರೆಲ್ಲಾ ಯುದ್ಧ ರಂಗದ ಇಂಚು ಇಂಚನ್ನೂ ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತದೆ. ಆದರೆ, ಬಟಾಲಿಕ್ ಬಲಿದಾನ ಮಾತ್ರ ಇಂದಿಗೂ ಅಪೂರ್ಣ.
ಹೌದು, ಕಾರ್ಗಿಲ್ ಯುದ್ಧದ 1999 ರ ಸಮಯ ! ಭಾರತದ ಬಟಾಲಿಕ್ ಅನ್ನು ಆಕ್ರಮಿಸಿಕೊಂಡ ಪಾಕ್ ತನ್ನ ಬಂಕರನ್ನು ನಿರ್ಮಿಸತೊಡಗಿತು ! ದುರ್ಗಮವಾದ ರಣರಂಗ ಈ ಬಟಾಲಿಕ್ ! ಆ ಕಾರಣಕ್ಕೇ ಇಲ್ಲಿಗೆ ಪತ್ರಕರ್ತ ಮಿತ್ರರಿಗೆ ಅವಕಾಶ ವಂಚಿತವಾಗಿತ್ತು. ಆ ಕಾರಣಕ್ಕೇ ಇಂದಿಗೂ ಬಟಾಲಿಕ್ ಯುದ್ಧ ಅಪೂರ್ಣ !!!!
ಕಾರ್ಗಿಲ್ ಯುದ್ಧಗಳಲ್ಲೇ ಬಟಾಲಿಕ್ ಅತ್ಯಂತ ದುರ್ಗಮ ಪರ್ವತ ! ಪಾಕ್ ವೈರಿಗಳು ಬಟಾಲಿಕ್ ವಲಯವನ್ನು ಕೋಟೆಯಂತೆ ಮಾಡಿಕೊಂಡಿದ್ದವು. ಬಟಾಲಿಕ್ ವಲಯದ ಡ್ರಾಸ್ ಮತ್ತು ಮುಷ್ಕೋ ಕಣಿವೆಗಳ ಸಂಪರ್ಕ ಕಡಿತಗೊಂಡು ಬಹುದಿನಗಳವರೆಗೆ ಬಟಾಲಿಕ್ ಭಾರತೀಯ ಪಡೆಗಳ ಹಿಡಿತದಿಂದ ತಪ್ಪಿತ್ತು. ಜಿಲ್ಲಾ ಕೇಂದ್ರ ಕಾರ್ಗಿಲ್ನಿಂದ ಈ ವಲಯವನ್ನು ಯುದ್ಧದ ಕೇಂದ್ರ ಬಿಂದು ಎಂದೇ ಸಮರ ತಜ್ಞರು ವಿಶ್ಲೇಷಿಸುತ್ತಾರೆ. ಇದರ ಅಂಚಿನಲಿ ಹರಿಯುವ ಸಿಂಧೂ ನದಿ ಭೌಗೋಳಿಕವಾಗಿ ಈ ಪ್ರದೇಶವನ್ನು ಅತ್ಯಂತ ಕಠಿಣವಾಗಿಸಿದೆ. ಪ್ರತೀ ಚಳಿಗಾಲದಲ್ಲೂ ಬಟಾಲಿಕ್ ಹೊರ ಪ್ರಪಂಚದ ಸಂಪರ್ಕವನ್ನೇ ಕಡಿದುಕೊಳ್ಳುತ್ತದೆ.
ಸಾಹಸಮಯ ಕಾರ್ಯಚರಣೆ
ಬಟಾಲಿಕ್ಗೆ ಉಳಿದೆಲ್ಲಾ ಕಾರ್ಯಾಚರಣೆಗಳದ್ದು ಒಂದು ತೂಕವಾದರೆ, ಬಟಾಲಿಕ್ನಲ್ಲಿ ನಡೆದ ಕಾರ್ಯಾಚರಣೆಗಳದ್ದು ಮತ್ತೊಂದು ತೂಕ ! ಯಾಕೆಂದರೆ, ಕಾರ್ಗಿಲ್ನಿಂದ ಬಟಾಲಿಕ್ ಸಾಗುವ ಹಾದಿಯನ್ನು ಪಾಕ್ ಸೇನೆ ಕಡಿತಗೊಳಿಸಿತ್ತು. ಕಾರ್ಯಾಚರಣೆಗೆ ಯಾವುದೇ ಯುದ್ಧ ಟ್ಯಾಂಕರ್ಗಳು ಸಾಗುವಂತಿಲ್ಲ. ಕೇವಲ ಕಾಲ್ನಡಿಗೆಯಲ್ಲೇ ಸಾಗಬೇಕಿತ್ತು. ಅಷ್ಟೇ ಅಲ್ಲ, ಯಾವ ತುದಿಯಲಿ, ಯಾವ ಹಾದಿಯಲಿ ವೈರಿ ಪಡೆ ಎಷ್ಟು ಬಂಕರುಗಳನ್ನು ನಿರ್ಮಿಸಿದೆ ಯಾರಿಗೂ ಯಾವ ಮಾಹಿತಿಯೂ ಇಲ್ಲ !!! ಕೊನೆಗೂ ಭಾರತೀಯ ಪಡೆಗಳು ಕಡಿದಾದ ಅತ್ಯಂತ ದುರ್ಗಮ ಹಾದಿಯಲ್ಲೇ ಮೂರು ದಿನಗಳ ಕಾಲ ಬಟಾಲಿಕ್ ವಲಯಕ್ಕೆ ಹೊರಟವು. ಶೀತ ಪ್ರದೇಶದಲ್ಲಿ ಸೆಣಸಾಡಬಲ್ಲಂತಹ ಬೆಟಾಲಿಯನ್ಗಳನ್ನು ಆಯ್ದು ಬಟಾಲಿಕ್ಗೆ ರವಾನೆ ಮಾಡಲಾಗಿತ್ತು. ಸೇನೆ ಕೂಡಾ ಕಠಿಣ ಹಾದಿಯಲ್ಲೇ ಸಾಗಬೇಕಿತ್ತು, ಅಲ್ಲದೆ ಶತ್ರು ಸೇನೆಯ ಚಲನವಲನದ ಬಗ್ಗೆಯೂ ಮಾಹಿತಿಯಿಲ್ಲ, ಹಾಗಾಗಿ ಬಟಾಲಿಕ್ ಯುದ್ಧ ಭೂಮಿಗೆ ಮಾಧ್ಯಮದ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
ಆಪರೇಷನ್ ಸಫೇದ್ ಸಾಗರ್
ವಾಯುಪಡೆ ಪಾಕ್ ಸೈನಿಕರನ್ನು ಹೊಡೆದೋಡಿಸುವ ತನ್ನ ಕಾರ್ಯಾಚರಣೆಗೆ ಆಪರೇಷನ್ ಸಫೇದ್ ಸಾಗರ್ ಎಂದು ಹೆಸರಿಟ್ಟಿತು. ಮೇ ಕೊನೇ ವಾರದಲ್ಲೇ ಯುದ್ಧರಂಗಕ್ಕಿಳಿದಿದ್ದ ವಾಯುಪಡೆಗೆ ಕ್ಲಿಷ್ಟಕರ ಸನ್ನಿವೇಶ ಎದುರಾಗಿದ್ದು ಬಟಾಲಿಕ್ನಲ್ಲಿಯೇ. ಮೇ 27 ರಂದು ಬಟಾಲಿಕ್ಗೆ ಹಾರಿದ ಮಿಗ್ – 21 ನ್ನು ಪಾಕ್ ಸೇನೆ ಮಿಸೈಲ್ ಮೂಲಕ ಹೊಡೆದುರುಳಿಸಿತು. ಮುಂದೆ, ಮಿಗ್ -27 ತಾಂತ್ರಿಕ ದೋಷದಿಂದ ಪತನವಾಯಿತು. ನಂತರ, ಎಂಐ-17 ಎಂಬ ಕಿರು ವಿಮಾನವನ್ನೂ ಪಾಕ್ ಸ್ಟಿಂಜರ್ ಮಿಸೈಲ್ ಬಳಸಿ ಹೊಡೆದುರುಳಿಸಿತು. ನಾಲ್ಕು ಭಾರತೀಯ ವಾಯು ಪಡೆಯ ಯೋಧರು ಹುತಾತ್ಮರಾದರು. ಆರಂಭದಲ್ಲಿ ಪಾಕ್ ಮೇಲುಗೈ ಸಾಧಿಸಿತ್ತು ! ಪಾಕ್ ತಾನು ಭಾರತದ 08 ಯುದ್ಧ ವಿಮಾನಗಳನು ಹೊಡೆದುರುಳಿಸಿತು ಎಂದು ಪ್ರಚಾರ ಗಿಟ್ಟಿಸಿಕೊಂಡಿತು. ಭಾರತ ಇದಕ್ಕೆ ತಕ್ಕದಾದ ರಣತಂತ್ರವನ್ನು ರೂಪಿಸಿ ಬಟಾಲಿಕ್ಗೆ ಕಳುಹಿಸಿದ ಹೆಲಿಕಾಪ್ಟರ್ಗಳನ್ನು ವಾಪಾಸು ಕರೆಸಿಕೊಂಡಿತು ! ಮೇ 30 ವಾಯುಪಡೆಯ ಅತ್ಯಂತ ಪ್ರಬಲ ಫೈಟರ್ ಮಿರಾಜ್ – 2000 ನ್ನು ರಣಭೂಮಿಗೆ ಇಳಿಸಿತು ! ಸ್ಕ್ವಾಡ್ರನ್ -7 ನ್ನು ಯುದ್ಧಕ್ಕೆ ಸಜ್ಜುಗೊಳಿಸಿತು. ಮಿರಾಜ್ಗಳು 250 ಕೆಜಿ ಬಾಂಬುಗಳನ್ನು ಬಟಾಲಿಕ್ನಲ್ಲಿ ಹಾಕಿ ಬಂದವು… ಸ್ಕ್ವಾಡ್ರನ್ ಲೀಡರ್ ಸಂದೀಪ್ ಅವರ ಉಸ್ತುವಾರಿಯಲ್ಲಿ ನಡೆದ ಕಾರ್ಯಚರಣೆ ಮುಂಥಾ ಧಾಲೊ, ಡ್ರಾಸ್ ಸೆಕ್ಟರ್ಗಳಲ್ಲಿ ನಡೆಸಿದ ಕಾರ್ಯಾಚರಣೆಗಳು ಯಶಸ್ವಿಯಾದವು. ಜೂನ್ 17ರ ಹೊತ್ತಿಗೆ ಪಾಕ್ ಬಂಕರಿಗೆ ಪೂರೈಕೆಯಾಗುತ್ತಿದ್ದ ಆಹಾರ, ಶಸ್ತ್ರಾಸ್ತ್ರಗಳ ಮೂಲವನ್ನು ವಾಯುಪಡೆ ಕಡಿತಗೊಳಿಸಿತು. ಈ ಕಾರ್ಯಾಚರಣೆಯ ನಂತರ ಭೂ ಸೇನೆಯ ಹಾದಿ ಸುಗಮವಾಯಿತು !!
ಭೀಕರ ಕಾಳಗ
1999 ರ ಜುಲೈ 2 ರಂದು 11 ನೇ ಗೋರ್ಖಾ ರೈಫಲ್ನ ಪ್ಲಟೂನ್ ಒಂದು ಬಟಾಲಿಕ್ ಪ್ರದೇಶದ ಖಲಬಾರ್ ಪ್ರದೇಶಕ್ಕೆ ದಾಳಿ ಮಾಡಬೇಕೆಂದು ಯೋಜನೆ ರೂಪಿಸಿತು. ಅದೊಂದು ಬೆಟ್ಟದ ತುದಿ. ಆ ಎಲ್ಲಾ ಬೆಟ್ಟಗಳಲ್ಲಿ ಶತ್ರು ಸೈನ್ಯದ ಬಗ್ಗೆ ಮಾಹಿತಿ ಭಾರತೀಯ ಸೇನೆಗೆ ಲಭ್ಯವಿತ್ತು. ಭಾರತೀಯ ವಾಯುಪಡೆಯ ಪ್ಲಟೂನ್ ಕಮಾಂಡರ್ ಆಗಿದ್ದ ಲೆಪ್ಟಿನೆಂಟ್ ರ್ಯಾಂಕಿನ ಅಧಿಕಾರಿಯೋರ್ವರ ನೇತೃತ್ವದಲ್ಲಿ ಸೇನೆ ಹೊರಟಿತು. ಭಾರತೀಯ ಸೇನೆ ಹೊರಟಂತೆ ನಾಲ್ಕು ದಿಕ್ಕುಗಳಿಂದಲೂ ಗುಂಡಿನ ದಾಳಿ ಆರಂಭವಾಯಿತು ವೈರಿ ಪಡೆಯಿಂದ. ಭಾರತೀಯ ಪಡೆಗಳಿಗೆ ಅತ್ಯಂತ ತೀಕ್ಷ್ಣವಾಗಿ ಬರುತ್ತಿದ್ದಂತಹ ಗುಂಡುಗಳಿಗೆ ಎದೆಯೊಡ್ಡುತಾ ಸಾಗದೇ ಬೇರೆ ದಾರಿಯೇ ಇಲ್ಲ. ಸಣ್ಣ, ಸಣ್ಣ ಬಂಡೆಗಳೇ ಅವರಿಗೆ ತಡೆಗೋಡೆಗಳಾದವು. ಆದರೆ, ತಡೆಗೋಡೆಗಳಲ್ಲೇ ಮರೆಯಾಗಿರುವುದು, ಬಟಾಲಿಕ್ನ ಇಂಚು – ಇಂಚನೂ ಕಳೆದುಕೊಂಡಂತೆ ಎಂಬುದರಲ್ಲಿ ಸೇನೆಗೆ ಯಾವ ಸಂಶಯವೂ ಇರಲಿಲ್ಲ. ಸೈನಿಕರು ಹಿಂದೆ – ಮುಂದೆ ನೋಡದೆ, ಗುಂಡಿನ ದಾಳಿಯ ಮಧ್ಯೆಯೇ ಎದೆಯೊಡ್ಡುತ ಸಾಗಿದರು. ಬಟಾಲಿಕ್ನ ಮೊದಲ ಶತ್ರು ಬಂಕರಿನ ಬಳಿ ನುಗ್ಗಿದಾಗಲೇ ಹಲವು ಸೈನಿಕರ ದೇಹ ರಕ್ತ ಸಿಕ್ತವಾಗಿತ್ತು. ಆದರೂ ಶತ್ರು ಸೈನ್ಯದ ಸಂಹಾರ ಮಾಡಿ ಮುಂದುವರಿದರು. ಎರಡನೆ ಬಂಕರ್ ನಾಶಪಡಿಸುವಾಗ ಬಹುತೇಕರ ದೇಹ ಜರ್ಜರಿತವಾಗಿತ್ತು. ಮೂರನೇ ಬಂಕರ್ ಸಮೀಪ ಧಾವಿಸಿದ ಸೈನಿಕರು, ಬಂಕರ್ ಸುತ್ತ ಸುತ್ತುವರಿದರು, ದಣಿದ ರಕ್ತ ಸಿಕ್ತ ದೇಹ, ಹಲವು ಗುಂಡುಗಳನ್ನು ಮೈಯೊಳಗೆ ಇಳಿಸಿಕೊಂಡರೂ ಒಂದಿನಿತೂ ದೇಶಾಭಿಮಾನ ಕಡಿಮೆಯಾಗದೆ ವೀರಾವೇಶದಿ ಮುನ್ನುಗಿದರು. ಹಲವು ಪಾಕ್ ಸೈನಿಕರು ಹತರಾದರೆ ಕೆಲವರು ಜೀವಂತ ಸೆರೆಯಾದರು. ಬಟಾಲಿಕ್ ಜುಲೈ 09 ರಂದು ಭಾರತದ ಮರು ವಶವಾಯಿತು !!
ಅತ್ಯಂತ ಪ್ರಮುಖ ವಿಜಯ
ಸೇನೆಯ 8ನೇ ಮೌಂಟನ್ ಡಿವಿಸನ್ ಮತ್ತು ಗೋರ್ಖಾ ರೈಫಲ್ಸ್ಗಳ ಯೋಧರು ಪ್ರಾಣದ ಹಂಗು ತೊರೆದು ಬಟಾಲಿಕ್ ಅನ್ನು ಮರುವಶಮಾಡಿಕೊಂಡ ವಿಜಯ ರಾಜತಾಂತ್ರಿಕವಾಗಿ ಕೂಡಾ ಭಾರತಕ್ಕೆ ಬಹುದೊಡ್ಡ ಪುರಾವೆಯೊಂದನ್ನು ಒದಗಿಸಿತ್ತು ! ಯಾಕೆಂದರೆ, ಅದುವರೆಗೆ ಇದರಲ್ಲಿ ತಮ್ಮ ಸೈನ್ಯದ ಪಾತ್ರವಿಲ್ಲ ಎನ್ನುತ್ತಿದ್ದ ಪಾಕಿಸ್ಥಾನಕ್ಕೆ ವಿಶ್ವಮಟ್ಟದಲ್ಲಿ ಮುಜುಗರವಾಯಿತು. ಭಾರತೀಯ ಸೇನೆ, ಬಟಾಲಿಕ್ನ ಪಾಯಿಂಟ್ 4812 ಜುಬಾರ್ ಮತ್ತು ಕುಕಾರ್ತಂಗ್ಗಳಲ್ಲಿ ಭಾರತೀಯ ಸೈನ್ಯ ಪಾಕ್ ಸೈನಿಕರನ್ನು ಜೀವಂತವಾಗಿ ಸೆರೆಹಿಡಿಯಿತು ! ಇದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ಥಾನದ ಮಾನ ಹರಾಜಾಯಿತು.
ಭಾರತೀಯ ಸೇನೆಯ ಕಾರ್ಗಿಲ್ ಯುದ್ಧದ ಬಲಿದಾನದಿಂದ ಭಾರತ ಇಂದು ಅತ್ಯಂತ ಸುಭದ್ರ ರಾಷ್ಟ್ರವಾಗಿದೆ ! ತಮ್ಮ ಪ್ರಾಣದ ಹಂಗನ್ನೂ ತೊರೆದು ಭಾರತದ ರಕ್ಷಣೆಗೋಸ್ಕರ ಮಡಿದ ಆ ವೀರಯೋಧರಿಗೆ ನಮನಗಳು ಅರ್ಪಿತ. ತಮ್ಮ ಮೈಯಲ್ಲಿ ಗುಂಡನ್ನು ಇರಿಸಿಕೊಂಡು ವೈರಿ ಪಡೆಯ ನಾಶಪಡಿಸಿದ ಆ ಬಟಾಲಿಕ್ ವಿಜಯ ದಿನದ ಶುಭಾಶಯಗಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.