ಮಂಗಳೂರು: ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೂತನ ಸಚಿವರಾಗಿ ನೇಮಕಗೊಂಡಿರುವ ಡಾ. ಜಯಮಾಲಾರವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಸಚಿವರ ಗೃಹ ಕಛೇರಿಯಲ್ಲಿ ಭೇಟಿಯಾಗಿ ಅಭಿನಂಧಿಸಲಾಯಿತು.
ಈ ಸಂದರ್ಭದಲ್ಲಿ ಅಕಾಡೆಮಿ ಅಧ್ಯಕ್ಷ ಎ.ಸಿ ಭಂಡಾರಿಯವರು ಮಂಗಳೂರಿನಲ್ಲಿರುವ ಅಕಾಡೆಮಿಯ ಸಾಂಸ್ಕೃತಿಕ ಭವನ ತುಳುಭವನಕ್ಕೆ ಭೇಟಿ ನೀಡಬೇಕೆಂದು ಸಚಿವರನ್ನು ವಿನಂತಿಸಿದರು. ಈಗಾಗಲೇ ತುಳುಭವನಕ್ಕೆ ಕಟ್ಟಡದ ಕಾಮಗಾರಿಗೆ 4.80 ಕೋಟಿ ಸರಕಾರದ ಅನುದಾನ ಬಿಡುಗಡೆಯಾಗಿದ್ದು 5 ಕೋಟಿಗೂ ಹೆಚ್ಚು ಮೊತ್ತ ಖರ್ಚಾಗಿರುತ್ತದೆ. ತುಳುಭವನದ ನೆಲ ಅಂತಸ್ತಿನ ಕಾಮಗಾರಿ ಪೂರ್ತಿ ಆಗಿದ್ದು ಮೊದಲ ಮತ್ತು ಎರಡನೇ ಅಂತಸ್ತಿನ ಕಾಮಗಾರಿ ಬಾಕಿ ಇರುತ್ತದೆ. ಮೊದಲ ಮಹಡಿಯಲ್ಲಿ 1000 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯದ ಸಭಾಭವನ ಹಾಗೂ ಎರಡನೇ ಮಹಡಿಯಲ್ಲಿ ತುಳು ಬದುಕು ವಸ್ತು ಸಂಗ್ರಹಾಲಯ ಹಾಗೂ ಕಲಾಗ್ಯಾಲರಿ ಮಾಡಲು ಅವಕಾಶವಿದೆ. ಸದ್ರಿ ಕಾಮಗಾರಿ ಪೂರ್ತಿಗೊಳ್ಳಲು ರೂ.3.60 ಕೋಟಿ ಅನುದಾನದ ಅವಶ್ಯಕತೆ ಇದ್ದು ಈಗಾಗಲೇ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ಸಚಿವರ ಗಮನ ಸೆಳೆದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯಾಗಿ ಶೀಘ್ರದಲ್ಲಿ ದ.ಕ ಜಿಲ್ಲೆಗೆ ಭೇಟಿ ನೀಡುವುದಾಗಿ ಭರವಸೆ ನೀಡಿದ ಡಾ.ಜಯಮಾಲ ತುಳು ಭಾಷೆ-ಸಂಸ್ಕ್ರತಿಯ ಬಗ್ಗೆ ಅಕಾಡೆಮಿ ವತಿಯಿಂದ ಮುಂದಿನ ಪೀಳಿಗೆಯನ್ನು ಗಮನದಲ್ಲಿರಿಸಿ ಕಾರ್ಯಕ್ರಮಗಳನ್ನು ನಡೆಸಬೇಕು. ಈ ಮೂಲಕ ಸಾವಿರಾರು ವರ್ಷಗಳ ಇತಿಹಾಸವಿರುವ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ತುಳು ಭಾಷೆಯನ್ನು ಬೆಳಗಿಸಬೇಕು ಎಂದು ಸಲಹೆ ನೀಡಿದರು.
ಅಕಾಡೆಮಿ ಸದಸ್ಯರಾದ ಎ.ಶಿವಾನಂದ ಕರ್ಕೇರ, ತಾರನಥ ಗಟ್ಟಿ ಕಾಫಿಕಾಡ್ ಹಾಗೂ ಮಾಜಿ ಸದಸ್ಯರಾದ ಡಿ.ಎಂ.ಕುಲಾಲ್ ನಿಯೋಗದಲ್ಲಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.