ಉಡುಪಿ: ಇಂದು ದೇಶ ಮತ್ತು ಸಮಾಜಕ್ಕೆ ಮಠ, ಮಂದಿರ, ಸೃಷ್ಟಿ ಎಲ್ಲವೂ ಪ್ರೇರಣಾ ಶೀಲ, ಇದು ಪರಶುರಾಮನ ಸೃಷ್ಟಿ, ಪ್ರಕೃತಿಯನ್ನು ಉಳಿಸುವ, ಬೆಳೆಸುವ, ಅದರೊಂದಿಗೆ ಬದುಕುವ ಸಂದೇಶವನ್ನು ವಿಶ್ವಕ್ಕೆ ಇದು ನೀಡುತ್ತದೆ ಎಂದು ಉಡುಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನಾವು ಪ್ರಕೃತಿ ಪೋಷಿಸುವ ಜನ ಎಂದು ವಿಶ್ವಕ್ಕೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ.ಈ ನೆಲದೊಂದಿಗೆ ನನಗೆ ವಿಶೇಷ ಗೌರವವಿದೆ. ಆಸ್ಟ್ರೇಲಿಯಾದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಈ ಕೃಷ್ಣನ ಭೂಮಿಯ ಗುರುರಾಜ್ ಪೂಜಾರಿ ದೇಶಕ್ಕೆ ಪದಕ ಜಯಿಸಿದ್ದಾರೆ. ಉಡುಪಿಯೊಂದಿಗೆ ನಮ್ಮತನ ಬಹಳ ವರ್ಷದಿಂದ ಇದೆ ಎಂದರು.
ಉಡುಪಿ, ದಕ್ಷಿಣ ಕನ್ನಡವನ್ನು ದೇಗುಲಗಳ ಭೂಮಿ ಎಂದು ಕರೆಯಲಾಗುತ್ತದೆ. ಈ ಭೂಮಿ ಭಾರತಕ್ಕೆ ಬ್ಯಾಂಕಿಂಗ್ನ ತವರು ಕೂಡ ಹೌದು. ಈ ಭೂಮಿಯಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೇಶಕ್ಕೆ ಹೊಸ ದಿಕ್ಕು, ಶಕ್ತಿ ದೊರೆಯಿತು. ಸುಬ್ರಾಯ ಪೈ, ಟಿಎಂಎ ಪೈ, ಹಾಜಿ ಸಾಹೇಬ್, ಎಬಿ ಶೆಟ್ಟಿ ಉದ್ದಿಮೆಯಲ್ಲಿ ಮಹಾನ್ ಸಾಧನೆ ಮಾಡಿದ್ದಾರೆ ಎಂದರು.
ಸ್ವಾತಂತ್ರ್ಯದ ಬಳಿಕವೂ ಬಡವರು ಬ್ಯಾಂಕಿಂಗ್ನತ್ತ ಮುಖ ಮಾಡಿರಲಿಲ್ಲ, ನಮಗೆ ದೇಶದ ನೇತೃತ್ವ ವಹಿಸುವ ಸೌಭಾಗ್ಯ ದೊರೆತ ಬಳಿಕ ನಾವು ಬಡವರನ್ನು ಬ್ಯಾಂಕಿಂಗ್ನೊಂದಿಗೆ ಜೋಡಿಸುವ ಕಾರ್ಯ ಮಾಡಿದೆವು. ನಾವು ಬರುವ ಮೊದಲು ಶೇ.40ರಷ್ಟು ಬ್ಯಾಂಕಿಂಗ್ನಿಂದ ದೂರವಿದ್ದರು, ನಾವು ಅವರನ್ನು ಜನ್ಧನ್ ಯೋಜನೆಯ ಮೂಲಕ ಬ್ಯಾಂಕ್ ಅಕೌಂಟ್ನ್ನು ಶೂನ್ಯ ಮೊತ್ತದೊಂದಿಗೆ ತೆರೆಯುವಂತೆ ಮಾಡಿದೆವು. ಇಂದು ಅವರು 80 ಸಾವಿರ ಕೋಟಿ ದುಡ್ಡನ್ನು ಜಮಾ ಮಾಡಿದ್ದಾರೆ ಎಂದರು.
ಬ್ಯಾಂಕ್ನ ಹಣ ದೇಶದ ನವ ಯುವಕರ ಉಪಯೋಗಕ್ಕೆ ಬರಬೇಕು, ಮೊದಲಿನ ಸರ್ಕಾರ ಲೂಟಿಕೋರರನ್ನು ಲೂಟಿ ಮಾಡಲು ಬಿಡುತ್ತಿತ್ತು. ಯುವಕರು ತಮ್ಮ ಕಾಲಲ್ಲಿ ನಿಲ್ಲಲು ಬಯಸಿದರೆ, ಉದ್ದಿಮೆ ಶುರು ಮಾಡಲು ಬ್ಯಾಂಕ್ ಬಾಗಿಲು ಮುಚ್ಚಿತ್ತು. ಬ್ಯಾಂಕ್ ಹಣ ಯುವಕರ ಉಪಯೋಗಕ್ಕೆ ಬಾರದಂತೆ ಮಾಡಿದ್ದೇ ಕಾಂಗ್ರೆಸ್ನ ಸಾಧನೆ. ನಾವು ಯುವಕರಿಗೆ ಬೆಂಬಲ ನಿಡಿದೆವು. ಮುದ್ರಾ ಯೋಜನೆಯಿಂದ ಸಾಲ ದೊರಕಿಸಿಕೊಟ್ಟೆವು. ಅವರನ್ನು ಅವರ ಕಾಲ ಮೆಲೆ ನಿಲ್ಲುವಂತೆ ಮಾಡಿದೆವು ಎಂದರು.
ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಸ್ಥಾನವಿಲ್ಲ, ಆದರೆ ಕರ್ನಾಟಕದಲ್ಲ್ಲಿ 25 ಬಿಜೆಪಿ ಕಾರ್ಯಕರ್ತರು ಕೊಲ್ಲಲ್ಪಟ್ಟರು. ಅವರು ನಿಮ್ಮ ಸಿದ್ಧಾಂತವನ್ನು ವಿರೋಧಿಸಿದ್ದೇ ಅವರ ತಪ್ಪಾಯಿತು, ಹಿಂಸೆಯ ರಾಜನೀತಿ ಮಾಡುವವರು ರಾಜ್ಯದಿಂದ, ದೇಶದಿಂದ ಹೊರ ಹೋಗಬೇಕು ಎಂದರು.
ರಾಜಕೀಯ ಗೊತ್ತಿಲ್ಲದ ವೇಳೆಯೂ ಕರ್ನಾಟಕದ ಜನರನ್ನು, ಈ ನೆಲವನ್ನು ನಾನು ಗೌರವಿಸುತ್ತಿದ್ದೆ. ಇಲ್ಲಿನ ಪರಂಪರೆ ಅಮೋಘವಾಗಿತ್ತು, ಆದರೆ ಕರ್ನಾಟಕದ ಘನತೆಯನ್ನು ಚೂರು ಚೂರು ಮಾಡುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು.
ದೇಶ ಸುಲಲಿತ ಉದ್ದಿಮೆಯಲ್ಲಿ ಮುಂದೆ ಹೋಗುತ್ತಿದೆ ಆದರೆ ಕರ್ನಾಟಕದಲ್ಲಿ ಅವರಿಗೆ ಸುಲಲಿತ ಉದ್ದಿಮೆಯಲ್ಲಿ ಆಸಕ್ತಿಯಿಲ್ಲ. ರಾಜಕೀಯ ಹಿಂಸಾಚಾರದ ಹೊರತು ಬೇರೆ ಯಾವುದೂ ಅವರಿಗೆ ಬೇಡ. ಸುಲಲಿತ ಉದ್ದಿಮೆ ಬದಲು ಸುಲಲಿತ ಕೊಲೆಯನ್ನು ಅವರು ಮಾಡುತ್ತಿದ್ದಾರೆ. ಅಪರಾಧದ ರಾಜನೀತಿ ಮಾಡುತ್ತಿದ್ದಾರೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.