‘ಪ್ರತಿಭಾವಂತ ಶಿಕ್ಷಕರೇ ಶಿಕ್ಷಣ ಸಂಸ್ಥೆಯ ಆಸ್ತಿ’
ಪುತ್ತೂರು: ಒಂದು ಶಿಕ್ಷಣ ಸಂಸ್ಥೆಯ ಘನತೆ ಮತ್ತು ಹಿರಿಮೆ ಆ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ವರ್ಗದವರ ಸಾಧನೆಯನ್ನು ಅವಲಂಬಿಸಿದೆ ಹೊರತು ಸಂಸ್ಥೆಯು ಒದಗಿಸುವ ಮೂಲ ಸೌಕರ್ಯಗಳಿಂದ ಅಲ್ಲ. ಪ್ರತಿಭಾವಂತ ಮತ್ತು ಸಾಧನಾಶೀಲ ಶಿಕ್ಷಕರೇ ಒಂದು ಶಿಕ್ಷಣ ಸಂಸ್ಥೆಯ ನಿಜವಾದ ಆಸ್ತಿ ಎಂದು ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥರು ಮತ್ತು ಕ್ಯಾಂಪಸ್ ನಿರ್ದೇಶಕರಾಗಿರುವ ರೆ| ಡಾ| ಆಂಟನಿ ಪ್ರಕಾಶ್ ಮೊಂತೆರೊ ಹೇಳಿದರು. ಅವರು ಸ್ನಾತಕೋತ್ತರ ಅಧ್ಯಯನದಲ್ಲಿ ವಿಶೇಷ ಸಾಧನೆಯನ್ನು ಮಾಡಿ, ಇದೀಗ ಕಾಲೇಜಿನ ಸ್ನಾತಕೋತ್ತರ ವಿಭಾಗಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿ ಪಡೆದು ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಅವರು ಮಂಗಳೂರು ವಿವಿಯ ಗಣಿತಶಾಸ್ತ್ರದಲ್ಲಿ ಪ್ರಥಮ ರ್ಯಾಂಕು ವಿಜೇತೆ ಕು. ವೈಷ್ಣವಿ ಸಿ. ಮತ್ತು ತೃತೀಯ ರ್ಯಾಂಕು ವಿಜೇತ ಶ್ರೀ ಪ್ರಸಾದ್ ಎಚ್. ಎಮ್. ಲೈಬ್ರರಿ ಮತ್ತು ಮಾಹಿತಿ ವಿಜ್ಞಾನದಲ್ಲಿ ಪ್ರಥಮ ರ್ಯಾಂಕು ವಿಜೇತೆ ಕು. ನೂತನ ಕುಮಾರಿ ಎಮ್ ಹಾಗೂ ನವೆಂಬರ್ ತಿಂಗಳಲ್ಲಿ ಜರಗಿದ ಕೆಸೆಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವಾಣಿಜ್ಯಶಾಸ್ತ್ರ ವಿಭಾಗದ ಕು. ಪ್ರಿಯಾಂಕ ಡಿ’ಸೋಜ ಮತ್ತು ಭೌತಶಾಸ್ತ್ರ ವಿಭಾಗದ ಶ್ರೀ ವಿಪಿನ್ ನಾಕ್ ಇವರನ್ನು ಸನ್ಮಾನಿಸಿ ಮಾತನಾಡಿದರು.
ಗಣಿತಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕರಾದ ಪ್ರೊ. ಗಣೇಶ್ ಭಟ್ ಮಾತನಾಡಿ, ಶಿಕ್ಷಣ ಸಂಸ್ಥೆಯಲ್ಲಿ ಸಾಧನೆಗ್ಯದ ಸಿಬ್ಬಂದಿ ವರ್ಗದವರನ್ನು ಗುರುತಿಸಿ ಗೌರವಿಸುವುದರಿಂದ ಅವರಲ್ಲಿ ಇನ್ನೂ ಹೆಚ್ಚಿನ ಬದ್ದತೆಯನ್ನು ಉಂಟುಮಾಡುತ್ತದೆ ಎಂದು ಹೇಳಿದರು.
ಸನ್ಮಾನಿತರ ಪರವಾಗಿ ಗಣಿತಶಾಸ್ತ್ರ ವಿಭಾಗದ ಶ್ರೀ ಪ್ರಸಾದ್ ಎಚ್ ಎಮ್ ಮಾತನಾಡಿ, ಸಾಧನೆಗೆ ಕಾರಣೀಭೂತರಾದ ಗುರುವೃಂದವರನ್ನು ಮತ್ತು ಹೆತ್ತವರನ್ನು ಸ್ಮರಿಸಿ, ಸನ್ಮಾನಿಸಿದ ಕಾಲೇಜಿನ ಮುಖ್ಯಸ್ಥರನ್ನು ವಂದಿಸಿದರು.
ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೊ ನೊರೊನ್ಹ ಮಾತನಾಡಿ, ಸನ್ಮಾನವನ್ನು ಮಾಡುವುದರಿಂದ ಶಿಕ್ಷಕರಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲು ಸ್ಪೂರ್ತಿಯನ್ನುಂಟು ಮಾಡುತ್ತದೆ ಎಂದು ಹೇಳಿದರು.
ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಶ್ರೀದೇವಿ ಎಚ್ ಪ್ರಾರ್ಥನೆಗೈದರು. ಪ್ರೊ. ಕೃಷ್ಣ ಸ್ವಾಗತಿಸಿದರು. ಪ್ರೊ. ಪ್ರದೀಪ್ ಕೆ. ಎಸ್. ರ್ಯಾಂಕ್ ವಿಜೇತರ ವಿವರ ನೀಡಿದರು. ಪ್ರೊ. ಸಂಧ್ಯಾ ಎಚ್ ವಂದಿಸಿದರು. ಪ್ರೊ. ನಿಶಾಲ್ ಪ್ರಮೀಳಾ ಸೆರಾವೊ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.