ಋತು ಚಕ್ರದ ಆರಂಭ ಮತ್ತು ಮುಕ್ತಾಯ ಮಹಿಳೆಯರ ಸಮಸ್ಯೆಗಳು
ಮಂಗಳೂರು : ಹೆಣ್ಣು ಮಕ್ಕಳು ತಮ್ಮ ಜೀವನದಲ್ಲಿ ಪ್ರೌಢಾವಸ್ಥೆಗೆ ಕಾಲಿಡುವಾಗ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಅಂತಹ ಸಂದರ್ಭದಲ್ಲಿ ಅವರಿಗೆ ಋತುಚಕ್ರದ ಬಗ್ಗೆ ಸರಿಯಾದ ಜ್ಞಾನ, ಸ್ವಚ್ಛತೆಯ ಬಗ್ಗೆ ಅರಿವು ಮತ್ತು ಲೈಂಗಿಕ ಶಿಕ್ಷಣವನ್ನು ನೀಡಬೇಕಾದುದು ಹೆತ್ತವರ ಮತ್ತು ಶಿಕ್ಷಕರ ಕರ್ತವ್ಯ. ಋತು ಬಂಧದ ಸಮಯದಲ್ಲಿ ಹೆಣ್ಣಿನ ದೇಹ ಪ್ರಕೃತಿಯಲ್ಲಿ ಆಗುವ ಏರುಪೇರುಗಳನ್ನು ಧನಾತ್ಮಕ ದೃಷ್ಠಿಯಿಂದ ಸ್ವೀಕರಿಸಿ, ಸವಾಲುಗಳನ್ನು ಎದುರಿಸುವಲ್ಲಿ ಮಹಿಳೆಯರು ಸಮರ್ಥರಾಗಬೇಕು. ಉತ್ತಮ ಸಮಾಜದ ನಿರ್ಮಾಣಕ್ಕಾಗಿ ನಮ್ಮೊಳಗಿರುವ ಒತ್ತಡವನ್ನು ನಿವಾರಿಸಬೇಕು. ಮಾನಸಿಕ ಒತ್ತಡವನ್ನು ನಿವಾರಿಸುವಲ್ಲಿ ಸರಿಯಾದ ಲೈಂಗಿಕ ಜ್ಞಾನ ಮತ್ತು ಸಂತೃಪ್ತಿ ಇರಬೇಕು. ಭಾರತೀಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕಾದರೆ ಮುಕ್ತ ಲೈಂಗಿಕತೆ ಮತ್ತು ವಿವಾಹ ರಹಿತ ಗಂಡು, ಹೆಣ್ಣಿನ ಸಹಬಾಳ್ವೆಗೆ ವಿರೋಧಿಸಲೇ ಬೇಕು ಹಾಗೂ ಮಾದಕ ವ್ಯಸನಗಳಿಂದ ನಮ್ಮ ಯುವಜನತೆಯನ್ನು ದೂರವಿರಿಸಲು ಹೆತ್ತವರು ಮತ್ತು ಶಿಕ್ಷಕರು ಜೊತೆಯಾಗಿ ಶ್ರಮಿಸಬೇಕು ಎಂದು ಡಾ. ಪೂರ್ಣಿಮಾ ಜೆ. ಹೇಳಿದರು.
ಶಾರದಾ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ ಶಿಕ್ಷಕರ ಕಾರ್ಯಾಗಾರದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಮೂಲ್ಕಿ ಸಿ.ಎಚ್.ಸಿ. ಯ ಖ್ಯಾತ ಸ್ತ್ರೀ ರೋಗ ತಜ್ಞೆ ಡಾ. ಪೂರ್ಣಿಮಾ ಜೆ. ಇವರು ಉಪನ್ಯಾಸಕರನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಪ್ರೊ. ಎಂ.ಬಿ.ಪುರಾಣಿಕ್ ಇವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಶಾರದಾ ವಿದ್ಯಾ ಸಂಸ್ಥೆಗಳ ಶೈಕ್ಷಣಿಕ ಸಲಹೆಗಾರರಾದ ಡಾ. ಲೀಲಾ ಉಪಾಧ್ಯಾಯರು, ಇಂದಿನ ಮಕ್ಕಳಲ್ಲಿರುವ ಹಲವಾರು ಒತ್ತಡ ಮತ್ತು ಸಮಸ್ಯೆಗಳನ್ನು ನಿವಾರಿಸಬೇಕಾದರೆ ಶಿಕ್ಷಕರು ಸೂಕ್ತ ಜ್ಞಾನವನ್ನು ಸಂಪನ್ಮೂಲ ವ್ಯಕ್ತಿಗಳು ಮತ್ತು ಇತರ ಮೂಲಗಳಿಂದ ಪಡೆದುಕೊಳ್ಳಬೇಕು ಮತ್ತು ಆ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಉಪಪ್ರಾಂಶುಪಾಲರಾದ ಪ್ರಕಾಶ್ ನಾಯ್ಕ್ ಮತ್ತು ಕಾರ್ಯಕ್ರಮದ ಸಂಯೋಜಕರಾದ ಭೌತಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಪವಿತ್ರಾರಾವ್ ಹಾಗೂ ಕಾರ್ಯಕ್ರಮದ ಇನ್ನೋರ್ವ ಸಂಯೋಜಕರಾದ ಗಣಿತ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಶೋಭಾ ತೊಳ್ಪಾಡಿ ಉಪಸ್ಥಿತರಿದ್ದರು. ಶೋಭಾ ತೊಳ್ಪಾಡಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥೆ ಶ್ರೀಮತಿ ಯಶೋದಾ ಕಾಮತ್ ಅತಿಥಿಗಳನ್ನು ಸ್ವಾಗತಿಸಿ, ಪರಿಚಯಿಸಿದರು. ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸ್ಮಿತಾ ಪೈ ಇವರು ವಂದಿಸಿದರು. ಆಂಗ್ಲ ವಿಭಾಗದ ಉಪನ್ಯಾಸಕಿ ಶ್ರೀಮತಿ ರಶ್ಮಿ ದಿನೇಶ್ ಇವರು ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.