ನೀರಿನ ವಿಷಯದಲ್ಲಿ ನಮ್ಮ ನುಡಿ ಪುರಾತನ ಆದರೆ ನಡೆ ಕಿರಾತನ! – ಪಕ್ಷಿತಜ್ಞ ಆರ್.ಜಿ. ತಿಮ್ಮಾಪೂರಮಠ ಅಭಿಮತ
ಧಾರವಾಡ : ’ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸ ಜ್ಜರೆಯೋಳ್ ಸಿಲ್ಕಿದರನಾಥರಂ ಬಿಡಿಸು ಮಿತ್ರರ್ಗಿಂಬುಕೆಯ್ ನಂಬಿದ ರ್ಗೆರೆಒಟ್ಟಾಗಿರು, ಶಿಷ್ಟರಂ ಪೊರೆ..’ ತಾಯಿ ತನ್ನ ಮಗನಿಗೆ ಹಾಲೂಡಿಸುತ್ತ, ಜಗತ್ತಿಗೆ ಆಸರೆಯಾಗುವ ಸಂಸ್ಕಾರ ಬಿತ್ತುತ್ತಿದ್ದಳು ಎಂಬ ಉಲ್ಲೇಖ 14ನೇ ಶತಮಾನದ ಶಿಲಾಶಾಸನದಲ್ಲಿದೆ. ಆದರೆ, ಇಂದು ನೀರಿನ ವಿಷಯದಲ್ಲಿ ನಮ್ಮ ನುಡಿ ಪುರಾತನ ಆದರೆ ನಡೆ ಕಿರಾತನ ಎಂಬಂತಾಗಿದೆ ಎಂದು ಪಕ್ಷಿ ತಜ್ಞ ಆರ್.ಜಿ. ತಿಮ್ಮಾಪುರಮಠ ಅಭಿಪ್ರಾಯಪಟ್ಟರು.
ನೇಚರ್ ರಿಸರ್ಚ್ ಸೆಂಟರ್, ನೇಚರ್ ಫಸ್ಟ್ ಇಕೋ ವಿಲೇಜ್ ಹಳ್ಳಿಗೇರಿಯಲ್ಲಿ ಇಂದು (ಫೆ.2 ಶುಕ್ರವಾರ) ತರಿಭೂಮಿ ವಿಶ್ವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ, ’ಪಟ್ಟಣಗಳ ಸುಸ್ಥಿರ ಅಭಿವೃದ್ಧಿಗಾಗಿ ತರಿಭೂಮಿಗಳ ಸಂರಕ್ಷಣೆ’ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದ ಅವರು, ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ನೀರಿನಾಸರೆ, ತರಿಭೂಮಿ ಮತ್ತು ಅಚ್ಚುಕಟ್ಟು ಪ್ರದೇಶಗಳ ನಿರ್ವಹಣೆ ನಮ್ಮ ಆದ್ಯತೆಯಾಗಬೇಕಿದೆ ಎಂದರು.
ಎನ್ಆರ್ಸಿ ಯೋಜನಾ ವಿಭಾಗದ ಮುಖ್ಯಸ್ಥ ಹರ್ಷವರ್ಧನ ಶೀಲವಂತ ಮಾತನಾಡಿ, ಸ್ಮಾರ್ಟ್ ಸಿಟಿ ವ್ಯಾಪ್ತಿಯ ಧಾರವಾಡದ ನವಿಲೂರು, ಹುಬ್ಬಳ್ಳಿಯ ಉಣಕಲ್ ಕೆರೆಗಳಿಗೆ ಕಳೆದ ಅಕ್ಟೋಬರ್ದಿಂದ ಡಿಸೆಂಬರ್, 2016 ರ ವರೆಗೆ ಬಣ್ಣದ ಕೊಕ್ಕರೆಗಳು (ಪೇಂಟೆಡ್ ಸ್ಟಾರ್ಕ್) ಬಂದಿಳಿದಿದ್ದವು. ಸುಮಾರು 10ಕ್ಕಿಂತ ಹೆಚ್ಚು ಜೋಡಿಗಳಿದ್ದವು. ಪುಟ್ಟ ಹಾಗೂ ದೊಡ್ಡ ನೀರ್ಕಾಗೆಗಳು, ಬಿಳಿ ಐಬೀಸ್, ತೆರೆದ ಕೊಕ್ಕಿನ ಕೊಕ್ಕರೆ, ಚಮಚೆ ಕೊಕ್ಕು, ಕೊಳದ ಬಕ, ರಾತ್ರಿ ಬಕ, ಹಾವಕ್ಕಿ ಹಾಗೂ ಸಣ್ಣ, ಮಧ್ಯಮ ಮತ್ತು ದೊಡ್ಡ ಬೆಳ್ಳಕ್ಕಿಗಳು ಆದರೆ ಈ ಬಾರಿ ನಮ್ಮ ‘ಭೌತಿಕ ಅಭಿವೃದ್ಧಿ ಕೆಲಸಗಳು’ ಇಲ್ಲಿ ಭರದಲ್ಲಿ ಸಾಗಿದ್ದರಿಂದ ಈ ಬಾರಿ ಅವರು ಯಾರೂ ಇತ್ತ ತಲೆ ಹಾಕಿಲ್ಲ! ಜಾಗತಿಕವಾಗಿ ಚಂತನೆ, ಸ್ಥಳೀಯವಾಗಿ ವೈಯಕ್ತಿಕ ಶಕ್ತ್ಯಾನುಸಾರ ಕೆಲಸ ಸದ್ಯದ ತುರ್ತು ಎಂದು ಅಭಿಪ್ರಾಯಪಟ್ಟರು.
ಇಕೋ ವಿಲೇಜ್ ಸಂಸ್ಥಾಪಕ ಅಧ್ಯಕ್ಷ ಪಿ.ವಿ. ಹಿರೇಮಠ ಅವರು, ಕೆರೆ ಅಂಗಳದಲ್ಲಿ ಪ್ರಾತ್ಯಕ್ಷಿಕೆ ನೀಡಿ, ತರಿಭೂಮಿ, ನೀರಾವರಿಯಿಂದ ಬೆಳೆತೆಗೆಯುವ ಜಮೀನಿಗೆ ಮಾತ್ರ ಸೀಮಿತವಾಗಿಲ್ಲ. ನೀರು-ನೆಲ ಸಂಧಿಸುವ ಎಲ್ಲ ಜಾಗಗಳನ್ನೂ ಈ ಗುಂಪಿಗೆ ಸೇರಿಸಬಹುದು. ಈ ದೃಷ್ಟಿಯಿಂದ ಕೆರೆ, ಸರೋವರ, ಜಲಾಶಯ, ಅಳಿವೆ, ಹಿನ್ನೀರಿನ ಜೌಗು ನೆಲಗಳೆಲ್ಲವೂ ತರಿಭೂಮಿಗಳೇ. ನೀರು ಮತ್ತು ನೆಲ ಈ ಎರಡೂ ಪ್ರಮುಖ ನೆಲೆಗಳೂ ನೀಡುವ ಅತ್ಯುತ್ತಮ ಪೋಷಣೆಯನ್ನು ಬಳಸಿಕೊಳ್ಳುವ ವೈವಿಧ್ಯಮಯವಾದ ಜೀವಿಪರ ಪ್ರಪಂಚವನ್ನು ನಾವು ತರಿಭೂಮಿಯಲ್ಲಿ ಕಾಣಬಹುದು ಎಂದು ವಿವರಿಸಿದರು.
ಯಾವುದೇ ತರಿಭೂಮಿ 20,000 ಕ್ಕೂ ಹೆಚ್ಚಿನ ಜಲಪಕ್ಷಿಗಳಿಗೆ ಆಸರೆ ಒದಗಿಸಿ ಪೋಷಿಸಿದರೆ ಅಂತಹ ತರಿಭೂಮಿಗೆ ಅಂತಾರಾಷ್ಟ್ರೀಯ ಮನ್ನಣೆ, ನೆರವು ದೊರಕುತ್ತದೆ. ಸ್ಥಳೀಯರಾದ ನಾವು ಮನಸ್ಸು ಮಾಡಬೇಕು. ಒಂದು ಪ್ರಬೇಧದ ಹಕ್ಕಿ ಸಾಕಷ್ಟು ಪ್ರಮಾಣದಲ್ಲಿ ಒಂದು ಕಡೆ ಸೇರಿದಲ್ಲಿ ಅಂತಹ ತರಿಭೂಮಿಗೂ ಅಂತಾರಾಷ್ಟ್ರೀಯ ಮನ್ನಣೆ ದೊರೆಯುತ್ತದೆ ಎಂದು ಪಿ.ವಿ. ಹಿರೇಮಠ ಹೇಳಿದರು.
ನೇಚರ್ ರಿಸರ್ಚ್ ಸೆಂಟರ್ ಉಪಾಧ್ಯಕ್ಷ ಚಂದ್ರಶೇಖರ ಭೈರಪ್ಪನವರ, ಖಂಜಾಂಚಿ ಡಾ. ಧೀರಜ್ ವೀರನಗೌಡರ, ಸದಸ್ಯ ಅನೀಲ ಅಲ್ಲೊಳ್ಳಿ, ಅಸ್ಲಂಜಹಾನ್ ಅಬ್ಬೀಹಾಳ ಪಾಲ್ಗೊಂಡಿದ್ದರು. ಕಾರ್ಯದರ್ಶಿ ಪ್ರಕಾಶ ಗೌಡರ ಸ್ವಾಗತಿಸಿ, ನಿರೂಪಿಸಿದರು.
ಹುಬ್ಬಳ್ಳಿಯ ಪದ್ಮಶ್ರೀ ಸರ್ದಾರ ವೀರನಗೌಡ ಪಾಟೀಲ ಮಹಿಳಾ ವಿದ್ಯಾಪೀಠದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿಯರು, ನಾಗಠಾಣ ಶಾಲೆಯ ಮಕ್ಕಳು, ಬೋಧಕ ಸಿಬ್ಬಂದಿ, ಹಳ್ಳಿಕೇರಿ ಗ್ರಾಮಸ್ಥರು, ವಿಶ್ವಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಮ್ಮ ರಾಜ್ಯದಲ್ಲಿ ವರ್ಷವೊಂದಕ್ಕೆ ೩೫ ಕೆರೆಗಳು ಕಣ್ಮುಚ್ಚುತ್ತಿವೆ. ಪ್ರತಿ ನಿಮಿಷಕ್ಕೆ ಒಂದು ಗುಂಟೆಯಷ್ಟು ನಮ್ಮ ಜಿಲ್ಲೆಯಲ್ಲಿ ‘ತರಿಭೂಮಿ’ ಕಣ್ಮರೆಯಾಗುತ್ತಿದೆ; ಧಾರವಾಡ ಜಿಲ್ಲೆಯ ಕೆರೆಗಳಲ್ಲಿ ಶೇಕಡಾ 31 ರಲ್ಲಿ ಅಪಾರ ಹೂಳು. ಶೇ. 13 ರಷ್ಟು ಕೆರೆಗಳಲ್ಲಿ ಕೈಗಾರಿಕೆಗಳ ಕಲ್ಮಶ. 47 ರಲ್ಲಿ ಇಟ್ಟಿಗೆಯ ಗೂಡುಗಳು; 39 ರಲ್ಲಿ ಕೃಷಿ ಭೂಮಿಯ ಒತ್ತುವರಿ, 36 ರಲ್ಲಿ ಪಕ್ಷಿಗಳ ನಿರಂತರ ಬೇಟೆ ! ನೂರಾರು ಕೆರೆ-ಕುಂಟೆಗಳಲ್ಲಿ ವೈವಿಧ್ಯಮಯ ಜೀವರಾಶಿಯ ಬದಲಿಗೆ ದುರ್ವಾಸನೆ ಬೀರುವ, ಕೊಳೆತ ವಸ್ತುಗಳನ್ನು ಒಳಗೊಂಡ, ಸುತ್ತಮುತ್ತಲಿನ ಜೀವಿಗಳಿಗೆ ಮಾರಕವಾದ ನೊರೆತುಂಬಿದ ಹೊಲಸು! ನಮ್ಮ ತರಿಭೂಮಿಯ ಹದಗೆಡುತ್ತಿರುವ ಪರಿಸ್ಥಿತಿಯನ್ನು ಸ್ಪಷ್ಟವಾಗಿ ನೀರ್ಕೋಳಿಗಳು ತೋರಿಸುತ್ತಿವೆ!
-ನೇಚರ್ ರಿಸರ್ಚ್ ಸೆಂಟರ್, ಧಾರವಾಡ (ಅಧ್ಯಯನ ವರದಿ)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.